• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅರುಂಧತಿ ನಾಗ್‌ ಸಂದರ್ಶನ

By Staff
|

ಮುಖಪುಟ --> ಸಾಹಿತ್ಯ ಸೊಗಡು --> ಜನ ಈ ದಿನ --> ವ್ಯಕ್ತಿ ಚಿತ್ರಮೇ 23, 2003

‘ರಂಗ ಶಂಕರ’ದಲ್ಲಿ ಶಾಲೆಗೆ ಹೋಗೋಕೆ ಮುಂಚೆ ಚಿಣ್ಣರು ನಿತ್ಯವೂ 2 ಗಂಟೆ ನಾಟಕ ನೋಡಿಕೊಂಡು ಹೋಗುವ ವ್ಯವಸ್ಥೆಯುಂಟು. ಫೀಸು ವರ್ಷಕ್ಕೆ ಬರೀ 30 ರು.! ರಂಗ ಶಂಕರ ದುಬಾರಿ ಅನ್ನೋರು ಇದಕ್ಕೇನಂತಾರೆ?

  • ಚೇತನ್‌ ನಾಡಿಗೇರ್‌

ಅದೊಂದು ಕನಸು. ನೆನ್ನೆ ಮೊನ್ನೆಯದಲ್ಲ. ಬಹಳ ವರ್ಷಗಳ ಕನಸು. ಶಂಕರ್‌ನಾಗ್‌ ಬದುಕಿದ್ದರೆ ಆ ಕನಸು ನನಸಾಗಲು ಇಷ್ಟು ವರ್ಷ ಕಾಯಬೇಕಾಗಿರಲಿಲ್ಲ. ಈ ಕನಸುಗಳ ಸಾಕಾರ ಮಾಡಲು ಅತಿ ಚಿಕ್ಕ ವಯಸ್ಸಿನಲ್ಲೇ ಹರ ಸಾಹಸ ಮಾಡಿದ ಶಿಖರದಂಥಾ ಮನಸಿನ ಶಂಕರ್‌, ಪ್ರತಿಫಲ ದಕ್ಕುವ ಮುನ್ನವೇ ತೀರಿಹೋದರು. ರಂಗಕರ್ಮಿ, ನಟ, ನಿರ್ಮಾಪಕ, ನಿರ್ದೇಶಕ- ಹೀಗೆಲ್ಲಾ ಹೆಸರು ಮಾಡಿದ್ದ ಶಂಕರ್‌ ಕನಸಿನರಮನೆ ‘ರಂಗ ಶಂಕರ’. ಶಂಕರ್‌ ಪತ್ನಿ , ನಟಿ ಅರುಂಧತಿ ನಾಗ್‌ ಆ ಕನಸನ್ನು ನನಸಾಗಿಸಲು ಬೆವರು ಬಸಿದಿದ್ದಾರೆ. ಬಿಡುವಿಲ್ಲದ ಓಡಾಟದ ನಡುವೆಯೂ ಅರುಂಧತಿ ದಟ್ಸ್‌ಕನ್ನಡದ ಜತೆ ಕೆಲ ನಿಮಿಷ ಹಂಚಿಕೊಂಡರು...

ರಂಗ ಶಂಕರ ಅಂದ್ರೆ ನಿಮ್ಮ ದೃಷ್ಟಿಯಲ್ಲಿ ಏನು? ರಂಗಶಂಕರದ ಪರಿಕಲ್ಪನೆ ಮೂಡಿದ್ದು ಹೇಗೆ?

