ಗೋಕರ್ಣದಲ್ಲಿ ಮೀನುಗಸಿಗೂ ಸಂಚಕಾರ

* ವಿನಾಯಕ ಎಲ್ ಪಟಗಾರ, ಬೆಟ್ಕುಳಿ. ಕುಮಟಾ
ನಮ್ಮೂರು ಬೆಟ್ಕುಳಿ. ಗೋಕರ್ಣದಿಂದ ಹದಿನೈದು ಕಿಲೋಮೀಟರ್ ದೂರದಲ್ಲಿ, ರಾಷ್ಟ್ರೀಯ ಹೆದ್ದಾರಿ 17 ಅಕ್ಕ-ಪಕ್ಕದಲ್ಲಿ ಪೂರ್ವದಲ್ಲಿ ಪಶ್ಚಿಮ ಘಟ್ಟಗಳು ಸಾಲು ಮತ್ತು ಪಶ್ಚಿಮದಲ್ಲಿ ಗಜನಿ ಭೂಮಿಗಳ ನಡುವೆ ಇರುವ ಚಿಕ್ಕದಾದ ಹಳ್ಳಿಯೇ ನಮ್ಮೂರು. ನಮ್ಮೂರಿನಲ್ಲಿ ಈ ದಶಕದಿಂದ ಉಂಟಾಗುತ್ತಲಿರುವ ಬದಲಾವಣೆಗಳ ಕಥೆಯ ಮೂಲ ಕಾರಣ ಈ ಗಜನಿ ಭೂಮಿ.
ಸಮುದ್ರದ ಹಿನ್ನೀರಿನಿಂದ ಉಂಟಾದ ಭೂಮಿಯೇ ಗಜನಿ ಭೂಮಿ. ಈ ಗಜನಿ ಭೂಮಿ ಜೀವ ವೈವಿಧ್ಯತೆಗಳ ತಾಣ. ಈ ಭೂಮಿಯಲ್ಲಿ ಬೆಳೆಯುವ ಕಗ್ಗ ಜಾತಿಯ ಭತ್ತ ವಿಶಿಷ್ಟ ರುಚಿಯದಾಗಿದೆ. ಉದ್ದುದ್ದ, ದಪ್ಪವಾಗಿರುವ ಕಗ್ಗದ ಭತ್ತದ ಕುಚ್ಚಿಗೆ ಅನ್ನ, ಮತ್ತು ಮೀನಿನ ಸಾರಿನ ಕಾಂಬಿನೇಷನ್, ಇದರ ಮುಂದೆ ಯಾವುದೇ ಪಂಚತಾರಾ ಹೊಟೆಲಿನಲ್ಲಿ ಸಿಗುವ ಸೊನಾಮಸೂರಿ ಅಕ್ಕಿಯ ಪದಾರ್ಥವನ್ನು ನಿವಾಳಿಸಿ ಒಗೆಯಬೇಕು.
ಉಪ್ಪು ನೀರು ಮತ್ತು ಸಿಹಿ ನೀರಿನ ಮಿಶ್ರಣದ ಈ ಗಜನಿ ಭೂಮಿಯ ಚಿಕ್ಕ ಚಿಕ್ಕ ಹಳ್ಳ-ಕೊಳ್ಳಗಳಲ್ಲಿ ಸಿಗುವ ವಿವಿಧ ಜಾತಿಯ ಏಡಿ, ಕಾಯ್ ಶೆಟ್ಲಿ, ಬಿಳಿ ಶೆಟ್ಲಿ, ಬೊಂಡೆಕಾನ್ ಶೆಟ್ಲಿ, ಮೊದಲಾದ ವೈವಿಧಮಯ ಸಿಗಡಿಗಳು, ಕಾಂಗ್ಲಸಿ, ಮಡ್ಲಿ, ಮಂಡ್ಲಿ, ಕುರ್ಡಿ, ವಡಚ್ಲಿ, ಮಂಗಣಿ, ಮುಂತಾದ ಬಣ್ಣ ಬಣ್ಣದ, ವಿವಿಧ ಆಕಾರದ ವಿಭಿನ್ನ ರುಚಿಯುಳ್ಳ ಮೀನುಗಳು, ಚಿಪ್ಪಿಕಲ್ಲು, ಕಲ್ಲಗ ಮೊದಲಾದ ಮೃದ್ವಂಗಿಗಳು ಹೀಗೆ ಹಲವಾರು ಗಜನಿ ನೀರಿನ ಜೀವವೈವಿಧ್ಯಗಳು ಕರಾವಳಿಯ ಜನಸಾಮನ್ಯರ, ಬಡವರ, ಪೌಷ್ಟಿಕಾಂಶಗಳುಳ್ಳ ಶ್ರೀಮಂತ ಭೋಜನಗಳು.
