ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯ ಸಭೆಯಲ್ಲಿ ಸಾಹಿತಿಯಾದ ಯುಆರ್ ಎ

By Staff
|
Google Oneindia Kannada News
Jogi books release function at IIWC
ಚಿತ್ರಕೃಪೆ : ಅವಧಿ
ಬೆಂಗಳೂರು, ಸೆ. 9 : ಗೋಕರ್ಣ ಮಹಾಬಲೇಶ್ವರ ಮಠದ ಹಸ್ತಾಂತರ ಕುರಿತ ರಾಮಚಂದ್ರಾಪುರ ಮಠದ ವಿವಾದವೋ ಅಥವಾ ಅಧಿಕಾರದ ಗದ್ದುಗೆಯಲ್ಲಿ ನೂರು ದಿವಸ ಪೂರೈಸಿದ ಭಾಜಪ ಸರಕಾರದ ಸಾಧನೆ ವೈಫಲ್ಯಗಳನ್ನು ಕುರಿತೋ ಅಥವಾ ಭಾರತದ ಹೆಗಲೇರಿದ ಅಣು ಶಕ್ತಿ ಬಲ ಕುರಿತ ಜಾಗತಿಕ ವಿದ್ಯಮಾನಗಳನ್ನು ಕುರಿತೋ ಅಥವಾ ಕಡೆಯಪಕ್ಷ ಒರಿಸ್ಸಾದಲ್ಲಿ ಇತ್ತೀಚೆಗೆ ಸಂಭವಿಸಿದ ನರಮೇಧವೋ ಅಥವಾ ಏನಾದರೊಂದು ಸಾಮಾಜಿಕ ವಿಷಯ, ವಿಚಾರ, ಜಿಜ್ಞಾಸೆಗಳನ್ನು ಮುಂದಿಟ್ಟುಕೊಂಡು ಬಿಚ್ಚುಮನಸ್ಸಿನ ಅಭಿಪ್ರಾಯಗಳನ್ನು ಅವರು ತೇಲಿಬಿಡುತ್ತಾರೆ; ಅದನ್ನು ಕೇಳಿಕೊಂಡು ಈ ಕ್ಷಣದ ಸುದ್ದಿಯನ್ನು ಬರೆಯೋಣ ಎಂದು ಭಾವಿಸಿ ಸಭಾಂಗಣಕ್ಕೆ ಕಾಲಿಟ್ಟಿದ್ದ ಡಾಟ್ ಕಾಂ ಪತ್ರಕರ್ತರಿಗೆ ನಿನ್ನೆ ನಿರಾಶೆಯಾಯಿತು.

ಯಾರೋ ಒಬ್ಬ ರಾಜಕಾರಣಿ ಕವನ ಬರೀತಾನಂತೆ, ಅದನ್ನು ಪೇಪರ್ರಿನೋರು ಮುಖಪುಟದಲ್ಲಿ ದೊಡ್ಡ ಸುದ್ದಿ ಮಾಡ್ತಾರಂತೆ ಎನ್ನುವ ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ ಒಂದೇ ಒಂದು ಟೀಕೆ ಎಸೆಯುವುದು ಬಿಟ್ಟರೆ ಅವರ ಒಂದು ಗಂಟೆಯ ಉಪನ್ಯಾಸದಲ್ಲಿ ಬರೀ ಸಾಹಿತ್ಯ, ಸಾಹಿತಿ, ಸಾಹಿತ್ಯ ಸಂದರ್ಭಗಳ ಬಗೆಯೇ ಚಿಂತನೆ ಹರಿಯಿತು. ಹಾಗಾಗಿ ಸೆಪ್ಟೆಂಬರ್ 7ರ ಭಾನುವಾರ ಬೆಳಗಿನ ಹೊತ್ತು ದಕ್ಷಿಣ ಬೆಂಗಳೂರು ವಾಸಿ ಕನ್ನಡ ಜನ ಉಲ್ಲಸಿತಗೊಂಡರು ಎಂಬಷ್ಟೇ ಪಾಯಿಂಟುಗಳು ವರದಿಗಾರರಿಗೆ ದಕ್ಕಿದವು.