‘ರಂಗ ಶಂಕರ’ ರಂಗಮಂದಿರವಷ್ಟೇ ಅಲ್ಲ, ಬದಲಿಗೆ ಅದೊಂದು ರಂಗದರ್ಶನ. ‘ರಂಗ ಶಂಕರ’ ಶಂಕರ್‌ ನಾಗ್‌ನ ಕ್ರಿಯಾಶೀಲತೆಗೆ ನಾವು ಸಲ್ಲಿಸುತ್ತಿರುವ ಗೌರವ. ಅದನ್ನು ಕಟ್ಟಿಸಬೇಕೆಂಬ ಕನಸು ಇಂದು ನೆನ್ನೆಯದಲ್ಲ. ಬೆಂಗಳೂರಿನಲ್ಲಿ ಹಲವಾರು ರಂಗಮಂದಿರಗಳೇನೋ ಇವೆ. ಆದರೆ ಈ ಪೈಕಿ ಯಾವುದೂ ಪ್ರತ್ಯೇಕವಾಗಿ ನಾಟಕಕ್ಕೆ ಸೀಮಿತವಾಗಿಲ್ಲ. ಅಲ್ಲಿ ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತವೆ. ನಾನು, ಶಂಕರ್‌ ಬೆಂಗಳೂರಿಗೆ ಬಂದಾಗಿನಿಂದಲೂ ನಾಟಕಕ್ಕೆ ಪ್ರತ್ಯೇಕವಾಗಿ ಸೀಮಿತವಾಗಿ ಒಂದು ರಂಗಮಂದಿರ ಕಟ್ಟಬೇಕೆಂಬ ಕನಸು ಕಟ್ಟಿದ್ದೆವು. ಶಂಕರ್‌ ಇದ್ದಿದ್ದರೆ ಇಂತಹ ಒಂದು ರಂಗಮಂದಿರವನ್ನು ಯಾವಾಗಲೋ ಕಟ್ಟಿರುತ್ತಿದ್ದರು. ಆದರೆ ಶಂಕರ್‌ ಅಕಾಲ ಮೃತ್ಯುವಿಗೆ ಈಡಾದರು. ತಕ್ಷಣ ಅವರ ಆಸೆಯನ್ನು ಪೂರೈಸಲಾಗಲಿಲ್ಲ. ಆವರ ದುಃಖದಿಂದ ಹೊರ ಬರಲು 10 ವರ್ಷಗಳೇ ಹಿಡಿದವು.

ನಂತರ ರಂಗ ಶಂಕರದ ಪ್ರಸ್ತಾಪ ಸರ್ಕಾರದ ಮುಂದೆ ಇಟ್ಟಾಗ, ಸರ್ಕಾರ ಈ ಕೆಲಸಕ್ಕೆ 50 ಲಕ್ಷ ರುಪಾಯಿ ಮತ್ತು ಬಿ.ಡಿ.ಎ. ಸಹಾಯದಿಂದ ನಗರದ ಪ್ರತಿಷ್ಠಿತ ಬಡಾವಣೆಯಾದ ಜೆ.ಪಿ.ನಗರದಲ್ಲಿ 12,500 ಚದರ ಅಡಿ ಸ್ಥಳವನ್ನು 30 ವರ್ಷದ ಭೋಗ್ಯಕ್ಕೆ ನೀಡಿತು. ಇದರಿಂದ ಉತ್ತೇಜಿತವಾದ ಸಂಕೇತ್‌ ಟ್ರಸ್ಟ್‌ ‘ರಂಗ ಶಂಕರ’ದ ಕೆಲಸವನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭ ಮಾಡಿತು. ಅಕ್ಟೋಬರ್‌ 26, 2001ರಂದು ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ರಿಂದ ಶಂಕುಸ್ಥಾಪನೆಯಾದ ನಂತರ ಪ್ರಾರಂಭವಾದ ಕಟ್ಟಡ ನಿರ್ಮಾಣ ಇನ್ನು 4 ತಿಂಗಳಲ್ಲಿ ಮುಗಿಯಲಿದೆ.

ಮೂರು ಮಹಡಿಗಳ ಈ ಕಟ್ಟಡಕ್ಕೆ ಸುಮಾರು 3 ಕೋಟಿ ರುಪಾಯಿ ಖರ್ಚಾಗಲಿದೆ. ಹವಾ ನಿಯಂತ್ರಿತ ವ್ಯವಸ್ಥೆ ಇರುವ ಈ ರಂಗಮಂದಿರದಲ್ಲಿ 300 ಜನ ಕುಳಿತು ನಾಟಕ ನೋಡಬಹುದಾಗಿದೆ.

ಬೆಂಗಳೂರು ಹಿಂದೆಂದೂ ಕಂಡಿರದಂಥ ರಂಗ ಸಜ್ಜಿಕೆಗಳನ್ನು ‘ರಂಗ ಶಂಕರ’ ಒಳಗೊಳ್ಳಲಿದೆ. ಪುಸ್ತಕ ಭಂಡಾರ, ದ್ಯಶ್ಯ ಭಂಡಾರ, ಸಂಗೀತ ಭಂಡಾರ, ಫಲಹಾರ ಮಂದಿರ, ಮಕ್ಕಳಿಗಾಗಿಯೇ ವಿಶೇಷ ರಂಗ ಸ್ಥಳ ಮತ್ತು ಆಡಿದ ನಾಟಕಗಳನ್ನು ಮುದ್ರಿಸಿಕೊಳ್ಳುವ ಕೋಣೆ... ಹೀಗೆ ಪಟ್ಟಿ ಮುಂದುವರಿಯುತ್ತದೆ.

ರಂಗ ಶಂಕರದಂಥ ಬೃಹತ್‌ ರಂಗ ಸಜ್ಜಿಕೆಗೆ ಬಾಡಿಗೆ ಕಟ್ಟಬಲ್ಲ ಶಕ್ತಿ ಎಷ್ಟು ಜನಕ್ಕಿದೆ ಎಂದು ಸಿಂಹ ಪ್ರಶ್ನಿಸುತ್ತಾರೆ. ರಂಗಶಂಕರಕ್ಕೆ ವೆಚ್ಚ ಅತಿಯಾಯಿತು ಎಂದು ನಾಟಕ ಆಕಾಡೆಮಿಯ ಅಧ್ಯಕ್ಷ ನಾಗೇಶ್‌ ಹೇಳುತ್ತಾರೆ. ಇಂಥದೊಂದು ಬೃಹತ್‌ ಯೋಜನೆ ಕನ್ನಡ ರಂಗಭೂಮಿಗೆ ಅಗತ್ಯವಿತ್ತಾ ?

ಬೆಂಗಳೂರಿನಲ್ಲಿ ಆನೇಕ ರಂಗಮಂದಿರಗಳೇನೋ ಇವೆ, ಆದರೆ ಆವುಗಳಲ್ಲಿ ಸೂಕ್ತವಾದುದು ರವೀಂದ್ರ ಕಲಾಕ್ಷೇತ್ರವೊಂದೇ. ಬೆಂಗಳೂರಲ್ಲಿ ಸುಮಾರು 200ಕ್ಕೂ ಹೆಚ್ಚು ರಂಗತಂಡಗಳಿದ್ದು, ಎಲ್ಲಾ ತಂಡಗಳಿಗೂ ಅವಕಾಶ ಸಿಗಬೇಕೆಂದಲ್ಲಿ , ಪ್ರತಿ ತಂಡವೂ ಸುಮಾರು ಮೂರು ತಿಂಗಳು ಕಾಯಬೇಕಾದ ಪರಿಸ್ಥಿತಿ ಇದೆ. ಇತರ ಸಭಾಂಗಣಗಳ ಬಾಡಿಗೆಯೂ ದುಬಾರಿ. ಅದಕ್ಕೆ ತಕ್ಕಂತೆ ಅಲ್ಲಿ ಯಾವುದೇ ರೀತಿಯ ಸೌಲಭ್ಯಗಳಿಲ್ಲ . ಹಾಗಾಗಿ ಬೆಂಗಳೂರಿನಲ್ಲಿ ಇಂದು ರಂಗ ಚಟುವಟಿಕೆಗಳಿಗಾಗಿಯೇ ಮೀಸಲಾದ, ರಂಗಕರ್ಮಿಗಳಿಗೆ ಕೈಗೆಟುಕಬಹುದಾದಂತಹ, ಪ್ರತಿಯಾಂದು ಪ್ರಯೋಗಕ್ಕೂ ಸೂಕ್ತವಾದಂತಹ, ಅತ್ಯಾಧುನಿಕ ರಂಗಮಂದಿರದ ಕೊರತೆಯಿದೆ. ಅದಲ್ಲದೆ ಸೌಲಭ್ಯಗಳ ಕೊರತೆ ಅಧಿಕವಾಗಿರುವ ಕಡೆಗೇ ಜನ ಹೋಗುತ್ತಿರುವಾಗ, ರಂಗ ಶಂಕರದಂತಹ ಸುಸಜ್ಜಿತ ರಂಗಮಂದಿರಕ್ಕೆ ಅವರು ಬರುವುದಿಲ್ಲವೇ ? ರಂಗಶಂಕರಕ್ಕಾಗಿ ಪ್ರತಿವರ್ಷ ಸುಮಾರು 18 ಲಕ್ಷ ಖರ್ಚಾಗಲಿದೆ. ಹಾಗಂತ ಇಲ್ಲಿ ದುಬಾರಿ ಬಾಡಿಗೆ ತೆರಬೇಕೀಲ್ಲ. ನಾನು ಇಲ್ಲಿ ಯಾರಿಗೂ ಸ್ಪರ್ಧೆ ನೀಡಲು ಬಂದಿಲ್ಲ ಮತ್ತು ನನಗೆ ಈ ರಂಗಮಂದಿರದಿಂದ ದುಡ್ಡು ಮಾಡುವ ಉದ್ದೇಶ ಇಲ್ಲ . ಇದೊಂದು ದೊಡ್ಡ ಕನಸು. ನಾವೇನು ವಾಣಿಜ್ಯೋದ್ಯಮಿಗಳಲ್ಲ. ಮೊದಲ ಬಾರಿಗೆ ಭಾರತದಲ್ಲಿ ಇಂತಹದೊಂದು ರಂಗಮಂದಿರವನ್ನು ರಂಗಕರ್ಮಿಗಳೇ ಕಟ್ಟುತ್ತಿದ್ದಾರೆ.

‘ರಂಗ ಶಂಕರ’ಕ್ಕಾಗಿ ಶಬಾನಾ ಆಜ್ಮಿ, ಜಾವೇದ್‌ ಅಖ್ತರ್‌, ಅಮೀರ್‌ ಖಾನ್‌, ನಂದಿತಾ ದಾಸ್‌ ಮುಂತಾದ ಖ್ಯಾತ ಕಲಾವಿದರು ದೇಣಿಗೆ ಎತ್ತಲು ಮುಂದೆ ಬಂದಿದ್ದಾರೆ. ಆದರೆ ಕನ್ನಡ ರಂಗಭೂಮಿಯಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ನಿಮ್ಮ ಅಭಿಪ್ರಾಯ?

ಹಾಗೇನಿಲ್ಲ . ಈ ಕಲಾವಿದರಲ್ಲದೇ ನಮ್ಮ ಸ್ಥಳೀಯ ರಂಗಾಸಕ್ತರು ಮುಂದೆ ಬಂದಿದ್ದಾರೆ. ಈ ಕಾರ್ಯಕ್ಕೆ ನಾನು ಇತರೆ ರಂಗಕರ್ಮಿಗಳನ್ನು ಎಳೆದು ತರಲು ಇಷ್ಟ ಪಡುವುದಿಲ್ಲ. ಎಲ್ಲರೂ ಒಂದೇ ಕಾರ್ಯಕ್ಕೆ ತಮ್ಮ ಶಕ್ತಿಯನ್ನು ವಿನಿಯೋಗಿಸಿದರೆ, ನಾಟಕವನ್ನಾಡಲು ಯಾರೂ ಇರುವುದಿಲ್ಲ. ರಂಗಮಂದಿರ ನಿರ್ಮಾಣದ ಜತೆಗೆ ಇತರರು ನಿರಂತರವಾಗಿ ನಾಟಕಗಳ್ಳನಾಡುತ್ತಿರಬೇಕು.

ಇತ್ತೀಚಿನ ಚಲನಚಿತ್ರಗಳ ಬಗ್ಗೆ ಅಭಿಪ್ರಾಯವೇನು?

