ದೇಶ ಸ್ಮರಿಸುವ ವೀರಯೋಧ ಫೀಲ್ಡ್ ಮಾರ್ಷಲ್ ಕಾರ್ಯಪ್ಪ

By: ಬಿ.ಎಂ.ಲವಕುಮಾರ್
Subscribe to Oneindia Kannada

ಜನವರಿ 28ನ್ನು ಕೊಡಗಿನವರು ಮಾತ್ರವಲ್ಲ, ರಕ್ಷಣಾ ಕ್ಷೇತ್ರದ ಬಗ್ಗೆ ತಿಳಿದ ಯಾರೂ ಕೂಡ ಮರೆಯುವಂತಿಲ್ಲ. ಕಾರಣ ನಮ್ಮ ದೇಶದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಂತಹ ವೀರಯೋಧ ಜನನವಾದ ದಿನ. ಅವರ ಹುಟ್ಟು, ಬಾಲ್ಯ, ಓದು, ರಕ್ಷಣಾ ಕ್ಷೇತ್ರದ ಸೇವೆ ಎಲ್ಲವೂ ಮೈ ರೋಮಾಂಚನಗೊಳಿಸುವಂತಹದ್ದು.

ಪಾರುಪತ್ಯೆಗಾರರಾಗಿದ್ದ ಕೊಡಂದೇರ ಮಾದಪ್ಪ-ಕಾವೇರಮ್ಮ ದಂಪತಿಯ ಆರು ಮಂದಿ ಮಕ್ಕಳಲ್ಲಿ ದ್ವಿತೀಯ ಪುತ್ರನಾಗಿ 1899 ಜನವರಿ 28ರಂದು ಸೋಮವಾರಪೇಟೆ ತಾಲೂಕಿನ (ಉತ್ತರ ಕೊಡಗು) ಶನಿವಾರಸಂತೆಯಲ್ಲಿ ಕಾರ್ಯಪ್ಪ ಜನಿಸಿದರು. ಇವರಿಗೆ ಅಣ್ಣ ಕೆ.ಎಂ. ಅಯ್ಯಣ್ಣ, ತಮ್ಮಂದಿರು ಕೆ.ಎಂ ನಂಜಪ್ಪ, ಕೆ.ಎಂ ಬೋಪಯ್ಯ, ಸೋದರಿಯರು ಕೆ.ಎಂ. ಪೂವಮ್ಮ ಹಾಗೂ ಕೆ.ಎಂ. ಬೊಳ್ಳಮ್ಮ ಇದ್ದರು. ಕಾರ್ಯಪ್ಪರವರು ಬಾಲ್ಯದಲ್ಲಿಯೇ ಸೇನೆಯಲ್ಲಿ ಕೆಲಸ ಮಾಡಬೇಕೆಂಬ ಕನಸು ಕಂಡಿದ್ದರು. ಹತ್ತಿರದಿಂದ ಅವರ ತುಂಟಾಟಗಳನ್ನು ನೋಡುತ್ತಾ ಖುಷಿ ಪಡುತ್ತಿದ್ದ ಬಂಧುವರ್ಗದವರು ಪ್ರೀತಿಯಿಂದ "ಚಿಮ್ಮ" ಎಂದೇ ಕರೆಯುತ್ತಿದ್ದರು.

ಕುಶಾಲನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ ಮುಂದಿನ ಶಿಕ್ಷಣಕ್ಕಾಗಿ ಮಡಿಕೇರಿಯ ಸೆಂಟ್ರಲ್ ಹೈ ಸ್ಕೂಲ್(ಈಗಿನ ಜೂನಿಯರ್ ಕಾಲೇಜು)ಗೆ ಸೇರ್ಪಡೆಗೊಂಡರು. ನಂತರ ಇಂಟರ್ ಮೀಡಿಯಟ್ ಶಿಕ್ಷಣಕ್ಕಾಗಿ ಮದರಾಸ್ ಫ್ರೆಸಿಡೆನ್ಸಿ ಕಾಲೇಜಿಗೆ ಸೇರಿದರು.

