ಸುಬ್ಬುಲಕ್ಷ್ಮಿ : ಶೈಲಿ, ಶಾರೀರ ಯಾವುದರಲ್ಲೂ ಸಾಟಿ ಇಲ್ಲ

  • ಅರವಿಂದ ನಾವಡ
M.S. Subbulakshmi, A tributeಅವರ ಕಛೇರಿ ಎಂದರೆ ಹಾಗೇ. ಹಾರಿ ಹೋಗುವ ಹಕ್ಕಿ ಸಂಭ್ರಮದಿಂದ ಹಾಡುವ ಹಾಗೆ.

ಸುಬ್ಬುಲಕ್ಷ್ಮಿಯವರನ್ನು ತಮ್ಮ 15ನೇ ವಯಸ್ಸಿನಲ್ಲಿ ಕಂಡ ಹಿರಿಯ ಸಂಗೀತಗಾರ ವಿದ್ವಾನ್‌ ಆರ್‌.ಕೆ. ಶ್ರೀಕಂಠನ್‌ ಎಂ.ಎಸ್‌. ಕುಟುಂಬದೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದವರು. ಆದರೆ ಅಚ್ಚರಿ ಮೂಡಿಸಿದ್ದು ಎಂ. ಎಸ್‌. ಅವರ ಸಂಗೀತ. ‘ನಾಗಸ್ವರದಲ್ಲಿ ಬಿರ್ಕಾ ಬಿಟ್ಟ ಹಾಗೆ ಲಲಿತ ಸ್ವರ, ನಿಜವಾಗಲೂ ಅದ್ಭುತ. ಅವರ ಶರೀರ, ಹಾಡುಗಾರಿಕೆ ಶೈಲಿ ಎಲ್ಲವೂ ಸೇರಿದಂತೆ ಬಹಳಷ್ಟು ಸಂಗೀತಗಾರರ ಮೇಲೆ ಪ್ರಭಾವ ಬೀರಿದೆ. ಎಲ್ಲವನ್ನೂ ಭಗವಂತನಿಗೇ ಅರ್ಪಿಸುವಂತೆ ಹಾಡುತ್ತಿದ್ದುದು ನಿಜಕ್ಕೂ ಅನನ್ಯ. ಅಂಥ ಗಾಯಕಿ ಮತ್ತೊಬ್ಬರಿಲ್ಲ.’

ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ ಮೊಮ್ಮಗ ಹಾಗೂ ಬೆಂಗಳೂರು ಆಕಾಶವಾಣಿ ಮಾಜಿ ನಿರ್ದೇಶಕ ಎಸ್‌.ಕೃಷ್ಣಮೂರ್ತಿ ವಿವರಿಸುವ ಆತ್ಮೀಯಪ್ರಸಂಗಗಳು ಎಂ.ಎಸ್‌.ಎಸ್‌ ಅವರ ಇಡೀ ವ್ಯಕ್ತಿತ್ವವನ್ನೇ ಹೇಳಿ ಬಿಡುತ್ತವೆ.

ಪ್ರಸಂಗ 1- ಮೊದಲು ಕಂಡಿದ್ದು ಮೈಸೂರಿನಲ್ಲಿ ನನ್ನ ತಾತನ ಬಳಿ ಬಂದು ‘ಬ್ರೋಚೇವಾ...’ ಕೀರ್ತನೆಯನ್ನು ಗ್ರಾಮೋಫೋನ್‌ ಹಾಡಲು ಅನುಮತಿ ಕೇಳಿದರು. ನಾನೊಮ್ಮೆ ಹಾಡುತ್ತೇನೆ. ಸರಿ ಕಂಡರೆ ಅನುಮತಿ ನೀಡಿ ಎಂದು ಹಾಡಿದರು. ನನ್ನ ತಾತ ಹಾಡು ಕೇಳಿ ‘ಏನಮ್ಮಾ , ನನ್ನ ಕೃತಿ ಇಷ್ಟೊಂದು ಚೆಂದವಿದೆ ಎಂದು ತಿಳಿದದ್ದೇ ನಿನ್ನಿಂದ’ ಎಂದು ಹೇಳಿದಾಗ ಸಂಕೋಚದಿಂದ ಮುದ್ದೆಯಾದವರು ಎಂ.ಎಸ್‌.ಎಸ್‌.’

ಪ್ರಸಂಗ 2- ಮಲ್ಲೇಶ್ವರಂ ಸಂಗೀತ ಸಭೆಯಲ್ಲಿ ಹಾಡಿದ ಸಂದರ್ಭ. ಮತ್ತೊಬ್ಬ ವಾಗ್ಗೇಯಕಾರ ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ ಬಂದಿದ್ದರು. ‘ಓರಂಗ ಶಾಯಿ’ ತ್ಯಾಗರಾಜರ ಕೃತಿಯನ್ನು ಎಂ. ಎಸ್‌. ಹಾಡಿದಾಗ ಶರ್ಮರ ಕಣ್ಣೀರಿನಲ್ಲಿ ನೀರು ಬಂತು. ಆಗ ಶರ್ಮರು,‘ನಾನು ಎರಡೇ ಬಾರಿ ಅತ್ತಿದ್ದು. ಒಮ್ಮೆ ನನ್ನ ತಾಯಿ ಹೋದಾಗ, ಮತ್ತೊಮ್ಮೆ ಎಂದರೆ ಈಗ. ಆಗಿನದು ಶೋಕದ ನೀರು, ಈಗಿನದು ಸಂತೋಷದ ಕಣ್ಣೀರು.

