• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೀದಿಕಾಮಣ್ಣ; ನಿನ್ನ ಕೈಗೆ ಬೇಡಿ ಬೀಳಬಹುದಣ್ಣ!

By Staff
|

ಪಾರ್ಕಿರಲಿ, ಗುಡಿಯಿರಲಿ, ಬಸ್ಸಿರಲಿ, ಕಾಲೇಜಿರಲಿ, ಸಂತೆಯಿರಲಿ, ಸಿನಿಮಾ ಟಾಕೀಸ್, ಕಚೇರಿ ಇರಲಿ, ಎಲ್ಲೆಡೆಯೂ ಇವರು ಇದ್ದೇ ಇರುತ್ತಾರೆ! ಎರಡು ಜಡೆ ಕಂಡರೆ ಸಾಕು, ಇವರು ಪ್ರತ್ಯಕ್ಷ! ತಮ್ಮ ಮನ್ಮಥಲೀಲೆ(?) ತೋರಿಸಲು ಕಾತರ! ಇವರಿಗೆ ಕಡಿವಾಣ ಹಾಕಲು, ಕಾನೂನು ಏನೇನು ಅವಕಾಶ ಕಲ್ಪಿಸಿದೆ ಗೊತ್ತೆ?

ಅಂಜಲಿ ರಾಮಣ್ಣ

ಮಹಿಳೆಯರಿಗೆ ಸಂಬಂಧಪಟ್ಟ ಯಾವುದೇ ಕಿರುಕುಳದ ಬಗ್ಗೆ ಅವಳಿಗೇ - ಅದು - ಬೇಕಾಗಿರಬಹುದು ಎನ್ನುವ ಧೋರಣೆ ನಮ್ಮಲ್ಲಿದೆ. ಇದರ ಪರಿಣಾಮದ ಒಂದು ರೂಪ ಈವ್-ಟೀಸಿಂಗ್.

ಪ್ರತಿದಿನ ಹಲವಾರು ಸಂದರ್ಭಗಳಲ್ಲಿ, ರಸ್ತೆಗಳಲ್ಲಿ, ಸಾರ್ವಜನಿಕ ಸಾರಿಗೆಯಲ್ಲಿ, ಮಾರುಕಟ್ಟೆ ಹೋಟೆಲುಗಳಲ್ಲಿ, ಶಾಲಾ - ಕಾಲೇಜುಗಳಲ್ಲೂ ಸಹ ವಯಸ್ಸಿನ ಭೇದವಿಲ್ಲದೆ ಹೆಂಗಸರು ಹಲವಾರು ಕಿರುಕುಳಗಳಿಗೆ ಈಡಾಗುತ್ತಾರೆ. ಇಂತಹ ತೊಂದರೆಯು ಶಿಳ್ಳೆ ಹಾಕುವುದು, ಅಶ್ಲೀಲ ಮಾತು ಹಾಗೂ ಹಾಡಿನ ಗುನುಗುವಿಕೆ, ಅಸಹ್ಯ ಸ್ಪರ್ಶದಿಂದ ಜಿಗುಟುವುದು, ಅನಾಗರಿಕ ಟೀಕೆಯವರೆಗೂ ಬೆಳೆದು ನಿಂತಿದೆ. ಇದನ್ನು ಶಿಕ್ಷೆಯ ಪರಿಮಿತಿಗೆ ಒಳಪಡಿಸದಿದ್ದಾಗ ಅವುಗಳೇ ನಿಷೇಧಾತ್ಮಕ ಹಿಂಸೆಗಳಾದ ಅತ್ಯಾಚಾರ, ಮುಖಕ್ಕೆ ಆಸಿಡ್ ಎರಚುವಂತಹ ದೌರ್ಜನ್ಯ ರೂಪ ಪಡೆಯುತ್ತವೆ. Ragging ಎನ್ನುವ ಅಮಾನುಷ ಕ್ರಿಯೆ ಕೂಡ ಈವ್-ಟೀಸಿಂಗ್‌ನಂತಹ ಹೇಯ ಕೃತ್ಯದ ಮತ್ತೊಂದು ಮುಖವೆ.

ಹೆಣ್ಣು ಮಕ್ಕಳನ್ನು ಈ ರೀತಿಯಾಗಿ ಗೋಳಾಡಿಸಬೇಕೆಂಬ ಭಾವನೆ ಗಂಡಸರಲ್ಲಿ ಬರಲು ಕಾರಣವೇನು? ಸಮಾಜ ಶಾಸ್ತ್ರಜ್ಞರ ಪ್ರಕಾರ “ನಾನು ಗಂಡು, ನನಗೆ ಬೇಕಾದ ಹೆಣ್ಣನ್ನು ಹೊಂದುವುದು ನನ್ನ ಜನ್ಮ ಸಿದ್ಧ ಹಕ್ಕು, ಎನ್ನುವ ಭಾವನೆಯನ್ನು ನಾವು ನಮ್ಮ ಸಮಾಜ ಜೀವನದ ಸಾಗುವಳಿಯಲ್ಲೇ ಬಿತ್ತಿ ಪೋಷಿಸಿದ್ದೇವೆ" ಇದು ಒಂದು ಕಾರಣವಾದರೆ, ವೈಜ್ಞಾನಿಕವಾಗಿ ಹರೆಯದ ಗಂಡು ಮತ್ತು ಹೆಣ್ಣು ಮಕ್ಕಳು ಪರಸ್ಪರ ಆಕರ್ಷಣೆಗೊಳಗಾಗುವುದು ಪ್ರಕೃತಿ ಸಹಜ ಮತ್ತು ಅಂತಹ ಆಕರ್ಷಣೆಯನ್ನು ವ್ಯಕ್ತಪಡಿಸಲು ಅನೇಕ ಮಾರ್ಗಗಳನ್ನು ಅನುಸರಿಸುತ್ತಾರೆ. ಇದು ಮತ್ತೊಂದು ಕಾರಣ.

ಈವ್-ಟೀಸಿಂಗ್ ಎನ್ನುವ ದೌರ್ಜನ್ಯವನ್ನು ಕೇವಲ 'ಛೇಡನೆ" ಎಂದು ವ್ಯಾಖ್ಯಾನಿಸಿ ಕಡೆಗಣಿಸಲು ಸಾಧ್ಯವಿಲ್ಲ. ಏಕೆಂದರೆ ಮನಃಶಾಸ್ತ್ರಜ್ಞರ ಪ್ರಕಾರ ಈ ರೀತಿ ಛೇಡನೆಗೆ ಒಳಗಾದ ಹರೆಯದ ಹೆಣ್ಣು ಮಕ್ಕಳು ಮನಸ್ಸಿನಲ್ಲಿ ತಮ್ಮನೇ ತಾವು ತಪ್ಪಿತಸ್ಥರನ್ನಾಗಿ ಮಾಡಿಕೊಂಡು ಆಂತರಿಕ ಯಾತನೆಯಿಂದ ಬಳಲುತ್ತಿರುತ್ತಾರೆ. ಖಿನ್ನತೆಯಂತಹ ಮಾನಸಿಕ ರೋಗಗಳಿಗೆ ಒಳಗಾಗುವುದಲ್ಲದೆ ಆತ್ಮಹತ್ಯೆಗೆ ಎಳಸಿದ ನಿದರ್ಶನಗಳೂ ಉಂಟು.

ಚುಡಾಯಿಸುವ ಮಂದಿ!