ಕಾಲೇಜಿನ ದಿನಗಳಲ್ಲಿ ವಿವಿಧ ಪುಸ್ತಕಗಳನ್ನು ಓದುತ್ತಿದ್ದ ಅವರು ನಾಟಕಗಳನ್ನು ಇಷ್ಟಪಡುತ್ತಿದ್ದರು. ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದು, ಹಾಕಿ ಮತ್ತು ಟೆನ್ನಿಸ್‍ನಂತಹ ಆಟಗಳನ್ನು ಆಗಾಗ್ಗೆ ಆಡುತ್ತಿದ್ದರು. ಇದರ ಜೊತೆಗೆ ಸಂಗೀತ ಮತ್ತು ಓದಿನಲ್ಲೂ ಮುಂದಿದ್ದರು.[ಇನ್ಮುಂದೆ ದೆಹಲಿ ಪರೇಡ್ ಮೈದಾನ ಕಾರ್ಯಪ್ಪ ಮೈದಾನ!]

Jan 28 field Marshall karyappanavara birthday

ವಿದ್ಯಾಭ್ಯಾಸದ ಬಳಿಕ ಅವರಿಗೆ ಉದ್ಯೋಗ ಮಾಡಲು ಬೇರೆ, ಬೇರೆ ಹುದ್ದೆಗಳು ಅರಸಿ ಬರುವುದೇನು ಕಷ್ಟವಾಗಿರಲಿಲ್ಲ. ಆದರೆ ಸೇನೆಯಲ್ಲಿ ಕೆಲಸ ಮಾಡಬೇಕೆಂಬ ಅದಮ್ಯ ಉತ್ಸಾಹ ಅವರಲ್ಲಿದ್ದುದರಿಂದ ಅವರು ತಮ್ಮ 18ನೇ ವಯಸ್ಸಿನಲ್ಲಿ ಸಿಮ್ಲಾದಲ್ಲಿ ಸೇನೆಯ ನೇಮಕಾತಿ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದರು. ಅಲ್ಲಿ ಅವರು ಸೇನೆಗೆ ನೇಮಕಗೊಂಡರು. 1917ರ ಪ್ರಥಮ ವಿಶ್ವ ಯುದ್ಧದ ವೇಳೆಗೆ ಅವರಿಗೆ ವೀರಯೋಧನಾಗಿ ಹೋರಾಡುವ ಅವಕಾಶ ಒದಗಿತು. 1918ರಲ್ಲಿ ಮೊದಲನೆಯ ವಿಶ್ವಯುದ್ಧ ಮುಗಿದಾಗ ಭಾರತದ ರಾಜಕೀಯ ನಾಯಕರು ಭಾರತೀಯರನ್ನೂ ಬ್ರಿಟಿಷ್ ಆಡಳಿದ ಕಿಂಗ್ಸ್ ಕಮಿಷನ್‍ನಲ್ಲಿ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸತೊಡಗಿದರು. ಆ ಸಂದರ್ಭ ನಡೆದ ಕಠಿಣ ಪರೀಕ್ಷೆಗಳ ಬಳಿಕ ಆಯ್ಕೆಯಾದ ಬೆರಳೆಣಿಕೆಯ ಮಂದಿಯಲ್ಲಿ ಕಾರ್ಯಪ್ಪ ಒಬ್ಬರಾಗಿದ್ದರು, ಅವರು ಸೇನೆಯ ಕಠಿಣ ತರಬೇತಿಯನ್ನು ಮುಗಿಸಿ ಇಂದೂರಿನ ಡೆಲಿ ಕೆಡೆಟ್ ಕಾಲೇಜಿನಲ್ಲಿ ಸೈನ್ಯಕ್ಕೆ ನಿಯುಕ್ತರಾದ ಭಾರತೀಯ ಅಧಿಕಾರಿಗಳ ಮೊದಲ ವರ್ಗಕ್ಕೆ ಸೇರಿಕೊಂಡರು ಮತ್ತು ಮುಂಬಯಿಯಲ್ಲಿದ್ದ ಕರ್ನಾಟಿಕ್ ಪದಾತಿದಳಕ್ಕೆ ನಿಯುಕ್ತಿಗೊಂಡರು.

