ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುನರಪಿ ಜನನಂ

By Staff
|
Google Oneindia Kannada News

ಅತ್ತರೂ ನಕ್ಕರೂ ಒಂದೇ ಥರ ಕಾಣುವ ಹಾಗೂ ಸೋಲು ಗೆಲುವುಗಳನ್ನು ಒಂದೇ ಥರ ಸ್ವೀಕರಿಸಬಲ್ಲ ‘ಸ್ಥಿತಪ್ರಜ್ಞ’ ಎಚ್‌.ಡಿ. ದೇವೇಗೌಡ ಎನ್ನುವ ಈ ವ್ಯಕ್ತಿ ರಾಜಕಾರಣದ ಹೊರತಾದುದನ್ನು ಎಂದಾದರೂ ಗಂಭೀರವಾಗಿ ಮಾತನಾಡಿದುದನ್ನು ನೀವು ಗಮನಿಸಿದ್ದೀರಾ? ರಾಜಕಾರಣವೇ ದೇವೇಗೌಡರ ಅನ್ನ ಹಾಗೂ ಜೀವನ. ಅದು ಅವರ ಶಕ್ತಿ ಮತ್ತು ದೌರ್ಬಲ್ಯವೂ ಹೌದು.

ಮಣ್ಣಿನ ಮಗ ಎಂದು ಹೊಗಳಿಸಿಕೊಂಡಾಗಲೆಲ್ಲ 69 ವರ್ಷದ ಈ ಮನುಷ್ಯ ಮೊರದೊಗಲ ಮೊಗ ಮಾಡಬಲ್ಲ ರು. ಪ್ರಧಾನಿ ಗದ್ದುಗೆಯೇರಿದ ಸಂದರ್ಭದಲ್ಲಿ ತಾವು ‘ಇಂದಿರಾಗಾಂಧಿ ಕುರ್ಚಿ’ ಮೇಲೆ ಕುಳಿತುಕೊಂಡ ಕುರಿತು ಸಂಭ್ರಮ ಪಟ್ಟಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತರೂ, ಧೂಳಿನಿಂದ ಎದ್ದು ಬರುವೆ ಎಂದು ಗುಟುರು ಹಾಕಿದ್ದರು.

ಒಂದೆಡೆ ಸಂಬಂಧಿಕರಿಂದಲೇ ಆ್ಯಸಿಡ್‌ ಎರಚಿಸಿಕೊಂಡು ಮುಖ ಕೆಡಿಸಿಕೊಂಡ ಧರ್ಮಪತ್ನಿ ಚೆನ್ನಮ್ಮ , ಇನ್ನೊಂದೆಡೆ ಹಾದಿರಂಪಕ್ಕಿಳಿದು ಮುಖಕ್ಕೆ ಕೆಸರು ಮೆತ್ತಿಕೊಂಡ ಮಕ್ಕಳು- ದೇವೇಗೌಡರನ್ನು ಇಂಥ ಸಂಗತಿಗಳ್ಯಾವೂ ವಿಚಲಿತಗೊಳಿಸುವುದಿಲ್ಲ . ತಮ್ಮದು ರಾಷ್ಟ್ರೀಯ ಚಿಂತನೆ ಎಂದು ದೇವೇಗೌಡ ನಂಬಿಕೊಂಡಿದ್ದಾರೆ. ಆದ್ದರಿಂದಲೇ ಮನೆವಾರ್ತೆಯನ್ನು ಮರೆತು ದೇಶಾದ್ಯಂತ ಜನರ ಸಂಘಟಿಸಲು ಓಡಾಡುವುದು ಅವರಿಗೆ ಸಾಧ್ಯವಾಗಿದೆ.

ವಿಠಲೇನಹಳ್ಳಿಯಲ್ಲಿ ರೈತರ ನಡುವೆಯಿದ್ದ ಗೌಡ

ಮೊನ್ನೆ ಚನ್ನಪಟ್ಟಣದ ವಿಠಲೇನಹಳ್ಳಿಯಲ್ಲಿ ಪೊಲೀಸರಿಂದ ಗೋಲಿಬಾರ್‌ ನಡೆದು ಇಬ್ಬರು ರೈತರು ಸಾವಿಗೀಡಾದ ಘಟನೆಯನ್ನು ಎಚ್ಚರಿಕೆಯಿಂದ ಗಮನಿಸಬೇಕು. ನೀರಾ ಚಳವಳಿಗೆ ಬೆಂಬಲ ಘೋಷಿಸಿದ್ದ ವಿರೋಧಿ ಮುಖಂಡರಲ್ಲಿ ಬಹುತೇಕರು ಬೆಂಗಳೂರಿನಿಂದಲೇ ಹೇಳಿಕೆಗಳನ್ನು ನೀಡಿ ತೆಪ್ಪಗಾದರು. ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸೌಜನ್ಯಕ್ಕೂ ವಿಠಲೇನಹಳ್ಳಿಗೆ ಭೇಟಿ ನೀಡಲಿಲ್ಲ . ದೇವೇಗೌಡರ ದಾಯಾದಿ ರಾಮಕೃಷ್ಣ ಹೆಗ್ಗಡೆ ಉತ್ತರ ಕರ್ನಾಟಕದ ಮೂಲೆಯಾಂದರಲ್ಲಿ ಕೂತು ಕೃಷ್ಣ ಸರ್ಕಾರವನ್ನು ಖಂಡಿಸಿ ಸುಮ್ಮನಾದರು. ಆದರೆ, ದೇವೇಗೌಡರು ಹಾಗೂ ಅವರ ಪಟಾಲಂ ವಿಠಲೇನಹಳ್ಳಿಯಲ್ಲಿ ಹಾಜರಿತ್ತು . ರೈತರ ನಡುವೆ ನಿಂತ ‘ದೇವೇಗೌಡ’ ಕೃಷ್ಣ ಸರ್ಕಾರವನ್ನು ಯದ್ವಾತದ್ವಾ ಖಂಡಿಸಿದರು. ‘ಸುಮಾರು 108 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡರೂ ಕೃಷ್ಣ ಸುಮ್ಮನಿದ್ದಾರೆ. ನರಗುಂದ ಹಾಗೂ ನವಲಗುಂದದಲ್ಲಿ ನಡೆದ ರೈತರ ಗೋಲಿಬಾರ್‌ ಪ್ರಕರಣ ಅಂದಿನ ಕಾಂಗ್ರೆಸ್‌ ಸರಕಾರದ ಪತನಕ್ಕೆ ಕಾರಣವಾದಂತೆ, ವಿಠಲೇನಹಳ್ಳಿ ಪ್ರಕರಣದಿಂದ ಕೃಷ್ಣ ಸರ್ಕಾರ ಪತನವಾಗಲಿದೆ’ ಎಂದು ಗೌಡ ಘೋಷಿಸಿದರು.

ಕೃಷ್ಣ ಸರ್ಕಾರದ ದುಷ್ಟತನ ಬಯಲಿಗೆಳೆಯಲು ಪಾದಯಾತ್ರೆ

ಗೋಲಿಬಾರ್‌ಗೆ ಬಲಿಯಾದ ಪುಟ್ಟನಂಜಯ್ಯ ಹಾಗೂ ತಮ್ಮಯ್ಯ ಎನ್ನುವ ರೈತರ ತಿಥಿ( ಸೆ.20,ಶನಿವಾರ) ಕಾರ್ಯಕ್ರಮದಲ್ಲೂ ದೇವೇಗೌಡ ಭಾಗವಹಿಸಿದ್ದರು. ಅವರೀಗ ಕೃಷ್ಣ ಸರ್ಕಾರದ ದುಷ್ಟತನವನ್ನು ದೇಶಕ್ಕೆ ತೋರಿಸಿಕೊಡಲು ಕಂಕಣ ತೊಟ್ಟಿದ್ದಾರೆ. ಸೆ.28 ರಿಂದ ವಿಠಲೇನಹಳ್ಳಿಯಿಂದ ಬೆಂಗಳೂರು ಮಹಾತ್ಮಗಾಂಧಿ ರಸ್ತೆಯ ಗಾಂಧಿ ಪ್ರತಿಮೆಯವರೆಗೆ ಪಾದಯಾತ್ರೆ ಕೈಗೊಳ್ಳುವುದಾಗಿ ಗೌಡ ಈ ಸಂದರ್ಭದಲ್ಲಿ ಘೋಷಿಸಿದರು. ವಿಠಲೇನಹಳ್ಳಿಯಿಂದ ಬೆಂಗಳೂರಿಗೆ 80 ಕಿಮೀ. ದಿನಕ್ಕೆ 20 ಕಿಮೀ ನಡೆಯುವ ಉದ್ದೇಶ ಗೌಡರದು. ನವಂಬರ್‌ 1 ರ ರಾಜ್ಯೋತ್ಸವದಂದು ಗಾಂಧಿ ಪ್ರತಿಮೆ ಎದುರು ನಡೆಯುವ ಸಮಾವೇಶದಲ್ಲಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಸಮರದ ಎರಡನೇ ಹಂತದ ರೂಪುರೇಷೆಗಳನ್ನು ಗೌಡ ಪ್ರಕಟಿಸುತ್ತಾರಂತೆ.

