ವೀರಯೋಧ ಕೊಡಗಿನ ಪುತ್ರ ಕಾರ್ಯಪ್ಪನವರಿಗೆ 'ಸೆಲ್ಯೂಟ್'

By: ಬಿ.ಎಂ. ಲವಕುಮಾರ್
Subscribe to Oneindia Kannada

ಕೊಡಗು ಎಂದಾಕ್ಷಣ ಮೊದಲಿಗೆ ನೆನಪಾಗುವವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ. ಕೊಡಗಿನರಿಗೆ ಅವರ ಹೆಸರು ಹೇಳುವುದೇ ಹೆಮ್ಮೆ ಅಷ್ಟೇ ಅಲ್ಲ ಸೈನ್ಯದಲ್ಲಿ ಸೇವೆ ಸಲ್ಲಿಸುವುದಕ್ಕೆ ಸ್ಪೂರ್ತಿಯೂ ಹೌದು. ಫೀಲ್ಡ್ ಮಾರ್ಷಲ್ ಕೊಡಂದೆರ ಮಾದಪ್ಪ ಕಾರ್ಯಪ್ಪರವರು ನಮ್ಮ ಸೇನೆಯ ಪ್ರಥಮ ದಂಡನಾಯಕರಾಗಿದ್ದವರು. ಅಷ್ಟೇ ಅಲ್ಲ ಫೀಲ್ಡ್ ಮಾರ್ಷಲ್(ಮಹಾದಂಡನಾಯಕ) ಪದವಿಯನ್ನು ಪಡೆದ ಮೊದಲಿಗ. ಅವರ ಹುಟ್ಟುಹಬ್ಬ(28 ಜನವರಿ 1899 - 15 ಮೇ 1993)ದ ಪ್ರಯುಕ್ತ ಈ ವಿಶೇಷ ಲೇಖನ.

ಕೊಡಂದೆರ ಮಾದಪ್ಪರರ ಪುತ್ರರಾಗಿ 1899 ಜನವರಿ 28ರಂದು ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ಜನಿಸಿದ ಕಾರ್ಯಪ್ಪರವರು. ಬಾಲ್ಯದಲ್ಲಿಯೇ ಸೇನೆಯಲ್ಲಿ ಕೆಲಸ ಮಾಡಬೇಕೆಂಬ ಕನಸು ಕಂಡಿದ್ದರು. ಹತ್ತಿರದಿಂದ ಅವರ ತುಂಟಾಟಗಳನ್ನು ನೋಡುತ್ತಾ ಖುಷಿ ಪಡುತ್ತಿದ್ದ ಬಂಧುವರ್ಗದವರು ಪ್ರೀತಿಯಿಂದ "ಚಿಮ್ಮ" ಎಂದೇ ಕರೆಯುತ್ತಿದ್ದರು.

ವಿದ್ಯಾಭ್ಯಾಸ : ಇವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಡಿಕೇರಿಯ ಸೆಂಟ್ರಲ್ ಹೈಸ್ಕೂಲ್ ಅಂದರೆ ಈಗಿನ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆಯಿತು. ಆ ನಂತರ ಮುಂದಿನ ವಿದ್ಯಾಭ್ಯಾಸವನ್ನು ಅವರು ಮದ್ರಾಸಿನ ಫ್ರೆಸಿಡೆನ್ಸಿ ಕಾಲೇಜಿನಲ್ಲಿ ಮಾಡಿದರು. ಕಾಲೇಜಿನ ದಿನಗಳಲ್ಲಿ ವಿವಿಧ ಪುಸ್ತಕಗಳನ್ನು ಓದುತ್ತಿದ್ದ ಅವರು ನಾಟಕಗಳನ್ನು ಇಷ್ಟಪಡುತ್ತಿದ್ದರು. ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಅವರು ಹಾಕಿ ಮತ್ತು ಟೆನ್ನಿಸ್‌ನಂತಹ ಆಟಗಳನ್ನು ಆಗಾಗ್ಗೆ ಆಡುತ್ತಿದ್ದರು. ಇದರ ಜೊತೆಗೆ ಸಂಗೀತ ಮತ್ತು ಜಾದಿನತ್ತವೂ ಒಲವು ತೋರುತ್ತಿದ್ದರು. ["ಭಾರತದ ಸೇನೆ ವೈರಿಗಳ ಸದೆ ಬಡಿಯಲು ಸಿದ್ಧ"]