ಬೇರೆಬೇರೆ ಹೆಸರುಗಳನ್ನು ಇಟ್ಟುಕೊಂಡು ಪತ್ರಿಕೆ, ನಿಯತಕಾಲಿಕ, ಟಿವಿ, ಅಂತರ್ಜಾಲದಲ್ಲಿ ಬರೆಯುತ್ತಿರುವ ಕನ್ನಡಪ್ರಭದ ನೌಕರ ಜೋಗಿ ಉರುಫ್ ಗಿರೀಶ್ ರಾವ್ ಅವರು ತಮ್ಮ ನಿಜನಾಮಧೇಯವನ್ನೇ ಇಟ್ಟುಕೊಂಡು ರಚಿಸಿದ ಒಂದು ಕಥಾಸಂಕಲನ ಮತ್ತು ಒಂದು ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಯು.ಆರ್ . ಅನಂತಮೂರ್ತಿಗಳು ತಾವೇ ತಾವಾಗಿದ್ದುದು ಮತ್ತು ಅವರ ಆವತ್ತಿನ ಚಿಂತನೆಗಳು ಸಾಹಿತ್ಯ ಹಾಗೂ ಸಾಹಿತಿಯ ಸುತ್ತವೇ ಗಿರಕಿ ಹೊಡೆದದ್ದು ಅಲ್ಪ ಸಂಖ್ಯಾತ ಕನ್ನಡಸಾಹಿತ್ಯಪ್ರಿಯರ ವಲಯಗಳಲ್ಲಿ ಮಾತ್ರ ಭಾರೀ ಸುದ್ದಿಯಾಯಿತು.

ಜೋಗಿ ಅವರ ಕಥನ ಕಲೆಯ ಮೌಲ್ಯಮಾಪನ ಮಾಡುವಾಗ ಮೂರ್ತಿಗಳ ಮಾತುಗಳಲ್ಲಿ ಮೆಚ್ಚುಗೆ ಮತ್ತು ಚಿಕಿತ್ಸಕ ಸಲಹೆಗಳು 50 - 50 ಪ್ರಮಾಣದಲ್ಲಿ ನೆಲೆಗೊಂಡವು. "ಕಾಡು ಹಾದಿಯ ಕಥೆಗಳು" ಸಂಕಲನದ ಬಗೆಗೆ ಉದಾಹರಣೆ, ಉಲ್ಲೇಖ ಬೆಸೆದುಕೊಂಡಿದ್ದ ಅವರ ಉಪನ್ಯಾಸಕ್ಕೆ ಸಂಕಲನ ಬಿಡುಗಡೆ ನೆಪಮಾತ್ರವಾಯಿತು. ಬರವಣಿಗೆಯ ತುಡಿತಗಳು, ಕಥನ ಕೌಶಲ, ವಸ್ತು ವಿನ್ಯಾಸ, ಭಾಷಾ ಪ್ರಜ್ಞೆ ಮತ್ತು ಕಥೆಹೇಳುವವನ ಮನೋವ್ಯಾಪಾರಗಳ ಬಗೆಗೆ ಅವರ ಚಿಂತನೆಗಳು ಎಲ್ಲೆಲ್ಲಿಗೋ ಹಾರಿದರೂ ಅವರ ಭಾಷಣವು ಸಾಹಿತ್ಯ ಸೃಷ್ಟಿ, ವಿಶೇಷವಾಗಿ ಕನ್ನಡ ಸಾಹಿತ್ಯ ಸಂದರ್ಭದ ನಡುಮನೆಯಲ್ಲೇ ಸುಳಿಯುತ್ತಿದ್ದನ್ನು ಕಂಡು ಸಭಿಕರನೇಕರು ಚಕಿತಗೊಂಡರು.