ಸರ್ಕಾರದ ವಿರುದ್ಧ ಕಚ್ಚೆ ಕಟ್ಟಿದ ಗೌಡ

ಲೋಕಸಭೆ ಚುನಾವಣೆಯಲ್ಲಿನ ಸೋಲನ್ನು ಅದುಮಿಕೊಂಡು ಕಳೆದ ಎರಡು ವರ್ಷಗಳಿಂದ ಮೌನವಾಗಿ ಪಕ್ಷ ಕಟ್ಟುವುದರಲ್ಲಿ ನಿರತರಾಗಿದ್ದ ದೇವೇಗೌಡ ಏಕಾಏಕಿ ಕೃಷ್ಣ ಸರ್ಕಾರದ ವಿರುದ್ಧ ಸಿಡಿದು ನಿಂತಿದ್ದಾರೆ. ಅವರೇ ಹೇಳುವಂತೆ ಇದುವರೆಗೂ ಸಹನೆಯಿಂದ ಕಾಯುತ್ತಿದ್ದರು.

ದೇವೇಗೌಡ ಇತರ ರಾಜಕಾರಣಿಗಳಿಗಿಂತ ಭಿನ್ನವಾಗುವುದೇ ಇಂಥ ಸಂದರ್ಭಗಳಲ್ಲಿ . ಐಟಿ/ಬಿಟಿ ಬಗ್ಗೆ ಸರ್ಕಾರ ಸದ್ದು ಮಾಡುತ್ತಿದ್ದಾಗ ದೇವೇಗೌಡ ಸುಮ್ಮನಿದ್ದರು. ಅದು ಅವರ ಕ್ಷೇತ್ರವಲ್ಲ . ವಿರೋಧಿ ಮುಖಂಡರು ಸರ್ಕಾರದ ಐಟಿ ಪ್ರೀತಿಯನ್ನು ಬೆಟ್ಟುಮಾಡಿ ಹಳಿಯುತ್ತಿದ್ದರೆ, ದೇವೇಗೌಡ ಸಂಯುಕ್ತ ದಳದ ಮುಖಂಡರುನ್ನು ಹೆಗಡೆ ಅವರಿಂದ ದೂರಮಾಡಿ ಜಾತ್ಯತೀತ ದಳದತ್ತ ಸೆಳೆಯುವ ಪ್ರಯತ್ನದಲ್ಲಿದ್ದರು. ಸರ್ಕಾರದ ವಿರುದ್ಧ ದೇವೇಗೌಡರು ಪಂಚೆ ಎತ್ತಿಕಟ್ಟಲು- ರಾಜ್ಯದಲ್ಲಿ ತಲೆದೋರಿದ ಬರ, ರೈತರ ಆತ್ಮಹತ್ಯೆ, ಪ್ರಬಲಗೊಂಡ ನೀರಾ ಚಳವಳಿ ಹಾಗೂ ವಿಠಲೇನಹಳ್ಳಿಯ ಗೋಲಿಬಾರ್‌ ವೇದಿಕೆಯಾದಗಿಸಿದವು. ಅದನ್ನು ಗೌಡರು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ.

ಗೌಡರೆದುರು ನೆಲಕಚ್ಚಿದ ಇತರ ಮುಖಂಡರು

ನೀರಾ ಚಳವಳಿಯನ್ನು ರೂಪಿಸಿದ್ದು ರಾಜ್ಯ ರೈತಸಂಘ ಎನ್ನುವುದು ಎಲ್ಲರಿಗೂ ಗೊತ್ತು . ಆದರೆ, ವಿಠಲೇನಹಳ್ಳಿ ಪ್ರಕರಣದ ನಂತರ ಚಳವಳಿಯ ಮುಂದಾಳಾಗಿ ದೇವೇಗೌಡ ಪರೋಕ್ಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ರೈತಸಂಘದಂತೆ ದೇವೇಗೌಡರು ನೀರಾ ಚಳವಳಿಗಷ್ಟೇ ಜೋತುಬಿದ್ದಿಲ್ಲ . ಒಟ್ಟಾರೆ ಸರ್ಕಾರವನ್ನು ರೈತ ವಿರೋಧಿ ಎಂದು ವಿರೋಧಿಸುವಷ್ಟರ ಮಟ್ಟಿಗೆ ಅವರ ಚಳವಳಿಯ ಕ್ಯಾನ್ವಾಸ್‌ ದೊಡ್ಡದು.

