Gruha Jyothi: ವಿದ್ಯುತ್ ಬಿಲ್‌ನಲ್ಲಿ ಸಾಕಷ್ಟು ಗೊಂದಲ: ಸಮಸ್ಯೆ ಯಾಕೆ?
ಗೃಹ ಜ್ಯೋತಿ ಯೋಜನೆ ಜುಲೈ 1ರಿಂದ ಜಾರಿಯಾಗಿದ್ದು ಆಗಸ್ಟ್ 1ರಿಂದ ಶೂನ್ಯ ಬಿಲ್ ನೀಡಲಾಗುತ್ತಿದೆ. 200 ಯೂನಿಟ್ ವಿದ್ಯುತ್ ಉಚಿತ ಸಿಗುತ್ತೆ ಎಂದು ಎಣಿಸಿದ್ದ ಜನರಿಗೆ ಸರ್ಕಾರ ನಿಬಂಧನೆ ವಿಧಿಸಿತ್ತು. ಕಳೆದ 12 ತಿಂಗಳ ಸರಾಸರಿ ಯೂನಿಟ್ ವಿದ್ಯುತ್ ಬಳಕೆಯನ್ನು ಆದರಿಸಿ ಅದಕ್ಕೆ ಶೇಕಡಾ 10 ರಷ್ಟು ವಿದ್ಯುತ್ ಮಾತ್ರ ಉಚಿತವಾಗಿ ಸಿಗಲಿದೆ ಎಂದು ಸರ್ಕಾರ ಷರತ್ತು ವಿಧಿಸಿತ್ತು.
ಈಗ ಶೂನ್ಯ ಬಿಲ್ ಬರುತ್ತೆ ಎಂದು ನಿರೀಕ್ಷೆ ಮಾಡಿದ್ದ ಹಲವರಿಗೆ ವಿದ್ಯುತ್ ಬಿಲ್ ಬಂದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಸರಾಸರಿ ವಿದ್ಯುತ್ ಬಳಕೆಯ ಲೆಕ್ಕಾಚಾರವೇ ತಪ್ಪಿದೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಸಾಕಷ್ಟು ಗೊಂದಲ ಉಂಟಾಗಿದೆ.

ವಿದ್ಯುತ್ ಬಿಲ್ ಪಡೆದ ಕೆಲವರು ನಮಗೆ ಹೆಚ್ಚಿನ ಯೂನಿಟ್ ವಿದ್ಯುತ್ ಉಚಿತ ಸಿಗಬೇಕಿತ್ತು, ಬೆಸ್ಕಾಂ ಸರಾಸರಿಗಿಂತ ಕಡಿಮೆ ಲೆಕ್ಕಾಚಾರ ಮಾಡಿದೆ ಎಂದು ವಾದಿಸಿದ್ದಾರೆ. ಇನ್ನೂ ಕೆಲವರು ಚುನಾವಣೆ ಸಂದರ್ಭದಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಎಂದು ಹೇಳಲಾಗಿತ್ತು ಈಗ ಮಾತು ತಪ್ಪಿದೆ ಎಂದು ವಾದಿಸಿದ್ದಾರೆ.
ಗೊಂದಲ ಯಾಕೆ?
ಹಲವು ತಿಂಗಳಿನಿಂದ ಖಾಲಿಯಿದ್ದ ಮನೆಗಳಿಗೆ ಬಂದಿರುವ ಬಾಡಿಗೆದಾರರಿಗೆ ಈ ಯೋಜನೆಯಿಂದ ಹೆಚ್ಚಿನ ಲಾಭವಾಗಿಲ್ಲ. ಮನೆ ಖಾಲಿ ಇದ್ದ ಕಾರಣ ವಿದ್ಯುತ್ ಬಳಕೆ ಆಗಿಲ್ಲ, ಹೊಸದಾಗಿ ಬಂದ ಬಾಡಿಗೆದಾರರಿಗೆ ಸರಾಸರಿ ವಿದ್ಯುತ್ ಬಳಕೆ ಪ್ರಮಾಣ ಕಡಿಮೆಯಾಗಿದ್ದು, ಅದಕ್ಕಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದವರಿಗೆ ಬಿಲ್ ಬಂದಿದೆ.
ಯಾವುದೇ ಗೊಂದಲಗಳಿದ್ದಲ್ಲಿ ಸಮೀಪದ ಬೆಸ್ಕಾಂ ಕಚೇರಿಗೆ ಭೇಟಿ ನೀಡುವಂತೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಮಹಾಂತೇಶ ಬಿಳಗಿ ಮನವಿ ಮಾಡಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿನ ಬಳಕೆಯ ಮಾಹಿತಿಯನ್ನು ನಾವು ಹೊಂದಿದ್ದೇವೆ ಮತ್ತು ಅರ್ಹತಾ ಘಟಕಗಳನ್ನು ಸಂಪೂರ್ಣವಾಗಿ ಅದರ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಜನರು ಹತ್ತಿರದ ಬೆಸ್ಕಾಂ ಕಚೇರಿಗೆ ಭೇಟಿ ನೀಡುವಂತೆ ನಾವು ಒತ್ತಾಯಿಸುತ್ತೇವೆ ಮತ್ತು ಕಾರ್ಯಕ್ರಮದ ವಿಧಾನಗಳು ಮತ್ತು ಅರ್ಹತಾ ಘಟಕಗಳನ್ನು ಹೇಗೆ ಲೆಕ್ಕ ಹಾಕಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮ್ಮ ಅಧಿಕಾರಿಗಳು ಸಹಾಯ ಮಾಡುತ್ತಾರೆ, ಎಂದು ಬಿಳಗಿ ಹೇಳಿದರು.
ಲೆಕ್ಕಾಚಾರ ಹೇಗೆ?
2022-23ರ ಆರ್ಥಿಕ ವರ್ಷದಲ್ಲಿ ಬಳಕೆ ಮಾಡಿದ ವಿದ್ಯುತ್ ಪರಿಗಣಿಸಿ ಅದಕ್ಕೆ ಶೇಕಡಾ 10 ರಷ್ಟು ಹೆಚ್ಚುವರಿ ಉಚಿತ ವಿದ್ಯುತ್ ನೀಡಲಾಗುತ್ತದೆ. ಉದಾಹರಣೆಗೆ: ಕಳೆದ 12 ತಿಂಗಳಿನಲ್ಲಿ ನೀವು ಸರಾಸರಿ 100 ಯೂನಿಟ್ ವಿದ್ಯುತ್ ಬಳಕೆ ಮಾಡಿದ್ದರೆ ಅದಕ್ಕೆ ಶೇಕಡಾ 10 ರಷ್ಟು ಹೆಚ್ಚುವರಿ ಅಂದರೆ 110 ಯೂನಿಟ್‌ವರೆಗೆ ಮಾತ್ರ ಉಚಿಯ ವಿದ್ಯುತ್ ಸಿಗಲಿದೆ. ಅದಕ್ಕಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದಾಗ ಬಳಕೆ ಮಾಡಿದ ಹೆಚ್ಚುವರಿ ವಿದ್ಯುತ್‌ಗೆ ಪಾವತಿ ಮಾಡಬೇಕಾಗುತ್ತದೆ. ಇದು ಸಾಕಷ್ಟು ಜನರಿಗೆ ಗೊಂದಲ ಮೂಡಿಸಿದೆ.












Click it and Unblock the Notifications