• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಠದಿಂದ ಸುಬ್ರಹ್ಮಣ್ಯ ಗುರುಗಳ ಕಣ್ಮರೆ

By Super
|

ಇಷ್ಟು ಮಾತಾಡಿದ್ದೇ ಸಾಕು ಎಂಬಂತೆ ಹುಡುಗರು ಎದ್ದು ನಿಂತರು. ಅವರಿಗೂ ಇವೆಲ್ಲದರಿಂದ ಒಂದು ಹೊರದಾರಿ ಬೇಕಿತ್ತು. ಸೀತಾರಾಮನ ಸಾವು ಅದಕ್ಕೊಂದು ನೆಪವಾಗಿ ಪರಿಣಮಿಸಿತು. ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡು ಹುಡುಗರು ಪೊಲೀಸರಿಂದ ಹಿಡಿದು ಕಣ್ಣಿಗೆ ಕಂಡದ್ದನ್ನೆಲ್ಲ ಜಪ್ಪತೊಡಗಿದರು. ಮಾರನೆಯ ದಿನ ಬೆಳ್ಳಂಬೆಳಗ್ಗೆ ಮಂಗಳೂರಿಗೆ ಹೊರಡುವುದಕ್ಕೆಂದು ನಿಂತ ಕೆಂಪು ಬಸ್ಸು , ಆಗಷ್ಟೇ ಸುಳ್ಯದಿಂದ ಜನರನ್ನು ತಂದ ಅಂಬಾಸಡರ್‌ ಕಾರು, ಪಕ್ಕದಲ್ಲೇ ಇದ್ದ ಸಿಂಡಿಕೇಟ್‌ ಬ್ಯಾಂಕು ಎಲ್ಲವನ್ನೂ ಹುಡುಗರು ಚೆಂಡಾಡಿದರು. ಬಸ್ಸು ತನ್ನ ಕಣ್ಣೆದುರೇ ಉರಿದು ಭಸ್ಮವಾಗುವುದನ್ನು ಆನಂದ ನೋಡುತ್ತಾ ನಿಂತುಬಿಟ್ಟ . ಹುಡುಗರನ್ನು ಹದ್ದು ಬಸ್ತಿಗೆ ತರಬೇಕಾಗಿದ್ದ ಇನ್ಸ್‌ಪೆಕ್ಟರ್‌ ಮತ್ತು ಅವನ ಸಿಬ್ಬಂದಿಗಳು ಮಾರಣಾಂತಿಕವಾಗಿ ಗಾಯಗೊಂಡು ಉಳಿದ ಜೀವವನ್ನು ಹೇಗಾದರೂ ಉಳಿಸಿಕೊಂಡೇವು ಎಂದು ಪಕ್ಕದ ಹೊಟೆಲ್ಲಿನೊಳಗೆ ಅಡಗಿಕೂತಿದ್ದರು. ಡಾಕ್ಟರ್‌ ಶರ್ಮ ಅವರಿಗೆ ಅಲ್ಲಿಯೇ ಪ್ರಥಮ ಚಿಕಿತ್ಸೆ ಮಾಡುತ್ತಿದ್ದ.

ಈ ಗಲಾಟೆಯಲ್ಲಿ ಇಡೀ ಸುಬ್ರಹ್ಮಣ್ಯ ಪ್ರಕ್ಷುಬ್ಧವಾಯಿತು. ಪುತ್ತೂರಿನಿಂದ ಮತ್ತಷ್ಟು ಪೊಲೀಸು ಫೋರ್ಸು ಧಾವಿಸಿ ಬಂತು. ಮಂಗಳೂರಿನಿಂದ ಎಸ್ಪಿ ರತನ್‌ಸಿಂಗ್‌ ಬಂದಿಳಿದ. ಆನಂದನ ಜೊತೆ ಅವರೆಲ್ಲರೂ ಸೇರಿ ಮಾತಾಡಿದರು. ಪರ್ಮಿಷನ್ನಿಲ್ಲದೆ ಹೋರಾಟ ಆರಂಭಿಸಲು ನಿರ್ಧರಿಸಿದ್ದು ತಪ್ಪು ಎಂದು ರತನ್‌ಸಿಂಗ್‌ ವಾದಿಸುತ್ತಿದ್ದಂತೆ ಆನಂದ ನಗುತ್ತಾ ಹೇಳಿದ ;