ಇದೇ ಸಂದರ್ಭದಲ್ಲಿ ದಳ ವಿಲೀನ ಕುರಿತ ವಿಷಯವನ್ನು ನೆನೆಯಬೇಕು. ದೇವೇಗೌಡ ಹಾಗೂ ಸಿದ್ಧರಾಮಯ್ಯ ವಿಲೀನದ ಕುರಿತು ತಮಗೆ ಆಸಕ್ತಿಯೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದರೆ, ಸಂಯುಕ್ತ ದಳದ ಮುಖಂಡರು ವಿಲೀನಕ್ಕಾಗಿ ಹೆಗಡೆ ಅವರ ವಿರುದ್ಧ ಬಂಡೇಳಲೂ ಸಿದ್ಧವಾಗಿದ್ದಾರೆ. ಬಿಜೆಪಿ ನಾಯಕರದು ಇನ್ನೊಂದು ಕಥೆ. ಯಡಿಯೂರಪ್ಪ ಗಂಟಲು ಕಳೆದುಕೊಂಡಿದ್ದರೆ, ಅನಂತಕುಮಾರ್‌ ಆದ್ಯತೆಗಳು ಬೇರೆಯಾಗಿವೆ. ಸೇಡಂ, ಸುರೇಶ್‌ಕುಮಾರ್‌ ಅಂಥವರು ಆಗಾಗ ಸದ್ದು ಮಾಡುತ್ತಿದ್ದರೂ, ಪಕ್ಷದ ಶಕ್ತಿಯೆಲ್ಲ ಶಿವಪ್ಪ ನವರ ನಿರ್ಗಮನದೊಂದಿಗೆ ಕೊನೆಯಾಯಿತೊ ಎನ್ನುವಂತೆ ಬಿಜೆಪಿ ನಿಷ್ಕಿೃಯವಾಗಿದೆ. ಇಂಥ ಸಂದರ್ಭದಲ್ಲಿ ವಿರೋಧಿ ಗಂಟಲನ್ನೆಲ್ಲ ಏಕವಾಗಿಸಿಕೊಂಡ ದೇವೇಗೌಡ ಸರ್ಕಾರದ ವಿರುದ್ಧ ಕಹಳೆ ಮೊಳಗಿಸಿದ್ದಾರೆ.

ಸಮಾವೇಶ, ಶಕ್ತಿಪ್ರದರ್ಶನಗಳನ್ನು ಬಂಡವಾಳವಾಗಿಸಿಕೊಂಡಿದ್ದ ಗೌಡರೀಗ ಪಾದಯಾತ್ರೆಯ ಹುಮ್ಮಸ್ಸಿನಲ್ಲಿದ್ದಾರೆ. ಅವರಿಗೆ ಗಾಂಧೀಜಿಯ ದಂಡಯಾತ್ರೆ ನೆನಪಾಗಿರಬೇಕು. ಪ್ರತಿಭಟಿಸುವುದು ಹಳೆಯದಾದರೂ ಪಾದಯಾತ್ರೆ ಗೌಡರಿಗೆ ಹೊಸತು. ರಾಜಕೀಯದಲ್ಲಿ ಉಳಿಯಬೇಕಾದರೆ ಸುದ್ದಿ ಮಾಡುತ್ತಿರಲೇಬೇಕು ಅನ್ನುವುದು ಗೌಡರಿಗೆ ಗೊತ್ತಿದೆ. ಈ ಹೊಸ ಅವತಾರದಲ್ಲಿ ಕೃಷ್ಣ ಅವರ ನಿದ್ರೆಯನ್ನು ದೇವೇಗೌಡ ಎಷ್ಟರ ಮಟ್ಟಿಗೆ ಕಸಿಯುತ್ತಾರೆನ್ನುವುದು ಕುತೂಹಲದ ವಿಷಯ. ಇಂಥ ಪಾದಯಾತ್ರೆಗಳಿಂದ ರೈತರ ಹಿತಾಸಕ್ತಿ ಸಾಧ್ಯವಾದೀತೆ ಎನ್ನುವ ಪ್ರಶ್ನೆಗಳನ್ನು ಯಾರೂ ಕೇಳಬಾರದು!?

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ವಾರ್ತಾ ಸಂಚಯ

ಅಜ್ಞಾತವಾಸ ಮುಗಿಯಿತು- ದೇವೇಗೌಡ
ರೈತರ ಹಿತಾಸಕ್ತಿ ಕುರಿತು ದೇವೇಗೌಡ ವಕೀಲಿ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X