1937ರಲ್ಲಿ ಮನಿಯಪ್ಪಂಡ ಮುತ್ತಣ್ಣ ಅವರ ಪುತ್ರಿ ಮುತ್ತಮ್ಮ ಅವರನ್ನು ವಿವಾಹವಾದರು. (ಕಾರ್ಯಪ್ಪ ಮುತ್ತಮ್ಮ ದಂಪತಿಗೆ ಇಬ್ಬರು ಮಕ್ಕಳು ಜನಿಸಿದರು. ಒಬ್ಬರು ಇದೀಗ ನಿವೃತ್ತರಾಗಿರುವ ಏರ್ ಮಾರ್ಷಲ್ ಕೆ.ಸಿ. ನಂದ ಕಾರ್ಯಪ್ಪ ಹಾಗೂ ನಳಿನಿ ಕಾರ್ಯಪ್ಪ)

ಮೆಸಪೆಟೋಮಿಯಾ(ಈಗಿನ ಇರಾಕ್)ದಲ್ಲಿದ್ದ 37(ವೇಲ್ಸ್ ರಾಜಕುಮಾರನ) ಡೊಗ್ರಾ ದಳದೊಂದಿಗೆ ಸೈನ್ಯದ ಸಕ್ರಿಯ ಸೇವೆಯನ್ನು ಪ್ರಾರಂಭಿಸಿದರು. ನಂತರ ಇವರನ್ನು 2ನೇ ರಜಪೂತ್ ಲಘು ಪದಾತಿದಳ(ವಿಕ್ಟೊರಿಯಾ ರಾಣಿಯ ಸ್ವಂತ)ಕ್ಕೆ ವರ್ಗಾಯಿಸಲಾಯಿತು. 1933ರಲ್ಲಿ ಕ್ವೆಟ್ಟಾದಲ್ಲಿದ್ದ ಸಾಫ್ಟ್ ಕಾಲೇಜಿನಲ್ಲಿ ತರಬೇತಿ ಪಡೆದ ಇವರು ಈ ತರಬೇತಿಯನ್ನು ಪಡೆದ ಮೊದಲ ಭಾರತೀಯ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 1946ರಲ್ಲಿ ಫ್ರಂಟೀಯರ್ ಬ್ರಿಗೇಡ್ ಗುಂಪಿನ ಬ್ರಿಗೇಡಿಯರಾಗಿ ಬಡ್ತಿ ಪಡೆದು ಕರ್ನಲ್ ಅಯೂಬ್ ಖಾನ್ (ಸ್ವಾತಂತ್ರ್ಯ ಬಳಿಕ ಪಾಕಿಸ್ತಾನದ ಸೈನ್ಯದ ಫೀಲ್ಡ್ ಮಾರ್ಷಲ್ ಮತ್ತು 1962ರಿಂದ 1969ರವರೆಗೆ ರಾಷ್ಟ್ರಪತಿಯಾಗಿದ್ದರು) ಇವರ ಅಧೀನ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.

ಕಾರ್ಯಪ್ಪನವರು ತಮ್ಮ ಸೇವಾವಧಿಯಲ್ಲಿ ವಿವಿಧ ದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದನ್ನು ಕಾಣಬಹುದು. 1941-42ರ ವೇಳೆಯಲ್ಲಿ ಸಿರಿಯಾ ಮತ್ತು ಇರಾನ್ ಗಳಲ್ಲಿಯೂ, 1943-44ರಲ್ಲಿ ಬರ್ಮಾದಲ್ಲಿ ಹಾಗೂ ವಝಿರಿಸ್ತಾನದಲ್ಲಿ, 1942ರಲ್ಲಿ ಒಂದು ತುಕಡಿಯನ್ನು ಇವರ ಸ್ವಾಧೀನಕ್ಕೆ ಒಪ್ಪಿಸಲಾಯಿತು, ಅವತ್ತಿನ ದಿನಕ್ಕೆ ಇಂತಹ ಅಧಿಕಾರ ಪಡೆದ ಮೊದಲ ಭಾರತೀಯ ಅಧಿಕಾರಿ ಅವರಾಗಿದ್ದರು. ಅದಾದ ನಂತರ ಬರ್ಮಾದಿಂದ ಜಪಾನಿಯರನ್ನು ತೆರವುಗೊಳಿಸುವ ಸಲುವಾಗಿ 26ನೇ ಡಿವಿಜನ್ ನಲ್ಲಿ ಕೆಲಸ ನಿರ್ವಹಿಸಿ ಅದನ್ನು ಯಶಸ್ವಿಗೊಳಿಸಿದಾಗ ಅವರಿಗೆ ಆರ್ಡರ್ ಆಫ್ ಬ್ರಿಟಿಷ್ ಎಂಪೈರ್ ಪ್ರಶಸ್ತಿಯನ್ನು ನೀಡಲಾಯಿತು.

1947ರಲ್ಲಿ ಯುನೈಟೆಡ್ ಕಿಂಗ್‍ಡಮ್ ನ ಕಿಂಬೆರ್ಲಿಯಲ್ಲಿರುವ ಇಂಪೆರಿಯಲ್ ಡಿಫೆನ್ಸ್ ಕಾಲೇಜಿನಲ್ಲಿ ಯುದ್ಧದ ಉನ್ನತ ಮಟ್ಟದ ತಂತ್ರಗಳ ಬಗ್ಗೆ ತರಬೇತಿಯನ್ನು ಪಡೆದರು. ಸ್ವಾತಂತ್ರ್ಯ ದೊರೆತು ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ ಕಾರ್ಯಪ್ಪನವರು ಭಾರತದ ಸೈನ್ಯ ವಿಭಜನೆಯನ್ನು ಮತ್ತು ಸೈನ್ಯದ ಆಸ್ತಿಯ ವಿಭಜನೆಯನ್ನು ಎರಡು ದೇಶಗಳಿಗೆ ಸಮಾಧಾನವಾಗುವ ರೀತಿಯಲ್ಲಿ ನೆರವೇರಿಸಿದರು.

Jan 28 field Marshall karyappanavara birthday

ಸ್ವಾತಂತ್ರ್ಯ ನಂತರ ಭಾರತದ ಬಳಿಕ ಕಾರ್ಯಪ್ಪನವರು ಮೇಜರ್ ಜನರಲ್ ಪದವಿಗೆ ಏರಿದರಲ್ಲದೆ, ಸೈನ್ಯದ ಉಪ ದಂಡನಾಯಕರಾದರು. ನಂತರ ಲೆಫ್ಟಿನೆಂಟ್ ಜನರಲ್, ಪೂರ್ವದ ಸೈನ್ಯದ ಕಮಾಂಡರ್ ಆದರು. 1947ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ಪ್ರಾರಂಭವಾದಾಗ ಇವರನ್ನು ಪಶ್ಚಿಮದ ಸೈನ್ಯದ ಮುಖ್ಯ ಅಧಿಕಾರಿಯನ್ನಾಗಿ ನೇಮಿಸಲಾಯಿತು. ಝಿಲಾ, ದ್ರಾಸ್ ಮತ್ತು ಕಾರ್ಗಿಲ್ ಗಳನ್ನು ವಾಪಸ್ ಪಡೆಯುವಲ್ಲಿಯೂ ಯಶಸ್ವಿಯಾದರು.

ಜನವರಿ 15. 1949 ರಂದು ಜನರಲ್ ಪದವಿಗೆ ಬಾಜನರಾದ ಕಾರ್ಯಪ್ಪನವರು ಅಂದಿನ ಜನರಲ್ ಸರ್ ರಾಯ್ ಬುಚರ್ ಅವರಿಂದ ಅಧಿಕಾರ ದಂಡ ಸ್ವೀಕರಿಸಿ ಜನವರಿ 14. 1953ರವರೆಗೆ ಮೂರು ರಕ್ಷಣಾ ಪಡೆಗಳ ಪ್ರಥಮ ಮಹಾದಂಡ ನಾಯಕರಾಗಿ ಕರ್ತವ್ಯ ನಿರ್ವಹಿಸಿದರು.

ಏಪ್ರಿಲ್ 28. 1986ರಲ್ಲಿ ಅಂದಿನ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಅವರ ಮೂಲಕ ಭಾರತ ಸರ್ಕಾರವು ಜನರಲ್ ಕಾರ್ಯಪ್ಪ ಅವರಿಗೆ "ಫೀಲ್ಡ್ ಮಾರ್ಷಲ್" ಗೌರವವನ್ನು ಪ್ರದಾನ ಮಾಡಿತು. ಮೊದಲಿಗೆ ಜೈ ಹಿಂದ್ ಘೋಷಣೆಗಳನ್ನು ಚಾಲ್ತಿಗೆ ತಂದ ಅವರನ್ನು ಸಂತೋಷದಿಂದಲೇ ಗೌರವಿಸಲಾಗಿತ್ತು.

ಅವರಿಗೆ ಸಂದ ಗೌರವ ಬಿರುದುಗಳಿಗೆ ಲೆಕ್ಕವೇ ಇಲ್ಲ. ಬ್ರಿಟಿಷ್ ಸರ್ಕಾರದ ಒಬಿಇ, ಯುಎಸ್‍ಎ, ದಿ ಲೆಜನ್ ಆಫ್ ಮೆರಿಟ್ ನೇಪಾಳದ ಗೌರವ, ಜನರಲ್ ಪದವಿ, ಹಲವು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಗಳು, ಪೌರ ಸನ್ಮಾನಗಳು ನಡೆದಿವೆ.

ನಿವೃತ್ತಿಯ ಕೊನೆಯ ದಿನಗಳನ್ನು ಮಡಿಕೇರಿಯ ನಿಸರ್ಗ ಸುಂದರ ಸ್ಥಳವಾದ ರೋಷನಾರದಲ್ಲಿ ಕಳೆದಿದ್ದರು. ಕೊನೆಯವರೆಗೂ ಶಿಸ್ತಿನಿಂದಲೇ ಬದುಕಿದ ಅವರು 1993ರ ಮೇ 15ರಂದು ನಮ್ಮನ್ನಗಲಿದರು. ಇವತ್ತು ಕಾರ್ಯಪ್ಪರವರು ನಮ್ಮ ಮುಂದೆ ಇಲ್ಲದಿರಬಹುದು ಆದರೆ ಅವರ ಧೀರತನ, ಶಿಸ್ತು, ಪರಿಸರ ಸಂರಕ್ಷಣೆ, ದೇಶಕ್ಕೆ ನೀಡಿದ ಸೇವೆ ಸ್ಮರಿಸುತ್ತಲೇ ಇರುತ್ತೇವೆ. ವೀರಯೋಧನಿಗೊಂದು "ಸೆಲ್ಯೂಟ್" ಹೊಡೆಯಲು ಮರೆಯುವುದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
This article will be remembered for his birthday Jan 28 field Marshall karyappanavara. His life achievement, service to the country
Please Wait while comments are loading...