ಕಾಬುಲ್
*ಭಾವಾನುವಾದ : ಎಸ್. ಕೆ. ಹರಿಹರೇಶ್ವರ, ಸ್ಟಾಕ್‌ಟನ್, ಕ್ಯಾಲಿಫೋರ್ನಿಯಾ ;
(ಮೂಲ : ಹದಿನೇಳನೆಯ ಶತಮಾನದ ಕವಿ, ಸಾಯಿಬ್-ಎ-ಟಾಬ್ರಿಜಿ ಎಂಬುವನ ಫಾರಸೀ ಕವಿತೆ)
ಓ ನನ್ನ ಪ್ರೀತಿಯ ಊರೇ, ಎನಿತು ಸುಂದರಿ ನೀನು!
ಪರ್ವತದ ಸಾಲುಗಳೇ ನೀನುಟ್ಟ ಲಂಗ !
ನಿನ್ನ ಮುಳ್ಳಿಗೆ ಕರುಬಿತೇನಾ ಗುಲಾಬಿಯ ರಂಗು ?
ಮೆಲ್ಲನಪ್ಪಳಿಸಿತೇನು ಕಣ್ಣಿಗೆ ನಿನ್ನ ಮಣ್ಣಿನ ಧೂಳು ?
ನೀನೆನ್ನ ಒಲವಿನ ರಾಣಿ, ಕಾಬೂಲ್, ನನ್ನ ಕಣ್ಮಣಿಯೇ !
ಚೆಲುವ ಹೊಮ್ಮಲು ಆ ಕಣ ಕಣ ಮಣ್ಣ, ನಿನ್ನನರಿತೆ !
ಬಣ್ಣ ಬಣ್ಣದ ನಿನ್ನ ಹೂವುಗಳ ಹಾಡುವೆ ನೆನೆದು,
ನಿನ್ನ ವನರಾಜಿ ಬಳಿ ಸುಳಿದು, ನಾಚಿ, ಮುದುರಿ;
ಹರಿಯುತಿದೆ ಹೊಳೆಯಲ್ಲಿ ಹೊಳೆ ಹೊಳೆವ ಚಿನ್ನದ ನೀರು,
ಅಗೋ, ಅಲ್ಲಿ ಮಸ್ತಾನ ಸೇತುವೆಯಡಿ ಭರದಿ;
ಕೆಟ್ಟ ಕಣ್ಣಿನ ಜನರ ದೃಷ್ಟಿಯೇನೂ ತಾಗದೆ ಇರಲಿ,
ದೇವರೇ, ನಿನ್ನ ಚೆಲುವನ್ನೆಂದೂ ಕಾಯ್ದಿರಿಸಲಿ !
ಸ್ವರ್ಗವನು ಧಿಕ್ಕರಿಸಿ ನಿನ್ನ ಬಯಸಿದ ದೇವತೆಗಳೆಷ್ಟಿಲ್ಲ ?
ನಿನ್ನೆತ್ತರದ ಗಿರಿಶ್ರೇಣಿಗಳೇ ಮತ್ತೆ ಆ ಸಗ್ಗಸುಖಕೊಯ್ದಿಲ್ಲ ?
ಸುತ್ತಿ ಕೋಟೆಯ ಸರ್ಪದ ಭಿತ್ತಿ ನಗರಕ್ಕಿತ್ತಿಲ್ಲವೆ ಪಹರೆ ?
ಕಟ್ಟಿದೊಂದೊಂದು ಇಟ್ಟಿಗೆಗೂ ಸಾಟಿಯೇ ಆ ಬೊಕ್ಕಸದ ಕೊಪ್ಪರಿಗೆ ?
ನಿನ್ನ ಹಾದಿ ಹಾದಿಯೂ ನನ್ನ ಕಣ್ಣ ತುಂಬಿದೆ, ಸೆಳೆದು;
ಓ, ನೋಡು, ಸಾಗುತಿದೆ ಈಜಿಪ್ಟಿನ ಒಂಟೆಯ ಸಾಲು ಪೇಟೆಯಲ್ಲಿ.
ಮಾಡುಗಳ ಅಡಿಯಲ್ಲಿಣುಕಿ ಮೂಡಿ ಬಹ ಚಂದಿರನ ಬಗೆ ಬಗೆಯೋ,
ಗೋಡೆಗಳ ಮರೆಯಲ್ಲವಿತ ಬೆಂಗದಿರನೋ- ಎಂತು ಬಣ್ಣಿಸಲಿ ?
ಮುಂಜಾನೆ ನೀ ನಗುವೆ, ಮಂದಹಾಸದಿ ಬಿರಿದ ಹೂವಿನ ತೆರದಿ;
ನೀ ತಳೆದು ಹೊಳೆವ ಶ್ಯಾಮಲ ಕೇಶರಾಶಿಯ ರೂಪ ನಿಶಿಯ ಕಳೆವೆ;
ಹಕ್ಕಿ ಇಂಚರದಲ್ಲಿ ಪ್ರಜ್ವಲಿತ ದನಿಯಡಗಿದೆ, ಕೇಳು,
ಉರಿದೆಲೆಗಳುದುರುತಿವೆ, ನೋಡು, ಅವು ಹಾಡುತಿರಲು !
ಉದ್ಯಾನವನಗಳ ನೆನೆವೆ, ‘ ಜಹನಾರಾ’, ‘ ಷಹನಾರಾ’-ಗಳೇ,
ನಿಮ್ಮ ಸೊಬಗೇ ಸೊಬಗು, ಸ್ವರ್ಗಕದು ಎಣೆಯೇ?
ಓ ನನ್ನ ಪ್ರೀತಿಯ ನಗರ, ಎನಿತು ಸುಂದರಿ ನೀನು -
ನನ್ನ ಕಣ್ಮಣಿ, , ಒಲವಿನ ಗಣಿಯೇ !
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications