ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದಲ್ಲಿ ಯೇಸುದಾಸ್ ಸಂಗೀತ ಶಾಲೆ

By Staff
|
Google Oneindia Kannada News

Padmavibhushan K J Yesudasಭಾರತದ ಹೆಮ್ಮೆಯ ಗಾಯಕ, ಪದ್ಮಶ್ರೀ ಹಾಗೂ ಪದ್ಮ ಭೂಷಣ ಪ್ರಶಸ್ತಿ ವಿಜೇತ ಡಾ. ಕೆ.ಜೆ. ಯೇಸುದಾಸ್ ಅವರು ಬೆಂಗಳೂರಿನಲ್ಲಿ ಶಾಸ್ತ್ರೀಯ ಸಂಗೀತ ಅಕಾಡೆಮಿಯನ್ನು ಸ್ಥಾಪಸುವ ಉದ್ದೇಶದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಅನೇಕ ವಿಶೇಷಣಗಳಿಂದ ಹೊಗಳಿಸಿ, ತೆಗಳಿಸಿಕೊಳ್ಳುತ್ತಿರುವ ಬೆಂಗಳೂರು, ಈ ಮೂಲಕ ಸಂಗೀತ ಕಲಿಕೆಯ ಆವಾಸ ಸ್ಥಾನವಾಗುತ್ತಿರುವುದು ಸಂತಸದ ವಿಷಯ

*ಮಹೇಶ್ ಮಲ್ನಾಡ್

ಗುರು ಶಿಷ್ಯ ಪರಂಪರೆಯನ್ನು ಮತ್ತೆ ಸಾಕಾರಗೊಳಿಸಿ, ಶಾಸ್ತ್ರೀಯ ಬದ್ಧವಾಗಿ ಶುದ್ಧ ಸಂಗೀತವನ್ನು ಆಸಕ್ತರಿಗೆ ಧಾರೆ ಎರೆಯಲು ಯೇಸುದಾಸ್ ಉತ್ಸುಕರಾಗಿದ್ದಾರೆ. ಈ ಸಂಬಂಧವಾಗಿ ಯೇಸುದಾಸ್ ಅವರು ಸಲ್ಲಿಸಿದ ಮನವಿಗೆ ಕೂಡಲೇ ಸ್ಪಂದಿಸಿದ ಮುಖ್ಯಮಂತ್ರಿಗಳು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಆಯುಕ್ತರಿಗೆ 90X60 ಅಡಿಗಳ ನಿವೇಶನವನ್ನು ಮಂಜೂರು ಮಾಡುವಂತೆ ನಿರ್ದೇಶನ ನೀಡಿದ್ದಾರೆ.