ಡ್ರಾಯಿಂಗ್ ರೂಂ ಧಾಟಿಯ ಡಾ. ಯುಆರ್ ಎ ಮಾತಿನ ವರಸೆಗಳಲ್ಲಿ ಅನೇಕ ಸಂಗತಿಗಳು ಅಂದು ಇಣುಕಿದವು, ಕೆಲವು ಬರಹಗಾರರು ಅರೆಬೆತ್ತಲಾದರು. ನವೋದಯ, ನವ್ಯ ಲೇಖಕರರ ಬಗೆಗೆ ಹೀಗೆ ಸುಮ್ಮನೆ ಪ್ರಸ್ತಾಪಿಸುವಾಗ ಅಡಿಗ, ಲಂಕೇಶ್, ಬೇಂದ್ರೆ, ಶಾಂತಿನಾಥ ದೇಸಾಯಿ, ಯರ್ಮುಂಜೆ ರಾಮಚಂದ್ರ, ಶೇಕ್ಸ್ ಪಿಯರ್, ತೇಜಸ್ವಿ ಮುಂತಾದವರು ಇನ್ ಸ್ಟಿಟ್ಯೂಟ್ ಆಫ್ ವರ್ಲಡ್ ಕಲ್ಚರ್ ಸಭಾಂಗಣಕ್ಕೆ ಬಂದು ಹೋದರು. ಸಂಸ್ಕಾರ ಕಾದಂಬರಿಯನ್ನು ಓದಿದ ಬೇಂದ್ರೆ "ನಿನ್ನದು ಅಸ್ವಸ್ಥ ಮನಸ್ಸು ಕಣಯ್ಯ" ಎಂದಿದ್ದನ್ನು ನೆನಪಿಸಿಕೊಂಡು ಸಭಿಕರೊಂದಿಗೆ ತಾವೂ ನಕ್ಕರು ಅನಂತಮೂರ್ತಿ.

ಜೋಗಿ ವಿರಚಿತ ಕಾದಂಬರಿ "ಯಾಮಿನಿ"ಯನ್ನು ಬಿಡುಗಡೆ ಮಾಡಿ ಮಾತನಾಡಿದವರು ಕನ್ನಡ ಪತ್ರಿಕಾ ಬರವಣಿಗೆಗೆ ಮರ್ಯಾದೆ ತಂದುಕೊಟ್ಟವರಲ್ಲಿ ಒಬ್ಬರಾದ ನಾಗೇಶ್ ಹೆಗಡೆ. "ಯಾಮಿನಿ ಮುತ್ತಿಟ್ಟ ಚಿರಾಯುವಿನ ಸುಳಿನಾಭಿಗೆ. ಚಿರಾಯು ಚುಂಬಿಸಿದ ಯಾಮಿನಿಯ ತುಟಿ ಕಂಪನಕ್ಕೆ" ಅರ್ಪಣೆಯಾಗಿರುವ ಈ ಕಾದಂಬರಿಯು ನಿರರ್ಥಕತಾವಾದವನ್ನು ಮನೋಜ್ಞವಾಗಿ ನಿರೂಪಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಜೋಗಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಒಲಿದು ಬರಲಿ ಎಂದು ನಾಗೇಶ್ ಶುಭಹಾರೈಸಿದರು. ಅಂಥದೊಂದು ಕೃತಿ ಜೋಗಿ ರಚಿಸಲಿ ಮತ್ತು ಆ ಕೃತಿಯನ್ನು ಅಂಕಿತ ಪ್ರಕಾಶನದವರೇ ಪ್ರಕಟಿಸುವಂತಾಗಲಿ ಎಂಬ ಮಾತೂ ಸಭಿಕರ ಕಿವಿಗೆ ಬಿತ್ತು.

