'ಕಿರಣ್ ಸುಬ್ಬಯ್ಯ' ಕೈಯಿಂದ ಮೂಡಿದ ಶಿಲ್ಪಗಳು ಮಾತಾಡ್ತಾವೆ
ನೀವೊಮ್ಮೆ ಮೈಸೂರು ಜಿಲ್ಲೆಯ ಹೈವೆ ಸರ್ಕಲ್ ಬಳಿಯಿರುವ "ಶಿಲ್ಪನಿಕೇತನ'ಕ್ಕೆ ಕಾಲಿಟ್ಟು ನೋಡಿ ಒಂದು ಕ್ಷಣ ನಿಬ್ಬೆರಗಾಗುತ್ತೀರಿ. ಕಲೆಗಾರನ ಕೈಗೆ ಸಿಕ್ಕ ಕಲ್ಲು ಯಾವೆಲ್ಲಾ ರೂಪ ತಾಳುತ್ತದೆ ಎಂಬುವುದಕ್ಕೆ ಶಿಲ್ಪನಿಕೇತನದಲ್ಲಿ ಅರಳಿ ನಿಂತಿರುವ ಸುಂದರ ಶಿಲ್ಪಗಳೇ ಸಾಕ್ಷಿಯಾಗುತ್ತವೆ.
ನಾವು ಉಪಯೋಗಕ್ಕೆ ಬಾರದೆ ಎಸೆವ ಕಲ್ಲುಗಳೂ ಅಲ್ಲಿ ಹೊಸ ರೂಪ ಪಡೆದಿವೆ. ಮನೆಯ ಟಿವಿ ಸ್ಟ್ಯಾಂಡ್ ನಿಂದ ಆರಂಭವಾಗಿ 135 ಹೆಡೆಯ 5 ಅಡಿ ಆದಿಶೇಷನವರೆಗೆ ವಿವಿಧ ನಮೂನೆಯ ವಿವಿಧ ಭಂಗಿಯ ಬಹುರೂಪಿ ಶಿಲ್ಪಗಳು ಮನಸ್ಸನ್ನು ಸೆಳೆಯುತ್ತವೆ.
ಪ್ರತಿಯೊಂದು ಶಿಲ್ಪಗಳ ಕೆತ್ತನೆಯಲ್ಲಿಯೂ ಹೊಸತನ ಎದ್ದು ಕಾಣುತ್ತದೆ. ಇಂತಹ ಅದ್ಭುತ ಕಲೆಗಳನ್ನು ಕಳೆದ ಮೂರುವರೆ ದಶಕಗಳಿಂದ ಶಿಲ್ಪನಿಕೇತನದ ರೂವಾರಿ ಅಪ್ಪನೆರವಂಡ ಕಿರಣ್ ಸುಬ್ಬಯ್ಯ ಅರಳಿಸುತ್ತಾ ಬಂದಿದ್ದಾರೆ.[ಮೈಸೂರು ಕಲಾವಿದನ ಕೈಯಲ್ಲಿ ಅರಳುತ್ತಿವೆ ಸ್ವರ್ಣ ದೇವರ ಮೂರ್ತಿ]
ಯಾವುದೇ ಪ್ರಚಾರ ಬಯಸದೆ ತನ್ನ ಪಾಡಿಗೆ ತಾನು ಎಂಬಂತೆ ಕಲೆಯನ್ನೇ ಉಸಿರಾಗಿಸಿಕೊಂಡು ಕೆತ್ತನೆಯಲ್ಲಿಯೇ ಬದುಕು ಕಟ್ಟಿಕೊಂಡಿರುವ ಕಿರಣ್ ಸುಬ್ಬಯ್ಯ ಮೂಲತಃ ಕೊಡಗಿನ ಪಾರಾಣೆಯ ಅಪ್ಪನೆರವಂಡ ಸುಬ್ಬಯ್ಯ ಹಾಗೂ ಶ್ರೀಮತಿ ಪಾಲಿಸುಬ್ಬಯ್ಯರವರ ಪುತ್ರ.
1950 ಮೇ 24ರಂದು ಜನಿಸಿದ ಕಿರಣ್ ಸುಬ್ಬಯ್ಯ ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಮೈಸೂರಿನ ಗುಡ್ ಶೆಫರ್ಡ್, ಸೆಂಟ್ ಮೇರಿಸ್ ಶಾಲೆಯಲ್ಲಿ ಪಡೆದರು. ಇವರ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ಶಿಲ್ಪಿಯಾಗುವ ಹಂಬಲ ಮೂಡಿದ್ದು ಹೇಗೆ?