ಬೆಂಗಳೂರಿನೊಂದಿಗೆ ಅವಿನಾಭವ ಸಂಬಂಧ ಹೊಂದಿರುವ ಅದ್ಭುತ ಗಾಯಕ ಯೇಸುದಾಸ್ ಅವರು, ಚಾಮರಾಜ ಪೇಟೆಯ ಶ್ರೀರಾಮ ಸೇವಾಮಂಡಲಿಯ ಉಪಾಧ್ಯಕ್ಷರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಇಂಗ್ಲೀಷ್, ಬೆಂಗಾಳಿ, ಮರಾಠಿ, ಪಂಜಾಬಿ, ತುಳು, ಸಂಸ್ಕೃತ ಹಾಗೂ ಅರೇಬಿಕ್ ಭಾಷೆಗಳಲ್ಲಿ ಯೇಸುದಾಸ್ ಗಾನಸುಧೆ ಹರಿಸಿದ್ದಾರೆ. ಈ ವರೆಗೂ ಸುಮಾರು 40,000 ಹಾಡುಗಳನ್ನು ಹಾಡಿದ್ದಾರೆ. ಶಾಸ್ತ್ರೀಯ ಸಂಗೀತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ದ ಕೀರ್ತಿಯನ್ನು ಹೊಂದಿದ್ದಾರೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಅರಬ್ಬಿ ಸಂಗೀತವನ್ನು ಶುದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ ಹಾಡಿ ಜನಪ್ರಿಯತೆ ಗಳಿಸಿದ್ದಾರೆ. ತರಂಗಿಣಿ ಸ್ಟುಡಿಯೊ ಎಂಬ ಧ್ವನಿಮುದ್ರಣ ಸಂಸ್ಥೆ ಸ್ಥಾಪಿಸಿ, ಜನಪ್ರಿಯ ಸಂಗೀತವನ್ನು ಪ್ರಚುರಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಮನೆಯೇ ಮೊದಲ ಪಾಠಶಾಲೆ
ಯೇಸುದಾಸ್ ಅವರು ಕೇರಳದ ಫೋರ್ಟ್ ಕೊಚ್ಚಿಯಲ್ಲಿ ಜನವರಿ 10,1940ರಂದು ಜನಿಸಿದರು. ಇವರ ತಂದೆ ಆಗಸ್ಟೈನ್ ಜೋಸೆಫ್ ಹಾಗು ತಾಯಿ ಎಲಿಜಬೆತ್ ಜೋಸೆಫ್. ಯೇಸುದಾಸ್ ಅವರ ಪತ್ನಿಯ ಹೆಸರು ಪ್ರಭಾ. ಈ ದಂಪತಿಗಳಿಗೆ ಮೂರು ಪುತ್ರರಿದ್ದಾರೆ, ವಿನೋದ್, ವಿಜಯ್ ಹಾಗು ವಿಶಾಲ್. ಇವರ ಕುಟುಂಬವು ತಮಿಳುನಾಡಿನ ಚೆನ್ನೈ ನಗರದಲ್ಲಿ ವಾಸವಾಗಿದ್ದಾರೆ. ಯೇಸುದಾಸ್ ಅವರ ಮಕ್ಕಳು ಕೂಡ ಹಿನ್ನೆಲೆ ಗಾಯಕರಾಗಿ ಹೆಸರು ಗಳಿಸಿದ್ದಾರೆ.

ತಂದೆ ಆಗಸ್ಟೈನ್ ಜೋಸೆಫ್ ಅವರ ಮಾರ್ಗದರ್ಶನವೇ ಶ್ರೀರಕ್ಷೆ ಎನ್ನುವ ಸಾತ್ವಿಕ ಮನೋಭಾವದ ಯೇಸುದಾಸ್ ಅವರಿಗೆ ರಾಮಕುಟ್ಟಿ ಭಾಗವತರ್, ಶಿವರಾಮನ್ ನಾಯರ್, ಶೆಮ್ಮನ್ ಗುಡಿ ಶ್ರೀನಿವಾಸ ಐಯರ್ ಹಾಗೂ ಚೆಂಬೈ ವೈದ್ಯನಾಥ ಭಾಗವತರ್ ಅಂತಹ ಮಹಾನ್ ಗುರುಗಳಲ್ಲಿ ಶಿಷ್ಯ ವೃತ್ತಿ ಮಾಡಿದ ಪುಣ್ಯ ಲಭಿಸಿದೆ.

ಶಾಸ್ತ್ರೀಯ ಸಂಗೀತ ಕಲಿಕೆಯ ಪ್ರಾರಂಭದ ದಿನಗಳಲ್ಲಿ ಜನ್ಮತ ಕ್ರಿಶ್ಚಿಯನ್ ಆದ್ದರಿಂದ ಕೆಲ ಕುಹಕಿಗಳಿಂದ ವಿರೋಧದಿಂದ ವಿಚಲಿತರಾದರೂ, ತಮ್ಮ ಅದ್ಭುತ ಪ್ರತಿಭೆಯಿಂದ ಜನಮಾನ್ಯರಾಗಿ ಬೆಳಗುತ್ತಿದ್ದಾರೆ. ಕೇರಳ ಸರ್ಕಾರದ ಸಂಗೀತ ರಾಯಭಾರಿಯಾಗಿರುವ ಯೇಸುದಾಸ್, ಕರ್ನಾಟಕದ ಕೊಲ್ಲೂರು, ಶೃಂಗೇರಿ, ಮಂತ್ರಾಲಯ, ಉಡುಪಿ ಶ್ರೀ ಮಠದ ಆಸ್ಥಾನ ಸಂಗೀತಗಾರ ಪದವಿಯನ್ನು ಅಲಂಕರಿಸಿದ್ದಾರೆ.

