ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲ್ಲಿ ಯಾರೂ ಅನಿವಾರ್ಯ ಅಲ್ಲ

By Super
|
Google Oneindia Kannada News

ಆಂದೋಲನ ಶುರುವಾಗುತ್ತಿದ್ದಂತೆ ಆನಂದನಿಗೆ ಮತ್ತೊಂದು ಸತ್ಯ ಗೊತ್ತಾಯಿತು. ಆನಂದ ಚಳವಳಿಯಲ್ಲಿಲ್ಲ ಅಂತ ಗೊತ್ತಾದ ತಕ್ಷಣ ಅವನ ಆಪ್ತವರ್ಗಕ್ಕೆ ಸೇರಿದ ಹತ್ತಾರು ಮಂದಿ ಗುಟ್ಟಾಗಿ ಆನಂದನ ಹತ್ತಿರ ಬಂದಿದ್ದರು. ನೀವೇ ಒಂದು ಪರ್ಯಾಯ ಚಳವಳಿ ಆರಂಭಿಸಿ. ನಿಮ್ಮ ನೇತೃತ್ವದಲ್ಲೇ ಆಗಿಹೋಗಲಿ. ನಿಮಗೆ ಅವರ ಜೊತೆ ಭಿನ್ನಾಭಿಪ್ರಾಯ ಇದ್ದರೆ ಬಿಟ್ಟುಬಿಡೋಣ. ನಾವಂತೂ ನಿಮ್ಮ ಜೊತೆಗಿದ್ದೇವೆ. ನೀವು ಬಂದರೆ ಮಾತ್ರ ನಾವು ಚಳವಳಿಯಲ್ಲಿ ಭಾಗವಹಿಸುತ್ತೇವೆ ಅಂತ ಮಾತಾಡಿದ್ದರು. ಅವರಿಗೆ ಆನಂದ ಸ್ಪಷ್ಟವಾಗಿ ಹೇಳಿದ್ದ;

'ನಾನು ಯಾವ ಚಳವಳಿಗೂ ಬರುವುದಿಲ್ಲ. ನನಗೆ ಚಳವಳಿಯ ಬಗ್ಗೆ ಇದ್ದ ನಂಬಿಕೆ ಹೊರಟುಹೋಗಿದೆ. ಈ ಅಬ್ಬರದ ಘೋಷಣೆಗಳಿಂದ, ಈ ಅಭಿಯಾನದಿಂದ, ಈ ಪತ್ರಿಕಾಗೋಷ್ಠಿಗಳಿಂದ, ಈ ಲೇಖನಗಳಿಂದ ಪರಿಸರ ಉಳಿಸುವುದಕ್ಕೆ ಹೊರಡುವುದು ಮೂರ್ಖತನ. ಅದು ಕೂಡ ಒಂದು ಚಟ ಅಷ್ಟೇ. ನನ್ನನ್ನು ಬಿಟ್ಟುಬಿಡಿ."

ಆನಂದ ಮನಸ್ಸು ಬದಲಾಯಿಸುತ್ತಾನೆ ಅಂತ ಅವರೂ ಸಾಕಷ್ಟು ಕಾದಿದ್ದರು. ಸಾಕಷ್ಟು ಸಾರಿ ಬಂದು ವಿಚಾರಿಸಿಕೊಂಡು ಹೋದರು. ಕೊನೆಗೂ ಆನಂದನ ನಿಲುವು ಬದಲಾಗದೇ ಇದ್ದಾಗ ಆತ ತಮಗೆ ನಿರುಪಯೋಗಿ ಅಂತ ಭಾವಿಸಿದರು. ಅದೇ ಹಳೆಯ ಆಂದೋಲನದ ಜೊತೆ ಸೇರಿಕೊಂಡರು.

ಅದನ್ನೇ ಆನಂದ ಯೋಚಿಸುತ್ತಿದ್ದದ್ದು. ಅಂದರೆ . ಈ ಚಳವಳಿಯ ಕಳಕಳಿ ನಿಜವಾದದ್ದಲ್ಲ . ಇದೆಲ್ಲ ಬೋಗಸ್ಸು , ಬೊಗಳೆ. ಹಾಗಂತ ಕೂಗಿ ಹೇಳಬೇಕು ಅನ್ನಿಸಿತು. ಮರುಕ್ಷಣವೇ ತಾನೂ ಇದರಲ್ಲಿ ಇದ್ದವನೇ ಅಲ್ಲವೆ? ತನಗೆ ಜ್ಞಾನೋದಯವಾಗಿರಬಹುದು. ಅದು ಉಳಿವದವರಿಗೂ ಒಂದಲ್ಲ ಒಂದು ದಿನ ಆಗಬಹುದು. ತನ್ನ ಜ್ಞಾನವನ್ನು ಅರಿವನ್ನು ಅವರಿಗೆ ದಾಟಿಸುವುದು ಸಾಧ್ಯ ಅಂತ ನಾನೇಕೆ ಭಾವಿಸಬೇಕು? ಒಂದು ವೇಳೆ ಚಳವಳಿಯಲ್ಲಿದ್ದಾಗ ಯಾರಾದರೂ ಅದರ ನಿರರ್ಥಕತೆಯ ಬಗ್ಗೆ ಮಾತಾಡುತ್ತಿದ್ದರೆ ತಾನು ಅದರಿಂದ ಹಿಂದೆಗೆಯುತ್ತಿದ್ದೆನೆ?

