• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆತ್ಮದ ಜೊತೆ ಸಂಭಾಷಣೆ : ಹೀಗೂ ಉಂಟೇ?

By Prasad
|

ಆತ್ಮ ಎಂದರೇನು? ಆತ್ಮಗಳ ಅಸ್ತಿತ್ವದ ಬಗ್ಗೆ ನಿಮಗೆ ನಂಬಿಕೆ ಇದೆಯಾ? ಇದ್ದರೂ ಅಷ್ಟೇ ಇಲ್ಲದಿದ್ದರೂ ಅಷ್ಟೆ, ಮುಂದಿನ ಕಥೆಯನ್ನು ತಪ್ಪದೆ ಓದಿರಿ. ಏಕೆಂದರೆ, ಕಥೆಯ ವಸ್ತುವೇ ಹಾಗಿದೆ. ಕ್ಷಣಕಾಲ ನಿಮ್ಮನ್ನು ನಿಬ್ಬೆರಗಾಗಿಸುತ್ತದೆ, ತಬ್ಬಿಬ್ಬು ಕೂಡ ಮಾಡುತ್ತದೆ. ಈ ಜಗತ್ತೇ ಒಂದು ವಿಸ್ಮಯದ ಲೋಕ. ಏನಾದರೊಂದು ವಿಸ್ಮಯಕರ ಘಟನೆಗಳು ಸಂಭಿವಿಸುತ್ತಲೇ ಇರುತ್ತವೆ. ಕೆಲವು ತರ್ಕಕ್ಕೇ ನಿಲುಕುವುದಿಲ್ಲ, ಕೆಲವಕ್ಕೆ ವೈಜ್ಞಾನಿಕ ತಳಹದಿಯಲ್ಲಿ ಉತ್ತರ ಕಂಡುಕೊಳ್ಳಲು ಯತ್ನಿಸಿದರೂ ಉತ್ತರ ಸಿಕ್ಕುವುದಿಲ್ಲ.

A conversation with soul

ಇಂಥ ಒಂದು ತರ್ಕಕ್ಕೆ ನಿಲುಕದ, ನಂಬಲು ತುಸು ಕಷ್ಟವೇ ಅನಿಸುವ ದಂಪತಿಗಳ ವಿಶಿಷ್ಟ ಪ್ರೇಮಕಥೆಯನ್ನು ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ 'ಹೀಗೂ ಉಂಟೇ' ಕಾರ್ಯಕ್ರಮದಲ್ಲಿ ವೈ.ಎ.ನಾರಾಯಣಸ್ವಾಮಿ ಅವರು ಹರಿಯಬಿಟ್ಟಿದ್ದಾರೆ. ಪ್ರತಿ ಭಾನುವಾರ ದೇವರು, ದಿಂಡರು, ಭೂತ, ಪ್ರೇತಗಳು, ನಂಬಿಕೆ, ಅಪನಂಬಿಕೆಗಳ ಸುತ್ತ ಹುಟ್ಟಿಕೊಳ್ಳುವ ವಿಶಿಷ್ಟಬಗೆಯ ಕಥೆಗಳನ್ನು ತಿಳಿಸುವ ಹೀಗೂ ಉಂಟೇ... ಈ ಬಾರಿ ಆತ್ಮದ ಕಥೆ ಮಾತ್ರವಲ್ಲ, ಒಂದು ವಿಸ್ಮಯಕಾರಿ ಪ್ರೇಮಕಥೆಯನ್ನು ಜನರ ಮುಂದಿಟ್ಟಿದ್ದಾರೆ. ಈ ಸತ್ಯ ಕಥೆಯನ್ನು ನಂಬಿದ್ರೆ ನಂಬಿ ಬಿಟ್ರೆ ಬಿಡಿ. ಆದರೆ, ಈ ಪ್ರೇಮಕಥೆಯನ್ನು ಮಾತ್ರ ಓದಲು ಮರೆಯಬೇಡಿ.