ಕಿರಣ್ ಸುಬ್ಬಯ್ಯ ಅವರಲ್ಲಿ ಶಿಲ್ಪಿಯಾಗಬೇಕೆಂಬ ಹಂಬಲ ಮೂಡಿಸಿದ್ದೇ ಬೇಲೂರು, ಹಳೆಬೀಡಿನ ಶಿಲ್ಪಕಲೆಗಳು. ಇವರು ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿದ್ದಾಗ ಪ್ರವಾಸಕ್ಕೆ ಬೇಲೂರು ಮತ್ತು ಹಳೆಬೀಡಿಗೆ ಹೋಗಿದ್ದರು. ಆಗ ಅಲ್ಲಿ ಕಂಡ ಶಿಲಾ ವೈಭವ ಅವರನ್ನು ಆಕರ್ಷಿಸಿದ್ದು, ನಾನೇಕೆ ಇಂತಹ ಕೆತ್ತನೆ ಮಾಡಬಾರದು ಎಂಬ ಪ್ರಶ್ನೆಯೊಂದು ಅವರ ಮನದಾಳದಲ್ಲಿ ಮೂಡಿತು. ತಕ್ಷಣ ಮೈಸೂರಿನ ಶ್ರೀ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ ಸ್ಟಿಟ್ಯೂಟ್ ನಲ್ಲಿ ತರಬೇತಿ ಪಡೆದರು. ಆದರೆ ತರಬೇತಿ ಪೂರ್ಣಗೊಳಿಸದ ಇವರು ಮನೆಯಲ್ಲಿ ಬಳಪದ ಕಲ್ಲಿನಲ್ಲಿ ಸಣ್ಣಪುಟ್ಟ ಕಲಾಕೃತಿಗಳನ್ನು ಕೆತ್ತಲು ಆರಂಭಿಸಿದರು. ಮೊದಮೊದಲು ಕಷ್ಟವಾದ ಕೆಲಸ ದಿನಗಳೆದಂತೆ ಇವರ ಉಳಿಯ ಏಟಿಗೆ ಶಿಲೆಗಳಲ್ಲಿ ಸದ್ದಿಲ್ಲದೆ ಚಿತ್ತಾರಗಳು ಅರಳಲಾರಂಭಿಸಿದವು. ಅದೇ ಮುಂದೆ 'ಶಿಲ್ಪನಿಕೇತನ'ದ ಹುಟ್ಟಿಗೆ ಕಾರಣವಾಯಿತು.

ಒಂದೇ ಶಿಲ್ಪ ಬಹುರೂಪದಲ್ಲಿ ಗೋಚರಿಸುತ್ತೆ
ಕಿರಣ್ ಸುಬ್ಬಯ್ಯ ಅವರ ಕಲಾ ಚಾತುರ್ಯತೆಗೆ 'ಶಿಲ್ಪನಿಕೇತನ'ದಲ್ಲಿ ಸಂಗ್ರಹಿಸಿಟ್ಟಿರುವ ಇನ್ನೂರಕ್ಕೂ ಹೆಚ್ಚು ಶಿಲ್ಪಕಲಾಕೃತಿಗಳೇ ಸಾಕ್ಷಿಯಾಗಿವೆ. ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಲ್ಲಿ ಇಲ್ಲಿನ ಶಿಲ್ಪಗಳ ವೈಶಿಷ್ಟ್ಯತೆ ಗೋಚರವಾಗುತ್ತದೆ. ಇಲ್ಲಿನ ಒಂದೇ ಶಿಲ್ಪ ಬಹುರೂಪದಲ್ಲಿ ನಮ್ಮನ್ನು ಆಕರ್ಷಿಸುತ್ತದೆ. ಇಂತಹದೊಂದು ಪ್ರಯೋಗ ವಿಶ್ವದಲ್ಲಿಯೇ ಪ್ರಥಮ ಎಂದು ಹೇಳಲಾಗುತ್ತಿದೆ. ಈಗಾಗಲೇ ಇವರ ಸಂಗ್ರಹಾಲಯದಲ್ಲಿರುವ ಶಿಲ್ಪಗಳಲ್ಲಿ ಇಪ್ಪತ್ತೆರಡಕ್ಕೂ ಹೆಚ್ಚು ದ್ವಿಬಹುರೂಪಿ, ಇಪ್ಪತ್ತಮೂರಕ್ಕೂ ಹೆಚ್ಚು ತ್ರಿಬಹುರೂಪಿ ಹಾಗೂ ಮೂವತೈದಕ್ಕೂ ಹೆಚ್ಚು ಚತುರ್ ಬಹುರೂಪಿ ಶಿಲ್ಪಗಳು, ಎರಡು ಪಂಚಬಹುರೂಪವಿರುವ ಅಪರೂಪದ ಶಿಲ್ಪಗಳಿವೆ.

