ಆಧುನಿಕ ಬಳ್ಳಾರಿಯಲ್ಲೊಬ್ಬ ಹೆಣಧರ್ಮರಾಯ ವಲಿ

Orphaned Corpses' Bellay Baron Valiಇತ್ತೀಚೆಗಂತೂ ಬಳ್ಳಾರಿಯ ಮಾತೆತ್ತಿದರೆ ಗಣಿ, ಧಣಿ, ಮೈನ್ಸು, ಎಕ್ಸ್ ಪೋರ್ಟು ಅಂಥವೇ ಶಬ್ದಗಳು ಕಿವಿಗೆ ಬೀಳುತ್ತವೆ. ಅಷ್ಟು ದೊಡ್ಡ ಜಿಲ್ಲೆಯಲ್ಲಿ ಬೇರೆ ಯಾರೂ ಬದುಕುತ್ತಲೇ ಇಲ್ಲವಾ? ಅಸಾಮಾನ್ಯರು ಸಾಮಾನ್ಯ ಶಬ್ದಗಳಾಗಿ, ಸಾಮಾನ್ಯರು ಅಸಾಮಾನ್ಯ ಪ್ರತಿಮೆಗಳಾಗಿ ಬಾಳುತ್ತಿರುವ ಈ ಜಿಲ್ಲೆಯಲ್ಲಿ ಅನಾಥ ಹೆಣಗಳ ವಾರಸುದಾರ ವಲಿ ಅಂತ ಒಬ್ಬನಿದ್ದಾನೆ. ಇಡೀ ಬಳ್ಳಾರಿ ಜಿಲ್ಲೆಯಲ್ಲಿ ಅವನು ಇವತ್ತು ತುಂಬಾ ಫೇಮಸ್ಸು!

ಚಿತ್ರ-ಲೇಖನ : ಎಚ್.ಎಂ.ಮಹೇಂದ್ರಕುಮಾರ್, ಬಳ್ಳಾರಿ

ನೀವಿಲ್ಲಿ ಓದುತ್ತಿರುವ ಸುದ್ದಿಚಿತ್ರ ಬಳ್ಳಾರಿ - ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ 63ರಿಂದ ಆಯ್ದು ತಂದದ್ದು. ಪ್ರಗತಿಯ ಕಡೆಗೆ ನಾಗಾಲೋಟ ಕಿತ್ತಿರುವ ನವ ಕರ್ನಾಟಕದ ಇನ್ನೊಂದು ಮನುಜ ಪಥವಿದು! ಹೆಸರಿಗೆ ಹೆದ್ದಾರಿ, ಆಯ ತಪ್ಪಿದರೆ ಮಸಣದ ಹಾದಿಯೆಂಬ ಎಚ್ಚರಿಕೆಯನ್ನು ಸಾರಿ ಸಾರಿ ಹೇಳುತ್ತಿರುವ ನರಕದ ಹಾದಿಯೂ ಹೌದು.

ನಾಲಕ್ಕು ಪಥದ ರಸ್ತೆ, ಆರು ಪಥದ ರಸ್ತೆ, ಇಕ್ಕೆಲಗಳಲ್ಲಿ ತಂತಿ ಬೇಲಿ ಇರುವ ರಸ್ತೆ; ಹೌದು. ಲಾರಿಗೊಂದು ದಾರಿ, ಬಸ್ಸಿಗೊಂದು ದಾರಿ, ಸೈಕಲ್ಲಿಗೊಂದು ದಾರಿ, ಚಕ್ರಬಂಡಿಗೊಂದು ದಾರಿಗಳಿರುವ ನ್ಯಾಷನಲ್ ಹೈವೆ ಅಥವಾ ಫ್ರೀವೇ ಬಗೆಗೆ ನೀವು ಕೇಳಿರಬಹುದು. ನಮ್ಮಲ್ಲಿ ಅವೆಲ್ಲ ಇಲ್ಲ ಸ್ವಾಮಿ. ಹೆದ್ದಾರಿ 63 ಎಂಬುದು ಜಯಭಾರತ ಜನನಿಯ ತನುಜಾತೆಯ ಮಕ್ಕಳು ಪ್ರಾಣವನ್ನು ಪಣಕ್ಕಿಟ್ಟು ಪ್ರಯಾಣಕ್ಕೆ ಸಿದ್ಧವಾಗಬೇಕಾದ ದುರ್ಗಮ ಹಾದಿ.