Field Marshal Kodandera Madappa Cariappa, brave son of India

ಓದಿನ ನಂತರ ಅವರಿಗೆ ಉದ್ಯೋಗ ಮಾಡಲು ಬೇರೆಬೇರೆ ಹುದ್ದೆಗಳು ಅರಸಿ ಬರುವುದೇನು ಕಷ್ಟವಾಗಿರಲಿಲ್ಲ. ಆದರೆ ಸೇನೆಯಲ್ಲಿ ಕೆಲಸ ಮಾಡಬೇಕೆಂಬ ಅದಮ್ಯ ಉತ್ಸಾಹ ಅವರಲ್ಲಿದ್ದುದರಿಂದ ಅವರು ಸೇನೆಯ ನೇಮಕಾತಿ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದರು. ಅಲ್ಲಿ ಅವರು ಸೇನೆಗೆ ನೇಮಕಗೊಂಡಿದ್ದರು. 1917ರ ಪ್ರಥಮ ವಿಶ್ವ ಯುದ್ಧದ ವೇಳೆಗೆ ಅವರಿಗೆ ವೀರಯೋಧನಾಗಿ ಹೋರಾಡುವ ಅವಕಾಶ ಒದಗಿಬಂದಿತ್ತು.

1918ರಲ್ಲಿ ಮೊದಲನೆಯ ವಿಶ್ವಯುದ್ಧ ಮುಗಿದಾಗ ಭಾರತದ ರಾಜಕೀಯ ನಾಯಕರು ಭಾರತೀಯರನ್ನೂ ಬ್ರಿಟಿಷ್ ಆಡಳಿತದ ಕಿಂಗ್ಸ್ ಕಮಿಷನ್‌ನಲ್ಲಿ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸತೊಡಗಿದರು. ಆ ಸಂದರ್ಭ ನಡೆದ ಕಠಿಣ ಪರೀಕ್ಷೆಗಳ ಬಳಿಕ ಆಯ್ಕೆಯಾದ ಬೆರಳೆಣಿಕೆಯ ಮಂದಿಯಲ್ಲಿ ಕಾರ್ಯಪ್ಪ ಒಬ್ಬರಾಗಿದ್ದರು, ಅವರು ಸೇನೆಯ ಕಠಿಣ ತರಬೇತಿಯನ್ನು ಮುಗಿಸಿ ಇಂದೂರಿನ ಡೆಲಿ ಕೆಡೆಟ್ ಕಾಲೇಜಿನಲ್ಲಿ ಸೈನ್ಯಕ್ಕೆ ನಿಯುಕ್ತರಾದ ಭಾರತೀಯ ಅಧಿಕಾರಿಗಳ ಮೊದಲ ವರ್ಗಕ್ಕೆ ಸೇರಿಕೊಂಡರು ಮತ್ತು ಮುಂಬಯಿಯಲ್ಲಿದ್ದ ಕರ್ನಾಟಿಕ್ ಪದಾತಿದಳಕ್ಕೆ ನಿಯುಕ್ತಿಗೊಂಡರು. [ವಿಶ್ವದ ಬಲಿಷ್ಠ ಮಿಲಿಟರಿ ಶಕ್ತಿ ಹೊಂದಿರುವ ದೇಶಗಳು]

