ತಿಂಗಳಿಗೆ ಲಕ್ಷಗಟ್ಟಲೆ ದುಡಿಯುವ ಅಡುಗೆ ಭಟ್ಟರ ಮನದಾಳದ ಮಾತು

Posted By:
Subscribe to Oneindia Kannada

ಯಾವುದೇ ಗ್ಯಾಜೆಟ್, ಪುಸ್ತಕಗಳು, ಪ್ರವಾಸ ಮತ್ತೊಂದು ಏನೇ ಹವ್ಯಾಸಗಳಿದ್ದರೂ ಮತ್ತೊಬ್ಬ ವ್ಯಕ್ತಿಯ ಬದುಕು ಬಹಳ ಆಸಕ್ತಿಕರ ಅನ್ನಿಸುತ್ತದೆ. ಹಾಗೆ ಅನ್ನಿಸುವುದಕ್ಕೆ ಸಂಭಾಷಣೆ ಹಾಗೂ ಸಂವಹನ ಸಾಧ್ಯವಾಗಬೇಕು. ಬೆಂಗಳೂರಿನಲ್ಲಿರುವ, ವೃತ್ತಿಯಲ್ಲಿ ತಕ್ಕ ಮಟ್ಟಿಗೆ ಹೆಸರು ಮಾಡಿದ ವ್ಯಕ್ತಿಯೊಬ್ಬರನ್ನು ಮಾತನಾಡಿಸಿ, ಬರೆದ ಲೇಖನವಿದು.

ಬ್ರಾಹ್ಮಣರ ಹುಡುಗರ ಮದುವೆ: ಎರಡು ಪ್ರತಿಕ್ರಿಯೆ

ಅವರು ವೃತ್ತಿಯಿಂದ ಅಡುಗೆ ಕಂಟ್ರ್ಯಾಕ್ಟರ್. ವಯಸ್ಸು ನಲವತ್ತರ ಆಸುಪಾಸಿನಲ್ಲಿದೆ. ಎರಡ್ಮೂರು ವರ್ಷಗಳ ಹಿಂದೆ ಮನೆ ಖರೀದಿ ಮಾಡಿದ್ದಾರೆ. ತಿಂಗಳ ಅವರ ಕಮಿಟ್ ಮೆಂಟ್ ಲಕ್ಷ ರುಪಾಯಿ ಇದೆ. ಕನಿಷ್ಠ ಹದಿನೈದು ಯುವಕರು ಇವರನ್ನೇ ನೆಚ್ಚಿಕೊಂಡಿದ್ದಾರೆ. ಒಟ್ಟಿನಲ್ಲಿ ಮೊದಲ ನೋಟಕ್ಕೆ ಹೊಟ್ಟೆ ಕಿಚ್ಚಾಗುವಂತೆ ಕಾಣುತ್ತಾರೆ.

ಆದರೆ, ಅವರ ಜೀವನ ಪಯಣದ ಬಗ್ಗೆ ತಿಳಿಸಿ ಎಂದು ಕೇಳಿಕೊಂಡಾಗ ಮಾತು ಮುಂದುವರಿಸಲು ಯೋಚನೆ ಮಾಡಿದರು. ಅದನ್ನು ಗುರುತಿಸಿ, "ನೀವು ಸಂಕೋಚ ಪಡುವ ಅಗತ್ಯವಿಲ್ಲ. ಮುಕ್ತವಾಗಿ ಮಾತನಾಡಿ" ಎಂದೆ. ಆಗಲೂ "ಇಲ್ಲ, ನಾನು ಅಷ್ಟಾಗಿ ಓದಿಕೊಂಡವನಲ್ಲ. ಲೋಕಾಭಿರಾಮದ ಮಾತನಾಡುವಾಗ ನಿಮಗೆ ಬೇಸರವಾಗುವಂಥ ವಿಷಯ ಎತ್ತಬಾರದು" ಅಂತ ಆತ ಹೇಳಿದರು.

ಬ್ರಾಹ್ಮಣ ಹುಡುಗರಿಗೆ ಮದುವೆಗೆ ಹೆಣ್ಣು ಹುಡುಕಿಕೊಡಿ...

ಅಲ್ಲಿಂದ ಮುಂದೆ ಅಡುಗೆ ವೃತ್ತಿಯ ಬಗ್ಗೆ ಹೇಳಿ ಅಂತ ಕೇಳಿದ ಮೇಲೆ, ಹೇಳುತ್ತಾ ಸಾಗಿದರು. ಇನ್ನು ಮುಂದೆ ಅವರದೇ ಮಾತುಗಳಲ್ಲಿ ಕೇಳಿ.