ಹೀಗೆ ಯೋಚಿಸುತ್ತಾ ಕೂತವನಿಗೆ ನೇತ್ರಾವತಿಯ ಜಾಡು ಹಿಡಿದು ಅಲೆದಾಡಿದ್ದು ನೆನಪಾಯಿತು. ಪಶ್ಚಿಮಘಟ್ಟಗಳ ಅದರ ತಪ್ಪಲಿನಲ್ಲಿ ಬೆಳೆದ ಶೋಲಾ ಕಾಡುಗಳ ನಡುವೆ ಒಬ್ಬಂಟಿಯಾಗಿ ತಿರುಗಿದ ಕ್ಷಣಗಳು ಕಣ್ಮುಂದೆ ಬಂದವು. ಚಾರ್ಮಾಡಿ ಘಾಟಿಯನ್ನೇರಿ ಕೊಟ್ಟಿಗೆಹಾರಕ್ಕೆ ಹೋಗಿ ಅಲ್ಲಿಂದ ಕಳಸ ಹಾದಿಯಲ್ಲಿ ಸಾಗಿದರೆ ಸಿಗುವ ಸಂಸೆ ಎಂಬ ಊರು, ಅಲ್ಲಿಂದ ಕೊಂಚ ಮುಂದೆ ಇರುವ ಎಳನೀರು ಘಾಟಿಯಲ್ಲಿ ಹುಟ್ಟುವ ನೇತ್ರಾವತಿ, ಹಾಗೆ ನೋಡಿದರೆ ಕುದುರೆಮುಖದ ಅಂಚಿನಲ್ಲೇ ಹುಟ್ಟುತ್ತದೆ ಅದು. ಅಲ್ಲಿಂದ ಹರಿದು ಬರುವಾಗಷ್ಟೇ ಬಂಡಾಜೆಯ ಜಲಪಾತದ ನೀರು ಅದನ್ನು ಸೇರುವುದು. ಬಂಡಾಜೆ ಅಬ್ಬಿಯೇ ನೇತ್ರಾವತಿಯ ಮೂಲ ಅಂತ ಇವರು ಹೇಗೆ ಹೇಳುತ್ತಾರೆ? ಹಾಗೆ ನೋಡಿದರೆ ಚಾರ್ಮಾಡಿ ಘಾಟಿಯ ಮಧುಗುಂಡಿಯಿಂದ ಬರುವ ಮೃತ್ಯುಂಜಯ ಹೊಳೆ, ಅಲೇಖಾನ್‌ ಹೊರಟ್ಟಿಯಿಂದ ಹೊರಡುವ ಅಣಿಯೂರು ಹೊಳೆ, ಬಾಂಜಾರು ಮಲೆಯಿಂದ ಇಳಿಯುವ ಸುನಾಲಾ ನದಿ, ಇಳಿಮಲೆಯಲ್ಲಿ ಉಗಮಿಸುವ ನೆರಿಯಾ ಹೊಳೆ, ಬೈರಾಪುರ ಘಾಟಿಯಿಂದ ಜಾರುವ ಕಪಿಲಾ ನದಿ, ಉಪ್ಪಿನಂಗಡಿಯಿಂದ ಬೆಂಗಳೂರಿಗೆ ಹೋಗುವ ಹಾದಿಯಲ್ಲಿ ಸಿಗುವ ಶಿರಾಡಿ ಘಾಟಿಯಲ್ಲಿ ಹುಟ್ಟುವ ಕೆಂಪು ಹಳ್ಳ ಎಲ್ಲವೂ ನೇತ್ರಾವತಿಯ ಕವಲುಗಳೇ ಅಲ್ಲವೇ?

ಇವೆಲ್ಲ ಸೇರಿ ಹರಿದು ಬರುವ ನೇತ್ರಾವತಿಯನ್ನೇ ತಾನೇ ಉಪ್ಪಿನಂಗಡಿಯಲ್ಲಿ ಕುಮಾರಪರ್ವತ ಪುಷ್ಪಗಿರಿಯಲ್ಲಿ ಹುಟ್ಟುವ ಕುಮಾರಧಾರಾ ನದಿ ಸೇರುವುದು?

