Get Updates
Get notified of breaking news, exclusive insights, and must-see stories!

‘ಸತ್ಯಾತ್ಮಸುಧಾ’ : ಶ್ರೀ ಸತ್ಯಾತ್ಮತೀರ್ಥರ ಪ್ರವಚನಾಮೃತಸಾರ

ಶ್ರೀ ಸತ್ಯಾತ್ಮತೀರ್ಥರ ಪ್ರವಚನ, ಕೇವಲ ಒಣ ವೇದಾಂತವಾಗಿ ಉಳಿದಿಲ್ಲ. ಆ ಪ್ರವಚನಗಳ ಪರಿಣಾಮ ಮತ್ತು ಪ್ರಭಾವಗಳನ್ನು ಅರಿಯಬೇಕಾದರೆ ಸ್ವಲ್ಪ ಹತ್ತಿರಕ್ಕೆ ಬನ್ನಿ. ಎಲ್ಲಿದೆ ಸುಖ? ಎಲ್ಲಿದೆ ಶಾಂತಿ? ಎಂದು ಹುಡುಕುವ ಮನಸ್ಥಿತಿ ನಿಮ್ಮದಾಗಿದ್ದರೆ ತಪ್ಪದೇ ‘ ಸತ್ಯಾತ್ಮಸುಧಾ’ ಪುಸ್ತಕದ ಪುಟಗಳನ್ನು ತೆರೆಯಿರಿ!

ಪ್ರವಚನದಲ್ಲಿ ಕೆಲವು ಕಥೆಗಳು, ದೃಷ್ಟಾಂತಗಳು :
ಧಾರ್ಮಿಕ ಜೀವನ ನಡೆಸಲು ಹೆಂಡತಿ ಅರ್ಥಾತ್‌ ಸಹಧರ್ಮಿಣಿಯು ಅನುಕೂಲೆಯಾಗಿರಬೇಕು, ಅವಳು ವಿಪರೀತವಾಗಿ ವರ್ತಿಸುವವಳು ಆಗಿದ್ದರೆ ಪುರುಷನ ಜೀವನ ವ್ಯರ್ಥವಾಗುತ್ತದೆ. ಇದಕ್ಕೆ ದೃಷ್ಟಾಂತವೆಂದು ಶ್ರೀಗಳು ಚಂಡಿಯಂತಹ ಒಬ್ಬ ಮಡದಿಯ ಕತೆಯನ್ನು ಉದ್ಧರಿಸುತ್ತಾರೆ. ಒಬ್ಬ ಸಾತ್ವಿಕ ಬ್ರಾಹ್ಮಣ ಪ್ರತಿನಿತ್ಯ ಒಬ್ಬ ಅತಿಥಿ ಬ್ರಾಹ್ಮಣನಿಗೆ ಮನೆಗೆ ಭೋಜನಕ್ಕೆ ಕರೆದುಕೊಂಡು ಬರುವ ಪದ್ಧತಿಯನ್ನು ಅನುಸರಿಸುತ್ತಿದ್ದನಂತೆ. ಬೇಸತ್ತ ಹೆಂಡತಿ ಬಂದ ಅತಿಥಿಯನ್ನು ಓಡಿಸಲು ಒಂದು ಉಪಾಯ ಹೂಡುತ್ತಾಳೆ. ಬ್ರಾಹ್ಮಣನನ್ನು ಕೂಡಿಸಿ ಗಂಡ ಏನನ್ನೋ ತರಲು ಸಮೀಪ ಹೋದಾಗ, ಹೆಂಡತಿ ಒಂದು ಒನಕೆಯನ್ನು ತಂದು ಅದನ್ನು ಪೂಜಿಸುತ್ತಾಳೆ.

