ಮೈದುಂಬಿ ಧುಮ್ಮಿಕ್ಕುತಿಹ ಅಬ್ಬಿ ಫಾಲ್ಸ್‌ನತ್ತ ಪ್ರವಾಸಿಗರ ದೌಡು

By: ಬಿಎಂ ಲವಕುಮಾರ್, ಮಡಿಕೇರಿ
Subscribe to Oneindia Kannada

ಮಡಿಕೇರಿ ಜಿಲ್ಲೆಯಾದ್ಯಂತ ಮಳೆ ಬಿರುಸುಗೊಂಡಿದ್ದು, ಬೇಸಿಗೆಯಲ್ಲಿ ಮಳೆಯಿಲ್ಲದ ಸೊರಗಿದ ಅಬ್ಬಿ ಜಲಪಾತ ಮೈಕೈ ತುಂಬಿಕೊಂಡ ವಯ್ಯಾರಿಯಂತೆ ಕಂಗೊಳಿಸುತ್ತಿದ್ದು, ಇದೀಗ ಈ ಸುಂದರ ದೃಶ್ಯವನ್ನು ನೋಡಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.

ಕೊಡಗಿನಲ್ಲಿ ಹಲವಾರು ಜಲಪಾತಗಳಿದ್ದರೂ, ಕೆ.ನಿಡುಗಣೆ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ಅಬ್ಬಿ (ಅಬ್ಬೇ) ಜಲಪಾತ, ಮಡಿಕೇರಿಗೆ ಸಮೀಪವಿರುವುದರಿಂದ ಪ್ರಮುಖ ಪ್ರವಾಸಿ ತಾಣವಾಗಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಧುಮ್ಮಿಕ್ಕಿ ಬೀಳುವ ನೀರಿನ ಹರಿವನ್ನು ನೋಡುವುದೇ ಒಂದು ಆನಂದ.

ಹಾಗೆ ನೋಡಿದರೆ ಮಡಿಕೇರಿಯಲ್ಲಿ ಮಳೆ ಸುರಿದರೆ ಅಬ್ಬಿ ಜಲಪಾತ ಭೋರ್ಗರೆಯುವುದು ಸಹಜ. ಅದಕ್ಕೆ ಕಾರಣವೂ ಇದೆ. ಮಡಿಕೇರಿಯಲ್ಲಿ ಬಿದ್ದ ಮಳೆ ನೀರೆಲ್ಲಾ ಒಟ್ಟಾಗಿ ಹರಿದು ಈ ಜಲಪಾತವನ್ನು ಸೇರುತ್ತದೆ. ಇದೀಗ ಮಳೆ ಬಿರುಸುಗೊಂಡಿರುವುದರಿಂದ ಅಬ್ಬಿ ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಹೆಬ್ಬಂಡೆ ಮೇಲಿಂದ ಧುಮುಕುವ ಸುಂದರ ದೃಶ್ಯ ನೋಡುಗರ ಮನ ತಣಿಸುತ್ತಿದೆ. [ಚಾರಣಿಗರನ್ನೂ, ಆಸ್ತಿಕರನ್ನೂ ಸೆಳೆಯುವ ಕುಂದಬೆಟ್ಟ]

ವಿಶಾಲ ಬಂಡೆಗಳ ನಡುವೆ ಸುಮಾರು ಎಂಬತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತಾ ತನ್ನ ವೈಭವವನ್ನು ಪ್ರದರ್ಶಿಸುವ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬ. ಅಬ್ಬಿ ಜಲಪಾತ ನೋಡಲು ಹೋಗುವುದು ಹೇಗೆ, ಏನೇನು ವ್ಯವಸ್ಥೆಗಳಿವೆ ಎಂಬುದನ್ನು ತಿಳಿಯಲು ಮುಂದಿನ ವಿವರಗಳನ್ನು ಓದಿರಿ. [ಬಳುಕುತ ಭೋರ್ಗರೆಯುತ್ತಿರುವ ಇರ್ಪು ಜಲಧಾರೆ]

ನಡೆದೇ ಹೋಗುವುದಾದರೆ ಅದರ ಮಜಾವೇ ಬೇರೆ

ನಡೆದೇ ಹೋಗುವುದಾದರೆ ಅದರ ಮಜಾವೇ ಬೇರೆ

ಮಡಿಕೇರಿಯಿಂದ ಸುಮಾರು 8 ಕಿ.ಮೀ. ದೂರದಲ್ಲಿ ಅಬ್ಬಿ ಜಲಪಾತವಿದೆ. ಈ ಜಲಪಾತವನ್ನು ನೋಡಲು ತೆರಳುವವರಿಗೆ ಮಡಿಕೇರಿಯಿಂದ ಜಲಪಾತದವರೆಗೆ ಯಾವುದೇ ಬಸ್ ಸೌಕರ್ಯವಿಲ್ಲ. ಹಾಗಾಗಿ ಮಡಿಕೇರಿಯಿಂದ ಬಾಡಿಗೆಗೆ ಆಟೋ, ಜೀಪು ಅಥವಾ ಸ್ವಂತ ವಾಹನಗಳಲ್ಲಿ ತೆರಳಬಹುದು. ನಡೆದೇ ಹೋಗುವುದಾದರೆ ಅದರ ಮಜಾವೇ ಬೇರೆ...