ವಿದೇಶದಲ್ಲಿಯೂ ಸೇವೆ : ಮೆಸೊಪೊಟಾಮಿಯಾ(ಈಗಿನ ಇರಾಕ್)ದಲ್ಲಿದ್ದ 37(ವೇಲ್ಸ್ ರಾಜಕುಮಾರನ) ಡೊಗ್ರಾ ದಳದೊಂದಿಗೆ ಸೈನ್ಯದ ಸಕ್ರಿಯ ಸೇವೆಯನ್ನು ಪ್ರಾರಂಭಿಸಿದರು. ನಂತರ ಇವರನ್ನು 2ನೇ ರಾಜಪೂತ್ ಲಘು ಪದಾತಿದಳ(ವಿಕ್ಟೋರಿಯಾ ರಾಣಿಯ ಸ್ವಂತ)ಕ್ಕೆ ವರ್ಗಾಯಿಸಲಾಯಿತು. 1933ರಲ್ಲಿ ಕ್ವೆಟ್ಟಾದಲ್ಲಿದ್ದ ಸಾಫ್ಟ್ ಕಾಲೇಜಿನಲ್ಲಿ ತರಬೇತಿ ಪಡೆದ ಇವರು, ಈ ತರಬೇತಿಯನ್ನು ಪಡೆದ ಮೊದಲ ಭಾರತೀಯ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 1946ರಲ್ಲಿ ಫ್ರಂಟೀಯರ್ ಬ್ರಿಗೆಡ್ ಗುಂಪಿನ ಬ್ರಿಗೇಡಿಯರರಾಗಿ ಬಡ್ತಿ ಪಡೆದು ಕರ್ನಲ್ ಅಯೂಬ್ ಖಾನ್ (ಸ್ವಾತಂತ್ರ್ಯ ಬಳಿಕ ಪಾಕಿಸ್ತಾನದ ಸೈನ್ಯದ ಫೀಲ್ಡ್ ಮಾರ್ಷಲ್ ಮತ್ತು 1962ರಿಂದ 1969ರವರೆಗೆ ರಾಷ್ಟ್ರಪತಿಯಾಗಿದ್ದರು) ಇವರ ಅಧೀನ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.

ಕಾರ್ಯಪ್ಪನವರು ತಮ್ಮ ಸೇವಾವಧಿಯಲ್ಲಿ ವಿವಿಧ ದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, 1941-42ರ ವೇಳೆಯಲ್ಲಿ ಸಿರಿಯಾ ಮತ್ತು ಇರಾನ್ ದೇಶಗಳಲ್ಲಿಯೂ, 1943-44ರಲ್ಲಿ ಬರ್ಮಾದಲ್ಲಿ ಹಾಗೂ ವಝಿರಿಸ್ತಾನದಲ್ಲಿ ಕಾರ್ಯನಿರ್ವಹಿಸಿದರು. 1942ರಲ್ಲಿ ಒಂದು ತುಕಡಿಯನ್ನು ಇವರ ಸ್ವಾಧೀನಕ್ಕೆ ಒಪ್ಪಿಸಲಾಯಿತು. ಅವತ್ತಿನ ದಿನಕ್ಕೆ ಇಂತಹ ಅಧಿಕಾರ ಪಡೆದ ಮೊದಲ ಭಾರತೀಯ ಅಧಿಕಾರಿ ಅವರಾಗಿದ್ದರು. ಆದಾದ ನಂತರ ಬರ್ಮಾದಿಂದ ಜಪಾನೀಯರನ್ನು ತೆರವುಗೊಳಿಸುವ ಸಲುವಾಗಿ 26ನೆಯ ಡಿವಿಜನ್ನಿನಲ್ಲಿ ಕೆಲಸ ನಿರ್ವಹಿಸಿ, ಅದನ್ನು ಯಶಸ್ವಿಗೊಳಿಸಿದಾಗ 'ಆರ್ಡರ್ ಆಫ್ ಬ್ರಿಟಿಷ್ ಎಂಪೈರ್' ಪ್ರಶಸ್ತಿಯನ್ನು ನೀಡಲಾಯಿತು. [ಸೇನಾ ಬಲಾಢ್ಯತೆಯಲ್ಲಿ ಭಾರತಕ್ಕೆ 5ನೇ ಸ್ಥಾನ]