ತುಂಬಾ ಹೆಚ್ಚೇನಲ್ಲ. ಏಳು ಏಂಟು ವರ್ಷಗಳ ಹಿಂದಿನ ವಾತಾವರಣ. ನಮ್ಮೂರಿನ ರೈತರಿಗೆ, ಮಣ್ಣನ್ನು ಪ್ರೀತಿಸುವ ಸಾಮಾನ್ಯ ಜನಕ್ಕೆ ಬಡವರಿಗೆ ಮೀನಿಗಾಗಿ ಪ್ರತ್ಯೇಕ ಬಜೆಟ್ ತೆಗೆದಿರಿಸುವ ಪ್ರಮೇಯವೇ ಇರಲಿಲ್ಲ. ಮಧ್ಯಾಹ್ನನೋ ಸಂಜೆ ವೇಳೆ ಅಡಿಗೆ ಮನೆಯಿಂದ ಇವತ್ತು ಸಾರಿಗೆ ಏನು ಪದಾರ್ಥ ಇಲ್ಲ ಎನ್ನುವ ಗೊಣಗಾಟ ಕೇಳಿ ಬಂದರೆ ಯಜಮಾನ ಇಗೋ ಸ್ವಲ್ಪ ಹೊತ್ತಿನಲ್ಲಿ ಬಂದೆ ಮೀನು ಸಾರಿಗೆ ಮಸಾಲೆ ಅರೆದಿಡು ಎನ್ನುತ್ತ ಮೀನು ಹಾಕುವ ಕೊಕ್ಕೆ ಹಿಡಿದುಕೊಂಡು ಕಣ್ಣ ಅಳತೆಯಷ್ಟು ದೂರದಲ್ಲಿ ಕಾಣುವ ಗಜನಿಭೂಮಿಯಲ್ಲಿರುವ ಚಿಕ್ಕ ಚಿಕ್ಕ ಹಳ್ಳ-ಕೊಳ್ಳಗಳಲ್ಲಿ ಇಳಿದು ವಿವಿಧ ಜಾತಿಯ ಮೀನುಗಳನ್ನು ಹಿಡಿದುಕೊಂಡು ಬರುತ್ತಿದ್ದ. ಹೀಗೆ, ನಮ್ಮೂರಿನ ರೈತರ ದಿನನಿತ್ಯದ ಬದುಕು ಗಜನಿ ಭೂಮಿಯಲ್ಲಿ ಪ್ರಾರಂಭವಾಗಿ ಅಲ್ಲಿಯೇ ಕೊನೆಗೊಳುತ್ತಿತ್ತು.
