ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮನ: ಓದಿದ್ದಿವ್ರು 4ನೇ ಕ್ಲಾಸು,ಬರೆದ ನಾಟಕಗಳು 56!

By Staff
|
Google Oneindia Kannada News


ಬಾಗಲಕೋಟೆ, ನ.02 : ಇವರು ಓದಿದ್ದು 4ನೇ ತರಗತಿ, ಬರೆದ ನಾಟಕಗಳ ಸಂಖ್ಯೆ 56. ವಿಚಿತ್ರವೆಂದರೇ, ಚಲನಚಿತ್ರವಾದ'ಸಂಪತ್ತಿಗೆ ಸವಾಲ್'ಸೇರಿದಂತೆ ಅನೇಕ ನಾಟಕಗಳನ್ನು ಬರೆದಿದ್ದ ಹಿರಿಯ ರಂಗಕರ್ಮಿ ಪಿ.ಬಿ. ಧುತ್ತರಗಿ (79) ಅವರ ಬದುಕಿನ ಕೊನೆ ಕ್ಷಣಗಳೂ ಸಹಾ ಒಂದು ನಾಟಕವೇ ಆಗಿ ಹೋಯಿತು.

ಇಲ್ಲಿ ಧುತ್ತರಗಿ ಕಣ್ ಮುಚ್ಚಿದ್ದರು.. ಅಲ್ಲಿ ಬೆಂಗಳೂರಿನಲ್ಲಿ ಅವರ ಪತ್ನಿ ಸರೋಜಮ್ಮ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆಯುತ್ತಿದ್ದರು! ಪತ್ನಿ ನಿಧನರಾದ ಸುದ್ದಿಯನ್ನು ಕುಟುಂಬವರ್ಗ ಮುಚ್ಚಿಟ್ಟಿತ್ತು. ಮೊದಲೇ ಅನಾರೋಗ್ಯದಿಂದ ಬಳಲುತ್ತಿರುವ ಸರೋಜಮ್ಮ, ಪತಿಯ ನೋವನ್ನು ಏಕಾಏಕಿ ತಡೆದುಕೊಳ್ಳುತ್ತಾರೋ ಇಲ್ಲವೋ ಎಂಬ ಆತಂಕ ಮನೆಮಂದಿಗಿತ್ತು. ನ.1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸರೋಜಮ್ಮ ಪ್ರಶಸ್ತಿ ಸ್ವೀಕರಿಸಿದರು. ಆಮೇಲೆ ಸತ್ಯ ಗೊತ್ತಾಯಿತು. ಸತ್ಯ ಗೊತ್ತಾದ ಮೇಲೆ ಇನ್ನೇನಿದೆ.. ಮನದ ತುಂಬ ನೋವಿನ ಮುದ್ದೆ.

ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಧುತ್ತರಗಿ ಗುರುವಾರ ನಿಧನರಾದರು. ಅಂತ್ಯಕ್ರಿಯೆ ಇಂದು(ನ.02) ನಡೆಯಲಿದೆ. ಧುತ್ತರಗಿ ಸಾವಿನೊಂದಿಗೆ ಕನ್ನಡ ರಂಗಭೂಮಿ ಒಂದೇ ವಾರದಲ್ಲಿ ಇಬ್ಬರು ಹಿರಿಯ ರಂಗಕರ್ಮಿಗಳನ್ನು ಕಳೆದುಕೊಂಡಂತೆ ಆಗಿದೆ. ಪ್ರೇಮಾ ಕಾರಂತ ಇತ್ತೀಚೆಗಷ್ಟೇ ಕೊನೆ ಉಸಿರೆಳೆದಿದ್ದರು. ಕೊಪ್ಪಳ ಜಿಲ್ಲೆ ಹನುಮಸಾಗರದಲ್ಲಿ ನೆಲೆಸಿದ್ದ ಪಿ.ಬಿ.ಧುತ್ತರಗಿ ಕೆಲಕಾಲದಿಂದ ಅಸ್ವಸ್ಥರಾಗಿದ್ದರು.

ಅಸಲಿ 'ಕಲಾ ಸಾಮ್ರಾಟ್': ಬಾಗಲಕೋಟೆ ಜಿಲ್ಲೆಯ ಸೂಳೆಭಾವಿ ಗ್ರಾಮದಲ್ಲಿ 1929ರ ಜೂನ್ 15ರಂದು ಜನಿಸಿದ ಧುತ್ತರಗಿ, ಹತ್ತನೇ ವಯಸ್ಸಿನಲ್ಲಿ ರಂಗಪ್ರವೇಶ ಮಾಡಿದರು. ಕಲಾಸೇವೆಗೆ ಬದುಕು ಮುಡಿಪಿಟ್ಟಿದ್ದ ಅವರು, ನಾಟಕ ರಚನೆ , ನಿರ್ದೇಶನ ಮತ್ತು ಅಭಿನಯದಲ್ಲಿ ಎತ್ತಿದ ಕೈ. ಕಲ್ಪನಾ ಪ್ರಪಂಚ, ಸಂಪತ್ತಿಗೆ ಸವಾಲ್, ಮಲಮಗಳು, ಚಿಕ್ಕ ಸೊಸೆ, ತಾಯಿ ಕರುಳು ಧುತ್ತರಗಿ ಅವರ ಪ್ರಖ್ಯಾತ ನಾಟಕಗಳು. ಸಿದ್ಧಲಿಂಗ ವಿಜಯ ನಾಟಕ ಕಂಪನಿ ಕಟ್ಟಿ ಅನೇಕ ಸಾಮಾಜಿಕ ನಾಟಕಗಳನ್ನು ಅವರು ಆಡಿದ್ದರು.

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (1985), ರಾಜ್ಯೋತ್ಸವ ಪ್ರಶಸ್ತಿ (1996), ಗುಬ್ಬಿ ವೀರಣ್ಣ ಪ್ರಶಸ್ತಿ (1999) ಸೇರಿದಂತೆ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿದ್ದವು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X