ಕರ್ನಾಟಕದಲ್ಲಿ ಎಷ್ಟೋ ಹೆದ್ದಾರಿಗಳಿವೆ. ಒಂದೊಂದರದು ಒಂದೊಂದು ಕಥೆ. ಆದರೆ ನಮ್ಮ ಬಳ್ಳಾರಿ ಜಿಲ್ಲೆಯ ಈ ಹೆದ್ದಾರಿ ಕಥೆಗಳನ್ನು ನೀವು ನೋಡಿರಲಿಕ್ಕಿಲ್ಲ, ಕೇಳಿರಲಿಕ್ಕಿಲ್ಲ. ಎಲ್ಲ ಕಡೆಗಳಲ್ಲಿಯೂ ಆಗುವಂತೆ ಇಲ್ಲಿಯೂ ಅಪಘಾತಗಳು ನಿತ್ಯ ಸಂಭವಿಸುತ್ತವೆ. ಸಂಚಾರ ದಟ್ಟಣೆ ಮತ್ತು ವೇಗಮಿತಿಯನ್ನು ಧಿಕ್ಕರಿಸಿ ಸಾಗುವ ಕಾಲ ಚಕ್ರದ ಕೆಳಗೆ ಜನ ನಿತ್ಯ ಸಾಯುತ್ತಾರೆ.

ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತಗಳ ಲೆಕ್ಕವಿಟ್ಟವರಿಲ್ಲ. ತಪ್ಪು ಯಾರದು ಸರಿ ಯಾರದು ಚಿತ್ರಗುಪ್ತನ ಬಳಿಯೂ ನಿಮಗೆ ಲೆಕ್ಕಸಿಗಲಾರದು. ಹೆದ್ದಾರಿ ರಸ್ತೆ ದುರಂತಗಳಲ್ಲಿ ಗಾಯಗೊಳ್ಳುವುದಕ್ಕಿಂತ ಸತ್ತರೇ ಮೇಲು ಎಂದು ಒಮ್ಮೊಮ್ಮೆ ಅನ್ನಿಸಿದರೂ ಹಾಗೆಂದು ಹೇಳುವುದು ಶ್ರೇಯಸ್ಕರವಲ್ಲ. ಸತ್ತವನು ಸತ್ತ, ಆದರೆ ಮೃತಪಟ್ಟವರ ಸಂಬಂಧಿಕರ ಪಾಡು ಮಾತ್ರ ಹೇಳತೀರದು. ಅಪಘಾತದ ಸ್ಥಳ ಎಲ್ಲಿದೆ, ಬಾಡಿ ಎಲ್ಲಿಯಾದರೂ ಬಿದ್ದಿದೆ ಎಂದು ಹುಡುಕಿ ಅಲೆಯುವ ಮೃತರ ಕುಟುಂಬದ ಸದಸ್ಯರ ಗೋಳು ಯಾವ ಶತ್ರುವಿಗೂ ಬೇಡ.

ಯಾವ ಊರೋ ಯಾವ ದೇಶವೋ ಅಂತೂ ಅಪಘಾತಕ್ಕೀಡಾದ ಚಾಲಕರು, ಪ್ರಯಾಣಿಕರ ಹೆಣ ಈ ರಸ್ತೆಯಲ್ಲಿ ನಿತ್ಯ ಉರುಳುತ್ತಲೇ ಇರುತ್ತದೆ. ಹೆಣಗಳ ಭೀಕರ ದೃಶ್ಯಗಳನ್ನು ನೋಡಲು ಎರಡು ಎದೆಯಾದರೂ ಬೇಕು. ಹೆತ್ತಕರುಳೇ ತನ್ನ ಕುಡಿಯನ್ನು ಕಣ್ತೆರೆದು ನೋಡಲು ಆಗದಷ್ಟು ಹೃದಯವಿದ್ರಾವಕ. ಮುಟ್ಟಲೂ ಆಗದಷ್ಟು ಅಸಹ್ಯ. (ಎಂಟೆದೆ ಇದ್ದವರು ಮಾತ್ರ ಈ ಚಿತ್ರಗಳನ್ನು ನೋಡಿರಿ.)

