ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯ ಸಮ್ಮೇಳನ ಜಾತ್ರೆಯೋ ಸಂತೆಯೋ?

By * ದ.ಕೋ.ಹಳ್ಳಿ ಚಂದ್ರಶೇಖರ, ಚಿತ್ರದುರ್ಗ
|
Google Oneindia Kannada News

KSP president Nallur Prasad
ಹಿರಿಯ ಸಾಹಿತಿ ಎಲ್ ಬಸವರಾಜು ಅವರ ಅಧ್ಯಕ್ಷತೆಯ 75 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಿತ್ರದುರ್ಗ ಸಕಲ ರೀತಿಯಿಂದ ಸಜ್ಜುಗೊಂಡಿದೆ. ಈ ಸಂದರ್ಭದಲ್ಲಿ ಕನ್ನಡಸಾಹಿತ್ಯ ಪರಿಷತ್ತಿನ ರಾಜ್ಯಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಅವರೊಡನೆ ಕುಶಲ ಸಂಭಾಷಣೆ.

1. ಸಮ್ಮೇಳನ ಜಾತ್ರೆಯೋ ಸಂತೆಯೋ?
ಸಾಹಿತ್ಯ ಸಮ್ಮೇಳನವನ್ನು ಜಾತ್ರೆ ಎಂದು ಕರೆದರೆ ತಪ್ಪಿಲ್ಲ. ಹಾಗೆ ನಡೆದರೂ ತೊಂದರೆಯಿಲ್ಲ. ಜಾತ್ರೆಯಂತೆಯೇ ನಡೆಯಬೇಕು. ನೆನಪಿರಲಿ, ಇದು ಕನ್ನಡದ ಜಾತ್ರೆ; ಮಹಾಜಾತ್ರೆ. ಜಾತ್ರೆಯಲ್ಲಿ ಜೀವಂತಿಕೆ, ಸಡಗರ, ಸಂಭ್ರಮ ಇರುತ್ತದೆ. ಸಾಹಿತ್ಯ ಜಾತ್ರೆಯಲ್ಲಿ ಭಾಷೆಯ ಬಗೆಗಿನ ಮಮತೆ, ಆಪ್ತತೆ ತುಂಬಿಕೊಂಡಿರುತ್ತದೆ. ಜೀವಂತಿಕೆ, ಸಂಭ್ರಮವಿಲ್ಲದ ಬದುಕು ಬದುಕೇ?

2. ಇಂತಹ ಜಾತ್ರೆಗಳು ಎಂದೆಂದಿಗೂ ಪಸ್ತುತವೇ?
ನೋಡಿ. ಈ ಜಾತ್ರೆಯಲ್ಲಿ ಅಕಾಡೆಮಿಕ್ ಜನರೇ ಅಲ್ಲದೆ, ಬೇರೆಯವರು ಭಾಗವಹಿಸುತ್ತಾರೆ. ನಾನಾ ಕ್ಷೇತ್ರಗಳ ಸಹೃದಯರು ತೊಡಗಿಸಿಕೊಳ್ಳುತ್ತಾರೆ. ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಗೃಹಿಣಿಯರು, ನೌಕರರು ಎಲ್ಲರೂ ಬರುತ್ತಾರೆ. ಕನ್ನಡ ನಾಡು ನುಡಿ ಬಗ್ಗೆ ತುಂಬು ಅಭಿಮಾನ, ಪ್ರೀತಿ ಪ್ರದರ್ಶಿಸುತ್ತಾರೆ. ಅವುಗಳನ್ನೇ ಕಟ್ಟಿಕೊಳ್ಳುತ್ತಾರೆ. ಅಂದಹಾಗೆ, ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಹಿತದ ಬಗ್ಗೆ ಎಲ್ಲರೂ ಧ್ವನಿ ಎತ್ತುವಂತಾಗಿರುವುದು
ಈ ಜಾತ್ರೆಗಳಿಂದಲೇ.

3. ಸಾಹಿತ್ಯ ಸಮ್ಮೇಳನ ಎಷ್ಟು ಪ್ರಭಾವಕಾರಿ?
ಈ ನಲ್ಲೂರು ಪ್ರಸಾದ್ ರೂಪುಗೊಂಡಿದ್ದೇ ಸಮ್ಮೇಳನಗಳಿಂದ. ಸಮ್ಮೇಳನಗಳನ್ನು ನೋಡುತ್ತಾ ಅನುಭವಿಸುತ್ತಾ ಬೆಳೆದಿದ್ದೇನೆ. ನನ್ನ ಹಾಗೆ ಲಕ್ಷಾಂತರ ಜನರು ಪ್ರೇರಣೆಗೊಳಗಾಗಿದ್ದಾರೆ. ಸಾಹಿತ್ಯ, ಅದರ ಪರಿಷತ್ತು ಹಾಗೂ ಸಮ್ಮೇಳನದ ಶಕ್ತಿಯೇ ಹಾಗೆ.

4.ಸಮ್ಮೇಳನವು ಉಪಯೋಗಕಾರಿ ಚರ್ಚಾವೇದಿಕೆ ಆಗಲಿದೆಯೇ ?

ಗಂಭೀರ ವಿಷಯಗಳ ಜತೆಗೆ ಸಮಕಾಲೀನ ಸಮಸ್ಯೆಗಳಿಗೂ ಆದ್ಯತೆ ನೀಡಿ ಶ್ರೀಸಾಮಾನ್ಯನಿಗೂ ಅನುಕೂಲವಾಗುವಂತಹ ಚಿಂತನ-ಮಂಥನ ಸಮ್ಮೇಳನದಲ್ಲಿ ನಡೆಯುವುದು. ಚಿತ್ರದುರ್ಗದಲ್ಲೂ ಭಯೋತ್ಪಾದನೆ, ಕೃಷಿ, ಜಾಗತಿಕ ಆರ್ಥಿಕ ಕುಸಿತ ಮತ್ತಿತರ ಸಮಕಾಲೀನ ವಿಷಯಗಳಿಗೆ ಆದ್ಯತೆ ನೀಡಲಾಗಿದೆ. ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದು. ಒಂದು ಬಾರಿ ಬಂಡಾಯವಾದರೆ ಮತ್ತೊಂದು ಬಾರಿ ಇನ್ನೊಂದು ವಿಷಯಕ್ಕೆ ಅವಕಾಶ ಕಲ್ಪಿಸುವುದು ಸಮ್ಮೇಳನದ ಇತಿಮಿತಿ.

5. ನಿರ್ಣಯಗಳ ವಿಷಯದಲ್ಲಿ ಈ ಬಾರಿ ನಿರ್ಣಾಯಕ ಘಟ್ಟ ತಲುಪುವಿರಾ ?
ನಾಡಿನ ಜನರ ಬದುಕು ಹಸನು ಮಾಡುವ 2 ರಿಂದ 3 ನಿರ್ಣಯಗಳನ್ನು ಮಾತ್ರ ಈ ಬಾರಿ ಕೈಗೊಳ್ಳುವಂತೆ ಪರಿಷತ್ ಕಾರ್ಯಕಾರಿ ಸಮಿತಿಯನ್ನು ಮನವೊಲಿಸಲಾಗುವುದು. ಈ ನಿರ್ಣಯಗಳ ಅನುಷ್ಠಾನಕ್ಕೆ ಸರಕಾರದ ಮೇಲೆ ಒತ್ತಡ ಹೇರಲಾಗುವುದು.

(ಸ್ನೇಹ ಸೇತು: ವಿಜಯಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X