ಆಚೀಚೆಯ ಸಂಭ್ರಮ
- ರಘುನಾಥ .ಚ.ಹ.
- ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಸಂಘ ಅಮೆರಿಕ ನೆಲದಲ್ಲಿ ಸುವರ್ಣ ಕರ್ನಾಟಕ ಸಂಭ್ರಮ ಆಚರಿಸುವ ಮೂಲಕ ಸಂಭ್ರಮ ಪಡುತ್ತದೆ.
-ಬೀದರ್‌ನಲ್ಲಿ ನಡೆಯಬೇಕಿದ್ದ ಕನ್ನಡ ಸಾಹಿತ್ಯ ಸಮ್ಮೇಳನ ಮುಂದಕ್ಕೆ ಹೋಗುತ್ತಲೇ ಇದೆ.
- ಆದರೆ ದಕ್ಷಿಣ ಕ್ಯಾಲಿಫೋರ್ನಿಯಾದ ಸಾಹಿತ್ಯ ರಂಗ ಸಂಸ್ಥೆ ಇದೀಗ ಸಾಹಿತ್ಯ ಸಮ್ಮೇಳನವೊಂದನ್ನು ಅಚ್ಚು ಕಟ್ಟಾಗಿ ಮಾಡಿ ಮುಗಿಸಿದೆ.
ಇವು ಕನ್ನಡ ಪ್ರೇಮದ ಎರಡು ಮುಖಗಳು. ಕನ್ನಡ ಪ್ರಜ್ಞೆ ತವರಿನ ಆಚೆಯೇ ಹೆಚ್ಚು ಜೀವಂತವಿದೆಯೆ? ಕನ್ನಡ ನುಡಿಯನ್ನು ಜೀವಂತವಾಗಿ ಇರಿಸಿಕೊಳ್ಳುವ ಅನಿವಾರ್ಯತೆ ಅನಿವಾಸಿ ಕನ್ನಡಿಗರಿಗೆ ಇದ್ದಿರಲೂಬಹುದು. ನಾವು ಮಾತ್ರ ಮೋರೆಗೆ ‘ಮಸಿ’ ಬಳಿಸಿಕೊಳ್ಳುತ್ತ ಔದಾರ್ಯದ ಸೋಗಿನಲ್ಲಿ ತೆಪ್ಪಗಿರುತ್ತೇವೆ. ನಮ್ಮ ಹಿರಿಯರೂ ಅಷ್ಟೇ, ಕುದಿರಕ್ತದ ಹುಡುಗರು ಮಸಿ ಡಬ್ಬ ಕೈಗೆತ್ತಿಕೊಂಡರೆನ್ನಿ; ಕೀರ್ತಿ ಕಲಶ ಕುಸಿದು ಬಿತ್ತೆಂದು ರೋದಿಸತೊಡಗುತ್ತಾರೆ. ಹೀಗಿದೆ ಕನ್ನಡದ ಸ್ಥಿತಿ. ಈ ವಿಷಾದಗಾಥೆಗಳೆಲ್ಲ ಪಕ್ಕಕ್ಕಿರಲಿ ಬಿಡಿ. ಕನ್ನಡದ ಹೆಸರಿನಲ್ಲಿ ಅಮೆರಿಕದಲ್ಲಿ ನಡೆದ ಒಂದು ಅರ್ಥಪೂರ್ಣ ಸಂಭ್ರಮದ ವಿಷಯ ಕೇಳಿ.
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ‘ಕನ್ನಡ ಸಾಹಿತ್ಯ ರಂಗ’ ಎನ್ನುವ ಅಪ್ಪಟ ಸಾಹಿತ್ಯ ಬಳಗ ಒಂದಿದೆ. ಡಾ.ಎಚ್.ವೈ.ರಾಜಗೋಪಾಲ್ ಮಾರ್ಗದರ್ಶನದಲ್ಲಿ ಕಳೆದ ವರ್ಷ ಆರಂಭವಾದ ಈ ‘ಸಾಹಿತ್ಯ ರಂಗ’, 2004ರ ಮೇ ತಿಂಗಳಲ್ಲಿ ‘ಕನ್ನಡ ಸಾಹಿತ್ಯ ವಸಂತೋತ್ಸವ’ ನಡೆಸಿತ್ತು. ತವರು ನೆಲದಿಂದ ಡಾ.ಪ್ರಭುಶಂಕರ ಮುಖ್ಯ ಅತಿಥಿಯಾಗಿ ಆಗಮಿಸುವ ಮೂಲಕ ವಸಂತ್ಸೋವದ ಕಳೆ ಹೆಚ್ಚಿಸಿದ್ದರು. ಭಾಷಣ, ಕವಿಗೋಷ್ಠಿ, ಅಮೆರಿಕನ್ನಡಿಗರನ್ನೂ ಬಿಟ್ಟಿರಲಿಲ್ಲ. ಈ ಸಂಭ್ರಮ ಹೆಚ್ಚಿಸಲಿಕ್ಕಾಗಿ,‘ಕುವೆಂಪು ಸಾಹಿತ್ಯ ಸಮೀಕ್ಷೆ’ ಎನ್ನುವ ಕೃತಿಯನ್ನು ಕನ್ನಡ ಸಾಹಿತ್ಯ ರಂಗ ‘ವಸಂತೋತ್ಸವ’ ಸಂದರ್ಭದಲ್ಲಿ ಪ್ರಕಟಿಸಿತ್ತು. ನಾಗ ಐತಾಳರ ಸಂಪಾದಕತ್ವದಲ್ಲಿ ಹೊರಬಂದ ಈ ಕೃತಿಯ ಬಹುಪಾಲು ಲೇಖನಗಳನ್ನು ಅಮೆರಿಕನ್ನಡಿಗರೇ ಬರೆದಿದ್ದುದು ವಿಶೇಷ.