ಮಳೆಗಾಲದಲ್ಲಿ ಗಜನಿಭೂಮಿಯಲ್ಲಿರುವ ಗದ್ದೆಗಳಲ್ಲಿ ಕಗ್ಗ ಜಾತಿಯ ಭತ್ತದ ಬೀಜಗಳನ್ನು ಕೇವಲ ಬಿತ್ತಿದ್ದರೆ ಸಾಕಿತ್ತು. ಅದ್ಭುತ ಫಸಲನ್ನೆ ನೀಡುತ್ತಿತ್ತು. ಗಜನಿಯಲ್ಲಿ ಹಳ್ಳ-ಕೊಳ್ಳಗಳಲ್ಲಿ ಬೆಳೆಯುತ್ತಿದ್ದ ಹಣ್ಣೆ ಜಾತಿಯ ಹುಲ್ಲು ದನಗಳಿಗೆ ಉತ್ತಮ ಮೇವುಗಳಾಗಿದ್ದವು. ಈ ಜಾತಿಯ ಹುಲ್ಲುಗಳನ್ನು ಬೇಸಿಗೆಯಲ್ಲಿ ಒಣಗಿದಾಗ ದನಗಳಿಗೆ ಹಾಸಲು, ಗೊಬ್ಬರಕ್ಕೆ ಬಳಸುತ್ತಿದ್ದರು. ಹೀಗೆ ರೈತರ, ಮೀನುಗಾರರ ಸಂತೃಪ್ತ, ಆರೋಗ್ಯಯುತ, ಹಿತಕರ, ಜೀವನಕ್ಕೆ ಬೇಕಾದದ್ದನ್ನು ನೀಡುತ್ತ ಗಜನಿ ಭೂಮಿ ಒಂದು ರೀತಿ ಕಾಮಧೇನು ಆಗಿತ್ತು ಎಂದರೆ ಅತೀಶೋಯಕ್ತಿಯಲ್ಲ.
ದಿನಕೊಂದು ಚಿನ್ನದ ಮೊಟ್ಟೆ ಇಡುವ ಕೊಳಿಯಂತಾಗಿದ್ದ ಗಜನಿ ಭೂಮಿಯ ಮೇಲೆ ಯಾವಾಗ ಜಾಗತೀಕರಣದ ವಕ್ರ ದೃಷ್ಟಿ ಬಿತ್ತೊ ಗಜನಿ ಭೂಮಿಯ ಅವಸಾನ ಶುರುವಾಯಿತು. ಬಹುಶಃ ನಮ್ಮೂರಿಗೆ ಮೊದಲ ಜಾಗತೀಕರಣದ ಬಿಸಿ ತಟ್ಟಿದ್ದು ಗಜನಿ ಭೂಮಿಯ ಮುಖಾಂತರ. ಗಜನಿ ಭೂಮಿಯಲ್ಲಿ ಹೈಬ್ರಿಡ್ (ಅಮೇರಿಕನ್ ಸಿಗಡಿ) ಸಿಗಡಿ ಬೆಳೆಯುತ್ತೇವೆ. ನಿಮ್ಮ ಭೂಮಿಗೆ ಪ್ರತಿವರ್ಷ ಹೆಕ್ಟೇರಿಗೆ 20ರಿಂದ 30 ಸಾವಿರ ದುಡ್ಡು ಕೊಡುತ್ತೇವೆ ಎಂದು ಹೇಳುತ್ತ ಬಂದ ದುಡ್ಡಿನ ಧಣಿಗಳು ಯಾರೂ ಕರಾವಳಿವರಲ್ಲಾ. ವರ್ಷವಿಡೀ ಬೆವರು ಹರಿಸಿ ದುಡಿದರೂ ಸಾವಿರ ರೂಪಾಯಿ ಕಾಣಲಿಕ್ಕೂ ಕಷ್ಟ ಪಡುತ್ತಿದ್ದ ರೈತರು ದುಡ್ಡಿನ ಧಣಿಗಳ ಆಕರ್ಷಕ ಪ್ಯಾಕಜಿಗೆ ಮರುಳಾಗಿ ಹಿಂದೆ-ಮುಂದೆ ನೋಡದೆ ನಾಲ್ಕೈದು ವರ್ಷಗಳ ಮಟ್ಟಿಗೆ ಸಿಗಡಿ ಬೆಳೆಯಲು ತಮ್ಮ ಗಜನಿ ಭೂಮಿಯನ್ನು ಕೊಟ್ಟರು.