ಈಗಿನ ಚಿತ್ರಗಳು ಮತ್ತು ಧಾರಾವಾಹಿಗಳು ತಮ್ಮ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದೆ. ಅದಕ್ಕೀಗ ತೀವ್ರ ಅವಲೋಕನವಾಗಬೇಕು.

ಇತ್ತೀಚೆಗೆ ನೀವು ಸಿನಿಮಾದಲ್ಲಿ ಅಭಿನಯಸುತ್ತಿಲ್ಲ , ಏಕೆ?

ಸದ್ಯಕ್ಕೆ ಬೇರೆ ಯಾವುದೇ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಏಕೆಂದರೆ ರಂಗಶಂಕರವೇ ನನ್ನ ಸಮಯವನ್ನೆಲ್ಲಾ ತೆಗೆದುಕೊಳ್ಳುತ್ತಿದೆ. ರಂಗ ಶಂಕರ ಕಟ್ಟಡ ನಿರ್ಮಾಣ ಮುಗಿದ ನಂತರವೂ ಅದರ ಮೇಲ್ವಿಚಾರಣೆ ಸಂಕೇತ್‌ ಟ್ರಸ್ಟ್‌ ವಹಿಸಿಕೊಂಡಿದೆ. ಹಾಗಾಗಿ ಇನ್ನು ಮುಂದೆ ಸತತವಾಗಿ ಕೆಲಸ ಇದ್ದೇ ಇರುತ್ತದೆ. ಈ ಮಧ್ಯೆ ಒಳ್ಳೆಯ ಪಾತ್ರ ಸಿಕ್ಕರೆ ಖಂಡಿತ ನಟಿಸುತ್ತೇನೆ.

ಶಂಕರ್‌ನಾಗ್‌ರ ಇತರೆ ಕನಸುಗಳಾದ ಕಂಟ್ರಿ ಕ್ಲಬ್‌ ಮತ್ತು ಸಂಕೇತ್‌ ಎಲೆಕ್ಟ್ರಾನಿಕ್ಸ್‌ ಈಗ ಹೇಗಿವೆ?

ಶಂಕರ್‌ನಾಗ್‌ರ ಇತರೆ ಕನಸುಗಳಾದ ಕಂಟ್ರಿ ಕ್ಲಬ್ಬನ್ನು ಮಣಿಪಾಲ್‌ ಗ್ರೂಪ್‌ನವರಿಗೆ ಭೋಗ್ಯಕ್ಕೆ ಕೊಡಲಾಗಿದೆ. ಸಂಕೇತ್‌ ಎಲೆಕ್ಟ್ರಾನಿಕ್ಸನ್ನು ಶಂಕರ್‌ ಮಿತ್ರ ಜಗದೀಶ್‌ ಮಲ್ನಾಡ್‌ ಮುಂತಾದವರು ಅದನ್ನು ನೋಡಿಕೊಳ್ಳುತ್ತಿದ್ದಾರೆ.

ಜೋಕುಮಾರಸ್ವಾಮಿಯನ್ನು ಸಿನಿಮಾ ಮಾಡುವ ಉದ್ದೇಶ ನಿಮಗೇನಾದರೂ ಇದೆಯಾ?

ಶಂಕರ್‌ಗೆ ಕಂಬಾರರ ಜೋಕುಮಾರಸ್ವಾಮಿ ನಾಟಕವನ್ನು ಚಿತ್ರ ಮಾಡಲು ಬಹಳ ಆಸೆಯಿತ್ತು. ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು ಕೂಡ. ಆದರೆ, ಅವರ ಸಾವಿನಿಂದ ಆ ಚಿತ್ರ ನಿಂತು ಹೋಯಿತು. ಗಿರೀಶ್‌ ಕಾರ್ನಾಡ್‌ ಮುಂತಾದವರು ಚಿತ್ರ ಮಾಡಲು ಹೋದರು. ಹಲವಾರು ಕಾರಣಗಳಿಂದ ಕೊನೆಗೆ ಅವರೂ ನಿಲ್ಲಿಸಿಬಿಟ್ಟರು. ನನಗೆ ಆ ಚಿತ್ರ ಮಾಡುವ ಆಸೆ ಇಲ್ಲ.

ರಂಗಶಂಕರದ ಮುಂದಿನ ಯೋಜನೆಗಳು?

ವರ್ಷದಲ್ಲಿ ಒಂದು ವಾರ ಸಂಗೀತ, ನೃತ್ಯ ಮುಂತಾದ ಅನೇಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಉಳಿದಂತೆ ದಿನವೂ ನಾಟಕಗಳನ್ನಾಡಲಾಗುತ್ತದೆ. ನಮ್ಮ ಗುರಿ ವರ್ಷಕ್ಕೆ ಸುಮಾರು 300 ರಂಗ ಪ್ರದರ್ಶನಗಳನ್ನು ಏರ್ಪಡಿಸುವುದು. ರಂಗಶಂಕರದಿಂದ ಬೆಂಗಳೂರಿನ 200 ಶಾಲೆಗಳಿಗೆ ಪ್ರಯೋಜನವಾಗಲಿದೆ. ಇಲ್ಲಿ ಮಕ್ಕಳಿಗೆ ಪ್ರತ್ಯೇಕ ರಂಗ ಮಂದಿರವಿದ್ದು , ಮಕ್ಕಳು ಶಾಲೆಗೆ ಹೋಗುವ ಮುನ್ನ ಬೆಳಿಗ್ಗೆ 2 ಘಂಟೆ ಇಲ್ಲಿ ಬಂದು ನಾಟಕ ನೋಡುವ ಏರ್ಪಾಟು ಮಾಡಲಾಗಿದೆ. ಇದಕ್ಕಾಗಿ ಒಂದು ವರ್ಷಕ್ಕೆ ಒಂದು ಮಗುವಿಗೆ 30 ರುಪಾಯಿಯನ್ನು ಫೀಸ್‌ ರೂಪದಲ್ಲಿ ಪಡೆಯಲಾಗುತ್ತದೆ. ಇದಲ್ಲದೆ ಶಾಲೆಯ ಶಿಕ್ಷಕರಿಗೆ ನಾಟಕದ ತರಬೇತಿ ಕೂಡ ನೀಡಲಾಗುತ್ತದೆ. ಇಲ್ಲಿ ದೊಡ್ಡವರು ಮಕ್ಕಳಿಗೆ ನಾಟಕ ಮಾಡುವ ವ್ಯವಸ್ಥೆ ಇದೆ. ಇಲ್ಲಿ ಅದೇ ಹಳೆಯ ನಾಟಕಗಳಾದ ಸಿಂಡ್ರೆಲಾ, ಸ್ನೋವೈಟ್‌ ಮುಂತಾದ ಮಕ್ಕಳ ನಾಟಕ ಆಡುವುದಿಲ್ಲ. ಬದಲಿಗೆ ಸಮಕಾಲೀನ ನಾಟಕಗಳನ್ನಾಡಲಾಗುತ್ತದೆ. ಇದಲ್ಲದೆ ಮಕ್ಕಳಿಗೆ ನಾಟಕದ ಹಲವು ಮಜಲುಗಳನ್ನು ಪರಿಚಯಿಸುವ ಸಲುವಾಗಿ ಕಾರ್ಯಾಗಾರ ಮತ್ತು ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನು 2 ರಿಂದ 6ನೇ ತರಗತಿ ಮಕ್ಕಳಿಗಾಗಿ ಆಯೋಜಿಸಲಾಗಿದೆ. ಮತ್ತು ಮಕ್ಕಳ ರೆಪರ್ಟರಿ ಕೂಡ ಪ್ರಾರಂಭ ಮಾಡಲು ಯೋಚಿಸಲಾಗಿದೆ.

ಪ್ರಸ್ತುತ ರಂಗಭೂಮಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕನ್ನಡ ರಂಗಭೂಮಿಯ ಜನಪ್ರಿಯತೆಗೆ ಈಗ ಆಗಬೇಕಾದ ಕೆಲಸಗಳೇನು?