ಯಾವ ಭಾವನೆಗಳನ್ನು ಶಿಲೆ ಮೂಲಕ ತೆರೆದಿಟ್ಟಿದ್ದಾರೆ?
ಭ್ರಷ್ಟತೆ, ಸ್ವಾರ್ಥ, ದುಷ್ಟತನ ಹಾಗೂ ಒಬ್ಬ ಮನುಷ್ಯನ ಹಲವು ಮುಖಗಳನ್ನು ಇವರ ಶಿಲ್ಪಗಳು ತೋರಿಸುತ್ತದೆ. ಸುಂದರ ಮಹಿಳೆಯ ಸೌಂದರ್ಯ ಪ್ರದರ್ಶನ, ಪ್ರೇಯಸಿ ನಡುವಿನ ಶೃಂಗಾರ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯೊಬ್ಬಳ ಮೂಕರೋಧನ, ಗಂಡು ಹೆಣ್ಣಿನ ಸಮಾಗಮನ. ಜೊತೆಗೆ ಪ್ರೀತಿ, ಪ್ರೇಮ, ಪ್ರಣಯಗಳಿಗೆ ಸಂಬಂಧಿಸಿದ ಕಲಾಕೃತಿಗಳು, ನೃತ್ಯದ ಮೂಲಕ ಸ್ವಾಗತಿಸುವ ಶಿಲಾ ಬಾಲಕಿಯರು, ತಾಯಿ ಮಗುವಿನ ಸಂಬಂಧ, ರಾಮ ಸೀತೆ, ಲಕ್ಷ್ಮಣರಿಗೆ ಸ್ವಾಮಿ ಭಕ್ತಿ ತೋರುತ್ತಿರುವ ಹನುಮಂತ, ಹೀಗೆ ಒಂದಲ್ಲ, ಎರಡಲ್ಲ ನೂರಾರು ಭಾವನೆಗಳನ್ನು ಬಿಂಬಿಸುವ ಕಲಾಕೃತಿ ನಮ್ಮನ್ನು ಬೆರಗುಗೊಳಿಸುತ್ತದೆ.

ಕಲಾನೈಪುಣ್ಯತೆಯನ್ನು ಯಾರೆಲ್ಲಾ ಮೆಚ್ಚಿದ್ದಾರೆ?
ಕಲ್ಲಿನಲ್ಲಿ ಒಂದೇ ಒಂದು ಶಿಲ್ಪವನ್ನು ಕೆತ್ತುವುದೇ ತ್ರಾಸವಾಗಿರುವಾಗ ಒಂದೇ ಶಿಲ್ಪಕ್ಕೆ ಎರಡು, ಮೂರು, ನಾಲ್ಕು, ಐದು ರೂಪವನ್ನು ನೀಡುವುದು ಅಷ್ಟು ಸುಲಭವಲ್ಲ ಆದರೂ ಯಾವುದು ಕಷ್ಟವೋ ಅದನ್ನೇ ಸುಲಭ ಮಾಡಿ ತೋರಿಸಿದ್ದಾರೆ ಕಿರಣ್ ಸುಬ್ಬಯ್ಯ. ಹಾಗಾಗಿ ಅವರ ಕಲಾ ನೈಪುಣ್ಯತೆಯನ್ನು ದೂರದ ಅಮೇರಿಕಾ, ಇಂಗ್ಲೆಂಡ್, ಸಿಂಗಾಪುರ ಹಾಗೂ ಜರ್ಮನ್ ಕಲಾ ರಸಿಕರು ಕೊಂಡಾಡಿದ್ದಾರೆ. ಕಳೆದ 36 ವರ್ಷಗಳಲ್ಲಿ ಇವರು ಕೆತ್ತಿದ ಶಿಲ್ಪಗಳಿಗೆ ಲೆಕ್ಕವಿಲ್ಲ. ಆದರೆ ಪ್ರತಿಯೊಂದು ಶಿಲ್ಪ ಕೆತ್ತುವಾಗಲೂ ಹೊಸ ಪ್ರಯೋಗ ಮಾಡಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ

ಗಿನ್ನಿಸ್ ದಾಖಲೆ ಎಡೆಗೆ ಹೆಜ್ಜೆ ಹಾಕಿದ ವಿಗ್ರಹ ಯಾವುದು?