ದುಡ್ಡಿನ ಧಣಿಗಳು ಸಿಗಡಿ ಉದ್ಯಮಕ್ಕೆ ಅನೂಕುಲವಾಗುವಂತೆ ಗಜನಿ ಭೂಮಿಯನ್ನು ಸಮತಟ್ಟು ಮಾಡತೊಡಗಿದ್ದರು. ರೈತರಿಗೆ ತಮ್ಮ ಜಾಗಗಳ ಗಡಿ ಗುರುತು ಸಿಗದಂತೆ ಗಜನಿ ಭೂಮಿ ತನ್ನ ಆಕಾರ ಕಳೆದುಕೊಳ್ಳ ತೊಡಗಿತ್ತು. ದೊಡ್ಡ ದೊಡ್ಡದಾದ ಹೊಂಡಗಳನ್ನು ನಿರ್ಮಿಸಿ ಅಲ್ಲಿ ಬೆಳೆಯುತ್ತಿದ್ದ ಹುಲ್ಲುಗಳನ್ನು ನಾಶಪಡಿಸಿದ್ದರು. ಹೈಬ್ರಿಡ್ ಸಿಗಡಿ ಉದ್ಯಮದ ಅನೂಕುಲಕ್ಕಾಗಿ ಗಜನಿ ಭೂಮಿಯಲ್ಲಿ ಸ್ವಾಭಾವಿಕವಾಗಿ ಕಂಡುಬರುತ್ತಿದ್ದ ನಮ್ಮ ಪ್ರಮುಖವಾದ ಆಹಾರ ಮೂಲವಾದ ಹಲವಾರು ಜೀವವೈವಿಧ್ಯಗಳಿಗೆ ರಸಾಯನಿಕಗಳನ್ನು ಸುಣ್ಣಗಳನ್ನು ಸಿಂಪಡಿಸುದರ ಮೂಲಕ ಭೂಮಿಯನ್ನು ಬರಡಾಗಿಸಿದರು.
ರೈತರಿಗೆ ತಮ್ಮದೇ ಭೂಮಿಯಲ್ಲಿ ಕಾಲಿಡಲು ದುಡ್ಡಿನ ಧಣಿಗಳ ಅನುಮತಿಯ ಪಡೆಯಬೇಕಾಗಿ ಬಂತು. ಗಜನಿ ಭೂಮಿಗಳಲ್ಲಿ ನಿರ್ಮಿಸಿದ ಹೊಂಡಗಳಲ್ಲಿ ವರ್ಷರ್ಪೂರ್ತಿ ಉಪ್ಪು ನೀರನ್ನು ತುಂಬಿಸಿಟ್ಟಿದರಿಂದ ಅಕ್ಕಪಕ್ಕದ ಉತ್ತಮ ಗದ್ದೆಗಳೆಲ್ಲಾ ಉಪ್ಪುನೀರಿನ ಕ್ಷಾರಕ್ಕೊಳಗಾಗಿ ಬೆಳೆ ಬೆಳೆಯಕ್ಕಾಗದಂತೆ ಬರಡಾಗಿದೆ. ಹತ್ತಿರದ ಜನರ ಬಳಕೆಯ ಬಾವಿ ನೀರು ಉಪ್ಪಾಗಿ ಬಳಸಲು ಬಾರದಂತಾಗಿದೆ.
