‘ಪರಮಾಣು’ ಪ್ರತಿಭೆ ಡಾ.ರಾಜಾರಾಮಣ್ಣ
- ಎಂ. ವಿನೋದಿನಿ
ಅಣುಬಾಂಬ್ ಸಾಮರ್ಥ್ಯದಿಂದ ಭಾರತಕ್ಕೆ ಜಾಗತಿಕ ಭೂಪಟದಲ್ಲಿ ಸ್ಥಾನ ಕಲ್ಪಿಸಿ, ರಾಷ್ಟ್ರದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದ ಮಹಾನ್ ಪ್ರತಿಭೆ ರಾಜಾರಾಮಣ್ಣ. ಅಮೇರಿಕಾದ ಸಾರ್ವಭೌಮತ್ವ, ಚೀನಾ, ಪಾಕಿಸ್ಥಾನಗಳ ವೈರತ್ವ ಈ ಎಲ್ಲದರ ಸುಳಿಯಲ್ಲಿ ಭಾರತಕ್ಕೆ ಬಲತುಂಬಲು, ಭಾರತದ ಶಕ್ತಿಯನ್ನು ಜಾಗತಿಕವಾಗಿ ಪ್ರದರ್ಶಿಸಲು ರಾಜಾರಾಮಣ್ಣ ಮತ್ತಿತರ ಅಣು ವಿಜ್ಞಾನಿಗಳ ಶ್ರಮ ಗಣನೀಯ.
ರಾಜಾಸ್ಥಾನದ ಪೋಖ್ರಾನ್‌ನಲ್ಲಿ 1974 ರಲ್ಲಿ ನಡೆಸಿದ ಪ್ರಪ್ರಥಮವಾಗಿ ಅಣುಪರೀಕ್ಷೆಯನ್ನು ನಡೆಸಲಾಯಿತು. ಅದರ ರೂವಾರಿ ರಾಜಾ ರಾಮಣ್ಣ. ಆ ಮೂಲಕ ಭಾರತದ ರಕ್ಷಣಾ ವಿಭಾಗಕ್ಕೆ ಆತ್ಮವಿಶ್ವಾಸ ದಕ್ಕಿತು. ರಾಜಾರಾಮಣ್ಣನವರಂಥ ವಿಜ್ಞಾನಿಗಳು ಭಾರತದಲ್ಲಿ ಬಹುಮಂದಿಯಿಲ್ಲ .
ವಿಜ್ಞಾನಿಗಳಾದವರು ಸಾಂಸ್ಕೃತಿಕ ಲೋಕದಿಂದ ದೂರವಿರುವುದು ಮಾಮೂಲಿ. ರಾಜಾರಾಮಣ್ಣ ಈ ಮಾತಿಗೆ ಅಪವಾದವಾಗಿದ್ದರು. ಅವರ ಪ್ರತಿಭೆ ವಿಜ್ಞಾನ ಕ್ಷೇತ್ರಕ್ಕಷ್ಟೇ ಸೀಮಿತಗೊಂಡಿರಲಿಲ್ಲ. ಬಹು ಮುಖ ಪ್ರತಿಭೆಯ ರಾಜಾರಾಮಣ್ಣರ ವ್ಯಕ್ತಿತ್ವ ಬಹುಜನರಿಗೆ ಗೊತ್ತಿಲ್ಲ. ಅಣು ವಿಜ್ಞಾನಿಯಾಗಷ್ಟೇ ಪರಿಚಿತರಾಗಿದ್ದ ಅವರು ಒಳ್ಳೆಯ ಪಿಯಾನೋ ವಾದಕರೂ ಹೌದು. ಸಂಗೀತದ ಬಗೆಗೆ ಅಪಾರ ಆಸಕ್ತಿ ಹೊಂದಿದ್ದ ರಾಜರಾಮಣ್ಣನವರಿಗೆ, ಪಿಯಾನೋ ನುಡಿಸುವುದೆಂದರೆ ಪ್ರಾಣ. ಅದನ್ನವರು ತಮ್ಮ ಆರನೇ ವಯಸ್ಸಿನಲ್ಲಿಯೇ ಆರಂಭಿಸಿದ್ದರು.
ಹೋಮಿ ಬಾಬಾ ಮಾರ್ಗದರ್ಶನದಲ್ಲಿ ರಾಜಾರಾಮಣ್ಣ ಅಣುವಿಜ್ಞಾನ ಕ್ಷೇತ್ರದಲ್ಲಿ ಪ್ರವೇಶ ಪಡೆದು ಸಾಧನೆಯ ಶಿಖರ ಏರಿದರು. ಬಾಬಾ ಪರಮಾಣು ಅಧ್ಯಯನ ಕೇಂದ್ರದಲ್ಲಿ , ಅಟೋಮಿಕ್ ಎನರ್ಜಿ ಕಮೀಷನ್‌ನಲ್ಲಿ ಮುಖ್ಯಸ್ಥರಾಗಿ, ಪರಮಾಣು ಶಕ್ತಿ ವಿಭಾಗದಲ್ಲಿ ಕಾರ್ಯದರ್ಶಿಯಾಗಿ ರಾಜಾರಾಮಣ್ಣನವರು ಸಲ್ಲಿಸಿದ ಸೇವೆ ಅನನ್ಯ.
ರಕ್ಷಣಾ ಸಚಿವಾಲಯದ ವಿಜ್ಞಾನ ಮಾರ್ಗದರ್ಶಕರಾಗಿ, 1990ರಲ್ಲಿ ಹನ್ನೊಂದು ತಿಂಗಳ ಕಾಲ ರಕ್ಷಣಾ ಸಚಿವರಾಗಿ ರಾಜಾರಾಮಣ್ಣ ಕರ್ತವ್ಯ ನಿರ್ವಹಿಸಿದ್ದಾರೆ.
ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ, ರಾಜಾರಾಮಣ್ಣ ಒಬ್ಬ ಶ್ರೇಷ್ಠ ಲೇಖಕರು ಹೌದು. ಅಣು ವಿಜ್ಞಾನಿಯಾಬ್ಬರು ಸಂಗೀತದಲ್ಲಿ ವಿಶೇಷ ಪಾಂಡಿತ್ಯ ಹೊಂದಿ, ದಿ ಸ್ಟ್ರಕ್ಚರ್ ಆಫ್ ಮ್ಯುಸಿಕ್ ಇನ್ ವೆಸ್ಟ್ರನ್ ಸಿಸ್ಟಮ್ ಎನ್ನುವ ಸಂಗೀತದ ಪುಸ್ತ್ತಕ ರಚಿಸುವುದು ವಿಶೇಷವೇ ಸರಿ. ಇಯರ್ಸ್ ಆಫ್ ಪಿಲಿಗ್ರಿಮೇಜ್ ಎನ್ನುವುದು ಇವರ ಆತ್ಮಚರಿತ್ರೆ.
ಬದುಕಿನ ಕಡೆಯವರೆಗೆ ಕ್ರಿಯಾಶೀಲರಾಗಿದ್ದ ರಾಜಾರಾಮಣ್ಣ ತಮ್ಮ 79ನೇ ವಯಸ್ಸಿನಲ್ಲಿಯೂ, ಬೆಂಗಳೂರಿನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅದ್ವಾನ್ಸಡ್ ಸ್ಟಡೀಸ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಬೆಂಗಳೂರು ರಾಜಾರಾಮಣ್ಣನವರ ಬದುಕಿನ ಅವಿಭಾಜ್ಯ ಅಂಗವಾಗಿತ್ತು . ಬೆಂಗಳೂರಿನ ಹವೆಯೆಂದರೆ ಅವರಿಗೆ ಹೆಮ್ಮೆ , ಇಷ್ಟ.
ರಾಜಾರಾಮಣ್ಣನವರ ಸೇವೆಯನ್ನು ಗುರ್ತಿಸಿ ಭಾರತ ಸರಕಾರ ಪದ್ಮಭೂಷಣ, ಪದ್ಮ ವಿಭೂಷಣ ಮತ್ತಿತರ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಹೆಂಡತಿ, ಇಬ್ಬರು ಪುತ್ರಿಯರು, ಒಬ್ಬ ಮಗನನ್ನು ಬಿಟ್ಟು ಅಗಲಿರುವ ರಾಜಾರಾಮಣ್ಣನವರ ನಿಧನ ಅವರ ಕುಟುಂಬಕ್ಕಷ್ಟೇ ಅಲ್ಲ , ಇಡೀ ದೇಶಕ್ಕಾದ ನಷ್ಟ .












Click it and Unblock the Notifications