ಕಿರಣ್ ಸುಬ್ಬಯ್ಯರವರು ಇಡೀ ವಿಶ್ವವೇ ಬೆರಗಾಗುವ ಮತ್ತು ಆ ಮೂಲಕ ಗಿನ್ನಿಸ್ ದಾಖಲೆಡೆಗೆ ಹೆಜ್ಜೆ ಹಾಕುವಂತಹ ಕೆತ್ತನೆ ಮಾಡಿದ್ದು ಮತ್ತೊಂದು ವಿಶೇಷ. ಇವರು ಕೆತ್ತಿರುವ ವಿಗ್ರಹ "ಆದಿಶೇಷ" ವಿಭಿನ್ನ ಪ್ರಯೋಗ. ಇದನ್ನು ಕೃಷ್ಣ ಶಿಲೆಯಲ್ಲಿ ಕೆತ್ತಲಾಗಿದೆ. ಐದು ಅಡಿ ಎತ್ತರದ ಆದಿಶೇಷ ಸುಮಾರು 135 ಹೆಡೆಗಳನ್ನು ಬಿಚ್ಚಿ ನಿಂತಿರುವಂತೆ ಕೆತ್ತಿದ್ದಾರೆ. ಈ ವಿಗ್ರಹದ ಹಿಂದೆ ಶ್ರೀಯಂತ್ರ, ಓಂಯಂತ್ರ, ಗಾಯತ್ರಿ ಮಂತ್ರವನ್ನು ಸುಂದರವಾಗಿ ಕೆತ್ತಲಾಗಿದೆ. ಈ ಹಿಂದೆ ನೇಪಾಳದಲ್ಲಿದ್ದ ಎರಡು ಅಡಿಯ 107 ಹೆಡೆಗಳ ಆದಿಶೇಷ ವಿಶ್ವದಲ್ಲಿಯೇ ವಿಶಿಷ್ಟ ಎಂಬ ಖ್ಯಾತಿಗೆ ಪಾತ್ರವಾಗಿ ಗಿನ್ನಿಸ್ ದಾಖಲೆಯಾಗಿತ್ತು. ಆದರೆ ಈಗ ಅದಕ್ಕಿಂತಲೂ ದೊಡ್ಡ ಕೆತ್ತನೆಯನ್ನು ಕಿರಣ್ ಸುಬ್ಬಯ್ಯ ಮಾಡಿದ್ದಾರೆ. ಇವರು ತಮ್ಮ ಕೆತ್ತನೆಗೆ ಹೆಚ್.ಡಿ.ಕೋಟೆಯಲ್ಲಿ ದೊರೆಯುವ ಕೃಷ್ಣಶಿಲೆಯನ್ನು ಬಳಸುತ್ತಾರಂತೆ.

ಕಿರಣ್ ಅವರ ಪ್ರಸಿದ್ಧಿ ಹಿಂದೆ ಯಾರಿದ್ದಾರೆ?
ಕಿರಣ್ ಸುಬ್ಬಯ್ಯರವರು ಪ್ರಚಾರಕ್ಕೆ ಒತ್ತು ನೀಡದೆ ತಮ್ಮ ಪಾಡಿಗೆ ತಾವು ಎಂಬಂತೆ ತೆರೆಮರೆಯಲ್ಲಿದ್ದುಕೊಂಡೇ ಅದ್ಭುತ ಸಾಧನೆ ಮಾಡಿದ್ದಾರೆ. ಇವರ ಕಲೆಯನ್ನು ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವರು ಹತ್ತಿರದಿಂದ ನೋಡಿ ಖುಷಿಪಟ್ಟಿದ್ದಾರೆ. ಕಿರಣ್ ಸುಬ್ಬಯ್ಯರವರು ಇವತ್ತು ಸಾಧನೆ ಮಾಡಿದ್ದರೆ ಅದಕ್ಕೆ ಅವರ ಪತ್ನಿ ಮತ್ತು ಮಕ್ಕಳ ಪ್ರೋತ್ಸಾಹವೂ ಕಾರಣ ಎಂದರೆ ತಪ್ಪಾಗಲಾರದು.












Click it and Unblock the Notifications