ಧರ್ಮಸಿಂಗ್‌ ಎನ್ನುವ ಪೈಲ್ವಾನ !

  • ದಟ್ಸ್‌ಕನ್ನಡ ಬ್ಯೂರೊ
Dharma Singh, CM of Karnatakaಅಂತೂ ಧರ್ಮಸಿಂಗ್‌ ಮುಖ್ಯಮಂತ್ರಿಯಾದರು! ಅಲ್ಲಿಗೆ ಅವರ ದಶಕದ ಕನಸೊಂದು ನನಸಾದಂತಾಯಿತು !

ಮುಖ್ಯಮಂತ್ರಿ ಸ್ಥಾನ ಕಾಂಗ್ರೆಸ್‌ಗೇ ಸಲ್ಲಬೇಕು ಎಂದು ಕಾಂಗ್ರೆಸ್‌ ಯಾವ ಕ್ಷಣದಲ್ಲಿ ಧ್ವನಿ ಹೊರಡಿಸಲಾರಂಭಿಸಿತೊ, ಆ ಕ್ಷಣದಲ್ಲೇ ಧರ್ಮಸಿಂಗ್‌ ಮುಖ್ಯಮಂತ್ರಿಯಾಗುವುದು ಹೆಚ್ಚೂ ಕಡಿಮೆ ಖಚಿತವಾಗಿತ್ತು . ಪಕ್ಷ ಅನುಭವಿಸಿದ ಹಿನ್ನಡೆಯಿಂದ ಎಸ್ಸೆಂ.ಕೃಷ್ಣ ಹಿನ್ನಡೆಗೆ ಸರಿದಿದ್ದರು. ಇನ್ನುಳಿದ ಖರ್ಗೆ ಹಾಗೂ ಎಚ್‌.ಕೆ.ಪಾಟೀಲ್‌ರಿಗೆ ದೇವೇಗೌಡರ ಕೃಪಾ ಕಟಾಕ್ಷವಿರಲಿಲ್ಲ . ಹೀಗಾಗಿ ಅಂದಿರುಕಿ ಮಂಚೋಡು ಧರ್ಮಸಿಂಗ್‌ ಆಯ್ಕೆ ಅನಿವಾರ್ಯವಾಗಿತ್ತು . ಈ ಅನಿವಾರ್ಯತೆ ಕಾಂಗ್ರೆಸ್‌ ಹೈಕಮಾಂಡ್‌ಗೆ ಕೂಡ ಅರ್ಥವಾಗಿತ್ತು .

ಧರ್ಮಸಿಂಗ್‌ ಮುಖ್ಯಮಂತ್ರಿಯಾದ ಹಿನ್ನೆಲೆ-ರಾಜಕಾರಣದ ಮಾತು ಬಿಡಿ. ಮುಖ್ಯಮಂತ್ರಿಯ ಪ್ರಭಾವಳಿಯಲ್ಲಿ ಕಂಗೊಳಿಸುತ್ತಿರುವ ಧರ್ಮಸಿಂಗ್‌ರ ಹೆಜ್ಜೆಗುರುತುಗಳನ್ನೊಮ್ಮೆ ನೋಡಿ. ನಂತರದ ದಿನಗಳಲ್ಲಿ ಮುಂದಣ ಹೆಜ್ಜೆಗಳಷ್ಟೇ ಎದ್ದು ಕಾಣುವ ಕಾರಣ, ಹಿಂದಣ ಚಿತ್ರಗಳನ್ನು ನೆನೆಯಲಿಕ್ಕಿದು ಸಕಾಲ.

ಸೂರ್ಯರಥದ ನಿಲುಗಡೆಯ ತವರು ಎನ್ನುವ ಕುಖ್ಯಾತಿಗೆ ಪಾತ್ರವಾದ ಗುಲ್ಬರ್ಗಾ ಜಿಲ್ಲೆಯವರು ಧರ್ಮಸಿಂಗ್‌. ನೋಡಲಿಕ್ಕೆ ಪೈಲ್ವಾನರಂತೆ ಕಾಣುವ ಧರ್ಮಸಿಂಗ್‌, ಚುನಾವಣಾ ಅಖಾಡದಲ್ಲಿ ಅಕ್ಷರಶಃ ಜಗಜಟ್ಟಿ. ಸೋಲರಿಯದ ಸರದಾರ ಎನ್ನುವುದು ಅವರ ಅಗ್ಗಳಿಕೆ. ಅಂದಹಾಗೆ, ಅವರ ಧರ್ಮಸಿಂಗ್‌ ಸ್ವಾತಂತ್ರ್ಯ ಚಳವಳಿಯಲ್ಲಿದ್ದರು ಎನ್ನುವುದು ನಿಮಗೆ ಗೊತ್ತಾ ? ಹೌದು, ಧರ್ಮಸಿಂಗ್‌ ಸಾತಂತ್ರ್ಯ ಚಳವಳಿಯಲ್ಲಿದ್ದವರು, ಹುಟ್ಟಾ ಹೋರಾಟಗಾರರು. ಅವರದು ಕೃಷಿಕ ಕುಟುಂಬ. ಆದರೆ, ದೇವೇಗೌಡರಂತೆ ಮಣ್ಣಿನ ಮಗ ಎಂದು ಧರ್ಮಸಿಂಗ್‌ ಬಹಿರಂಗವಾಗಿ ಎಂದೂ ಹೇಳಿಕೊಂಡಿದ್ದಿಲ್ಲ .

ನಾರಾಯಣಸಿಂಗ್‌ ಧರ್ಮಸಿಂಗ್‌ ಜನಸಿದ್ದು 1936ರಲ್ಲಿ , ಡಿಸೆಂಬರ್‌ 25ರಂದು. ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲುಗಿ ಗ್ರಾಮದಲ್ಲಿ . ಎಂ.ಎ. ಹಾಗೂ ಕಾನೂನು ಪದವಿ ಧರ್ಮಸಿಂಗ್‌ ಬೆನ್ನಿಗಿವೆ. ಆರಂಭದಲ್ಲಿ ವಕೀಲಿ ವೃತ್ತಿ ಆರಂಭಿಸಿದ ಧರ್ಮಸಿಂಗ್‌, ಆನಂತರ ರಾಜಕಾರಣದತ್ತ ವಾಲಿದರು. ಹೀಗಂತೂ ರಾಜಕಾರಣವೇ ವೃತ್ತಿ , ಪ್ರವೃತ್ತಿ .

1968ರಲ್ಲಿ ಗುಲ್ಬರ್ಗ ನಗರಸಭೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಧರ್ಮಸಿಂಗ್‌ರ ಸಕ್ರಿಯ ರಾಜಕಾರಣದ ಪ್ರಾಥಮಿಕ ಹೆಜ್ಜೆಗಳು ಪ್ರಾರಂಭವಾದವು. ಕಾಂಗ್ರೆಸ್‌ ವಿಭಜನೆ ನಂತರ ಇಂದಿರಾಗಾಂಧಿ ಜೊತೆ ನಿಂತ ಧರ್ಮಸಿಂಗ್‌ ಯಾವತ್ತಿಗೂ ಪಕ್ಷನಿಷ್ಠೆ ಬದಲಿಸಿದ್ದಿಲ್ಲ . ಈ ನಿಷ್ಠೆಯೇ ಅವರನ್ನು ಮುಖ್ಯಮಂತ್ರಿ ಸ್ಥಾನದ ಬಳಿ ಕರೆತಂದಿದೆ.

ಗುಲ್ಬರ್ಗ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎರಡು ಅವಧಿಗೆ ಕಾರ್ಯ ನಿರ್ವಹಿಸಿ ಅನುಭವವಿರುವ ಧರ್ಮಸಿಂಗ್‌ ಮೊದಲ ಸಲ ವಿಧಾನಸಭೆ ಪ್ರವೇಶಿಸಿದ್ದು 1972 ರಲ್ಲಿ . ಆನಂತರದ್ದೆಲ್ಲ ಇತಿಹಾಸ. ಎಂಟು ಬಾರಿ ವಿಧಾನಸಭೆಗೆ ಆಯ್ಕೆಯಾದ ಖ್ಯಾತಿ ಅವರದು.

ಲೋಕಸಭಾ ಚುನಾವಣೆಯಲ್ಲೂ ಧರ್ಮಸಿಂಗ್‌ ಸ್ಪರ್ಧಿಸಿದ್ದುಂಟು. 1980ರಲ್ಲಿ ಗುಲ್ಬರ್ಗ ಲೋಕಸಭಾ ಕ್ಷೇತ್ರದಿಂದ ಜಯಗಳಿಸಿದ್ದರು. ಆದರೆ, ವಿಧಾನಸಭೆಯೇ ತಮಗೆ ಲಾಯಕ್ಕು ಎನ್ನುವುದನ್ನು ತಿಳಿದ ಧರ್ಮಸಿಂಗ್‌, ನಂತರದ ಚುನಾವಣೆಯಲ್ಲಿ ಸಿ.ಎಂ. ಸ್ಟೀಫನ್‌ರಿಗೆ ತಮ್ಮ ಸ್ಥಾನಬಿಟ್ಟು , ಅವರನ್ನು ಗೆಲ್ಲಿಸಿದರು.

ಗುಲ್ಬರ್ಗ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿ, ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ, ಕೆಪಿಸಿಸಿ ಚುನಾವಣಾ ಸಮಿತಿ ಸದಸ್ಯರಾಗಿ ಧರ್ಮಸಿಂಗ್‌ ಕಾರ್ಯ ನಿರ್ವಹಿಸಿದ್ದಾರೆ.

ಸಚಿವರಾಗಿಯೂ ಧರ್ಮಸಿಂಗ್‌ರ ಅನುಭವ ದೊಡ್ಡದು. ಗುಂಡೂರಾವ್‌, ಬಂಗಾರಪ್ಪ, ಮೊಯಿಲಿ, ಕೃಷ್ಣ - ಹೀಗೆ ಎಲ್ಲರ ಸಂಪುಟದಲ್ಲೂ ಧರ್ಮಸಿಂಗ್‌ ಅಗ್ರಖಾತೆಗಳನ್ನು ಅಲಂಕರಿಸಿದ್ದರು. ಗುಂಡೂರಾವ್‌ ಮಂತ್ರಿ ಮಂಡಲದಲ್ಲಿ ವಸತಿ ಮತ್ತು ನಗರಾಭಿವೃದ್ಧಿ, ಬಂಗಾರಪ್ಪ ಕಾಲದಲ್ಲಿ ಗೃಹ ಮತ್ತು ಅಬಕಾರಿ, ಮೊಯಿಲಿ ಸಾಮ್ರಾಜ್ಯದಲ್ಲಿ ಸಮಾಜ ಕಲ್ಯಾಣ ಹಾಗೂ ಕಂದಾಯ, ಕೃಷ್ಣ ಸಂಪುಟದಲ್ಲಿ ಲೋಕೋಪಯೋಗಿ. ಹೀಗಾಗಿ ಎಲ್ಲ ಖಾತೆಗಳಲ್ಲೂ ನೀರು ಕುಡಿದ ಅನುಭವ ಧರ್ಮಸಿಂಗ್‌ ಅವರಿಗಿದೆ. ಈ ಪರಿ ಅನುಭವಿಗೀಗ ಕಲಶಪ್ರಾಯವಾಗಿ ಮುಖ್ಯಮಂತ್ರಿ ಪಟ್ಟ ಒಲಿದಿದೆ. ಆ ಸ್ಥಾನದ ಗೌರವ ಹೆಚ್ಚುವ ನಿಟ್ಟಿನಲ್ಲಿ ಧರ್ಮಸಿಂಗ್‌ ಕಾರ್ಯಶೀಲರಾಗಲಿ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+