ಐಟಿಐ ತಲೆಗೆ ಹತ್ತಲಿಲ್ಲ

ಐಟಿಐ ತಲೆಗೆ ಹತ್ತಲಿಲ್ಲ

ನಾನು ಎಸ್ಸೆಸ್ಸೆಲ್ಸಿ ಮುಗಿಸಿದ ಮೇಲೆ ಐಟಿಐಗೆ ಸೇರಿಸಿದರು. ಏಕೋ ಅದು ಓದೋದಿಕ್ಕೆ ಆಗಲಿಲ್ಲ. ಮನೆ ಕಡೆ ಅಂಥ ಅನುಕೂಲ ಇರಲಿಲ್ಲವಾದ್ದರಿಂದ ತರಕಾರಿ ಹೆಚ್ಚುವುದಕ್ಕೆ, ನೀರು ಬಡಿಸುವುದಕ್ಕೆ ಆಗಾಗ ಹೋಗ್ತಿದ್ದೆ. ಕ್ರಮೇಣ ಅದೇ ವೃತ್ತಿಯಾಯಿತು. ನನಗೆ ಸಿಟ್ಟು ಜಾಸ್ತಿ. ಅದೊಂದು ಸಲ ಅವಮಾನ ಮಾಡಿದರು ಅನ್ನೋ ಕಾರಣಕ್ಕೆ ಕಂಟ್ರ್ಯಾಕ್ಟರ್ ಆಗಬೇಕು ಅಂತ ಹಟ ಬೆಳೆಯಿತು.

ಅಡುಗೆಯವರ ಮಕ್ಕಳು ಬರೋದಿಲ್ಲ

ಅಡುಗೆಯವರ ಮಕ್ಕಳು ಬರೋದಿಲ್ಲ

ಸಸ್ಯಾಹಾರದ ಅಡುಗೆಯಷ್ಟೇ ನಾನು ಒಪ್ಪಿಕೊಳ್ಳುವುದು. ಮಡಿ ಅಡುಗೆ ಅಂತ ಕೇಳಿರ್ತೀರಿ, ಅದು ಕೂಡ ನನಗೆ ಹೆಚ್ಚಾಗಿ ಬರುತ್ತದೆ. ಇತ್ತೀಚೆಗೆ ಅಡುಗೆಯವರಿಗೆ ಮದುವೆಗೆ ಹೆಣ್ಣು ಸಿಗುವುದು ಕಷ್ಟ ಅನ್ನೋ ಟ್ರೆಂಡ್ ಇದೆ. ಆ ಕಾರಣಕ್ಕೆ ಅಡುಗೆಯವರ ಮಕ್ಕಳೇ ಆದರೂ ತೀರಾ ಡಿಮ್ಯಾಂಡ್ ಇರುವ ದಿನಗಳಲ್ಲಿ ನೀರು ಬಡಿಸುವುದಕ್ಕೆ ಬನ್ನಿ ಅಂದರೂ ಬರಲ್ಲ. ಮಡಿ ಅಡುಗೆಗಂತೂ ತೀರಾ ಆಪ್ತರ ಮನೆಗಳಿಗೆ ನಾನೇ ಹೋಗಬೇಕು ಅಂತ ಸ್ಥಿತಿ ಇದೆ.

ನಮ್ಮದು ಈವೆಂಟ್ ಮ್ಯಾನೇಜ್ ಮೆಂಟ್

ನಮ್ಮದು ಈವೆಂಟ್ ಮ್ಯಾನೇಜ್ ಮೆಂಟ್

ನನ್ನ ತಂದೆ- ತಾಯಿ ಶಿವಮೊಗ್ಗದ ಕಡೆಯವರು. ಬೆಂಗಳೂರಿಗೆ ಬಂದು ಐವತ್ತು ವರ್ಷದ ಮೇಲೇ ಆಗಿದೆ. ನಮ್ಮ ವೃತ್ತಿಯಲ್ಲೇ ಕೆಲವರಿದ್ದಾರೆ ಅವರು ಅಡುಗೆ ಮಾಡುವಾಗ ಎಂಥ ನೀಟು ಅಂತ ನೀವು ನೋಡಬೇಕು. ಇನ್ನು ಈಗಿನ ಕಾಲದ ಹೆಣ್ಣುಮಕ್ಕಳಿಗೆ ಈಳಿಗೆ ಮಣೆ ಅಂದರೆ ಕೂಡ ಗೊತ್ತಿಲ್ಲದ ಸ್ಥಿತಿ ಇದೆ. ಈಗಂತೂ ಅಡುಗೆಗೆ ಥರಾವರಿ ಭಕ್ಷ್ಯ-ಭೋಜ್ಯಗಳು ಮಾಡ್ತೀವಿ. ಮದುವೆಗಳಲ್ಲಿ ಹುಡುಗ-ಹುಡುಗಿ ಕಡೆಯವರು ಕೈ ಬೀಸಿಕೊಂಡು ಬಂದರೂ ಸಾಕು, ಎಲ್ಲ ವ್ಯವಸ್ಥೆಯೂ ನಾವೇ ಮಾಡ್ತೀವಿ.

ಮದುವೆಗೆ ಬಂದವರನ್ನು ಆಹ್ವಾನ ಮಾಡುವುದಕ್ಕೆ ವೆಲ್ ಕಮ್ ಗರ್ಲ್ಸ್ ಅಂತ ಕೂಡ ಇರ್ತಾರೆ. ನಮ್ಮದು ಈಗ ಈವೆಂಟ್ ಮ್ಯಾನೇಜ್ ಮೆಂಟ್ ಅಂತ ಸ್ಟೈಲಾಗಿ ಹೇಳಬಹುದು.

