ಹೋರಾಟಗಾರನ ಕಣ್ಣಿನಲ್ಲಿ ಮಹದಾಯಿ ಹೋರಾಟದ ಕಥನ

By: ಆನಂದ್ ಜೋಶಿ, ಬೆಂಗಳೂರು
Subscribe to Oneindia Kannada

ರೈತ ಬಂಡಾಯ ಹೆಸರಾದ ಗದಗ ಜಿಲ್ಲೆಯ ನರಗುಂದದಲ್ಲಿ ಮಹದಾಯಿ ನದಿ ನೀರಿಗಾಗಿ ಆ ಭಾಗದ ರೈತಾಪಿ ಜನರು ನಡೆಸುತ್ತಿರುವ ಹೋರಾಟಕ್ಕೆ ಜುಲೈ 17ಕ್ಕೆ ಸರಿಯಾಗಿ ಒಂದು ವರ್ಷ ತುಂಬಲಿದೆ. ಇದೇ ಸಂದರ್ಭದಲ್ಲಿ ಹೋರಾಟದ ಮುಂಚೂಣಿಯಲ್ಲಿರುವ ರೈತನಾಯಕ ಶಂಕರಪ್ಪ ಅಂಬಲಿಯವರನ್ನು ಲೇಖಕರಾದ ಆನಂದ್ ಜೋಶಿಯವರು ಭೇಟಿ ಮಾಡಿದ್ದು, ಮಹದಾಯಿ ನದಿಯ ನೀರಿಗಾಗಿ ನಿರಂತರವಾಗಿ ನಡೆಯುತ್ತಿರುವ ಹೋರಾಟದ ಕಥನವನ್ನು ಹೋರಾಟಗಾರನ ಕಣ್ಣಿನ ಮೂಲಕ ಓದುಗರ ಮುಂದಿಟ್ಟಿದ್ದಾರೆ.

ಮಹದಾಯಿ ಹೋರಾಟದ ಹಿನ್ನೆಲೆ

ಕಳಸಾ ಬಂಡೂರಿ ಯೋಜನೆಯನ್ನು ಮಹದಾಯಿ ಯೋಜನೆ ಎನ್ನಬೇಕೆಂದು ಆಗ್ರಹಿಸುವ ಶಂಕರಪ್ಪ ಅಂಬಲಿಯವರನ್ನು ಭೇಟಿಯಾಗಿ ಮಾತಿಗೆ ಕುಳಿತಾಗ, ಪ್ರವಾಹದಂತೆ ಅಡೆತಡೆಯಿಲ್ಲದೆ ಹೊರಬಂದ ಮಾತುಗಳು, ಮಹದಾಯಿ ನೀರಿಗಾಗಿ ರೈತರು ನಡೆಸುತ್ತಿರುವ ಹೋರಾಟದ ಹಿಂದುಮುಂದುಗಳನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟಿತು.

ರೈತರ ಈ ಹೋರಾಟದ ಸಂಪೂರ್ಣ ಚಿತ್ರಣ ದೊರೆಯಲು ಇತಿಹಾಸದ ಪುಟಗಳನ್ನು ತಿರುಗಿಸುವುದು ಅನಿವಾರ್ಯ. 1908ರಲ್ಲೇ ಮಲಪ್ರಭಾ ನದಿಗೆ ಅಣೆಕಟ್ಟುವ ಯೋಜನೆ ಮಾಡಲಾಗಿತ್ತಾದರೂ ಅರ್ಧಶತಮಾನ ಅದು ಮುಂದುವರೆಯದೆ ತಣ್ಣಗೆ ಮಲಗಿತ್ತು. ಇದೀಗ ಭುಗಿಲೆದ್ದಿರುವ ಈ ಹೋರಾಟದ ಬೀಜ ಅಂದೇ ಅಂಕುರಿಸಿತ್ತು. ಈ ಸರಣಿ ಬರಹದ ಮೂಲಕ ಮಹದಾಯಿ ಹೋರಾಟದ ಬಗ್ಗೆ ತಿಳಿಯೋಣ.