ದೆಹಲಿ ವಿಶ್ವವಿದ್ಯಾನಿಲಯದ ಲಿಂಗ ಅಧ್ಯಯನ ವಿಭಾಗವು ಮಾಡಿರುವ ಒಂದು ಸಮೀಕ್ಷೆಯ ಪ್ರಕಾರ ದೇಶದಾದ್ಯಂತ ಮಹಿಳಾ ಹಾಸ್ಟೆಲ್‌ನಲ್ಲಿ ವಾಸಿಸುವ ಶೇ. 91.7ರಷ್ಟು ಮಹಿಳೆಯರು ಹಾಗೂ ಶೇ. 88.2ರಷ್ಟು ವಿದ್ಯಾವಂತ ಉದ್ಯೋಗಸ್ಥ ಮಹಿಳೆಯರು ಬೀದಿ ಕಾಮಣ್ಣನರ ಕಾಮುಕ ಹಿಂಸೆಗೆ ಒಳಗಾಗುತ್ತಿದ್ದಾರೆ. ಸೋಜಿಗವೆಂದರೆ ಈವ್-ಟೀಸಿಂಗ್ ಮಾಡುವ ಪ್ರತೀ 100 ಗಂಡಸರುಗಳಲ್ಲಿ 32 ವಿದ್ಯಾರ್ಥಿಗಳು, 35 ಸಮಾಜಘಾತುಕ ವ್ಯಕ್ತಿಗಳು ಹಾಗೂ 33 ಮಧ್ಯ ವಯಸ್ಸಿನ ಗಂಡಸರು ಇರುತ್ತಾರೆ.

ಗಂಡಸರು ತಮ್ಮನ್ನು ರೇಗಿಸಿದರು ಎನ್ನುವ ಕಾರಣಕ್ಕಾಗಿ ಪೊಲೀಸರಿಗೆ ದೂರು ನೀಡಲು ಮಹಿಳೆಯರು ಸಾಮಾನ್ಯವಾಗಿ ಹಿಂಜರಿಯುತ್ತಾರೆ. ಎಲ್ಲಿ ತಮ್ಮ ಮೇಲೆ ಮತ್ತೊಮ್ಮೆ ಆಕ್ರಮಣವಾಗುವುದೋ ಎಂಬ ಹೆದರಿಕೆ ಒಂದೆಡೆಯಾದರೆ, ಅಕ್ಕಪಕ್ಕದ ಜನ ತಮ್ಮನ್ನೇ ತುಚ್ಛ ಭಾವನೆಯಿಂದ ನೋಡುವರೇನೋ ಎನ್ನುವ ಅಳುಕು ಇರುತ್ತದೆ. ಹಾಗೆಯೇ, ಪೊಲೀಸರೂ ಸಹ ಇಂತಹ ವಿಷಯಕ್ಕೆ ಸಂಬಂಧಪಟ್ಟ ದೂರನ್ನು ಲಿಖಿತ ರೂಪದಲ್ಲಿ ದಾಖಲಿಸಿಕೊಳ್ಳುವಲ್ಲಿ ಗಂಭೀರತೆಯನ್ನು ತೋರಿಸದೆ ಪರಿಸ್ಥಿತಿಯ ತೀವ್ರತೆಯನ್ನು ನೋಡಿ ರೇಗಿಸಿದ ಹುಡುಗನಿಗೆ ಬುದ್ಧಿ ಹೇಳಿಯೋ ಇಲ್ಲವೇ ಬೆದರಿಕೆ ಹಾಕಿಯೋ ಪ್ರಕರಣದ ಇತ್ಯರ್ಥಕ್ಕೆ ತರಾತುರಿ ತೋರುತ್ತಾರೆ.

ಕಾಮುಕರ ಕ್ರೌರ್ಯಕ್ಕೆ ಕಡಿವಾಣ :