ಹೈಬ್ರಿಡ್ ಸಿಗಡಿ ಬೆಳೆ ಮೊದಲೆರಡು ವರ್ಷ ಚೆನ್ನಾಗಿ ಬಂತು. ಅದರಂತೆ ರೈತರಿಗೆ ಸರಿಯಾಗಿ ದುಡ್ಡು ಸಂದಾಯವಾಯಿತು. ದುಡ್ಡನ್ನ ಪಡೆದುಕೊಂಡ ರೈತರ ದರ್ಬಾರು ಜೋರಾಯಿತು. ಪ್ಯಾಕೆಟ್ ಸರಾಯಿ ಅಂಗಡಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಮ್ಮೂರಿನ ಜನ ಪೇಟೆಯ ಬಾರ್ ಗಳಲ್ಲಿ ಕಾಣಿಸಕೊಳ್ಳತೊಡಗಿದ್ದರು. ರಾತ್ರಿಯ ಬಯಲಾಟಗಳಲ್ಲಿ ಮಾತ್ರ ಕುಟಿಕುಟಿ, ಇಸ್ಪಿಟು ಅಂತ ಜುಗಾರಿ ಅಂತ ಆಡುತ್ತಿದ್ದ ಜನ ಪೇಟೆಯ ಇಸ್ಪಿಟ್ ಕ್ಲಬ್ ಗಳಿಗೆ ವಾರದಲ್ಲಿ ಎರಡು ಮೂರುಸಲ ಹೊಗಿಬರತೊಡಗಿದ್ದರು. ರಾತ್ರಿ ವೇಳೆ ಕುಡುಕರ ಗಲಾಟೆ, ಹೊಡೆದಾಟ ಹೆಚ್ಚಾಗತೊಡಗಿತು. ಮೊದಲಿನಿದಲೂ ನಮ್ಮೂರಲ್ಲಿ ಚೌತಿ ಹಬ್ಬಕ್ಕೆ ಕೇವಲ ಮೂರು ಮನೆಗಳಲ್ಲಿ ಮಾತ್ರ ಗಣಪತಿ ಇಟ್ಟುಕೊಳ್ಳುವ ರೂಡಿಯಲ್ಲಿತ್ತು. ಯಾವಾಗ ಗಜನಿ ದುಡ್ಡು ಓಡಾಡತೊಡಗಿತೋ ಹತ್ತಕ್ಕೂ ಹೆಚ್ಚು ಮನೆಗಳಲ್ಲಿ ಗಣಪತಿ ಪ್ರತಿಷ್ಠಾಪನೆಗೊಂಡಿತು. ಗಣಪತಿ ಪೂಜೆಯು ಒಂದು ರೀತಿ ಹುಡುಗಾಟ ಆಗಿಹೊಯಿತು.
ಹೈಬ್ರಿಡ್ ಹಾಲಾಹಲ : ಇದ್ದಕ್ಕಿದ್ದಂತೆಯೇ ಹೈಬ್ರಿಡ್ ಸಿಗಡಿಗೆ ಯಾವೂದೋ ಸೋಂಕು ತಗುಲಿ ಸಾಯಲು ಶುರುವಾಯಿತು. ಅದಕ್ಕೆ ಬಂಡವಾಳ ಹಾಕಿದವರ ಪರಿಸ್ಥಿತಿಯು ಸೋಂಕಿತ ಸಿಗಡಿಯಂತಾಯಿತು. ರಾತ್ರೋ ರಾತ್ರಿ ಗಂಟುಮೂಟೆ ಕಟ್ಟಿ ಜಾಗ ಖಾಲಿ ಮಾಡಿದರು. ಇನ್ನೇನು ಈ ಸಲದ ಕಂತಿನ ದುಡ್ಡಿನ ಕನಸು ಕಾಣುತ್ತಿದ್ದ ಜನಕ್ಕೆ ಅಯೋಮಯ ಪರಿಸ್ಥಿತಿ. ಸಾಂಪ್ರದಾಯಕ ಕೃಷಿ, ಮೀನುಗಾರಿಕೆ ಬಿಟ್ಟು, ಮೊದಲಾದ ಮೂಲ ಕಸುಬು ಬಿಟ್ಟು ದುಡಿಯದೇ ಬರುತ್ತಿದ್ದ ದುಡ್ಡಿನಿಂದ ಮಜಾ ಉಡಾಯಿಸುತ್ತಿದ್ದ ಜನಕ್ಕೆ ವಾಸ್ತವ ಗೊತ್ತಾಗಲು ಹೆಚ್ಚು ಕಾಲ ಬೇಕಾಗಲಿಲ್ಲ.