ಇದನ್ನೆಲ್ಲ ದಾಖಲಿಸಬೇಕು. ನೇತ್ರಾವತಿಯ ಮೂಲ ಹುಡುಕುತ್ತಾ ಹೋದ ಅನುಭವವನ್ನು ಬರೆಯಬೇಕು ಎಂದುಕೊಳ್ಳುತ್ತಾ ಆನಂದ ಸೇತುವೆ ಇಳಿದು ಹೋಗಿ ನದಿಯ ನಡುವಿನ ಬಂಡೆಗಲ್ಲಿನ ಮೇಲೆ ಮೈಚಾಚಿದ.

ಮೋಹನ ಮುಂತಾದವರ ಚಿಂತೆಯೇ ಬೇರೆಯಿತ್ತು. ನಿರಂಜನ ಒಂದು ವೇಳೆ ಧುತ್ತೆಂದು ಉಪ್ಪಿನಂಗಡಿಯಲ್ಲಿ ಹಾಜರಾದರೆ ಮಾಡುವುದೇನು? ಅದರಿಂದಾಗುವ ಅವಮಾನಗಳನ್ನು ಹೇಗೆ ಸಹಿಸಿಕೊಳ್ಳುವುದು? ಆಮೇಲೆ ಜನ ನಾವೇನು ಹೇಳಿದರೂ ನಂಬುವುದಿಲ್ಲ. ನಿರಂಜನನ ಕೊಲೆ ತನಿಖೆ ಅನ್ನುವುದೊಂದು ಜೋಕೇ ಆಗಿಹೋಗುತ್ತದೆ.

ಹಾಗಂತ ಆತ ಬರುವುದನ್ನು ತಡೆಯುವ ಶಕ್ತಿ ನಮಗುಂಟಾ? ಅದಕ್ಕೇನು ಉಪಾಯ? ನಾವು ಬರಬೇಡ ಅಂತ ಹೇಳಿದರೆ ಆತ ಬಾರದೇ ಇರುತ್ತಾನಾ? ಅಷ್ಟಕ್ಕೂ ಆತ ಬದುಕಿರುವುದು ಪೂರ್ತಿ ನಿಜವಾ? ಅದೂ ಸುಳ್ಳಿರಬಹುದಾ? ಹೀಗೆ ಚಿಂತಿಸುತ್ತಾ ಕಾಲೇಜಿನ ಮೈದಾನಕ್ಕೆ ತಾಗಿಕೊಂಡಂತಿರುವ ಕಾಂಪೌಂಡಿನ ಮೇಲೆ ಕೂತಿದ್ದ ಮೋಹನ ಮುಂತಾದವರಿಗೆ ತನ್ನ ಕಾರಿನಲ್ಲಿ ರಘುನಂದನ ವೇಗವಾಗಿ ಹೋಗುವುದು ಕಾಣಿಸಿತು. ಮೋಹನ ಕಾಂಪೌಂಡಿನಿಂದ ಛಂಗನೆ ಕೆಳಗೆ ಜಿಗಿದು 'ಏನು" ಅಂತ ಕೇಳಿದ.

ರಘುನಂದನ ಕಾರನ್ನು ಕೊಂಚವೂ ಸ್ಲೋ ಮಾಡದೆ ವೇಗವಾಗಿ ಓಡಿಸಿಕೊಂಡು ಹೋದ. ಕಾರಿನಲ್ಲಿ ಇನ್ನೊಬ್ಬರು ಇದ್ದಂತೆ ಮೋಹನನಿಗೆ ಅನ್ನಿಸಿತು. ಅವರನ್ನು ಎಲ್ಲಿಯೋ ನೋಡಿದ್ದೇನೆ ಅನ್ನಿಸಿತು. ಮರುಕ್ಷಣವೇ ಹೊಳೆಯಿತು. ದೀಪಾ ನರ್ಸಿಂಗ್‌ ಹೋಮಿನ ಡಾಕ್ಟರ್‌ ನಿರ್ಮಲಾ. ಅವರನ್ನು ಈತ ಅದೆಲ್ಲಿಗೆ ಕರೆದೊಯ್ಯುತ್ತಿದ್ದಾನೆ ಅಂತ ಗೊತ್ತಾಗದೆ ಮೋಹನ ಉಳಿದವರ ಮುಖ ನೋಡಿದ. ಅವರ ಮುಖ ಉಪ್ಪಿನಂಗಡಿಯ ಆಕಾಶದಂತೆ ಖಾಲಿಯಿತ್ತು.

English summary
Daily Novel series - episode 87
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X