'ಛೇ.. ಛೇ... ಎಂಥ ಮಾತಾಡ್ತೀರಿ ಸಾರ್‌. ಹೋರಾಟ ಮಾಡುವ ಉದ್ದೇಶ ನನಗಂತೂ ಇರಲಿಲ್ಲ . ನಾವೆಲ್ಲ ಕ್ಷೇತ್ರ ದರ್ಶನಕ್ಕೆ ಅಂತ ಬಂದವರು. ಬಂದಾಗ ಇಲ್ಲಿನ ಕಾಡುಗಳಲ್ಲಿ 'ಕುರಂದಕಲ್ಲು" ಎಂಬ ಅಮೂಲ್ಯ ಕಲ್ಲಿಗಾಗಿ ಹುಡುಕಾಟ ನಡೆಯುತ್ತಿರೋದು ಗೊತ್ತಾಯಿತು. ಏನು ನಡೆಯುತ್ತಿದೆ ಅಂತ ಮೊದಲು ಗಮನಿಸೋಣ. ನಂತರ ನಿಧಾನವಾಗಿ ಹೋರಾಟ ನಡೆಸಬೇಕೋ ಬೇಡವೋ ಅನ್ನುವ ತೀರ್ಮಾನಕ್ಕೆ ಬರೋಣ ಅಂತ ನಿರ್ಧರಿಸಿಕೊಂಡು ಬಂದವರು ನಾವು. ಅಷ್ಟರಲ್ಲಿ ಹೀಗಾಯಿತು ನೋಡಿ" ಎಂದು ಇಡೀ ಪ್ರಸಂಗವನ್ನೇ ತಿರುಗಿಸಿಬಿಟ್ಟ . ಸೀತಾರಾಮ ಹೊಳೆಗೆ ಬಿದ್ದು ಸತ್ತ ಜಾಗದಲ್ಲಿ ವರುಷಕ್ಕಿಬ್ಬರು ಸಾಯುತ್ತಾರಂತೆ. ಭಕ್ತಾದಿಗಳು, ಪರವೂರವರು ಬರುವ ಜಾಗ ಇದು. ಸುಳಿಯಿದೆ, ಅಪಾಯ ಅಂತ ಒಂದು ಬೋರ್ಡು ಬರೆಸಿ ಹಾಕುವ ಯೋಗ್ಯತೆ ಇಲ್ಲದ್ದರಿಂದಲ್ಲವೇ ಹೀಗಾದದ್ದು ಅಂತ ಮತ್ತೊಂದು ಬಾಣಬಿಟ್ಟ . ಅವನನ್ನು ಎದುರು ಹಾಕಿಕೊಳ್ಳುವುದು ಒಳ್ಳೆಯದಲ್ಲ ಅಂದುಕೊಂಡು ರತನ್‌ ಗಾಯಗೊಂಡ ಇನ್ಸ್‌ಪೆಕ್ಟರನ್ನು ಆಸ್ಪತ್ರೆಗೆ ಸೇರಿಸಿ, ಡೆಪ್ಯುಟೇಷನ್ನಿಗೆ ಉಪ್ಪಿನಂಗಡಿಯ ಹೊಳ್ಳನಿಗೆ ನೇಮಿಸಿ ಹೊರಟುಹೋದರು.

ಮಾರನೆ ದಿನದ ಪತ್ರಿಕೆಯಲ್ಲಿ ಸುಬ್ರಹ್ಮಣ್ಯದಲ್ಲಿ ನಡೆದ ಹಿಂಸಾಚಾರದ ವರದಿಯಿತ್ತು. ಅದಕ್ಕಿಂತ ದೊಡ್ಡದಾಗಿ ಸೀತಾರಾಮನ ಜಲಪ್ರವೇಶದ ಬಗ್ಗೆ ಲೇಖನವಿತ್ತು. ಪತ್ರಿಕೆಗಳು ಸಂಪಾದಕೀಯದಲ್ಲೂ ಅದನ್ನೇ ಬರೆದಿದ್ದವು. ಈ ಚಳವಳಿಯನ್ನು ಎಲ್ಲರೂ ಬೆಂಬಲಿಸಬೇಕು ಅಂತ ಪತ್ರಿಕೆಗಳೂ ಕರೆಕೊಟ್ಟಿದ್ದವು. ಅಲ್ಲಿಗೆ ಆನಂದನ ಮಾರ್ಗ ಸುಗಮವಾಯ್ತು. ಬೇರೆ ಬೇರೆ ಊರುಗಳಿಂದ ಹೋರಾಟಗಾರರು ಸುಬ್ರಹ್ಮಣ್ಯಕ್ಕೆ ಬಂದು ಇಳಿಯತೊಡಗಿದರು. ಆನಂದನ ಹೋರಾಟದ ಸುದ್ದಿ ತಿಳಿದ ರಘುನಂದನನೂ ಹೊರಟು ಬರಲು ನಿರ್ಧರಿಸಿದ.