ಮೇಲುಗಡೆಯಿಂದ ಆಗಾಗ ದೇವದೂತರು ಭೂಮಿಗೆ ಇಳಿದು ಬರುತ್ತಾರೆಂದು ಪ್ರತೀತಿ. ದೇವದೂತರು ಶಾಲೆಗೆ ಹೋಗದ, ಪರೀಕ್ಷೆ ಬರೆಯದೆ ನಡುರಸ್ತೆಯಲ್ಲಿ ನಿಂತ ಬೀದಿ ನಾರಾಯಣರ ಭುಜಕ್ಕೆ ಭುಜ ಕೊಟ್ಟು ನಿಲ್ಲುತ್ತಾರಂತೆ. ಹೀಗೆ, ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೇಹದ ಚೂರುಚೂರುಗಳನ್ನು ಅತ್ಯಂತ ಶ್ರದ್ಧೆಯಿಂದ, ಜತನದಿಂದ ಒಗ್ಗೂಡಿಸಿ ಪೊಲೀಸರೋ, ಆಸ್ಪತ್ರೆಯೋ ಅಥವಾ ಕಣ್ಣಿಗೆ ಬಿದ್ದರೆ ಬಂಧು ವರ್ಗಕ್ಕೋ ಕೊಟ್ಟು ಕೃತಾರ್ಥನಾಗುವವನೊಬ್ಬ ಹೆದ್ದಾರಿ 63 ಅನ್ನು ಕಾಯುತ್ತಲೇ ಇರುತ್ತಾನೆ. ಅವನ ಪರಿಚಯ ಮಾಡಿಕೊಳ್ಳೋಣವಂತೆ.

ಹೆದ್ದಾರಿಯ ವೀರಬಾಹು : ಹೆಸರು ಪಿ. ವಲಿ. ಈತನಿಗೆ ರಸ್ತೆಯ ಮೇಲಿನ ಶವ, ಕಾಲುವೆಯಲ್ಲಿ ಹರಿಯುವ ನೀರಿನ ಅಲೆಗಳ ಜೊತೆ ಜೊತೆಯಲ್ಲೇ ತೇಲುವ ಶವ, ಭಾವಿಗಳಲ್ಲಿ ತೇಲುವ ಶವ, ಬಯಲು ಜಾಗದ ಪೊದೆಗಳ ಮರೆಯಲ್ಲಿ ಕೊಳೆಯುತ್ತಿರುವ ಶವ, ಕಾಗೆ, ಹದ್ದು, ನಾಯಿಗಳ ಹೊಟ್ಟೆಗೆ ಆಹಾರ ಆಗುತ್ತಾ ಗಬ್ಬು ನಾರುವ ಶವಗಳೆಂಬ ತಾರತಮ್ಯ ಇಲ್ಲ. ಹೆಣ ಯಾರದ್ದೆ ಆಗಲಿ. ಅದರ ಜಾತಿ, ಉಪಜಾತಿ, ವರ್ಗ, ಮತ, ಮಠ, ಮಸೀದಿ ಯಾವುದರ ಉಸಾಬರಿ ಇವನಿಗೆ ಬೇಡ. ಯಾರಿಗೂ ಬೇಡವಾದ, ತನ್ನ ಕೈಗೆ ಸಿಕ್ಕ ಎಲ್ಲಾ ಶವಗಳನ್ನೂ ಅತ್ಯಂತ ಶ್ರದ್ಧೆಯಿಂದ ಮತ್ತು ನಿಷ್ಠೆಯಿಂದ ವಲಿ ಸಂಸ್ಕಾರ ಮಾಡಿಬಿಡುತ್ತಾನೆ. ಈ ಕಾರಣಕ್ಕಾಗಿಯೇ ಹೆದ್ದಾರಿಯ ಈ ವೀರಬಾಹು ಬಳ್ಳಾರಿ, ಸಂಡೂರು ಮತ್ತು ಆಂಧ್ರ ಗಡಿ ಭಾಗದ ಅನಾಥ ಶವಗಳ ಆಪ್ತ ಬಂಧು ಎನಿಸಿದ್ದಾನೆ.