‘‘ಇದೇನು?’’ ಎಂದು ಅತಿಥಿ ಕೇಳಿದಾಗ, ಅವಳೆನ್ನುತ್ತಾಳೆ, ‘‘ಭೋಜನವಾದ ಮೇಲೆ ಅತಿಥಿಗಳನ್ನು ಒನಕೆಯಿಂದ ನಮ್ಮ ಯಜಮಾನರು ಥಳಿಸುತ್ತಾರೆ, ಅದಕ್ಕೇ ಈ ಒನಕೆ ಪೂಜೆ’’ ಎಂದು. ಗಾಬರಿಗೊಂಡ ಅತಿಥಿ ಓಡತೊಡಗುತ್ತಾನೆ. ಇದನ್ನು ಕಂಡ ಯಜಮಾನನು ಹೆಂಡತಿಗೆ, ‘‘ ಅವನು ಓಡಲು ಕಾರಣವೇನು?’’ ಎಂದು ಕೇಳುತ್ತಾನೆ. ಅವಳು ಅವನಿಗೆ ಹೇಳುತ್ತಾಳೆ, ‘‘ಊಟವಾದ ಮೇಲೆ ಈ ಒನಕೆಯನ್ನು ತನಗೆ ದಾನವಾಗಿ ಕೊಡಬೇಕೆಂದು ಬ್ರಾಹ್ಮಣ ಕೇಳಿದ. ನಾನು ಹಾಗೆ ಕೊಡಲು ಬರುವುದಿಲ್ಲ ಎಂದೆ. ಅವನು ಕುಪಿತನಾಗಿ ಓಡಿಹೋದ.’’. ಆಗ ಗಂಡನೆಂದ, ‘‘ ಒಂದು ಒನಕೆ ಹೋದರೆ ಏನಂತೆ? ಇನ್ನೊಂದು ತಂದು ಕೊಡುವೆ. ನೀನು ವಿನಾಕಾರಣ ಅವನನ್ನು ರೇಗಿಸಿದೆ’’. ಆ ಒನಕೆಯನ್ನು ಅತಿಥಿಗೆ ಕೊಡಲು ಯಜಮಾನ ಒನಕೆಯನ್ನು ಹಿಡಿದುಕೊಂಡು ಅವನು ಹೋಗುತ್ತಿದ್ದ ದಿಕ್ಕಿನೆಡೆಗೆ ಓಡತೊಡಗಿದ. ಇವನು ತನ್ನನ್ನು ಥಳಿಸಲು ಬರುತ್ತಿದ್ದಾನೆಂದು ಖಾತ್ರಿಯಾಗಿ ಅತಿಥಿ ಮತ್ತಷ್ಟು ಜೋರಾಗಿ ಓಡಿಹೋದ. ಈ ಘಟನೆಯಿಂದ ಯಜಮಾನನಿಗೆ ಕೆಟ್ಟ ಹೆಸರು ಬಂತು.

ಅವಿಭಕ್ತ ಕುಟುಂಬದ ಮಹತ್ವವನ್ನು ಬಣ್ಣಿಸುವ ಮಹಾಭಾರತದ ಒಂದು ಕತೆಯನ್ನು ಉದಾಹರಿಸುತ್ತಾರೆ. ವಿಭಾವಸು ಮತ್ತು ಸುಪ್ರತೀಕ ಎಂಬ ಋಷಿಪುತ್ರರು ತಂದೆ ಜೀವಿತವಾಗಿ ಇರುವ ವರೆಗೆ ಅನ್ಯೋನ್ಯವಾಗಿ ಇರುತ್ತಾರೆ. ತಂದೆ ತೀರಿದ ಮೇಲೆ ತಮ್ಮ ಸುಪ್ರತೀಕ ಅಣ್ಣನಿಗೆ ಆಸ್ತಿಯನ್ನು ಪಾಲು ಮಾಡಲು ಕೇಳುತ್ತಾನೆ. ಅಣ್ಣ ಎಷ್ಟು ಬುದ್ಧಿ ಹೇಳಿದರೂ ತಮ್ಮ ಕೇಳುವುದಿಲ್ಲ. ಕುಟುಂಬ ಅವಿಭಕ್ತವಾದರೆ ಏನು ಸಾಧಕ? ಅದು ವಿಭಕ್ತವಾದರೆ ಏನು ಬಾಧಕ? ಈ ವಿಷಯವನ್ನು ವೇದವ್ಯಾಸರು ಈ ಕಥೆಯ ಮೂಲಕ ತಿಳಿಸುತ್ತಾರೆ. ‘‘ವಿಭಾಗಂ ಬಹವೋ ಮೋಹಾತ್‌ ಕರ್ತುಮಿಚ್ಛಂತಿ ನಿತ್ಯಶಃ । ತತೋ ವಿಭಕ್ತಾಸ್ತ್ವನ್ಯೋನ್ಯಂ ವಿಕ್ರುಂದ್ಯಂತೇǚರ್ಥಮೋಹಿತಾಃ ।। ( ಆದಿಪರ್ವ ಅ.29, ಶ್ಲೋ.18)