ತೋಟದ ನಡುವೆ ನಡೆಯುತ್ತಿದ್ದರೆ...

ತೋಟದ ನಡುವೆ ನಡೆಯುತ್ತಿದ್ದರೆ...

ಅಂಕುಡೊಂಕಾದ ರಸ್ತೆಯಲ್ಲಿ ಕಾಡು, ಕಾಫಿ, ಏಲಕ್ಕಿ ತೋಟದ ನಡುವೆ ಹೆಜ್ಜೆ ಹಾಕುತ್ತಾ ಮುನ್ನಡೆಯುತ್ತಿದ್ದರೆ ದಾರಿ ಸಾಗುವುದೇ ಗೊತ್ತಾಗುವುದಿಲ್ಲ. ಇನ್ನೇನು ಕೆಲವೇ ಕಿ.ಮೀ. ಅಂತರಗಳಲ್ಲಿ ಜಲಪಾತ ಇದೆ ಎನ್ನುವುದು ಭೋರ್ಗರೆಯುವ ಸದ್ದಿಗೆ ಗೊತ್ತಾಗಿ ಬಿಡುತ್ತದೆ. ಗುಡ್ಡದಲ್ಲಿ ತೋಟದ ನಡುವೆ ರಭಸದಿಂದ ಭೋರ್ಗರೆಯುತ್ತಾ ಹರಿಯುವ ನದಿ ನಮಗೆ ರಸ್ತೆಯಿಂದಲೇ ಕಾಣಸಿಗುತ್ತದೆ.

ಕಿವಿಗೆ ಅಪ್ಪಳಿಸುವ ಭೋರ್ಗರೆತದ ದನಿ

ಕಿವಿಗೆ ಅಪ್ಪಳಿಸುವ ಭೋರ್ಗರೆತದ ದನಿ

ಅಲ್ಲಿಂದ ಮುಂದೆ ಇಳಿಜಾರು ರಸ್ತೆಯಲ್ಲಿ ಸಾಗಿದರೆ ನಮಗೆ ಸಮತಟ್ಟಾದ ವಾಹನ ನಿಲುಗಡೆಯ ಸ್ಥಳ ಕಾಣಸಿಗುತ್ತದೆ. ಅಲ್ಲಿಂದ ಎಡಕ್ಕೆ ಕಾಫಿ ತೋಟದ ಮಧ್ಯೆ ನಡೆಯುತ್ತಾ ಹೋದರೆ ಜಲಪಾತದ ಭೋರ್ಗರೆತ ಕಿವಿಗೆ ಬಡಿಯುತ್ತದೆ. ಆ ನಂತರ ಕೆಳಕ್ಕೆ ಮೆಟ್ಟಿಲುಗಳನ್ನು ಇಳಿಯುತ್ತಾ ಹೋದರೆ ಅಬ್ಬಿ ಜಲಪಾತದ ಸನಿಹಕ್ಕೆ ಹೋಗಬಹುದು.

ಜೆಸ್ಸಿ ಫಾಲ್ಸ್ ಎಂದಿದ್ದರು ಬ್ರಿಟಿಷರು

ಜೆಸ್ಸಿ ಫಾಲ್ಸ್ ಎಂದಿದ್ದರು ಬ್ರಿಟಿಷರು

ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿಗೆ ಭೇಟಿ ನೀಡಿದ ಬ್ರಿಟೀಷರು ಇದರ ಸೌಂದರ್ಯವನ್ನು ನೋಡಿ ಆನಂದಪಟ್ಟು ಕೊಡಗಿನ ಪ್ರಥಮ ಧರ್ಮಗುರುಗಳ ಮಗಳು ಜೆಸ್ಸಿಯ ಹೆಸರನ್ನು ಈ ಫಾಲ್ಸ್‌ಗೆ ಇಟ್ಟು ಜೆಸ್ಸಿ ಫಾಲ್ಸ್ ಎಂದು ಕರೆದಿದ್ದರು.

ಮಡಿಕೇರಿ ತೊರೆ, ಮುತ್ತಾರ್‌ಮುಟ್ಟು ತೊರೆ

ಮಡಿಕೇರಿ ತೊರೆ, ಮುತ್ತಾರ್‌ಮುಟ್ಟು ತೊರೆ

ಹಿಂದಿನ ಕಾಲದಲ್ಲಿ ಸ್ಥಳೀಯರು ಇದನ್ನು ಮಡಿಕೇರಿ ತೊರೆ, ಮುತ್ತಾರ್‌ಮುಟ್ಟು ತೊರೆ ಎಂದು ಕರೆಯುತ್ತಿದ್ದರು ಎನ್ನಲಾಗಿದೆ. ಕೊಡವ ಭಾಷೆಯಲ್ಲಿ ಅಬ್ಬಿ ಎಂದರೆ ತೊರೆ ಎಂದರ್ಥ. ಕೊಡವ ಭಾಷೆಯ ಅಬ್ಬಿ ಇಂದು ಅಬ್ಬಿ ಫಾಲ್ಸ್ ಆಗಿದೆ. (ಫೋಟೋ ಕೃಪೆ : ಅಭಿಜಿತ್ ಸಾಠೆ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Monsoon is picking up in Madikeri district. Abbey or Abbi falls, which is one of the finest and beautiful falls in Madikeri distict, is attracting tourists from all over India including Karnataka. It is a fun to trek to reach the destination.
Please Wait while comments are loading...