Complete story behind Kalasa Banduri agitation

ಕರ್ನಾಟಕದ ಉತ್ತರದ ಬಯಲುಸೀಮೆಯ ನೆಲ ಕರಿಮಣ್ಣು. ಇಲ್ಲಿ ಮಳೆಯ ಕೊರತೆಯೂ ತೀವ್ರ. ಈ ಭಾಗದಲ್ಲಿ ವ್ಯವಸಾಯವನ್ನು ನಂಬಿ ಬದುಕುತ್ತಿರುವವರೇ ಹೆಚ್ಚು. ಮಳೆರಾಯನನ್ನೇ ನಂಬಿದ ಈ ರೈತರು ಸತತ ಬರಗಾಲದಿಂದ ಬವಣೆ ಅನುಭವಸುತ್ತಿರುವವರು. ಹೀಗಿದ್ದಾಗ ಈ ಭಾಗದ ಜನರ ಬದುಕಲ್ಲಿ ತುಸು ಬೆಳಕು ಮೂಡುವ ಆಸೆ ಹುಟ್ಟಿದ್ದು ಮಲಪ್ರಭಾ ನದಿಗೆ ನವಿಲುಕೊಳ್ಳದಲ್ಲೊಂದು ಅಣೆಕಟ್ಟೆ ಕಟ್ಟಿ ಈ ಭಾಗದ ಬರಡು ನೆಲಕ್ಕೆ ನೀರು ಹರಿಸುವ ಯೋಜನೆ ರೂಪುಗೊಂಡಾಗ.

1962ರಲ್ಲಿ ಶುರುವಾದ ಈ ಅಣೆಕಟ್ಟೆಯ ಮೂಲ ಲೆಕ್ಕಾಚಾರದಲ್ಲಿ 45 ಟಿಎಂಸಿ ನೀರು ಹಿಡಿದುಕೊಳ್ಳಬೇಕಿತ್ತು. ನವಿಲುತೀರ್ಥವೆಂಬಲ್ಲಿ ಹೀಗೆ ಕಟ್ಟಲಾದ ಅಣೆಕಟ್ಟೆಗೆ ರೇಣುಕಾ ಸಾಗರವೆಂದು ಹೆಸರಿಡಲಾಯ್ತು. ಒಂದು ಲಕ್ಷ ತೊಂಬತ್ಮೂರು ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಕರ್ಯ ಒದಗಿಸುವ ಉದ್ದೇಶ ಹೊಂದಿದ್ದ ಈ ಯೋಜನೆ ಕಾರ್ಯಗತವಾಗುವ ಹೊತ್ತಿಗೆ ಯೋಜಿಸಿದ್ದ 47 ಟಿಎಂಸಿ ನೀರಿಗೆ ಬದಲಾಗಿ 37 ಟಿಎಂಸಿ ನೀರನ್ನಷ್ಟೇ ಹಿಡಿದಿಟ್ಟುಕೊಳ್ಳವಷ್ಟು ಸಾಮರ್ಥ್ಯದ ಅಣೆಕಟ್ಟೆ ಇದಾಯಿತು.

ಹೆಸರಾಂತ ನೀರಾವರಿ ಇಂಜಿನಿಯರ್ ಬಾಳೆಕುಂದ್ರಿಯವರು ಈ ಅಣೆಕಟ್ಟೆಯ ನಿರ್ವಹಣಾಧಿಕಾರಿಯಾಗಿದ್ದರು. ಈಗ ಹೂಳು ತುಂಬಿರುವ ಕಾರಣ ಇಂದು ಇದರ ಸಾಮರ್ಥ್ಯ 34 ಟಿಎಂಸಿಯಷ್ಟು ಮಾತ್ರ. ಪಾತ್ರೆ ಎಷ್ಟು ದೊಡ್ಡದಿದ್ದರೇನು? ಹಿಡಿದಿಡಲು ನೀರು ಬೇಕಲ್ಲ! 1973ರಲ್ಲಿ ಪೂರ್ಣಗೊಂಡ ಈ ರೇಣುಕಾ ಸಾಗರ ಅಣೆಕಟ್ಟೆ ಇದುವರೆವಿಗೆ ಪೂರ್ತಿಯಾಗಿ ತುಂಬಿರುವುದು ಬರಿಯ ಮೂರು ಬಾರಿ ಮಾತ್ರ! ಒಂದು ಅಂದಾಜಿನಂತೆ ಇದುವರೆವಿಗೂ ಸುಮಾರು ಐವತ್ತು ಸಾವಿರ ಹೆಕ್ಟೇರ್ ಪ್ರದೇಶಕ್ಕಷ್ಟೆ ನೀರು ಒದಗಿಸಲು ಸಾಧ್ಯವಾಗಿದೆ.