ಈ ಮಧ್ಯೆ ಇನ್ನೊಂದು ಅಧ್ವಾನವಾಗಿತ್ತು.

ಸುಬ್ರಹ್ಮಣ್ಯದ ಸ್ವಾಮೀಜಿ ವಿದ್ಯಾನಂದರು ಕಾಣೆಯಾಗಿದ್ದರು. ಆನಂದ ಹುಡುಗರನ್ನೆಲ್ಲ ಕಟ್ಟಿಕೊಂಡು ಸ್ವಾಮೀಜಿಗಳ ಆಶೀರ್ವಾದ ಮತ್ತು ಸಲಹೆ ಪಡೆಯುವುದಕ್ಕೆಂದು ಮಠಕ್ಕೆ ಕಾಲಿಡುವ ಹೊತ್ತಿಗೆ ಅಲ್ಲಿನ ಅಧಿಕಾರಿಗಳೂ ಮೊಕ್ತೇಸರರೂ ತಲೆಮೇಲೆ ಕೈಹೊತ್ತು ಕುಳಿತಿದ್ದರು. ವಿದ್ಯಾನಂದರು ಕಾಣಿಸುತ್ತಿಲ್ಲ ಎಂಬ ಚಿಂತೆಯಲ್ಲಿ ಇಡೀ ಮಠ ವಿಷಣ್ಣವಾಗಿತ್ತು.

'ಕಾಣೋಲ್ಲ ಅಂದರೆ ಏನರ್ಥ? ಎಷ್ಟು ದಿನದಿಂದ ಕಾಣಿಸುತ್ತಿಲ್ಲ ಹೇಳಿ? ಅದ್ಯಾಕೆ ಸುದ್ದಿಯಾಗಿಲ್ಲ" ಎಂದೆಲ್ಲ ಆನಂದ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕತೊಡಗಿದ.

ಗುರುಗಳು ಎಲ್ಲಿಗೆ ಹೋಗಿದ್ದಾರೆ ಅನ್ನುವುದು ಗೊತ್ತಿದ್ದದ್ದು ಅವರ ಗಿಂಡಿಮಾಣಿಗೆ ಮಾತ್ರ. ಅವನು ಅದನ್ನು ಹೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹೇಳಕೂಡದು ಎಂದು ಗುರುಗಳು ತಾಕೀತು ಮಾಡಿದ್ದರು. ಸಾಮಾನ್ಯ ಪರಿಸ್ಥಿತಿಯಲ್ಲಾಗಿದ್ದರೆ ಗುರುಗಳನ್ನು ಮೊಕ್ತೇಸರರಾಗಲೀ, ಮಠದ ಇತರರಾಗಲೀ ಹುಡುಕುತ್ತಿರಲಿಲ್ಲ . ಆದರೆ ಸುಬ್ರಹ್ಮಣ್ಯದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಗುರುಗಳು ಹೇಳಿಕೆ ನೀಡಬೇಕೆಂದು ಕೆಲವು ಪತ್ರಕರ್ತರು ಮಠದ ಆಫೀಸಿನಲ್ಲಿ ಕಾದು ಕುಳಿತಿದ್ದರು. ಗುರುಗಳು ಮಠದಲ್ಲಿಲ್ಲ ಅನ್ನುವುದು ಗೊತ್ತಾದದ್ದೂ ಆಗಲೇ. ಮಠದಲ್ಲಿಲ್ಲ ಅಂತ ಗೊತ್ತಾದ ತಕ್ಷಣ ಒಂದೋ ಮಠದಿಂದ ಫರ್ಲಾಂಗು ದೂರದ ಮೂಲದೇವರ ಸಂಸ್ಥಾನದಲ್ಲೋ, ಒಂದೂವರೆ ಮೈಲಿ ದೂರದ ಮಠದ ಬೀಡಿನಲ್ಲೋ ಇರುತ್ತಾರೆ ಅಂದುಕೊಂಡ ಮೊಕ್ತೇಸರರಿಗೆ ನಿರಾಸೆ ಕಾದಿತ್ತು . ಅವರು ಅಲ್ಲೂ ಇರಲಿಲ್ಲ.

ಆನಂದನ ಎದುರೇ ಮತ್ತೊಮ್ಮೆ ಗಿಂಡಿಮಾಣಿಯ ವಿಚಾರಣೆ ನಡೆಯಿತು. ಆನಂದನ ಪ್ರಶ್ನೆಗಳನ್ನು ಬೆದರಿಕೆಯನ್ನೂ ತಾಳಲಾರದೆ ಗಿಂಡಿಮಾಣಿ ಕೊನೆಗೂ ನಿಜವೇನೆಂದು ಬಾಯಿಬಿಟ್ಟ.