ಕೇವಲ ಹಣದ ವ್ಯಾಮೋಹದಿಂದ, ಅರ್ಥಕ್ಕಾಗಿ ಆಸ್ತಿಯನ್ನು ಪಾಲುಮಾಡಿ ಕುಟುಂಬದಲ್ಲಿ ಎರಡು ಭಾಗ ಮಾಡುವವರು ಮುಂದೆ ಅನರ್ಥಗಳನ್ನು ಎದುರಿಸುವ ಪ್ರಸಂಗ ಬಂದಾಗ ಪಶ್ಚಾತ್ತಾಪದ ಛಾಯೆ ಅವರ ಮನದಲ್ಲಿ ಮೂಡುವುದು ಸಹಜ. ಅವಿಭಕ್ತ ಕುಟುಂಬದಲ್ಲಿ ಒಬ್ಬರು ಇನ್ನೊಬ್ಬರಿಗೆ ಸಹಕಾರಿಯಾಗಿರುತ್ತಾರೆ. ವಿಭಕ್ತ ಕುಟುಂಬದಲ್ಲಿ ಒಬ್ಬರು ತಪ್ಪು ಮಾಡಿದರೆ ತಿಳಿಹೇಳಲು ಇನ್ನೊಬ್ಬರಿರುವುದಿಲ್ಲ. ಅಣ್ಣ-ತಮ್ಮ ಬೇರೆಯಾಗಲು ಜಗಳಹಚ್ಚುವವರೂ ಇರುತ್ತಾರೆ. ಇದರಿಂದ ಜಗಳಹಚ್ಚುವವರಿಗೆ ಪ್ರಯೋಜನವಿರುತ್ತದೆ. ಕೆಲವರು ಇಲಿಗಳ ಹಾಗೆ ಸಂಬಂಧಗಳನ್ನು ಕಡಿಯುವುದರಲ್ಲಿ ಸಂತೋಷಪಡುತ್ತಾರೆ. (ವಿಘ್ನಸಂತೋಷಿಗಳಾಗಿರುತ್ತಾರೆ). ತಮ್ಮ ಮಾತು ಕೇಳದಿರಲು ಕುಪಿತನಾಗಿ ಅಣ್ಣ ತಮ್ಮನಿಗೆ ‘ಆನೆಯಾಗಿ ಬೀಳು’ ಎಂದು ಶಾಪ ಕೊಡುತ್ತಾನೆ. ಕುಪಿತನಾದ ತಮ್ಮ ಅಣ್ಣನಿಗೆ ಪ್ರತಿಯಾಗಿ ಶಾಪ ಕೊಟ್ಟು, ‘ಆಮೆಯಾಗಿ ಬೀಳು’ ಎನ್ನುತ್ತಾನೆ. ಇಬ್ಬರೂ ಋಷಿಪುತ್ರರು, ತಪಸ್ವಗಳು. ಪರಸ್ಪರ ಶಾಪಗಳಿಂದ ಆನೆ ಮತ್ತು ಆಮೆಯಾಗುತ್ತಾರೆ. ಇಬ್ಬರ ಜಗಳದಲ್ಲಿ ಅವರ ಆಸ್ತಿ ಮೂರನೆಯವರ ಪಾಲಾಗುತ್ತದೆ. ಇದು ಮಹಾಭಾರತದಲ್ಲಿ ಬರುವ ಕತೆ.

ಈ ಕತೆಯ ಮುಖಾಂತರ ‘ಅವಿಭಕ್ತರಾಗಿರಲು’ ಮಹಾಭಾರತ ಹೇಳುತ್ತದೆ. ಇದರ ಬಗ್ಗೆ ಮನುಸ್ಮೃತಿಯ ಅಭಿಪ್ರಾಯವನ್ನೂ ಶ್ರೀಗಳು ಹೇಳುತ್ತಾರೆ. ಹಿರಿಯ ಅಣ್ಣನ ಜೊತೆಗೆ ಕಿರಿಯವ ಇದ್ದರೆ ಪಂಚಮಹಾಯಜ್ಞಾದಿಗಳನ್ನು ಮಾಡುವ ಅಧಿಕಾರ ಅವನಿಗೆ ಇರುವುದಿಲ್ಲ. ತಾನೂ ಹೋಮಾದಿಗಳನ್ನು ಆಚರಿಸಿ ಹೆಚ್ಚಿನ ಧರ್ಮ ಸಂಪಾದನೆ ಮಾಡಿಕೊಳ್ಳುವ ಸದುದ್ದೇಶವಿದ್ದಾಗ ಮಾತ್ರ ಮನಸ್ತಾಪವಿಲ್ಲದೇ ಶಾಸ್ತ್ರೋಕ್ತ ವಿಧಿಯಿಂದ ಮನೆಯನ್ನು ಭಾಗ ಮಾಡಿದರೆ ತಪ್ಪಿಲ್ಲ ಎಂದು ಮನುಸ್ಮೃತಿ ಹೇಳುತ್ತದೆ. (ಮನುಸ್ಮೃತಿ: ಅ-9, ಶ್ಲೋ. 111)