Complete story behind Kalasa Banduri agitation

ಉದ್ದೇಶಿತ 193,000 ಹೆಕ್ಟೇರ್ ಪ್ರದೇಶವನ್ನು ಮುಟ್ಟಲು ಸುಮಾರು 350 ಕಿಮೀ ಕಾಲುವೆಯನ್ನು ಕೂಡಾ ತೋಡಲಾಯಿತು. ಆದರೆ ಬಹುತೇಕ ಜಮೀನುಗಳಿಗೆ ನೀರು ಮಾತ್ರ ಹರಿಯಲೇ ಇಲ್ಲ. ಸರ್ಕಾರ ಈ 193,000 ಹೆಕ್ಟೇರ್ ಪ್ರದೇಶವನ್ನು ನೀರಾವರಿ ಪ್ರದೇಶವೆಂದು ಘೋಷಿಸಿ ಇಲ್ಲಿನ ರೈತರ ಮೇಲೆ ಬೆಟರ್ಮೆಂಟ್ ಲೆವಿ ಎನ್ನುವ ತೆರಿಗೆಯನ್ನು ಕೂಡಾ ಹೇರಿತು. ರೈತರು ನೀರೇ ಬರದೆ ಇದೆಂಥ ಕರವೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿತು, ಪ್ರತಿಭಟನೆ ಮಾಡಿತು.

ಕೊನೆಗೆ ಇತಿಹಾಸ ಪ್ರಸಿದ್ಧವಾದ ನರಗುಂದ ರೈತ ಬಂಡಾಯ ನಡೆದು 21ನೇ ಜುಲೈ 1980ರಲ್ಲಿ ಶ್ರೀ ಈರಪ್ಪ ಬಸಪ್ಪ ಕಡ್ಲಿಕೊಪ್ಪ ಎಂಬ ಯುವಕ ಪೊಲೀಸರ ಗುಂಡಿಗೆ ಬಲಿಯಾಗುವ ಮೂಲಕ ಕರ್ನಾಟಕದಲ್ಲಿ ರೈತ ಚಳವಳಿ ದೊಡ್ಡ ಪ್ರಮಾಣದಲ್ಲಿ ಶುರುವಾಯ್ತು. ಈ ಚಳವಳಿ ಮುಂದೆ ದೊಡ್ಡದಾಗಿ ಬೆಳೆದು ಅಂದಿನ ಕಾಂಗ್ರೆಸ್ ಸರ್ಕಾರವು ಚುನಾವಣೆಯಲ್ಲಿ ಸೋಲುಕಂಡು ರಾಮಕೃಷ್ಣ ಹೆಗ್ಡೆಯವರ ಮುಂದಾಳ್ತನದ ಜನತಾ ಸರಕಾರ ಅಧಿಕಾರಕ್ಕೇರಲು ಕಾರಣವಾಯ್ತು. ಜನತಾ ಸರ್ಕಾರ ರೈತರ ಮೇಲೆ ಹೇರಿದ್ದ ಅನ್ಯಾಯದ ತೆರಿಗೆಯನ್ನು ತೆಗೆದುಹಾಕಿತು. ಆದರೇನು, ರೈತರ ಜಮೀನಿಗೆ ನೀರು ಹರಿಯುವ ಕನಸು, ನನಸಾಗದೆ ಹಾಗೇ ಉಳಿಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Fight for Mahadayi river by North Karnataka people is about to complete one year. Kalasa Banduri Nala Project has been stopped as the matter is before water dispute tribunal. At this juncture, Anand G explains how the project and dispute originated after speaking to Shankarappa Ambali, who is spearheading the fight for drinking water.
Please Wait while comments are loading...