ವಿದ್ಯಾನಂದರು ಸಕಲೇಶಪುರಕ್ಕೆ ಹೋಗಿದ್ದರು. ಹೀಗೆ ತಿಂಗಳಿಗೊಮ್ಮೆ ಬೇಸರವಾದಾಗಲೆಲ್ಲ ಅವರು ಗುಟ್ಟಾಗಿ ಸಕಲೇಶಪುರಕ್ಕೆ ಹೋಗಿಬರುವ ಪದ್ಧತಿ ಇಟ್ಟುಕೊಂಡಿದ್ದರು. ಸಕಲೇಶಪುರದ ಕಾಡನಕುಪ್ಪೆ ಕಾಫಿ ಎಸ್ಟೇಟಿನ ಚಂದ್ರೇಗೌಡರ ಮಗಳು ಭಾರತಿಯನ್ನು ವಿದ್ಯಾನಂದರು ಮೆಚ್ಚಿಕೊಂಡಿದ್ದರು. ಅವರನ್ನು ನೋಡುವುದಕ್ಕೆ ಆಗಾಗ ಹೋಗಿ ಬರುತ್ತಿದ್ದರು.

ಹಾಗಂತ ಗಿಂಡಿಮಾಣಿ ಎಲ್ಲವನ್ನೂ ಹೇಳಿದ. ಹಾಗೆ ಹೇಳುವುದಕ್ಕೆ ಅವನಿಗಿದ್ದ ಧೈರ್ಯ ಎರಡು; ವಿದ್ಯಾನಂದರು ಮರಳಿ ಬಂದರೂ ಸ್ವಾಮಿಯಾಗಿ ಮುಂದುವರಿಯುವುದಿಲ್ಲ ಅನ್ನುವುದು ಮೊದಲನೆಯದು. ಈ ಮಠದಲ್ಲಿ ಉಳಿದುಕೊಂಡು ಜೀವನ ಸಾಗಿಸುವುದು ಸಾಧ್ಯವೇ ಇಲ್ಲ ಅನ್ನಿಸತೊಡಗಿದ್ದು ಮತ್ತೊಂದು.

ಗಿಂಡಿಮಾಣಿ ಅಷ್ಟು ಹೇಳುತ್ತಿದ್ದಂತೆ ಮೊಕ್ತೇಸರರ ಮುಖ ಕಪ್ಪಿಟ್ಟಿತು. ಆನಂದನ ಮುಖಭಾವದಲ್ಲಿ ಅಂಥ ಬದಲಾವಣೆಯೇನೂ ಆಗಲಿಲ್ಲ. ಆನಂದನ ಜೊತೆಗೇ ಇದ್ದ ಪತ್ರಕರ್ತರಿಬ್ಬರು ಖುಷಿಯಲ್ಲಿ ಬೀಗಿದರು. ಇಂಥದ್ದೊಂದು ಸುದ್ದಿ ಸಿಕ್ಕಿದ್ದು ಸೌಭಾಗ್ಯ ಎಂಬಂತೆ ಅವರ ಮುಖ ಕಂಗೊಳಿಸುತ್ತಿತ್ತು . ಆಲ್‌ ಎಡಿಷನ್‌ ಸ್ಟೋರಿ ಎನ್ನುವ ಸಂಭ್ರಮವೂ ಅದನ್ನು ಯಾವಾಗ ಹೋಗಿ ಬರೆದು ಕಳಿಸಿಯೇನೆಂಬ ಆತುರವೂ ಥಕಥಕ ಕುಣಿಯುತ್ತಿತ್ತು.

ಅವರತ್ತ ತಿರುಗಿ ಆನಂದ ಹೇಳಿದ;

'ನಾನು ನಿಮಗಿಂತ ಮೊದಲೆ ಪತ್ರಕರ್ತ. ಆದ್ದರಿಂದ ಹೇಳುತ್ತೇನೆ. ಈ ಸುದ್ದಿ ಎಲ್ಲೂ ಬರಕೂಡದು. ಬಂದರೆ ನಿಮಗೆ ತೊಂದರೆಯಾಗುತ್ತದೆ. ಆದ್ದರಿಂದ ನೀವೇನೂ ಕೇಳಲಿಲ್ಲ ಅಂದುಕೊಂಡು ಸುಮ್ಮನಿರಿ".

ಗಿಂಡಿಮಾಣಿ ನಿರಾಶೆಯಲ್ಲಿ ಆಕಳಿಸಿದ.

English summary
A Kannada novel series to go online on thatskannada.com from 3rd november 2002
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X