ನನ್ನ ಮದುವೆಗೆ ಪ್ರಯತ್ನ ಪಡ್ತಿದಾರೆ

ನನ್ನ ಮದುವೆಗೆ ಪ್ರಯತ್ನ ಪಡ್ತಿದಾರೆ

ನನಗೆ ಈಗ ವಯಸ್ಸು ನಲವತ್ತು ದಾಟಿತು. ಇಷ್ಟು ವಯಸ್ಸಿಗೆ ಸಾಫ್ಟ್ ವೇರ್ ಮತ್ತೊಂದು ಕೆಲಸದಲ್ಲಿ ಇರೋರು ರಿಟೈರ್ ಮೆಂಟ್ ಬಗ್ಗೆ ಯೋಚಿಸುತ್ತಾ ಇರ್ತಾರೆ. ನನ್ನ ಮನೆಯಲ್ಲಿ ಮದುವೆಗೆ ಪ್ರಯತ್ನ ಪಡ್ತಿದ್ದಾರೆ. ಇಲ್ಲಿ ನಾನು ಏರಿದ ಎತ್ತರ ಕಾಣುತ್ತದೆ. ಆದರೆ ಅದಕ್ಕಾಗಿ ಪಟ್ಟ ಶ್ರಮ, ಬಿಟ್ಟುಕೊಟ್ಟ ಸುಖ, ಮನೆಯಲ್ಲಿ ಅಮ್ಮ ಪಡುವ ಚಿಂತೆ, ಕೆಲಸ ಮುಗಿಸಿ ಬಂದಾಗ ಆಗುವ ಆಯಾಸ... ಇವೆಲ್ಲ ಯಾರಿಗೂ ಹೇಳುವುದಕ್ಕೆ ಆಗಲ್ಲ.

ಅವರು ಬಿಜಿನೆಸ್ ಮ್ಯಾನ್, ನಾವಲ್ಲ

ಅವರು ಬಿಜಿನೆಸ್ ಮ್ಯಾನ್, ನಾವಲ್ಲ

ಅಡುಗೆ ನನ್ನ ಪಾಲಿಗೆ ದೇವರ ಕೈಂಕರ್ಯ. ಅದು ನನಗೆ ಎಲ್ಲವೂ ಕೊಟ್ಟಿದೆ. ಆದರೆ ಅದೇಕೋ ಈ ವೃತ್ತಿ ಬಗ್ಗೆ ಒಂದು ರೀತಿಯ ತಾತ್ಸಾರ ಕಾಣುತ್ತಿದೆ. ಹೋಟೆಲ್ ನಡೆಸುವವರು ಬಿಜಿನೆಸ್ ಮ್ಯಾನ್ ಆಗ್ತಾರೆ. ಆದರೆ ನಮ್ಮಂಥವರನ್ನು ನೋಡುವ ರೀತಿಯೇ ಬೇರೆ. ಜತೆಗೆ ಇಲ್ಲಿ ಹೊಸಬರು ಬರುತ್ತಲೇ ಇಲ್ಲ. ಈ ವೃತ್ತಿ ಈ ಸ್ವರೂಪದಲ್ಲೇ ಉಳಿಯುತ್ತಾ ಎಂಬ ಅನುಮಾನ ನನ್ನದು.

ಅಮ್ಮನಿಗೆ ಚಿಂತೆ

ಅಮ್ಮನಿಗೆ ಚಿಂತೆ

ಈಚೆಗೆ ಮನೆ ಖರೀದಿಸಿದ್ದೀನಿ, ಕಾರಿದೆ. ಆದರೆ ಮನೆಯಲ್ಲಿ ನಾನು-ವಯಸ್ಸಾದ ಅಮ್ಮ ಇಬ್ಬರೇ ಇದ್ದೀವಿ. ಅವರಿಗೆ ಮುಂದೆ ನನ್ನನ್ನು ನೋಡಿಕೊಳ್ಳುವವರು ಯಾರು ಅನ್ನೋ ಚಿಂತೆ. ಮದುವೆ ಆಗುವ ಆಸಕ್ತಿ, ಉತ್ಸಾಹ ಎರಡೂ ನನ್ನಲ್ಲಿಲ್ಲ. ಆದರೆ ಅಮ್ಮನಿಗೆ ಏನೋ ಸಣ್ಣ ಆಸೆ. ಪ್ರಯತ್ನ ಪಡುತ್ತಲೇ ಇದ್ದಾರೆ. ನನ್ನ ಹತ್ತಿರ ಕೆಲಸ ಮಾಡುವ ಹದಿನೈದು-ಇಪ್ಪತ್ತು ಹುಡುಗರಿದ್ದಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇಷ್ಟು ನನ್ನ ಬದುಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Cooking contract now a days can call it as event management. Here is an experience shared by a cooking contractor, residing in Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