ಕುಮಾರ್ ಮತ್ತು ವಾಣಿ ಒಬ್ಬರನ್ನೊಬ್ಬರು ಪ್ರೀತಿಸಿ, ಹಿರಿಯರ ಪ್ರತಿರೋಧವನ್ನು ಧಿಕ್ಕರಿಸಿ ಮದುವೆಯಾಗಿ ಪ್ರೇಮಕ್ಕೆ ಜೈ ಎಂದ ದಿಟ್ಟ ಪ್ರೇಮಿಗಳು. ಇಬ್ಬರು ಎರಡು ದೇಹ ಮತ್ತು ಒಂದು ಆತ್ಮ ಎಂಬಂತೆ ಬಾಳ್ವೆ ನಡೆಸುತ್ತಿದ್ದರು. ತನ್ನ ಗಂಡನನ್ನು ವಿಪರೀತ ಪ್ರೀತಿಸುತ್ತಿದ್ದ ಹೆಂಡತಿ ಮನೆಯವರನ್ನು ಕರೆಯುತ್ತಿದ್ದುದೇ 'ಪುಟ್ಟಣ್ಣ' ಅಥವಾ 'ಚಿನ್ನಾ' ಎಂದು. ಗಂಡನೂ ಅಷ್ಟೇ ಹೆಂಡತಿಯ ಕಣ್ಣಲ್ಲಿ ಒಂದು ಹನಿ ನೀರು ಕೂಡ ಬರದಂತೆ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಅಪ್ಪಿತಪ್ಪಿ ಉದುರಿದರೂ ಅಷ್ಟೆ, ಕಣ್ಣೀರ ಹನಿ ಕಪಾಳದಿಂದ ನೆಲಕ್ಕೆ ಬೀಳುವ ಮುನ್ನ ಕೈಯಲ್ಲಿ ಹಿಡಿದು ತಾವೇ ಕುಡಿಯುತ್ತಿದ್ದರು.

ಇವರಿಬ್ಬರ ಪ್ರೇಮ ಕೋಲಾರದಲ್ಲಿ ಚಿಗುರೊಡೆದಿತ್ತು. ಆದರೆ, ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದು ವಾಸವಿದ್ದರು. ಕ್ರಮೇಣ ಹಿರಿಯರ ಆಶೀರ್ವಾದವೂ ದೊರೆಯಿತು. ಜೋಡಿಗಳಿದ್ದರೆ ಹೀಗಿರಬೇಕು ಎಂಬಷ್ಟರ ಮಟ್ಟಿಗೆ ಅವಿನಾಭಾವದಿಂದ ದಾಂಪತ್ಯ ಸಾಗಿತ್ತು. ಆ ವಿಧಿಯ ಲೀಲೆ ಬೇರೆಯದೇ ಆಗಿತ್ತು. ಅದೇನಾಯಿತೋ ಏನೋ ಕುಮಾರ್ ಹೊಟ್ಟೆಯಲ್ಲಿ ಜಠರ ಮತ್ತು ಅನ್ನನಾಳದ ನಡುವೆ ಗಂಟು ಕಾಣಿಸಿಕೊಂಡಿತು. ಒಂದು ಬಾರಿ ಶಸ್ತ್ರಚಿಕಿತ್ಸೆಯಾದರೂ ಗಂಟು ಮತ್ತೆ ಕಾಣಿಸಿಕೊಂಡು ಕುಮಾರ್‌ರನ್ನು ಹಿಂಡಿ ಹಿಪ್ಪೆ ಮಾಡಿಬಿಟ್ಟಿತು.

ವೈದ್ಯರೂ ಕಡೆಗೆ ಕೈಚೆಲ್ಲಿದಾಗ ಜೀವನವನ್ನು ಅತಿಯಾಗಿ ಪ್ರೀತಿಸುತ್ತಿದ್ದ ದಂಪತಿಗಳಿಬ್ಬರು ಮೊರೆ ಹೋಗಿದ್ದು ಬ್ರಹ್ಮಕುಮಾರಿ ಆಶ್ರಮಕ್ಕೆ. ಅಲ್ಲಿಯ ಭಜನೆಗಳು, ಉಪನ್ಯಾಸಗಳು, ಆಧ್ಯಾತ್ಮಿಕ ಶಿಬಿರಗಳು ಅವರಿಬ್ಬರ ಮನಸಿಗೆ ಅಗತ್ಯವಾಗಿ ಬೇಕಿದ್ದ ನೆಮ್ಮದಿಯನ್ನು ದಕ್ಕಿಸಿಕೊಟ್ಟವು. ಸಾವಿನ ಬಾಗಿಲನ್ನು ಇನ್ನೇನು ತಟ್ಟಲಿದ್ದೇನೆ ಎಂದು ಹೆದರಿ ಕಂಗಾಲಾಗಿದ್ದ ಕುಮಾರ್ ಕ್ರಮೇಣ ಆಧ್ಯಾತ್ಮದಲ್ಲಿ ಮುಳುಗಿಬಿಟ್ಟರು. ಅನೇಕ ಪುಸ್ತಕಗಳನ್ನು ಓದಲು ಪ್ರಾರಂಭಿಸಿದರು. ಸಾವು ಬಂದರೆ ಬರಲಿ ಧೈರ್ಯವಾಗಿ ಎದುರಿಸುತ್ತೇನೆ ಎಂಬ ಮನೋಭಾವವನ್ನು ಬೆಳೆಸಿಕೊಂಡರು.