ನಮ್ಮ ಜನ ಲಂಡನ್‌ ಮುಂತಾದ ದೇಶಗಳಿಗೆ ಹೋದರೆ, ಅಲ್ಲಿನ ನಾಟಕ ನೋಡಲು 50 ಪೌಂಡ್‌ ತೆರುತ್ತಾರೆ. ಆದರೆ ಆದೇ ಜನ ಬೆಂಗಳೂರಿನಲ್ಲಿ 50 ರೂಪಾಯಿ ಕೊಟ್ಟು ನಾಟಕ ನೋಡಲು ಹಿಂದುಮುಂದು ನೋಡುತ್ತಾರೆ. ಜನ ಹೆಚ್ಚು ಹೆಚ್ಚು ನಾಟಕ ನೋಡಿ ಪ್ರೋತ್ಸಾಹಿಸಬೇಕು. ಹಾಗೆಯೇ ನಾಟಕಗಳ ಗುಣಮಟ್ಟ ಹೆಚ್ಚಬೇಕು. ಹಾಗಾದಾಗ ಮಾತ್ರ ನಾಟಕ ನೋಡಲು ಹೊಸ ಪ್ರೇಕ್ಷಕರು ಬರುವುದು.

ರಂಗಶಂಕರ ಒಂದು ಕಟ್ಟಡ ಮಾತ್ರವಲ್ಲ ; ರಂಗಭೂಮಿಯ ಸಮಗ್ರ ಅಭಿವೃದ್ಧಿಗಾಗಿ ಅದೊಂದು ವೇದಿಕೆಯಾಗಲಿದೆ. ಈ ಬೃಹತ್‌ ಯೋಜನೆಗೆ ಇದುವರೆಗೂ ಸುಮಾರು 2 ಕೋಟಿ ರುಪಾಯಿ ಸಂಗ್ರಹಿಸಲಾಗಿದೆ. ಇನ್ನೂ ಒಂದು ಕೋಟಿ ಸಂಗ್ರಹಿಸಬೇಕಿದೆ. ಇದುವರೆಗೂ ಹಲವಾರು ಸಂಘ ಸಂಸ್ಥೆಗಳು ಈ ಕಟ್ಟಡಕ್ಕಾಗಿ ದೇಣಿಗೆ ನೀಡಿದೆ.

*

ಇವರೆಲ್ಲ ಸಂಕೇತ್‌ ಟ್ರಸ್ಟ್‌ನ ಸದಸ್ಯರು :

ಗಿರೀಶ್‌ ಕಾರ್ನಾಡ್‌, ಅಧ್ಯಕ್ಷರು

ಅರುಂಧತಿ ನಾಗ್‌, ಮ್ಯಾನೇಜಿಂಗ್‌ ಟ್ರಸ್ಟಿ

ಸುರೇಂದ್ರನಾಥ್‌, ಖಚಾಂಚಿ

ಪರಮೇಶ್ವರಪ್ಪ, ಸದಸ್ಯರು

ವಿಜಯ್‌ ಪಡಕಿ, ಸದಸ್ಯರು

ರಂಗಮಂದಿರದ ತಾಂತ್ರಿಕ ಸಲಹೆಗಾರರು ಎಂ. ಎಸ್‌. ಸತ್ಯು.

‘ರಂಗ ಶಂಕರ’ಕ್ಕೆ ದೇಣಿಗೆ ಸಲ್ಲಿಸಲು ಅವಕಾಶವಿದೆ. ಅಳಿಲು ಸೇವೆ ಸಲ್ಲಿಸಬಯಸುವಿರಾದರೆ, ವಿಳಾಸ ಇಂತಿದೆ- ರಂಗ ಶಂಕರ, ಪೋಸ್ಟ್‌ ಬಾಕ್ಸ್‌ ನಂಬರ್‌ 7833, ಜೆ.ಪಿ.ನಗರ, ಬೆಂಗಳೂರು- 560 078.

ನೋಡಿ- ರಂಗ ಶಂಕರ

ಇದನ್ನೂ ಓದಿ-

ಶಂಕರ್‌ನಾಗ್‌ ಜಯಂತಿಗೆ ‘ರಂಗ ಶಂಕರ’ ಇಲ್ಲ

Click here to go to top

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more