ಕೆಲವರು ಜೀವನದಲ್ಲಿ ಎಲ್ಲ ಸುಖಗಳನ್ನು ಅನುಭವಿಸಿ ಕೊನೆಗೆ ಧರ್ಮಕಾರ್ಯ ಮಾಡೋಣ ಎನ್ನುತ್ತಾರೆ. ಇಂಥವರಿಗೆ ಮಹಾಭರತ ಎಚ್ಚರಿಕೆ ನೀಡುತ್ತದೆ. ಪ್ರಪಂಚದಲ್ಲಿ ಎಲ್ಲ ಆಸೆ-ಆಕಾಂಕ್ಷೆಗಳನ್ನು ಪೂರ್ಣಗೊಳಿಸಿ ಕೊನೆಗೆ ಧರ್ಮ ಮಾರ್ಗಕ್ಕೆ ಬಂದ ಒಬ್ಬ ವ್ಯಕ್ತಿಯೂ ಇಲ್ಲ ಎನ್ನುತ್ತದೆ. ಇಲ್ಲಿ ಮಂಕಿ ಎಂಬ ಜ್ಞಾನಿ ಹೇಳಿದ ಕತೆ ಬರುತ್ತದೆ. ಅನೇಕ ಆಸೆ-ಆಕಾಕ್ಷೆಗಳನ್ನು ಹುಟ್ಟಿಸುವುದೇ ಮನಸ್ಸು. ಸಾಧನೆಗೆ ಅಡ್ಡಿಯನ್ನುಂಟು ಮಾಡುವುದೇ ಮನಸ್ಸು. ಆದ್ದರಿಂದ ಮನವನ್ನು ಉದ್ದೇಶಿಸಿ ಮಂಕಿ ಹೇಳುತ್ತಾನೆ, ‘‘ ಓ ಮನಸ್ಸೇ? ನೀನು ಎಷ್ಟು ಸಲ ಮೋಸ ಹೋಗಿದ್ದೀ? ಎಷ್ಟು ಸಲ ವಿಫಲನಾಗಿದ್ದೀ? ಜೀವನದಲ್ಲಿ ನಿನ್ನ ಇಚ್ಛೆಗೆ ಅನುಸಾರವಾಗಿ ನಡೆದದ್ದು ಎಷ್ಟು? ನೀನೇ ಲೆಕ್ಕಹಾಕು. ನಿನ್ನ ಇಚ್ಛೆಗೆ ವಿರುದ್ಧವಾಗಿ ನಡೆದದ್ದೇ ಹೆಚ್ಚಿದೆ.’’ ಹಣದ ಆಸೆ ಎಂದಿಗೂ ಮುಗಿಯುವುದಿಲ್ಲ. ಇದಕ್ಕೆ ಉದಾಹರಣೆ ಕೊಡುತ್ತಾನೆ.