ಕಡೆಗೆ, ಒಂದೇ ಆತ್ಮದಂತಿದ್ದ ಅವರಿಬ್ಬರನ್ನು ಅಗಲಿಸುವ ಆ ದಿನ ಬಂದೇಬಿಟ್ಟಿತು. ಕುಮಾರ್ ತಮ್ಮ ದೇಹವನ್ನೇನೋ ತೊರೆದರು? ಆದರೆ ಅವರ ಆತ್ಮ? ಆ ಆತ್ಮಕ್ಕೆ ತನ್ನ ಸಂಗಾತಿಯನ್ನು ಬಿಟ್ಟಿರಲು ಹೇಗೆ ಸಾಧ್ಯ? ಒಂದು ದಿನ ಕುಮಾರ್ ಪ್ರೇಮದ ದ್ಯೋತಕವಾಗಿ ಹಾಗೇ ಇರಿಸಿಕೊಂಡಿದ್ದ ಮೊಬೈಲಿನಿಂದ ವಾಣಿ ಮೊಬೈಲಿಗೆ ಕರೆ ಬಂದೇಬಿಟ್ಟಿತು. ಅಚ್ಚರಿಯ ಸಂಗತಿಯೆಂದರೆ, ಕುಮಾರ್ ಮೊಬೈಲ್ ಮತ್ತೆಲ್ಲೂ ಯಾರ ಬಳಿಯೂ ಇರಲಿಲ್ಲ, ಅದು ವಾಣಿಯವರ ಮೊಬೈಲ್ ಪಕ್ಕದಲ್ಲಿಯೇ ಬೆಚ್ಚಗೆ ಕುಳಿತಿತ್ತು. ವಾಣಿಗೆ ಇದನ್ನು ನಂಬಲೇ ಆಗಲಿಲ್ಲ. ಕರೆ ಸ್ವೀಕರಿಸಿದರು. ಅತ್ತಕಡೆಯಿಂದ ಯಾವುದೇ ದನಿಯಿಲ್ಲ. ಆದರೆ, ಜುಯ್ ಅಂತ ತಂಗಾಳಿಯ ನಿನಾದ ಕಿವಿಗೆ ಅಪ್ಪಳಿಸಲು ಪ್ರಾರಂಭಿಸಿತು.

ಮೊಬೈಲ್ ಕೆಟ್ಟಿರಬಹುದೆಂದು ಎಣಿಸಿದ ವಾಣಿಗೆ ಮತ್ತೆ ಅಚ್ಚರಿ ಕಾದಿತ್ತು. ಆಗಾಗ ಕರೆ ಬರುತ್ತಲೇ ಇರುತ್ತಿತ್ತು, ತಂಗಾಳಿಯ ಹಿತವಾದ ಶಬ್ದ ಜುಯ್ ಅಂತ ಕಿವಿಯನ್ನು ಚುಂಬಿಸುತ್ತಲೇ ಇತ್ತು. ಆ ಶಬ್ದ ಕೇಳಿದಾಗ ವಾಣಿಯವರಿಗೆ ಏನೋ ಒಂದು ರೀತಿಯ ಅನಿರ್ವಚನೀಯ ಸಂತಸ ಉಕ್ಕಿಬರುತ್ತಿತ್ತು. ಒಂದು ಕ್ಷಣ ವಾಣಿಯವರಿಗೆ ಜಂಘಾಬಲವೇ ಉಡುಗಿಹೋದಂತೆ ಭಾಸವಾಯಿತು. ಇದೇ ಜಗತ್ತಿನಲ್ಲಿ ಇದ್ದೇನಾ, ಮತ್ತಾವುದಾದರೂ ಜಗತ್ತಿಗೆ ಪಯಣ ಬೆಳೆಸಿದ್ದೇನಾ ಎಂದು ತಮ್ಮನ್ನೇ ಚಿವುಟಿಕೊಂಡು ನೋಡಿದರು. ಕಡೆಗೆ ಖಡಾಖಂಡಿತವಾಗಿ ಅವರಿಗೆ ಅನಿಸಿದ್ದೇನೆಂದರೆ, ಅದು ಮತ್ತಾರ ಕರೆಯೂ ಅಲ್ಲ, ತನ್ನ ಮುದ್ದಿನ ಪುಟ್ಟಣ್ಣನದೇ.

