ಹಿರಿಯ ಪತ್ರಕರ್ತ ಇ.ಆರ್‌. ಸೇತೂರಾಂಗೆ ಟಿಎಸ್ಸಾರ್‌ ಪ್ರಶಸ್ತಿ

ಬೆಂಗಳೂರು : ಪತ್ರಿಕೋದ್ಯಮದಲ್ಲಿ ಸಲ್ಲಿಸಿರುವ ಅನುಪಮ ಸೇವೆಗಾಗಿ ಹಿರಿಯ ಪತ್ರಕರ್ತ ಇ.ಆರ್‌. ಸೇತೂರಾಂ ಅವರಿಗೆ ಈ ಸಾಲಿನ ಪ್ರತಿಷ್ಠಿತ ಟಿ.ಎಸ್‌.ಆರ್‌. ಪ್ರಶಸ್ತಿ ಲಭಿಸಿದೆ. ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಪಿ.ಪಿ. ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಐವರು ಸದಸ್ಯರ ಸಮಿತಿ ಸೇತೂರಾಂ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು.

ಪ್ರಶಸ್ತಿಯು ಒಂದು ಲಕ್ಷ ರುಪಾಯಿ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಡಿಸೆಂಬರ್‌ನಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಸೇತೂರಾಂ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವರು ಎಂದು ವಾರ್ತಾ ಸಚಿವ ಎಂ.ಶಿವಣ್ಣ ತಿಳಿಸಿದ್ದಾರೆ.

ನಂಜನಗೂಡಿನಲ್ಲಿ 1918ರ ನವೆಂಬರ್‌ 20ರಂದು ಜನಿಸಿದ ಸೇತೂರಾಂ ಶೇಷಪ್ಪನರ ಕಿಡಿ ಪತ್ರಿಕೆ, ಪ್ರಜಾವಾಣಿ, ಸುಧಾ, ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಎನ್‌ಎಂಕೆಆರ್‌ವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ಭಾರತೀಯ ವಿದ್ಯಾಭವನದ ಪತ್ರಿಕೋದ್ಯಮ ಕಾಲೇಜಿನಲ್ಲಿ ಸುಮಾರು ಎರಡು ದಶಕಗಳಿಂದ ಪ್ರಾಧ್ಯಾಪಕರಾಗಿ ಹಲವು ಯುವ ಪತ್ರಕರ್ತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

‘ಮೋಕ್ಷ’ ಮತ್ತು ಇಂದಿರಾಗಾಂಧಿ ಅವರನ್ನು ಕುರಿತು ಎರಡು ಸಾಕ್ಷ್ಯ ಚಿತ್ರಗಳನ್ನೂ ನಿರ್ಮಿಸಿರುವ ಸೇತೂರಾಂ ಅವರು ಪೌರಾತ್ಯ ಧರ್ಮಗಳಿಗೆ ಸಂಬಂಧಿಸಿದಂತೆ ಬಿಬಿಸಿಗೆ ನಿರ್ಮಿಸಿದ ದಿ‘ ಫೋರ್ಥ್‌ ಸ್ಟೇಜ್‌’ ಎಂಬ ಚಿತ್ರಕ್ಕೆ 1984ರಲ್ಲಿ ಅಮೆರಿಕದ ಗೋಲ್ಡನ್‌ ಈಗಲ್‌ ಪ್ರಶಸ್ತಿಯೂ ಲಭಿಸಿತ್ತು.

ಸಾಹಿತ್ಯ - ಸಂಗೀತಕ್ಕೆ ಸಂಬಂಧಿಸಿದಂತೆ ವಿಮರ್ಶೆ ಲೇಖನ ಬರೆಯುವುದರಲ್ಲಿ ಸಿದ್ಧಹಸ್ತರಾಗಿರುವ ಸೇತೂರಾಂ ಅವರಿಗೆ ರಾಜ್ಯ ಸಂಗೀತ ಅಕಾಡಮಿ, ಪತ್ರಿಕಾ ಅಕಾಡಮಿ, ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಲಭಿಸಿವೆ.

ಸ್ವಾತಂತ್ರ್ಯ ಹೋರಾಟಗಾರರಾಗಿ ಸೆರೆವಾಸವನ್ನೂ ಅನುಭವಿಸಿದ ಸೇತೂರಾಂ ಟಿ.ಪಿ. ಕೈಲಾಸಂ ಅವರ ನಿಕಟವರ್ತಿಯಾಗಿ, ರಂಗಭೂಮಿಯಲ್ಲೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಸುಧಾ ವಾರಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ಆ ವಾರಪತ್ರಿಕೆಯನ್ನು ಜನಪ್ರಿಯಗೊಳಿಸಿದ ಕೀರ್ತಿಯೂ ಸೇತೂರಾಂ ಅವರಿಗೇ ಸಲ್ಲುತ್ತದೆ.

ತೀವ್ರ ಸ್ಪರ್ಧೆ : ಪತ್ರಿಕೋದ್ಯಮದಲ್ಲಿ ಮಹತ್ವದ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರಿಗೆ ಸರಕಾರ ಪ್ರತಿವರ್ಷ ನೀಡುವ ಟಿ.ಎಸ್‌.ಆರ್‌. ಪ್ರಶಸ್ತಿಗೆ ಈಬಾರಿ ಭಾರೀ ಪೈಪೋಟಿಯೇ ಇತ್ತು. ನ್ಯಾಯಮೂರ್ತಿ ಪಿ.ಪಿ. ಬೋಪಣ್ಣ, ಪತ್ರಿಕಾ ಅಕಾಡಮಿ ಅಧ್ಯಕ್ಷ ಗರುಡನಗಿರಿ ನಾಗರಾಜ್‌, ಹಿರಿಯ ಪತ್ರಕರ್ತರಾದ ನಾಗಮಣಿ ಎಸ್‌. ರಾವ್‌, ಟಿಎಸ್‌ಆರ್‌ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಎಂ.ಬಿ. ಸಿಂಗ್‌ ಹಾಗೂ ವಾರ್ತಾ ಇಲಾಖೆಯ ಡಾ. ಡಿ.ವಿ. ಗುರುಪ್ರಸಾದ್‌ (ಮೆಂಬರ್‌ ಸೆಕ್ರೇಟರಿ) ಅವರನ್ನೊಳಗೊಂಡ ಐವರು ಸದಸ್ಯರ ಪ್ರಶಸ್ತಿ ಆಯ್ಕೆ ಸಮಿತಿಯ ಮುಂದೆ 5 ಹೆಸರುಗಳು ಬಂದವು.

ಕನ್ನಡಪ್ರಭ ದಿನಪತ್ರಿಕೆಯ ಸಂಪಾದಕರಾಗಿರುವ ಕೆ. ಸತ್ಯನಾರಾಯಣ (69 ವರ್ಷ), ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ವಿ.ಎನ್‌. ಸುಬ್ಬರಾವ್‌ (69), ಹಿರಿಯ ಪತ್ರಕರ್ತ ಹಾಗೂ ಅಂಕಣಕಾರ ಸಿ.ವಿ. ರಾಜಗೋಪಾಲ್‌ (73), ಉದಯವಾಣಿ ಪತ್ರಿಕೆಯ ಈಶ್ವರಯ್ಯ (64) ಹಾಗೂ 84 ವರ್ಷದ ಸೇತೂರಾಂ ಪೈಕಿ ಯಾರಿಗೆ ಪ್ರಶಸ್ತಿ ಕೊಡಬೇಕು ಎಂಬ ಜಿಜ್ಞಾಸೆ ಆಯ್ಕೆ ಸಮಿತಿಯನ್ನೂ ಕಾಡಿತು.

ಐವರು ಪತ್ರಕರ್ತರೂ ಗಣನೀಯ ಸೇವೆ ಸಲ್ಲಿಸಿದ್ದಾರೆ. ಆದರೆ, ಇಲ್ಲಿ ನಾವು ವಯಸ್ಸನ್ನೂ ಪರಿಗಣಿಸಬೇಕಾಗುತ್ತದೆ ಎಂಬ ತೀರ್ಮಾನಕ್ಕೆ ಬಂದ ಸಮಿತಿಯ ಅಧ್ಯಕ್ಷರು, 84 ವರ್ಷದ ಸೇತೂರಾಂ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದರು.

ಅಭಿನಂದನೆ: ತೀವ್ರ ಸ್ಪರ್ಧೆಯಲ್ಲಿ ಪ್ರಶಸ್ತಿ ಪುರಸ್ಕೃತರಾದ ಸೇತೂರಾಂ ಅವರನ್ನು ಮುಖ್ಯಮಂತ್ರಿ ಕೃಷ್ಣ ಹಾಗೂ ವಾರ್ತಾ ಸಚಿವ ಶಿವಣ್ಣ ಅಭಿನಂದಿಸಿದ್ದಾರೆ.

ಬಾಲಂಗೋಚಿ: ಈ ಬಾರಿ ಪ್ರಶಸ್ತಿ ಸಮಿತಿ ಮುಂದೆ ಬಂದ ಐದೂ ಹೆಸರುಗಳೂ ಬ್ರಾಹ್ಮಣ ಸಮುದಾಯಕ್ಕೇ ಸೇರಿದ್ದಾದ್ದರಿಂದ, ಜಾತಿ ರಾಜಕೀಯದ ಪ್ರಶ್ನೆಯೇ ಉದ್ಭವಿಸಲಿಲ್ಲ.

(ಇನ್‌ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+