ಪ್ರಸಂಗ 3- ಪಾಂಡಿಚೇರಿಯಲ್ಲಿ ಆಕಾಶವಾಣಿ ನಿರ್ದೇಶನನಾಗಿದ್ದೆ ನಾನು. ಬಿ. ಡಿ. ಜತ್ತಿ ಲೆಫ್ಟಿನೆಂಟ್‌ ಜನರಲ್‌. ರಾಜಭವನದಲ್ಲಿ ಸುಬ್ಬಲಕ್ಷ್ಮಿಯವರ ಕಛೇರಿಯಿತ್ತು. ಅಲ್ಲಿಯೇ ಸುಬ್ಬಲಕ್ಷ್ಮಿ ಮತ್ತು ಸದಾಶಿವಂ ತಂಗಿದ್ದರು. ಕಛೇರಿ ದಿನ ಬೆಳಗ್ಗೆ ಉಪಾಹಾರಕ್ಕೆ ಅವರಿಗೆ ಆಹ್ವಾನವಿತ್ತಾಗ ಸದಾಶಿವಂ,‘ಅವರು ಕಛೇರಿ ದಿನ ಎಲ್ಲೂ ಹೋಗುವುದಿಲ್ಲ. ದೇವರ ಮನೆಯಲ್ಲಿ ಕುಳಿತು ರಾಗಾನುಸಂಧಾನದಲ್ಲಿ ತೊಡಗಿರುತ್ತಾರೆ. ನಿಯಮ ಉಲ್ಲಂಘಿಸುವುದಿಲ್ಲ ಎಂದು ನನಗೆ ಸೂಚಿಸಿದರು. ಅದೇ ಮಾತನ್ನು ಜತ್ತಿಯವರು ಕೇಳಿ ‘ಅಷ್ಟೊಂದು ದೊಡ್ಡ ತಪಸ್ಸು ಮಾಡದಿದ್ದರೆ ಸಾಧ್ಯವಿತ್ತೇ ಈ ಸಾಧನೆ, ಸಂಗೀತ’ ಎಂದರು.

50 ವರ್ಷದಿಂದ ಬೆಂಗಳೂರು ಗಾಯನ ಸಮಾಜದೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ಎಂ.ಎಸ್‌. ಅವರೊಂದಿಗೆ ಅಧ್ಯಕ್ಷ ಎಚ್‌. ಕಮಲನಾಥ್‌ ಸಹ ಆತ್ಮೀಯರಾಗಿದ್ದರು.‘ಸುಬ್ಬಲಕ್ಷ್ಮಿಯವರ ಗುರು ಶೆಮ್ಮಂಗಡಿ ಶ್ರೀನಿವಾಸ ಅಯ್ಯರ್‌ ಮನೆಗೆ ನಾನು ಹೋಗುತ್ತಿದ್ದೆ. ಅಲ್ಲೇ ಪರಿಚಯವಾದದ್ದು. ಗಾಯನ ಸಮಾಜಕ್ಕೆ ಹಲವು ಬಾರಿ ಹಾಡಿದ್ದಾರೆ. ಸಮಾಜದ ಕಟ್ಟಡಕ್ಕೆ 1960ರ ಸುಮಾರಿನಲ್ಲಿ ಹಾಡಿ 50 ಸಾವಿರ ರೂ. ಸಂಗ್ರಹಿಸಿ ಕೊಟ್ಟಿದ್ದರು. ನಿಜಕ್ಕೂ ಧನ್ಯ.’

ಪ್ರಸಂಗ 4- ‘ಬಹಳ ಇಷ್ಟವಾಗುವುದು ಅವರ ಮಗುವಿನತನ. ವಿಜಯದಶಮಿಯಂದು ಗುರುಗಳಿಗೆ ಕಾಣಿಕೆ ಸಲ್ಲಿಸೋದು ಅವರ ಸಂಪ್ರದಾಯ. ಅದರಂತೆ 70ರ ವಯಸ್ಸಿನಲ್ಲಿ ಶೆಮ್ಮಂಗುಡಿ ಅವರಲ್ಲಿ ಬಂದು ಶಾಲು, ಹಣ್ಣುಕೊಟ್ಟು ನಮಸ್ಕರಿಸಿ ‘ನನಗೆ ಹೊಸ ಕೀರ್ತನೆ ಕಲಿಸಿಕೊಡಿ’ ಎಂದರು. ಶೆಮ್ಮಂಗುಡಿ ಕಲಿಸಿಕೊಟ್ಟರು. ಅಲ್ಲಿಯೇ ಕಲಿತು ಹಾಡಿ ಪಾಠ ಒಪ್ಪಿಸಿದರು’.