ವಾಣಿ ಸಂತಸಕ್ಕೆ ಪಾರವೇ ಇರಲಿಲ್ಲ. ಗಂಡ ಪಕ್ಕದಲ್ಲಿ ಇಲ್ಲದಿದ್ದರೂ ಮನದಿಂದ ಮರೆಯಾಗಿಲ್ಲ, ದೇಹ ದೂರವಾಗಿದ್ದರೂ ಆತ್ಮ ದೂರವಾಗಿಲ್ಲ ಎಂದು ಅನಿಸಲು ಪ್ರಾರಂಭಿಸಲು ಆರಂಭಿಸಿತು. ತಮಗನಿಸಿದಾಗಲೆಲ್ಲ ಆತ್ಮದ ಜೊತೆ ಸಂಭಾಷಿಸಲು ವಾಣಿ ಆರಂಭಿಸಿದರು. ಯಾವುದೇ ತೊಂದರೆಗೆ ಸಿಲುಕಿದಾಗಲೆಲ್ಲ ಗಂಡ ಆತ್ಮದಿಂದ ಪರಿಹಾರ ದೊರೆಯಲು ಶುರುವಾಯಿತು. ಒಂದು ಬಿಳಿ ಹಾಳೆಯ ಮೇಲೆ ಮಧ್ಯದಲ್ಲಿ ವೃತ್ತ ಬರೆದು, ಅದರಲ್ಲಿ ಒಂದು ರುಪಾಯಿ ನಾಣ್ಯವಿಟ್ಟು, ಸಮಸ್ಯೆಗಳನ್ನು ಸಾಂಕೇತಿಕವಾಗಿ ಬರೆದು, ಸಂಭಾವ್ಯ ಪರಿಹಾರಗಳನ್ನು ಹಾಳೆಯಲ್ಲಿ ಸಂಖ್ಯೆ, ಅಕ್ಷರಗಳ ರೂಪದಲ್ಲಿ ಬರೆದು, 'ಪುಟ್ಟಣ್ಣ, ಹೀಗಿದೆ ಸಮಸ್ಯೆ' ಎಂದು ಹೇಳಿದಾಗ, ನಾಣ್ಯದ ಮೇಲೆ ಇಟ್ಟ ಬೆರಳು ತಾನಾಗಿಯೇ ಖಚಿತ ಪರಿಹಾರದತ್ತ ಸಾಗಲು ಶುರುವಿಟ್ಟಿತು.

ಇಹಲೋಕದಲ್ಲಿರುವ ವಾಣಿ ಮತ್ತು ಇಹಲೋಕ ತ್ಯಜಿಸಿರುವ ಅವರ ನಡುವಿನ ಅತಿನವ್ಯ, ರಸಕಾವ್ಯ, ಮಧುರಾ ಮಧುರಾ ಮಧುರವಾದ 'ಆತ್ಮ'ಕಥೆ ಹೀಗೇ ಸಾಗಿದೆ. ಸಾವಿನಾಚೆಯೂ ಒಂದು ಅದ್ಭುತ ಲೋಕ ಇದೆ ಎಂದು ಬಲ್ಲವರು ಹೇಳುತ್ತಾರೆ. ದೇಹಕ್ಕೆ ಸಾವಿದ್ದರೂ ಆತ್ಮಕ್ಕೆ ಸಾವಿಲ್ಲ ಎನ್ನುತ್ತಾರೆ. ಆದರೆ, ನೆನಪಿನಲ್ಲಿರಲಿ ಇದು ದೇಹ, ಆತ್ಮ ಮತ್ತು ಮನಸಿಗೆ ಸಂಬಂಧಿಸಿದ ವಿಷಯ ಮಾತ್ರವಲ್ಲ, ಭಾವನೆಗೆ ಸಂಬಂಧಿಸಿದ ವಿಷಯ. ನೀವು ಏನು ಹೇಳುತ್ತೀರಿ? ನಿಮಗೂ ಇಂತಹ ಅಲೌಕಿಕ ಅನುಭವ ಆಗಿದೆಯೆ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಪ್ರೀತಿ ಪ್ರೇಮ ಸುದ್ದಿಗಳುView All

English summary
Human interest story : This is an unusual story of a couple who lived like two bodies one soul. This is love story you might never heard of. A married woman says, she converses with spirit of her departed beloved husband through mind. Believe it or not.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more