‘ಒಬ್ಬ ರಾಜ ಮಹಡಿಯ ಮೇಲೆ ನಿಂತು ನೋಡುತ್ತಿದ್ದ. ಇವನ ಸೇವಕನೊಬ್ಬ ದ್ವಾರದ ವರೆಗೆ ಬಂದವ ಮತ್ತೆ ಬಿಸಿಲಲ್ಲಿ ಮರಳಿ ಹೊರಟ. ಏನೋ ಮರೆತಂತೆ ಕಾಣುತ್ತಿತ್ತು. ರಾಜ ಅವನನ್ನು ಕೂಗಿ ನಿಲ್ಲಿಸಿದ ಮತ್ತು ಕೇಳಿದ, ‘‘ ಈ ವೈಶಾಖದ ಬಿಸಿಲಲ್ಲಿ ಮತ್ತೆ ಮರಳಿ ಯಾಕೆ ಹೊರಟಿರುವಿ?’’ಎಂದು. ಆಗ ಸೇವಕನೆಂದ, ‘‘ಬರುವಾಗ ಮಹಾದ್ವಾರದ ಬಳಿ ನನ್ನ ನಾಲ್ಕಾಣೆ ಬಿದ್ದುಹೋಗಿದೆ. ಅದನ್ನು ಹುಡುಕಿ ತರಲು ಹೊರಟಿದ್ದೇನೆ.’’ ರಾಜ ಅವನನ್ನು ಸಮೀಪ ಕರೆದು ಅವನ ಕೈಯಲ್ಲಿ ಒಂದು ರೂಪಾಯಿ ಕೊಟ್ಟ. ಅಷ್ಟರಿಂದ ತೃಪ್ತನಾಗದೆ ಸೇವಕ ಮತ್ತೆ ಬಿಸಿಲಲ್ಲಿ ಹೊರಟ. ರಾಜನೆಂದ, ‘‘ನಿನಗೆ ಒಂದು ರೂಪಾಯಿ ಕೊಟ್ಟಿರುವೆನಲ್ಲ, ಮತ್ತೆ ಯಾಕೆ ಬಿಸಿಲಲ್ಲಿ ಹೊರಟೆ?’’ ಇದಕ್ಕೆ ಸೇವಕನ ಉತ್ತರ, ‘‘ಸರಿ, ತಾವು ಒಂದು ರೂಪಾಯಿ ಕೊಟ್ಟಿರಿ.

ನಾನು ದ್ವಾರದ ಬಳಿಬಿದ್ದ ನಾಲ್ಕಾಣೆ ತಂದರೆ ನನ್ನ ಬಳಿ ಒಂದುಕಾಲು ರೂಪಾಯಿ ಆಗುತ್ತದೆ, ಅಲ್ಲವೇ?’’ ಎಂಬುದು. ‘ಮನುಷ್ಯನ ಆಸೆಗಳಿಗೆ ಮಿತಿಯಿಲ್ಲ, ಕೊನೆಯಿಲ್ಲ. ಇದಕ್ಕೆ ಕಾರಣ ಮನಸ್ಸು. ಇದಕ್ಕಾಗಿಯೇ ಮಂಕಿ ಮನವನ್ನು ನಿಂದಿಸುತ್ತಾನೆ. ಮಂಕಿಯ ಹಾಗೆ ಎಲ್ಲವನ್ನೂ ಪರಿತ್ಯಾಗ ಮಾಡಿ, ಮನವನ್ನು ನಿಗ್ರಹಿಸಿ, ಅರಣ್ಯಕ್ಕೆ ಹೋಗಿ ಸಾಧನೆ ಮಾಡುವುದು ಎಷ್ಟು ಜನರಿಂದ ಸಾಧ್ಯ? ಆದ್ದರಿಂದ ಪ್ರತಿಯಾಬ್ಬನೂ ಪ್ರತಿ ದಿನ ಬೆಳಿಗ್ಗೆ ಅಥವಾ ರಾತ್ರಿ ವಿಚಾರ ಮಾಡಬೇಕು. ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ತಾನು ಲೌಕಿಕ ಸಾಧನೆಗಾಗಿ ವ್ಯಯಿಸಿದ ಸಮಯವೆಷ್ಟು ಮತ್ತು ಪರಮಾರ್ಥ ಸಾಧನೆಗಾಗಿ ವ್ಯಯಿಸಿದ ಸಮಯವೆಷ್ಟು? ಸ್ವಂತ ಮನೆ ಮರೆತು, ಬಾಡಿಗೆಯ ಮನೆಯ ರಿಪೇರಿಗಾಗಿ ಹಣ ಸಮಯ ವ್ಯರ್ಥ ವೆಚ್ಚಮಾಡುತ್ತಿರುವೆನಲ್ಲಾ ಎಂದು ತನ್ನ ಮೂರ್ಖತನಕ್ಕೆ ಶಪಿಸಿ ಸಾಧನೆಗಾಗಿ ಹೆಚ್ಚು ಸಮಯ ವೆಚ್ಚಮಾಡಬೇಕು.’ ಎಂಬುದು ಶ್ರೀಗಳ ಹಿತವಚನ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+