1947ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಕಿಂಬೆರ್ಲಿಯಲ್ಲಿರುವ ಇಂಪೆರಿಯಲ್ ಡಿಫೆನ್ಸ್ ಕಾಲೇಜಿನಲ್ಲಿ ಯುದ್ಧದ ಉನ್ನತ ಮಟ್ಟದ ತಂತ್ರಗಳ ಬಗ್ಗೆ ತರಬೇತಿಯನ್ನು ಪಡೆದರು. ಅಲ್ಲಿಯೂ ಆ ತರಬೇತಿಯನ್ನು ಪಡೆದ ಮೊದಲ ಭಾರತೀಯರಾದರು. ಸ್ವಾತಂತ್ರ್ಯ ದೊರೆತು ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ ಕಾರ್ಯಪ್ಪನವರು ಭಾರತದ ಸೈನ್ಯ ವಿಭಜನೆಯನ್ನು ಮತ್ತು ಸೈನ್ಯದ ಆಸ್ತಿಯ ವಿಭಜನೆಯನ್ನು ಎರಡು ದೇಶಗಳಿಗೆ ಸಮಾಧಾನವಾಗುವ ರೀತಿಯಲ್ಲಿ ನೆರವೇರಿಸಿದರು.

ಪಾಕ್ ಜೊತೆ ಯುದ್ಧ : ಸ್ವಾತಂತ್ರ್ಯದ ನಂತರ ಕಾರ್ಯಪ್ಪನವರು ಮೇಜರ್ ಜನರಲ್ ಪದವಿಗೆ ಏರಿದರಲ್ಲದೆ, ಸೈನ್ಯದ ಉಪ ದಂಡನಾಯಕರಾದರು. ನಂತರ ಲೆಫ್ಟಿನೆಂಟ್ ಜನರಲ್ ಎಂದು ಪದೋನ್ನತಿಗೊಳಿಸಿ ಪೂರ್ವದ ಸೈನ್ಯದ ಕಮಾಂಡರ್ ಆದರು. 1947ರಲ್ಲಿ ಪಾಕಿಸ್ತಾನದೊಂದಿಗೆ ಯುದ್ಧ ಪ್ರಾರಂಭವಾದಾಗ ಇವರನ್ನು ಪಶ್ಚಿಮದ ಸೈನ್ಯದ ಮುಖ್ಯ ಅಧಿಕಾರಿಯನ್ನಾಗಿ ನೇಮಿಸಲಾಯಿತು. ಝಿಲಾ, ದ್ರಾಸ್ ಮತ್ತು ಕಾರ್ಗಿಲ್ ಗಳನ್ನು ವಾಪಸ್ ಪಡೆಯುವಲ್ಲಿಯೂ ಯಶಸ್ವಿಯಾದರು.

1983ರಲ್ಲಿ ಭಾರತದ ಮಹಾದಂಡನಾಯಕ(ಫೀಲ್ಡ್‌ಮಾರ್ಷಲ್)ರಾದರು. ಇವರು ನಿವೃತ್ತಿಯ ಬಳಿಕ ಮಡಿಕೇರಿಯ ನಿಸರ್ಗ ಸುಂದರ ಸ್ಥಳವಾದ ರೋಷನಾರದಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದರು. ಕೊನೆಯವರೆಗೂ ಶಿಸ್ತಿನಿಂದಲೇ ಬದುಕಿದ ಅವರು 1993ರ ಮೇ 15ರಂದು ನಮ್ಮನ್ನಗಲಿದರು. ಇವತ್ತು ಕಾರ್ಯಪ್ಪರವರು ನಮ್ಮ ಮುಂದೆ ಇಲ್ಲದಿರಬಹುದು ಆದರೆ ಅವರ ಧೀರತನ, ಶಿಸ್ತು, ಪರಿಸರ ಸಂರಕ್ಷಣೆ, ದೇಶಕ್ಕೆ ನೀಡಿದ ಸೇವೆ ಸ್ಮರಿಸುತ್ತಲೇ ಇರುತ್ತೇವೆ. ವೀರಯೋಧನಿಗೆ ನಮ್ಮ "ಸೆಲ್ಯೂಟ್"

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Field Marshal Kodandera 'Kipper' Madappa Cariappa (28 January 1899 – 15 May 1993) was the First Indian Commander-in-Chief of the Indian Army and led the Indian forces on the Western Front during the Indo-Pakistan War of 1947. He is one of the two Indian Army officers to hold the highest rank of Field Marshal (the other being Field Marshal Sam Manekshaw). Happy birthday to you Sir.
Please Wait while comments are loading...