ಮುಂಬೈನಲ್ಲಿ ಇರುವಂತೆ ಕರ್ನಾಟಕ ರಾಜ್ಯದಲ್ಲೂ ಈವ್-ಟೀಸಿಂಗ್ ತಡೆಗಟ್ಟಲು ಒಂದು ಪ್ರತ್ಯೇಕ ಕಾನೂನನ್ನು ಜಾರಿಗೆ ತರಬೇಕೆನ್ನುವುದು ಮಾನವ ಹಕ್ಕು ಸಂಘಟನೆಗಳ ಅಭಿಪ್ರಾಯವಾದರೂ, ಸಧ್ಯಕ್ಕೆ ಕಾಮುಕರ ಕ್ರೌರ್ಯಕ್ಕೆ ಕಡಿವಾಣವಾಗಿ ಈಗಾಗಲೇ ಜಾರಿಯಲ್ಲಿರುವ ಕೆಲವು ಕಾನೂನುಗಳ ಸಹಾಯ ಪಡೆಯಬಹುದಾಗಿದೆ. ಭಾರತೀಯದಂಡ ಸಂಹಿತೆಯಲ್ಲಿನ ನಿಯಮ 209ರ ಪ್ರಕಾರ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ರೀತಿಯಲ್ಲಿ ವರ್ತಿಸುವುದು ಅಶ್ಲೀಲ ಟೀಕೆಗಳನ್ನು ಮಾಡುವುದು ಅಪರಾಧವಾಗಿದ್ದು, ಅಂತಹವರಿಗೆ ದಂಡ ವಿಧಿಸುವುದು ಮಾತ್ರವಲ್ಲ ಜೈಲಿಗೂ ಕಳುಹಿಸಬಹುದು.

ನಿಯಮ 354ರ ಪ್ರಕಾರ ಹೆಣ್ಣಿನ ಗಾಂಭೀರ್ಯಕ್ಕೆ ಧಕ್ಕೆ ತರುವ ಉದ್ದೇಶದಿಂದ ಯಾವುದೇ ವ್ಯಕ್ತಿ ದೈಹಿಕ ಶಕ್ತಿ ಹಾಗೂ ದುಷ್ಟ ಬಲವನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿದರೆ ಆ ವ್ಯಕ್ತಿ ಶಿಕ್ಷೆಗೆ ಗುರಿಯಾಗುತ್ತಾನೆ. ನಿಯಮ 509ರ ಪ್ರಕಾರ ಯಾವುದೇ ವ್ಯಕ್ತಿ ಹೆಣ್ಣಿನ ಘನತೆಗೆ ಕುಂದುತರುವಂತಹ ಅಸಭ್ಯ, ಅಶ್ಲೀಲ ಹಾವಭಾವ ನಡೆನುಡಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತೋರಿದರೆ ಅದು ಶಿಕ್ಷಾರ್ಹ ಅಪರಾಧ. ಮಹಿಳೆಯರ ಅಸಭ್ಯ ಚಿತ್ರಣ ತಡೆಗಟ್ಟುವಿಕೆ ಕಾನೂನು, 1986 ಇದರಲ್ಲಿನ ಹಲವಾರು ನಿಯಮಗಳ ಪ್ರಕಾರವೂ ಈವ್-ಟೀಸಿಂಗ್ ಮಾಡುವ ಗಂಡಸರನ್ನು ಶಿಕ್ಷೆಗೆ ಒಳಪಡಿಸಬಹುದು. ಅಂತೆಯೇ ಕರ್ನಾಟಕ ಪೊಲೀಸ್ ಕಾಯಿದೆಯ ನಿಯಮಗಳಡಿಯಲ್ಲಿ ಬೀದಿ ಕಾಮಣ್ಣರನ್ನು ಶಿಕ್ಷೆಗೆ ಒಳಪಡಿಸಲು ಪೊಲೀಸರಿಗೆ ಸಾಕಷ್ಟು ಅಧಿಕಾರವಿದೆ.

ನಿತ್ಯವೂ ಬಸ್‌ಗಳಲ್ಲಿ ಓಡಾಡುವ ಮಹಿಳೆಯರನ್ನು ರೋಡ್ ರೋಮಿಯೋಗಳ ಕಾಮುಕತೆಯಿಂದ ತಪ್ಪಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 'ಸಾರಥಿ" ಎನ್ನುವ ಸಂಚಾರಿ ದಳವೊಂದನ್ನು ಸ್ಥಾಪಿಸಿದ್ದು ಕಿರುಕುಳಕ್ಕೆ ಒಳಗಾದ ಹೆಂಗಸರು ದಿನದ ಯಾವುದೇ ಸಂದರ್ಭದಲ್ಲೂ ಸಹಾಯಕ ಪಡೆಯಬಹುದಾಗಿರುತ್ತದೆ. ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಹೇಳುವಂತೆ “ಕಿರುಕುಳ ನೀಡುವ ಗಂಡಸರನ್ನು ಬಸ್ಸಿನಲ್ಲಿ ಕಂಡಕ್ಟರುಗಳು ಗುರುತು ಹಿಡಿದು ಕಂಟ್ರೋಲ್ ರೂಂಗೆ ದೂರು ನೀಡಿದರೆ ಈ ಪಿಡುಗನ್ನು ನಿವಾರಿಸಲು ಸಹಾಯವಾಗುತ್ತದೆ".