ಮೂಲ ಕೆಲಸಕ್ಕೆ ಮರಳುವ ಎಂದುಕೊಂಡು ಹೋದರೆ ತಮ್ಮ ಜಾಗ ಯಾವುದೆಂದು ಗುರುತಿಸಲು ಆಗದಷ್ಟು ಬದಲಾಗಿತ್ತು. ಯಂತ್ರಗಳ ಸಹಾಯದಿಂದ ದೊಡ್ಡ ದೊಡ್ಡ ಹೊಂಡಗಳನ್ನು ಮಾಡಿದ್ದರಿಂದ ಅದನ್ನು ಮೂಲ ಆಕಾರಕ್ಕೆ ತರಲು ಅಸಾಧ್ಯವಾಗಿದೆ. ಇನ್ನು ಆ ಹೊಂಡಗಳಲ್ಲಿ ಮೀನುಹಿಡಿಯಲು ಹೋದರೆ ಸಿಗುವುದು ಸುಣ್ಣ ಮಿಶ್ರಿತ ಮಣ್ಣು ಹೊರತು ಮೊದಲು ಕಂಡು ಬರುತ್ತಿದ್ದ ಜೀವವೈವಿಧ್ಯಗಳಲ್ಲ. ಒಂದು ಕಾಲಕ್ಕೆ ಊರಿನ ಜೀವಾಳವಾಗಿದ್ದ ಗಜನಿ ಭೂಮಿ ಇಂದು ಬರಡು ಭೂಮಿಯಾಗಿದೆ.
ಈಗ ದಿನ ನಿತ್ಯದ ಹೊಟ್ಟೆಪಾಡಿಗಾಗಿ ಕೆಲವರು ತೋಟದ ಕೆಲಸಕ್ಕಾಗಿ ಘಟ್ಟ ಹತ್ತಿದ್ದಾರೆ. ಇನ್ನು ಕೆಲವರು ಗೋವಾ ಟ್ರೇನ್ ಹತ್ತಿದ್ದಾರೆ. ಮನೆಯಲ್ಲಿರುವವರು ಇಲ್ಲಿಯೇ ಚಿಕ್ಕ ಪುಟ್ಟಕೆಲಸ ಮಾಡಿಕೊಂಡಿದ್ದಾರೆ. ಮೊದಲಿನ ರಂಗಿನ ರಾತ್ರಿ ಈಗಿಲ್ಲ. ಜನರಿಲ್ಲದ ಊರು ಪಾಳು ಬಿದ್ದ ಊರಿನಂತಾಗಿದೆ. ಚೌತಿ ಹಬ್ಬಕ್ಕೆ ಸಾಲ-ಸೋಲ ಮಾಡಿ ಗಣಪತಿ ಕುಳ್ಳಿಸುವ ಪರಿಸ್ಥಿತಿ ಬಂದಿದೆ. ಆಹಾರದಲ್ಲಿ ಮುಖ್ಯವಾದ "ಮೀನು" ಬೇಕಾದರೆ ಪೇಟೆಗೆ ಹೋಗಿ ದುಡ್ಡು ಕೊಟ್ಟು ತರಬೇಕಾಗಿದೆ. ತಾಜಾ ಮೀನು ಮಾರುತ್ತಿದ್ದವ ಇವಾಗ ಮೂಗು ಮುಚ್ಚಿಕೊಂಡು ಐಸ್ ಹಾಕಿದ ಸಮುದ್ರದ ಮೀನು ಮಾರುತ್ತಿದ್ದಾನೆ.