46 ವರ್ಷ ವಯಸ್ಸಿನ ವಲಿಗೆ ಹುಟ್ಟಾ ಬಡತನ. ಹಳೆಯ ಆಟೋವನ್ನು ಓಡಿಸುತ್ತಲೇ ಒಂದೂವರೆ ದಶಕದ ಕಾಲದಿಂದ ನೂರಾರು ಸಾವಿರಾರು ಶವಗಳನ್ನು ಕಯ್ಯಾರ ಸಂಸ್ಕಾರ ಮಾಡಿದ್ದಾನೆ. ಈತನಿಗೆ ಪುತ್ರಿ, ಇಬ್ಬರು ಪುತ್ರರು ಮತ್ತು ಪತ್ನಿಯನ್ನು ಸಾಕಿ ಸಲಹಬೇಕಾದ ಜವಾಬ್ದಾರಿಯೂ ಇದೆ. ಇದಕ್ಕಾಗಿ ವಲಿ ಆಟೋ ಓಡಿಸುವುದನ್ನು ಮಾತ್ರ ಬಿಟ್ಟಿಲ್ಲ.

ಶವಗಳನ್ನು ತನ್ನ ಆಟೋದಲ್ಲಿ ಎತ್ತಿ ಹಾಕಿಕೊಳ್ಳುವುದನ್ನು ವಲಿ ಪ್ರಾರಂಭಿಸಿದ್ದೇ ಒಂದು ಕತೆ. ವಲಿಯೇ ಹೇಳುವ ಪ್ರಕಾರ, ಪೊಲೀಸ್ ಪೇದೆ ಒಮ್ಮೆ ಜಬರದಸ್ತು ಮಾಡಿ ಈತನ ಆಟೋದಲ್ಲಿ ರಸ್ತೆ ಬದಿಯ ಅನಾಥ ಶವವನ್ನು ಹಾಕಿಕೊಂಡು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಲಾಠಿಯಿಂದಲೇ ಮಾತನಾಡಿಸಿದ್ದನಂತೆ. ಆಗ, ಒಲ್ಲದ ಮನಸ್ಸಿನಿಂದ ಶವವನ್ನು ವಲಿ ಸಾಗಿಸಿದ್ದ. ಆಗ ಇಸವಿ 1995. ಅಂದಿನಿಂದ ಸ್ವಯಂಪ್ರೇರಿತನಾಗಿ ಹೆಣ ಸಾಗಿಸುವ ಕಾಯಕವನ್ನು ಒಂದು ಪ್ರವೃತ್ತಿಯಾಗಿ ರೂಢಿಸಿಕೊಂಡ ವಲಿಯ ಮನೆ ಬಾಗಿಲಿಗೆ ಇವತ್ತು ಪೊಲೀಸರೇ ಹುಡುಕಿಕೊಂಡು ಬರುತ್ತಾರೆ.

ರಸ್ತೆಯಲ್ಲಿ ಎಲ್ಲೇ ಶವಕಂಡರೂ ಪೊಲೀಸರು ಥಟ್ಟನೆ ಕೂಗಿ ಕರೆಯುವುದು ವಲಿಯನ್ನೇ. ತಮಾಷೆಯೆಂದರೆ ಪೊಲೀಸರು ಸ್ಥಳಕ್ಕೆ ಕಾಲಿಡುವ ಮೊದಲೇ ವಲಿ ಹೆಣದ ಮುಂದೆ ಹಾಜರ್. ಆದರೆ ಶವವನ್ನು ಮಾತ್ರ ಮುಟ್ಟುವುದಿಲ್ಲ. ಪೊಲೀಸರು ಪಂಚನಾಮೆ ಮಾಡಿ, ಶವದ ಮೇಲಿದ್ದ ಆಭರಣಗಳು, ಹಣ ಎಲ್ಲವನ್ನೂ ಕೂಡ ತೆಗೆದುಕೊಂಡ ನಂತರವೇ ವಲಿಯ ಕೆಲಸ ಶುರು.