ಗಾನ ಕೋಗಿಲೆಗೆ ಸಾಟಿಯಿಲ್ಲ
ಇವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿದ್ದು ಅದರಲ್ಲಿ 2002 ರಲ್ಲಿ ಪದ್ಮಭೂಷಣ, 1973 ರಲ್ಲಿ ಪದ್ಮಶ್ರೀ, 1989 ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಹಿನ್ನೆಲೆ ಗಾಯನಕ್ಕಾಗಿ 7 ಬಾರಿ ರಾಷ್ಟ್ರ ಪ್ರಶಸ್ತಿ ಗಳಿಸಿದ್ದಾರೆ. ಉಳಿದಂತೆ ಕೇರಳ ರತ್ನ, ಸಂಗೀತನಾಟಕ ಅಕಾಡೆಮಿ ಪ್ರಶಸ್ತಿ, ಸಂಗೀತ ಸಾಗರ, ಸಂಗೀತ ಚಕ್ರವರ್ತಿ, ಸಂಗೀತ ರಾಜ, ಸಂಗೀತ ರತ್ನ, ಸ್ವಾತಿ ರತ್ನಮ್, ಸಪ್ತಗಿರಿ ಸಂಗೀತ ವಿದ್ವನ್ಮಣಿ, ಭಕ್ತಿ ಸಂಗೀತ ಶಿರೋಮಣಿ, ಗಾನ ಗಂಧರ್ವ, ಗೀತಾಂಜಲಿ ಪ್ರಶಸ್ತಿ, ಕಲೈಮಾಮಣಿ, ರಾಷ್ಟ್ರೀಯ ನಾಗರೀಕ ಪ್ರಶಸ್ತಿ, ಲತಾ ಮಂಗೇಷ್ಕರ್ ಪ್ರಶಸ್ತಿ, ವಿಶ್ವಸಂಸ್ಥೆಯ ಶಾಂತಿ ಹಾಗೂ ಸುರಕ್ಷತಾ ಸಮಿತಿ ಸದಸ್ಯತ್ವ, ಕರ್ನಾಟಕ, ಕೇರಳ, ಆಂಧ್ರ, ಪಶ್ಚಿಮ ಬಂಗಾಳ, ತಮಿಳುನಾಡಿನ ರಾಜ್ಯ ಪ್ರಶಸ್ತಿ ಇನ್ನೂ ಹತ್ತು ಹಲವಾರು ಪುರಸ್ಕಾರಗಳು ಸಂದಿವೆ.

"ಸಂಗೀತ ಯಾರೊಬ್ಬರ ಸ್ವತ್ತಲ್ಲ ಗಾನಸುಧೆಯನ್ನು ಹಂಚುವುದರಲ್ಲೇ ಆನಂದವಿದೆ. ಇಲ್ಲಿ ಯಾರೂ ಸೃಷ್ಟಿಕರ್ತರಲ್ಲ . ಪ್ರಕೃತಿಯಲ್ಲಿ ಎಲ್ಲವೂ ಅಡಗಿದೆ. ಅದರಲ್ಲಿ ಗ್ರಹಿಸಿ ಸೂಕ್ತ ರಾಗದಲ್ಲಿ ಹೊಸೆದು ತಾಳ ಬದ್ಧವಾಗಿ ನೀಡುವುದಷ್ಟೇ ನಮ್ಮ ಕೆಲಸ. ಸಂಗೀತ ಶಾಲೆ ಆರಂಭಿಸುವುದು ನನ್ನ ಕನಸು.. ಇದು ಬೆಂಗಳೂರಿನಲ್ಲಿ ನನಸಾಗುತ್ತಿರುವುದು ಸಂತೋಷದ ವಿಷಯ" ಎಂದು ಗಾಯಕ ಯೇಸುದಾಸ್ ಅಭಿಪ್ರಾಯಪಟ್ಟರು.

ನರಕ ಚತುರ್ದಶಿ ಮತ್ತು ಮುತ್ತುಸ್ವಾಮಿ ದೀಕ್ಷಿತ್
ಹಾಡುಹಕ್ಕಿ ಮೈಸೂರು ಅನಂತಸ್ವಾಮಿ ಅವರಿಗೆ ನಮನ
ಮನತುಂಬಿ ಹಾಡಿದ ಮಹೇಂದ್ರ ಕಪೂರ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X