ವೇದಿಯ ಮೇಲೆ ಆಸೀನರಾಗಿದ್ದವರ ಪೈಕಿ ಅತಿ ಎತ್ತರದ ಆಳು ಪವಿತ್ರಾ ಲೋಕೇಶ್ ಸಭಿಕರನ್ನುದ್ದೇಶಿಸಿ ನಾಲಕ್ಕು ಮಾತನಾಡಿದರು. ತಾವು ಕೇವಲ ಜೋಗಿಯವರ ಒಬ್ಬ ಓದುಗಳಾಗಿರುದಾಗಿಯೂ ಸಾಹಿತ್ಯ ವಿಮರ್ಶೆ ಮಾಡುವಷ್ಟು ಎತ್ತರಕ್ಕೆ ಬೆಳದಿಲ್ಲವೆಂತಲೂ ತಾವು ಕೃಷಿ ಮಾಡುತ್ತಿರುವ ಸಿನಿಮಾ ರಂಗದ ಬಗೆಗೆ ಅಲ್ಪಸ್ಪಲ್ಪ ತಿಳಿದುಕೊಂಡಿರುವುದಾಗಿಯೂ ಒಪ್ಪಿಕೊಂಡರು. ಈಟಿವಿಯಲ್ಲಿ ಮೂರು ವರ್ಷ ಪ್ರಸಾರವಾದ ತಾವು ಅಭಿನಯಿಸಿದ "ಗುಪ್ತಗಾಮಿನಿ" ಧಾರಾವಾಹಿಯ ಸಂಭಾಷಣೆ ತುಂಬಾ ಸುಲಲಿತವಾಗಿತ್ತು. ಜೋಗಿ ಚೆನ್ನಾಗಿ ಬರೀತಾರೆ ಎಂದು ಪವಿತ್ರಾ ಮೆಚ್ಚಿಕೊಂಡರು.

ಸಭಿಕರಲ್ಲಿ ಒಬ್ಬರಾಗಿದ್ದ ರವಿ ಬೆಳಗೆರೆ ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆಯ ಮೇಲೆ ಆಭ್ಯಾಗತ ಮಾತುಗಾರರಾಗಿ ಕಾಣಿಸಿಕೊಂಡರು. ಕನ್ನಡಪ್ರಭ ಪತ್ರಿಕೆ ಕೊಡುವ ಸಂಬಳ ಸಾಕಾಗುವುದಿಲ್ಲ. ಹಾಗಾಗಿ ಜೋಗಿ ಅವರು ಸಿನಿಮಾಗೆ, ಧಾರಾವಾಹಿಗಳಿಗೆ ಹಾಳೂಮೂಳು ಬರೆಯುತ್ತಾರೆ. ನಯಾಪೈಸೆ ಆದಾಯವಿಲ್ಲದ ಬ್ಲಾಗ್ ಕೂಡ ಬರೆಯುತ್ತಾರೆ. ಅದೂ ಕೂಡ ಕಾಲ ಕಾಲಕ್ಕೆ ಅಪ್ ಡೇಟ್ ಆಗುತ್ತಿಲ್ಲ ಎನ್ನುವ ಆಕ್ಷೇಪಣೆಗಳನ್ನು ಎದುರಿಸುತ್ತಾರೆ. ನಾವಿಬ್ಬರೂ ಬೆಂಗಳೂರಿಗೆ ಬಡವರಾಗಿಯೇ ಬಂದು ನೆಲೆಸಿದವರು. ಹಾಯ್ ಬೆಂಗಳೂರು ನನಗೆ ಶ್ರೀಮಂತಿಕೆ ತಂದುಕೊಟ್ಟಿತು. ಜೋಗಿಗೆ ಕೂಡ ತಾನೂ ಅನುಕೂಲಸ್ಥನಾಗಬೇಕೆಂಬ ಅಪೇಕ್ಷೆ ಇರುವುದು ಸಹಜ. ಅವರು ಒಂದು ಮನೆ ಮತ್ತು ಕಾರು ಸಂಪಾದಿಸಿದ್ದಾರೆ. ಬರೆದು ಬದುಕುವುದು ತುಂಬಾ ಕಷ್ಟದ ಕೆಲಸ. ತಾವು ಕಥೆ ಬರೆದು 14 ವರ್ಷವೇ ಆಯಿತು ಎಂದರು.

ಕೊನೆಯಲ್ಲಿ ಮಾತನಾಡಿದ ಜೋಗಿ "ಬದುಕುವುದಕ್ಕೋಸ್ಕರ ಏನೇನೋ ಬರೆಯುತ್ತಿರುತ್ತೇನೆ. ಆದರೆ ಆತ್ಮ ಸಂತೋಷಕ್ಕೆ ಕಥೆ ಕಾದಂಬರಿ ಬರೆಯುತ್ತೇನೆ" ಎಂದು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X