Coconut Price Hike: ತೆಂಗಿನಕಾಯಿ & ಕೊಬ್ಬರಿಗೆ ಬಂತು ಬಂಗಾರದ ಬೆಲೆ, ಪ್ರತಿ ಕ್ವಿಂಟಲ್‌ಗೆ ಎಷ್ಟಿದೆ ?
Coconut Price Hike: ಕರ್ನಾಟಕದಾದ್ಯಂತ ತೆಂಗಿನಕಾಯಿ ಹಾಗೂ ಕೊಬ್ಬರಿ ಸೇರಿದಂತೆ ತೆಂಗಿನ ಉತ್ಪನ್ನಗಳಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದಲೂ ಹವಾಮಾನದಲ್ಲಿ ಭಾರೀ ವೈಪರೀತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ತೆಂಗು ಬೆಳೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಹೀಗಾಗಿ, ತೆಂಗಿನ ಕಾಯಿಯ ಬೆಲೆಯು ಗಗನ ಮುಖಿಯಾಗಿದೆ. 77 ವರ್ಷಗಳಲ್ಲೇ ದಾಖಲೆಯ ಬೆಲೆ ಬಂದಿದೆ. ಯಾವುದರ ಬೆಲೆ ಎಷ್ಟಿದೆ ಎನ್ನುವುದನ್ನು ನೋಡೋಣ.
2023ರ ಹವಾಮಾನದಲ್ಲಿ ಭಾರೀ ಬದಲಾವಣೆ ಆಗುತ್ತಿರುವುದರಿಂದ ತೆಂಗಿನಕಾಯಿ ಬೆಲೆಯು ಭಾರೀ ಇಳಿಕೆ ಕಂಡಿದೆ. ತೆಂಗಿನಕಾಯಿ ಮತ್ತು ಅದರ ಉತ್ಪನ್ನಗಳಾದ ಕೊಬ್ಬರಿ, ತೆಂಗಿನ ಎಣ್ಣೆ ಹಾಗೂ ತೆಂಗಿನ ಚಿಪ್ಪು ಮತ್ತು ಇದ್ದಿಲಿಗೆ ಬಂಗಾರದ ಬೆಲೆ ಬಂದಿದೆ. ತುಮಕೂರು ಜಿಲ್ಲೆಯ ತಿಪಟೂರು ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ)ಯಲ್ಲಿ ಕೊಬ್ಬರಿ ಬೆಲೆಯು ಪ್ರತಿ ಕ್ವಿಂಟಲ್‌ಗೆ ಬರೋಬ್ಬರಿ 31,606 ರೂ. ತಲುಪಿದೆ. ಈ ಬೆಲೆಯು 77 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು ಎಂದು ಹೇಳಲಾಗಿದೆ. ಇನ್ನು ಕಳೆದ ವರ್ಷ ಜುಲೈನಲ್ಲಿ ಕೊಬ್ಬರಿ ಬೆಲೆಯು ಪ್ರತಿ ಕ್ವಿಂಟಲ್‌ಗೆ 9,000 ರೂಪಾಯಿಗಳಿಂದ 9,500 ರೂ.ಗಳವರೆಗೆ ಇತ್ತು.

ತೆಂಗು ಬೆಳಗಾರರಿಗೆ ಬಂಪರ್: ಇನ್ನು ಈ ಬಾರಿ ತೆಂಗು ಬೆಳಗಾರರಿಗೆ ಬಂಪರ್ ಬಂದಿದೆ ಎಂದೇ ಹೇಳಬಹುದು. ಬಹಳ ವರ್ಷಗಳ ನಂತರ ತೆಂಗು ಬೆಳೆದ ಬೆಳೆಗಾರರು ತಮ್ಮ ಬೆಳೆಗೆ ಬಂಗಾರದ ಬೆಲೆಯನ್ನು ನೋಡುತ್ತಿದ್ದಾರೆ. ಈ ಬಾರಿ ಮಾರುಕಟ್ಟೆಗೆ ತೆಂಗು ಬರುವುದು ಸಹ ಭಾರೀ ಇಳಿಕೆ ಕಂಡಿದೆ. ಕೊಬ್ಬರಿಯ ಪ್ರಮಾಣ ಹಾಗೂ ತೆಂಗಿನಕಾಯಿ ಕೊಯ್ಲು ಈ ಬಾರಿ ಬರೋಬ್ಬರಿ ಶೇ 50ಕ್ಕೂ ಹೆಚ್ಚು ಕುಸಿತ ಕಂಡಿದೆ ಎಂದು ಅಂದಾಜಿಸಲಾಗಿದೆ. ವ್ಯಾಪಾರಿಗಳ ಪ್ರಕಾರ ಶೇ 50 ರಷ್ಟು ಹಾಗೂ ತೋಟಗಾರಿಕೆ ಇಲಾಖೆಯ ಪ್ರಕಾರ ಅಂದಾಜು ಶೇ 20ರಷ್ಟು ಬೆಳೆ ಕಡಿತವಾಗಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ DH ವರದಿ ಮಾಡಿದೆ.
ಕಳೆದ ವರ್ಷ ತಾಪಮಾನ ಏರಿಕೆಯಿಂದಾಗಿ ತೆಂಗಿನಕಾಯಿ ಬೆಲೆ ಪ್ರತಿ ಕಾಯಿಗೆ 60 ರೂಪಾಯಿಗೂ ಹೆಚ್ಚಾಗಿತ್ತು. ಈ ಬಾರಿಯೂ ತೆಂಗಿನ ಕಾಯಿ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಬರ ಮತ್ತು ಹೆಚ್ಚುತ್ತಿರುವ ತಾಪಮಾನವು ಬಿಳಿ ನೊಣ, ಕಪ್ಪು ತಲೆಯ ಮರಿಹುಳು ಮತ್ತು ಘೇಂಡಾಮೃಗದ ಜೀರುಂಡೆ ಸೇರಿದಂತೆ ವಿವಿಧ ಕೀಟನಾಶಕಗಳ ಬಳಕೆಯಿಂದಾಗಿ ತೆಂಗಿನ ಇಳುವರಿಯ ಮೇಲೆ ಭಾರೀ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.
ತುಮಕೂರು, ಮಂಡ್ಯ, ಹಾಸನ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ತೆಂಗಿನ ಬೆಳೆಯನ್ನು ಹೆಚ್ಚು ಬೆಳೆಯಲಾಗುತ್ತದೆ. ಈ ಪ್ರದೇಶಗಳಲ್ಲಿ ಕೀಟಗಳು ಹಾಗೂ ಹವಾಮಾನದ ಪರಿಣಾಮವಾಗಿ ಬರೋಬ್ಬರಿ ಶೇ 30ರಷ್ಟು ಇಳುವರಿ ಕಡಿಮೆಯಾಗಿದೆ. ಈ ಜಿಲ್ಲೆಗಳಲ್ಲಿ ತೆಂಗಿನಕಾಯಿ ಕೃಷಿಯ ಪ್ರದೇಶವು ಶೇ 76% ರಷ್ಟಿದೆ. ಒಟ್ಟು ತೆಂಗಿನಕಾಯಿ ಉತ್ಪಾದನೆಯ ಬರೋಬ್ಬರಿ ಶೇ 68% ರಷ್ಟಿದೆ ಎಂದು ವರದಿಯಾಗಿದೆ.












Click it and Unblock the Notifications