ಶವದ ವಾರಸುದಾರರು ಋಣ ತೀರಿಸಿಕೊಳ್ಳಲಿಕ್ಕಾಗಿ ಆಕಸ್ಮಾತ್ ನೀಡಿದ ಹಣವನ್ನಷ್ಟೇ ಪಡೆಯುತ್ತಾನೆ ವಲಿ, ಅದೂ ನಮ್ರತೆಯಿಂದ. "ಅನಾಥ ಶವಗಳಲ್ಲಿ ಗಂಡಸರವೇ ಹೆಚ್ಚು. ಗಂಡೋ ಹೆಣ್ಣೋ ಎಲ್ಲರೂ ನಮ್ಮವರೇ. ನಮಗೇನೂ ಆಸೆ ಇಲ್ಲ. ಬದುಕು ಸಾರ್ಥಕ ಆದ್ರೆ ಸಾಕು. ಎಲ್ಲಾ ದೇವರ ಕೃಪೆ. ಆತನದೇ ಆದೇಶ" ಎನ್ನುತ್ತಾನೆ ವಲಿ. "ನನ್ನ ಗಂಡ ಹೆಣಗಳನ್ನು ಸಾಗಿಸೋದಕ್ಕೆ ನಮ್ಮ ಒಪ್ಪಿಗೆ ಇದೆ. ಹೆಣಾ ಸಾಗಿಸಿ ಮಣ್ಣು ಮಾಡಿ, ಇಲ್ಲಾ ಸುಡೋದು ನಮ್ಮ ಪುಣ್ಯದ ಕೆಲ್ಸ. ಬಡತನ ನೀಗಲು ಆ ದೇವ್ರೇ ಕಣ್ಣು ತೆರೆಯಬೇಕು" ಎನ್ನುತ್ತಾಳೆ ವಲಿಯ ಪತ್ನಿ ಕೈರುನ್ ಬೀ.

ಸಮಾಜ ಸೇವಕರನ್ನು ಗುರುತಿಸದಷ್ಟು ಅಮಾನವೀಯ ಜಿಲ್ಲೆಯೇನಲ್ಲ ನಮ್ಮ ಬಳ್ಳಾರಿ. ಇಲ್ಲಿನ ಇನ್ನೊಬ್ಬ ಸಮಾಜ ಸೇವಕಿ ಕಮಲಾ ಜಿ. ಮರಿಸ್ವಾಮಿ ಅವರು ವಲಿಯ ಕೈಗೊಂದು ಮೊಬೈಲ್ ಕೊಡಿಸಿದ್ದಾರೆ. ಹಾಗಾಗಿ ಅವನನ್ನು ಸಂಪರ್ಕಿಸುವುದು ಪೊಲೀಸರಿಗೆ ಸುಲಭ ಆಗಿದೆ. ಬಳ್ಳಾರಿಯ ಅನನ್ಯ ಫೌಂಡೇಶನ್ ಕೂಡ ವಲಿಗೆ ಸನ್ಮಾನ ಮಾಡಿ ಗೌರವ ಸೂಚಿಸಿದೆ.

***
ವಲಿಯ ದೂರವಾಣಿ ಸಂಖ್ಯೆಯನ್ನು ನಾವಿಲ್ಲಿ ಮುದ್ರಿಸುತ್ತಿದ್ದೇವೆ. "ನಿಮ್ಮ ಸೇವೆ ಬಗ್ಗೆ ಎಲ್ಲೋ ಓದಿದೆ. ಒಳ್ಳೆ ಕೆಲಸವೇ ಮಾಡುತ್ತಿದ್ದೀರಾ. ಭಗವಂತ ನಿಮಗೆ, ನಿಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಉಂಟುಮಾಡಲಿ ಎಂದು ಆಸಕ್ತ ಕನ್ನಡಿಗರು ಆತನಿಗೆ ಶುಭಕೋರಬಹುದು [0-99643-91978]. ವಲಿ ಸಾಮಾನ್ಯವಾಗಿ ಬಳ್ಳಾರಿ ರೈಲ್ವೆ ನಿಲ್ದಾಣದ ಬಳಿ ಸಿಗುತ್ತಾನೆ. ಅವನ ಹೆಂಡತಿ ಹೆಸರಲ್ಲಿ [ಕೈರುನ್ ಬೀ] ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಳ್ಳಾರಿ ಮೇನ್ ಬ್ರಾಂಚ್ ನಲ್ಲಿ ಉಳಿತಾಯ ಖಾತೆಯೂ ಇದೆ [ಬ್ಯಾಂಕ್ ಖಾತೆ ಸಂಖ್ಯೆ ; 30159354105] ಬ್ಯಾಂಕ್ ಶಾಖೆ ಕೋಡ್ 817 ಬಳ್ಳಾರಿ ಮುಖ್ಯ ಶಾಖೆ. ಬಳ್ಳಾರಿ.

ವಲಿಯ ಬಗ್ಗೆ ಹೆಚ್ಚು ತಿಳಿಯಲು ಆಸಕ್ತಿ ಇರುವವರು ಗುರುಶ್ರೀ ಪೋಟೋ, ಬಳ್ಳಾರಿ. 0-94483-31992 ಸಂಪರ್ಕಿಸಬಹುದಾಗಿದೆ- ಸಂಪಾದಕ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+