ಇದೆಲ್ಲ ಕಳೆದ ವರ್ಷದ ವಿಷಯ. ಈ ವರ್ಷ ಏನೂ ಇಲ್ಲವಾ? ಈ ಸಲವೂ ಕನ್ನಡ ಸಂಭ್ರಮವಿತ್ತು. ಮೊನ್ನೆ ಡಿ.3ರಂದು ಲೇಕ್‌ವುಡ್ ಹೂವರ್ ಹರ್ಬರ್ಟ್‌ಮಿಡ್ಸ್‌ಸ್ಕೂಲ್‌ನಲ್ಲಿ ಸಾಹಿತ್ಯ ಸಮ್ಮೇಳನ ನಡೆಯಿತು. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಲ್ಲಿ ಸಾಹಿತ್ಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವ ಸಾಹಿತ್ಯ ರಂಗದೊಂದಿಗೆ ಸ್ಯಾಂಡಿಯಾಗೋದ ಕಸ್ತೂರಿ ಕನ್ನಡ ಸಂಘ ಮತ್ತು ಲಾಸ್ ಏಂಜಲೀಸ್‌ನ ‘ಅಂಜಲಿ’ ಕೈ ಜೋಡಿಸಿದ್ದವು. ಸಮ್ಮೇಳನದಲ್ಲಿ ಅಮೆರಿಕನ್ನಡಿಗ ಲೇಖಕರು ಮಿಂಚಿದರು. ಯಥಾಪ್ರಕಾರ ಪುಸ್ತಕ, ನಾಟಕ, ಕವಿತೆ, ಮಾತುಕತೆ ಇದ್ದವು. ಬರಗೂರು ರಾಮಚಂದ್ರಪ್ಪ ತವರಿನ ಪ್ರತಿನಿಧಿಯಾಗಿ ಮೇಳದಲ್ಲಿ ಭಾಗವಹಿಸಿದ್ದರು. ಅವರ ಕಂಚಿನ ಕಂಠದ ಭಾಷಣ ಕೇಳಿ ಸಭಿಕರು ರೋಮಾಂಚನಗೊಂಡರು; ಅಮೆರಿಕ ನೆಲದಲ್ಲಿನ ಕನ್ನಡ ಸ್ಪಂದನ ಕಂಡು ಬರಗೂರೂ ಪುಳಕಿತರಾದರೆನ್ನಿ.
ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ‘ಆಚೀಚೆಯ ಕತೆಗಳು’(ಕಡಲಾಚೆಯ ಕನ್ನಡ ಕಥಾಸಂಕಲನ) ಎನ್ನುವ ಕೃತಿ ಪ್ರಕಟಿಸಲಾಯಿತು. ಡಾ.ಗುರುಪ್ರಸಾದ್ ಕಾಗಿನೆಲೆ ಪ್ರಧಾನ ಸಂಪಾದಕರಾಗಿರುವ ಈ ಕಥನ ಕೃತಿಯನ್ನು ನ್ಯೂಜೆರ್ಸಿಯ ಕನ್ನಡ ಸಾಹಿತ್ಯ ಸಂಘ ಮತ್ತು ಬೆಂಗಳೂರಿನ ‘ಅಭಿನವ’ ಪ್ರಕಟಿಸಿವೆ.
ಅಮೆರಿಕ ಹಾಗೂ ದುಬೈ ಕನ್ನಡಿಗರ ಕಥೆಗಳನ್ನು ಒಳಗೊಂಡಿರುವ ‘ಆಚೀಚೆಯ ಕತೆಗಳು’ ಕೃತಿಯಲ್ಲಿ - ವೈ.ಆರ್. ಮೋಹನ್, ಶಶಿಕಲಾ ಚಂದ್ರಶೇಖರ್, ಗುರುಪ್ರಸಾದ್ ಕಾಗಿನೆಲೆ, ತ್ರಿವೇಣಿ ಶ್ರೀನಿವಾಸರಾವ್ ಮುಂತಾದ ಕಥನ ತಂತ್ರದಲ್ಲಿ ಪಳಗಿದ ಕಥೆಗಾರರೊಂದಿಗೆ ಮೊದಲ ಕಥೆ ಬರೆದ ಬರಹಗಾರರೂ ಸ್ಥಾನ ಪಡೆದಿದ್ದಾರೆ. ಸಂಸ್ಕೃತಿಯ ಪಲ್ಲಟಗಳು, ವಲಸೆಗಾರರ ದ್ವಂದ್ವಗಳು, ಆಧುನಿಕ ಬದುಕಿನ ವೈಪರೀತ್ಯಗಳು, ಜಾಗತಿಕ ಪರಿಸರದಲ್ಲಿ ನೆಲೆಸಿ ಕನ್ನಡತನ ಉಳಿಸಿಕೊಳ್ಳುವ ಹಂಬಲ- ಇವೆಲ್ಲವೂ ಕಥೆಗಳಾಗಿವೆ. ಈ ಭಾವನೆಗಳಿಗೆ ಮುನ್ನುಡಿಯಾಗಿ ಸಂಪಾದಕ ಮಂಡಳಿ ಪರವಾಗಿ ಕಾಗಿನೆಲೆ ಬರೆದಿರುವ ಜಾಣತನದ ಬರಹವಿದೆ. ನಿರೀಕ್ಷಣಾ ಜಾಮೀನಿನಂತೆ ಕಾಣುವ ಈ ಬರಹ - ಅಮೆರಿಕನ್ನಡಿಗರ ಹಂಬಲ ