ಗಂಗಾಮಾಯಿ ಮಡಿಲಲ್ಲಿ ಶಂಕರ ಮೊ‘ಕಾಶಿ’
- ಅನು
ಹೊಸಗನ್ನಡ ಸಾಹಿತ್ಯದ ಆಚಾರ್ಯಪುರುಷರಲ್ಲಿ ಒಬ್ಬರೆಂದು ಖ್ಯಾತರಾದ ಶಂಕರ ಮೊಕಾಸಿ ಪುಣೇಕರ ತಮ್ಮ ಪ್ರಖರ ಚಿಂತನೆಗೆ ಖ್ಯಾತರು. ಅನುವಾದದಲ್ಲಂತೂ ಪುಣೇಕರ್ ಅವರಿಗೆ ಅವರೇ ಸಾಟಿ. ಮೊಕಾಶಿಯವರ ಗಂಗವ್ವ ಗಂಗಾಮಾಯಿ ಹಾಗೂ ಅವಧೇಶ್ವರಿ ಕೃತಿಗಳಿಗೆ ಕನ್ನಡ ಸಾರಸ್ವತ ಲೋಕದಲ್ಲಿ ಅನನ್ಯ ಸ್ಥಾನವಿದೆ.
1928 ರಲ್ಲಿ ಧಾರವಾಡದಲ್ಲಿ ಜನಿಸಿದ ಪುಣೇಕರರ ವಿದ್ಯಾಭ್ಯಾಸವೆಲ್ಲ ಹುಟ್ಟೂರಿನಲ್ಲಿಯೇ ನಡೆಯಿತು. ಮೊದಲಿನಿಂದಲೂ ಅವರಿಗೆ ಸಾಹಿತ್ಯದ ಬಗೆಗೆ ಒಲವು. ಪ್ರೌಢಶಾಲಾ ದಿನಗಳಲ್ಲಿ ಎಸ್.ಜಿ.ನಾಡಿಗೇರ, ಎನ್.ಕೆ.ಕುಲಕರ್ಣಿ, ಹಾಗೂ ಕಾಲೇಜು ದಿನಗಳಲ್ಲಿ ಬಿಎಂಶ್ರೀ, ಪ್ರೊ। ಅರ್ಮಾಂಡೊ ಮೆನೆಜಿಸ್, ವಿ.ಕೃ. ಗೋಕಾಕ್ ಮತ್ತಿತರರ ಪ್ರಭಾವಕ್ಕೆ ಪುಣೇಕರ್ ಒಳಗಾಗಿದ್ದರು.
ಬಿ.ಎ. ಪದವಿ ಮುಗಿಸಿದ ಅನಂತರ ಬಿಜಾಪುರ, ಧಾರವಾಡ ಹಾಗೂ ಕಾರವಾರಗಳಲ್ಲಿ ಶಿಕ್ಷಕರಾಗಿ ಪುಣೇಕರ್ ಸೇವೆ ಸಲ್ಲಿಸಿದರು. ಸಾಹಿತ್ಯಪ್ರೇಮದಿಂದಾಗಿ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇಂಗ್ಲಿಷ್ ಕವಿ ಡಬ್ಲು.ಬಿ.ಯೇಟ್ಸ್‌ನ ಕೊನೆಗಾಲದ ಕಾವ್ಯ ಕುರಿತು ಮೊಕಾಶಿ ಅವರು ಸಂಶೋಧನಾ ಗ್ರಂಥ ಬರೆದು ಡಾಕ್ಟರೇಟ್ ಪಡೆದರು. ಮುಂಬೈನ ಐಐಟಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ ಪುಣೇಕರ್- ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರಾಚಾರ್ಯರಾಗಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ವಿಭಾಗದ ಪ್ರವಾಚಕರಾಗಿ ಕಾರ್ಯ ನಿರ್ವಹಿಸಿದ್ದರು. ತಮ್ಮ ಸೇವಾವಧಿಯ ಕೊನೆಯ ದಿನಗಳಲ್ಲಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ದುಡಿದು ನಿವೃತ್ತರಾಗಿದ್ದರು.
ಸಾಹಿತ್ಯ ಕೃಷಿ: ನವೋದಯ- ನವ್ಯದ ತಿಕ್ಕಾಟದ ಸಂದರ್ಭದಲ್ಲಿ ಮೊಕಾಶಿ ನವೋದಯದ ಪರವಾಗಿ ಗುರ್ತಿಸಿಕೊಂಡಿದ್ದರು. ನವ್ಯದ ಹಲವಾರು ಹುಳುಕುಗಳನ್ನು ಸಾದೋಹರಣವಾಗಿ ಎತ್ತಿ ಆಡಿದ್ದ ಮೊಕಾಶಿಯವರ ವಿಮರ್ಶನ ಪ್ರತಿಭೆಗೆ ತಲೆದೂಗದವರು ಕಡಿಮೆ.
ಸಾಹಿತ್ಯವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರದಲ್ಲಿಯೂ ಅವರ ಹಿರಿಮೆ ದೊಡ್ಡದು. ‘ಗಂಗವ್ವ ಗಂಗಾಮಾಯಿ’ ಮೊಕಾಶಿಯವರ ಯಶಸ್ವೀ ಕಾದಂಬರಿ. ಭಾರತದ ಎಲ್ಲ ಭಾಷೆಗಳಲ್ಲಿಯೂ ಇದು ಅನುವಾದಗೊಂಡಿರುವ ಗಂಗಾಮಾಯಿ ಚಲನಚಿತ್ರವೂ ಆಗಿದೆ (ನಿರ್ದೇಶನ- ಮೊಕಾಶಿಯವರ ಪುತ್ರ ವಸಂತ ಮೊಕಾಶಿ). ಮೊಕಾಶಿಯವರ ಇನ್ನೊಂದು ಮೇರುಕೃತಿ ‘ಅವಧೇಶ್ವರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.
ಮೊಕಾಶಿ ಇಂಗ್ಲೀಷ್ ಸಾಹಿತ್ಯದಲ್ಲಿಯೂ ಕೈಯಾಡಿಸಿದ್ದಾರೆ. ಅವರು ಬರೆದ ಇಂಗ್ಲೀಷ್ ಕಾವ್ಯಗಳು ಹರ್ಬರ್ಟ್ ರೀಡ್‌ರಂಥ ಖ್ಯಾತ ಸಾಹಿತಿಗಳ ಪ್ರಶಂಸೆ ಗಳಿಸಿವೆ. ‘ದಿ ಕ್ಯಾಪ್ಟಿವ್’, ‘ದಿ ಪ್ರಿಟೆಂಡರ್’, ‘ಎಪಿಸಲ್ ಟು ಡೆವಿಡ್ ಮಕ್ ಕುಯಾಚಿನ್’, ‘ದಿ ಟೆಂಟ್ ಪೋಲ್’ ಮತ್ತು ‘ಪ್ಯಾರಾಡೈಮ್’ ಪ್ರಕಟವಾಗಿರುವ ಇಂಗ್ಲೀಷ್ ಗ್ರಂಥಗಳು.
ಕಾಳಿದಾಸನ ಋತು ಸಂಹಾರ ಹಾಗೂ ಕುವೆಂಪು ವಿರಚಿತ ಮಹಾಕಾವ್ಯ ರಾಮಾಯಣ ದರ್ಶನಂ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ ಸಾಧನೆಯೂ ಅವರದೇ. ವಿ.ಕೃ.ಗೋಕಾಕ ಅವರನ್ನು ಕುರಿತು ಇಂಗ್ಲಿಷಿನಲ್ಲಿ ಗ್ರಂಥ ಬರೆದಿರುವ ಮೊಕಾಶಿ, ಕುವೆಂಪು ಅವರನ್ನು ಕುರಿತು ಹೋಮಿಂಗ್ ಬರ್ಡ್ ಎಂಬ ಕೃತಿಯನ್ನೂ ರಚಿಸಿದ್ದರು. ಭಾರತೀಯ ನಾಟಕಗಳ ಒಳನೋಟ, ಪಿ ಟಾಲ್ ಅಪ್ರಿಸಿಯೇಶನ್, ಇಂಡೋ ಆಂಗ್ಲಿಯನ್ ಕ್ರೀಡ್, ಭಾರತಾಂಗ್ಲ ಸಾಹಿತ್ಯ ಇವು ಇತರ ಆಂಗ್ಲ ಕೃತಿಗಳು.
ಪಾಶ್ಚಾತ್ಯ ವಿಮರ್ಶಾ ಇತಿಹಾಸ, ಶ್ರೀ ಬೇಂದ್ರೆ ಅವರ ಕಾವ್ಯ ಮೀಮಾಂಸೆಯಂಥ ಮಹತ್ವದ ಗ್ರಂಥಗಳನ್ನು ಮೊಕಾಶಿ ರಚಿಸಿದ್ದಾರೆ. 1984ರಲ್ಲಿ ಯುಗೋಸ್ಲಾವಿಯಾದಲ್ಲಿ ನಡೆದ ವಿಶ್ವ ಕಾವ್ಯ ಸಮ್ಮೇಳನದಲ್ಲಿ ಪುಣೇಕರರು ಭಾರತವನ್ನು ಪ್ರತಿನಿಧಿಸಿದ್ದರು.
ಕತೆ ಕವಿತೆ ಮೊಕಾಶಿಯವರ ಆಸಕ್ತಿಯ ಇನ್ನೆರಡು ಕ್ಷೇತ್ರಗಳು. ಮಾಯಿಯ ಮೂರು ಮುಖಗಳು ಕವನ ಸಂಕಲನ, ಡೆರೆಕ್‌ಡಿಸೋಜಾ ಮತ್ತು ಇತರ ಕಥೆಗಳು, ವಿಪರ್ಯಾಸ ವಿನೋದ, ಸಾಹಿತ್ಯ ಮತ್ತು ಅಭಿರುಚಿ ಎನ್ನುವ ವಿಮರ್ಶಾ ಲೇಖನಗಳನ್ನು ಬರೆದಿದ್ದಾರೆ. ಸಂಗೀತ ನಾಟ್ಯ ಗಾಂಧಿ ಎನ್ನುವ ಏಕಾಂಕ ನಾಟಕ, ಹಾಗೂ ಮೊಹೆಂಜೋದಾರೊ ಮೇಲ್ಸ್ ಮತ್ತು ಹರಿಜನ್ ಕಾಂಟ್ರಿಬ್ಯೂಶನ್ ಟು ಮೀಡಿವಲ್ ಇಂಡಿಯನ್ ಥಾಟ್ ಸಂಶೋಧನಾ ಗ್ರಂಥಗಳು ಮೊಕಾಶಿ ಅವರ ಸಾಹಿತ್ಯದ ಬತ್ತಳಿಕೆಯಿಂದ ಮೂಡಿಬಂದಿವೆ. ರಾಜ್ಯ ಸಾಹಿತ್ಯ ಅಕಾಡೆಮಿ ಹಾಗೂ ಜ್ಞಾನಪೀಠ ಪ್ರಶಸ್ತಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ ಹಿರಿಮೆ ಅವರದಾಗಿದೆ. ತಮ್ಮ ಎಪ್ಪತ್ತಾರನೇ ವಯಸ್ಸಿನಲ್ಲಿ ಧಾರವಾಡದ ಸ್ವಗೃಹದಲ್ಲಿ ತಮ್ಮ ಮಗಳು-ಅಳಿಯನೊಂದಿಗೆ ಮೊಕಾಶಿರವರು ವೃದ್ಧಾಪ್ಯ ಜೀವನ ನಡೆಸುತ್ತಿದ್ದರು. ದೀರ್ಘಕಾಲ ಮುಂಬಯಿಯಲ್ಲಿ ಉಳಿದಿದ್ದ ಪುಣೇಕರ್ ಧಾರವಾಡಕ್ಕೆ ಬಂದಿದ್ದು ತಮ್ಮ ಕೊನೆಯ ದಿನಗಳಲ್ಲಿ .
ಪುಣೇಕರ್ ಇನ್ನಿಲ್ಲ ; ಗಂಗಾಮಾಯಿ ಮಾತ್ರ ಪುಣೇಕರರ ನೆನಪಿಸುತ್ತಲೇ ಇರುತ್ತಾಳೆ.












Click it and Unblock the Notifications