ಈವ್-ಟೀಸಿಂಗ್‌ಗೆ ಒಳಗಾದ ಮಹಿಳೆ ಮನೆಯಲ್ಲಾಗಲೀ ಹೊರಗಿನ ಹಿರಿಯರೊಂದಿಗೇ ಆಗಲೀ ತನ್ನ ಪರಿಸ್ಥಿತಿಯನ್ನು ಹೇಳಿಕೊಂಡರೆ 'ನೀನೇನೂ ಹಿಂತಿರುಗಿ ಮಾತನಾಡಬೇಡ" ಎಂತಲೋ 'ಸರಿಯಾಗಿ ಮೈ ಮುಚ್ಚುವ ಬಟ್ಟೆ ಹಾಕಿಕೊಂಡು ಹೋಗು" ಎನ್ನುವ ಹಿತವಚನ ಅವಳನ್ನು ಸ್ವಾಗತಿಸುತ್ತದೆ. ಆದರೆ ತಲೆಯಿಂದ ಕಾಲಿನವರೆಗೂ ಧಿರಿಸು ಧರಿಸುವ ಕೆಲವು ಧರ್ಮಿಯ ಮಹಿಳೆಯರು, ಮಧ್ಯ ವಯಸ್ಸಿನ ಹೆಂಗಸರು ಮತ್ತು ಗರ್ಭೀಣಿಯರೂ ಸಹ ಈವ್-ಟೀಸಿಂಗ್‌ಗೆ ಒಳಗಾಗುತ್ತಿರುವುದು ವರದಿಯಾಗಿದೆ.

ಮುಂಬೈ ವಿಶ್ವವಿದ್ಯಾನಿಲಯದ ಮಹಿಳಾ ವಿಭಾಗದ ವರದಿಯ ಪ್ರಕಾರ ಬೀದಿಕಾಮಣ್ಣರಿಂದ ರಕ್ಷಿಸಿಕೊಳ್ಳಲು ಹೆಣ್ಣು ಮಕ್ಕಳು ಇಂದಿನ ದಿನಗಳಲ್ಲಿ ಕರಾಟೆಯಂತಹ ಆತ್ಮ ರಕ್ಷಣಾ ವಿಧಾನಗಳನ್ನು ಕಲಿಯುತ್ತಿರುವುದು ಹೆಚ್ಚಾಗಿದೆ. ಈವ್-ಟೀಸಿಂಗ್ ಅನ್ನು ತಡೆಗಟ್ಟಲು ಕಾನೂನನ್ನು ರಚಿಸುವುದು ಅಗತ್ಯವಾದರೂ ಹೆಂಗಸರು ಧೈರ್ಯದಿಂದ ಈ ಸಾಮಾಜಿಕ ಪಿಡುಗನ್ನು ಎದುರಿಸಬೇಕು.

ಅವಶ್ಯಕತೆ ಇದ್ದಲ್ಲಿ ಸಂಪರ್ಕಿಸಿ:

*ಬೆಂಗಳೂರು ಮಹಾಸಾರಿಗೆ ಸಂಸ್ಥೆಯ ಸಾರಥಿ :

+91-98442 30351/352/353,

+91-98440 98194 ಅಥವಾ +91-08-2295 2522/2422

* ವನಿತಾ ಸಹಾಯವಾಣಿ : +91-08-2294 3225 ಮತ್ತು 1091

* ಪೊಲೀಸ್ ಕಂಟ್ರೋಲ್ ರೂಂ : +91-08-2294 3200/2444

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X