ಅದೇನೇ ಇರಲಿ, ಗಜನಿ ಭೂಮಿ ಮಾತ್ರ ತನ್ನನ್ನು ಈಗಲಾದರೂ ನೆಮ್ಮದಿಯಾಗಿರಲೂ ಬಿಟ್ಟಿದ್ದಾರಲ್ಲ ಎಂದು ನಿರಾಳವಾಗಿದ್ದಂತೆ ಕಂಡುಬರುತ್ತಿತ್ತು. ಆದರೆ ಇತ್ತೀಚೆಗೆ ಬರುತ್ತಿರುವ ಸುದ್ದಿಗಳು ನಿಜವಾದರೆ ಮಾತ್ರ ಭಯಾನಕ. ಬಳ್ಳಾರಿಯ ನೈಸರ್ಗಿಕ ಸಂಪತ್ತನ್ನು, ಕಾರವಾರ ಅಂಕೋಲಾದ ಪರಿಸರವನ್ನು ಹಾಳುಗೆಡುವುತ್ತಿರುವ ಗಣಿಧಣಿಗಳ ವಕ್ರದೃಷ್ಟಿ ಈ ಗಜನಿ ಭೂಮಿಗಳ ಮೇಲೆ ಬಿದ್ದಿದೆ ಎನ್ನುವುದು ಇಲ್ಲಿನ ಜನತೆಯ ನೆಮ್ಮದಿ ಹಾಳು ಮಾಡಿದೆ. ಕೆಲವು ಕಡೆ ಸಾರಸಗಟಾಗಿ ಗಜನಿ ಭೂಮಿ ಖರೀದಿಸುತ್ತಿದ್ದಾರೆ, ನಮ್ಮೂರಿನ ಗಜನಿ ಭೂಮಿಯನ್ನು ಖರೀದಿಗೆ ಕೇಳುತ್ತಿದ್ದಾರೆ ಎನ್ನುವ ಗುಸು ಗುಸು ಸುದ್ದಿ ಕೇಳಿಬರುತ್ತಿದೆ.
ದುಡ್ಡಿಗಾಗಿ ಬರಗೆಟ್ಟ ನಮ್ಮೂರಿನ ಜನ ಅವರ ಹಣದ ಆಮಿಷದ ಮುಂದೆ ನಮ್ಮ ತಿಳಿವಳಿಕೆ ಮಾತುಗಳು ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ. ಖರೀದಿ ಪ್ರಕ್ರಿಯೆ ಇಲ್ಲಿಯೂ ನಡೆಯಿತು ಎಂದರೆ ನಮ್ಮವರೂ ಆ ಭೂಮಿ ಮೇಲಿನ ಅಧಿಕಾರವನ್ನು ಶಾಶ್ವತವಾಗಿ ಕಳೆದುಕೊಳ್ಳುವರಲ್ಲದೆ, ಅದಿರು ಧೂಳಿನ ಭರಾಟೆಯಲ್ಲಿ ನಮ್ಮಲ್ಲಿದ್ದ ಅಲ್ಪಸ್ವಲ್ಪ ಹಸಿರು ತೆಂಗು-ಅಡಿಕೆ ತೋಟಗಳು ಕೆಂಪು ತೋಟಗಳಾಗಿ ಕಾಣುವದರಲ್ಲಿ ಸಂಶಯವಿಲ್ಲಾ.
ಒಟ್ಟಿನಲ್ಲಿ ನಮ್ಮೂರಿನ ಜನರ ಪರಿಸ್ಥಿತಿ ಚಿನ್ನದ ಮೊಟ್ಟೆ ಇಡುವ ಕೋಳಿ ಕತ್ತನ್ನು ಕೊಯ್ದ ಮಾಲಿಕನಂತಾಗಿದೆ. ಇದೆಲ್ಲವನ್ನೂ ನಾನು ಮಾತ್ರ ಕಣ್ಣಿದ್ದೂ ಕಾಣದಂತೆ, ಕಿವಿಯಿದ್ದೂ ಕೇಳದಂತೆ, ಬಾಯಿಯಿದ್ದು ಮಾತನಾಡದಂತೆ, ನಿಸ್ಸಾಹಯಕನಾಗಿದ್ದೇನೆ. ಒಬ್ಬಂಟಿಯಾಗಿದ್ದೇನೆ. ಯಾಕೆಂದರೆ ಜಾಗತೀಕರಣದ ಯಾಂತ್ರಿಕ ಬದುಕು, ನಿರ್ಲಿಪ್ತವಾಗಿದ್ದುಕೊಂಡು ಬದುಕುವುದನ್ನು ಕಲಿಸಿಕೊಡುತ್ತಾ ಇದೆ.












Click it and Unblock the Notifications