ಸಂಗೀತ ಗುರು ವಿದ್ವಾನ್‌ ಪಿ. ಸೇಲಂ ಸುಂದರೇಶನ್‌ ಮೊದಲ ಕಚೇರಿ ಕೇಳಿದ್ದು ಸೇಲಂನ ಮುನ್ಸಿಪಲ್‌ ಸ್ಕೂಲ್‌ ಸಭಾಂಗಣದಲ್ಲಿ. ಆಗಲೇ ಅವರು ಮಾರುಹೋಗಿದ್ದರು. ಅವರು ಹೇಳಿದಂತೆ ‘ದೇವತೆ ಬಂದು ಕುಳಿತು ಹಾಡಿದಂತೆ. ಅಂದಿನಿಂದ ಇಂದಿಗೂ ಅವರ ಕಛೇರಿ ಕೇಳುತ್ತಿದ್ದೇನೆ. ಒಂದಿನಿತೂ ಹೆಚ್ಚು ಕಡಿಮೆಯಿಲ್ಲ. ಆರ್ಯುವೇದ ಡಾಕ್ಟರರ ಮನೆಯಲ್ಲಿ ಹಾಡಿದ ಸಂದರ್ಭವೂ ಹಾಗೇ ಇತ್ತು . ಸಿಂಹೇಂದ್ರ ಮಧ್ಯಮ ರಾಗದ ಕೀರ್ತನೆ ‘ಇಹಪರಂ ’, ಪಾಪನಾಶಂ ಶಿವನ್‌ ಅವರ ಕೀರ್ತನೆ- ಅವರ ಸಂಗೀತದಲ್ಲಿ ಮುಸುರಿ ಸುಬ್ರಹ್ಮಣ್ಯ ಅಯ್ಯರ್‌ ಛಾಯೆ ಕಾಣುತ್ತಿತ್ತು. ಭಕ್ತಿ , ಭಾವಕ್ಕೆ ಆದ್ಯತೆ ನೀಡಿದ ಶುದ್ಧ ಸಂಗೀತ. ಅವರ ಭಾವಪರವಶತೆ ಹೇಳಲಿಕ್ಕೆ ಸಾಧ್ಯವೇ?

ನಾಡಿನ ಸಂಗೀತಗಾರ ಹಾಗೂ ಎಂ. ಎಸ್‌. ಅವರೊಂದಿಗೆ ನುಡಿಸಿದ ಹಿರಿಯ ಪಿಟೀಲುವಾದಕ ಆರ್‌. ಆರ್‌. ಕೇಶವಮೂರ್ತಿ, ‘ ಬಿಡಾರಂ ಕೃಷ್ಣಪ್ಪನವರ ಮನೆಯಲ್ಲಿ ನಾವೆಲ್ಲ ಸೇರುತ್ತಿದ್ದೆವು. ಆಗ ಇಷ್ಟೊಂದು ಕೀರ್ತಿ ಬಂದಿರಲಿಲ್ಲ. ಆದರೆ ಶುದ್ಧವಾಗಿ ಹಾಡುತ್ತಿದ್ದರು. ನಾನೂ ನುಡಿಸುತ್ತಿದ್ದೆ. ಪಿಟೀಲು ಚೌಡಯ್ಯನವರು ಬಹಳಷ್ಟು ಬೆಳೆಸಿದರು. ಎಲ್ಲದರಲ್ಲೂ ಇತಿಮಿತಿಗೆ ಪ್ರಾಶಸ್ತ್ಯ . ಚೆನ್ನಾದ ಗಾಯಕಿ ’ ಎನ್ನುತ್ತಾರೆ.

ಶರದ್ರುತುವಿನಲ್ಲಿ ನಿಸರ್ಗ ಚೆಂದವನ್ನು ಕಳೆದುಕೊಂಡು ಹೊಸ ಸಂವತ್ಸರಕ್ಕೆ ಚಿಗುರುಗೊಳ್ಳಲು ಅಣಿಯಾಗುತ್ತಿದೆ. ಆದರೆ ವಸಂತನನ್ನು ಸ್ವಾಗತಿಸಬೇಕಾದ ಕೋಗಿಲೆಯ ಸ್ವರ ‘ಅಮರತ್ವದಲ್ಲಿ ಲೀನವಾಗಿ’ದೆ. ಇಹಲೋಕಕ್ಕೆ ಈ ಕೋಗಿಲೆಯ ಗಾನ ಇನ್ನು ಬರೀ ನೆನಪಿನ ಮುಂಜಾವಿನಲ್ಲಿ , ಸುಪ್ರಭಾತದ ಹಾಗೆ.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+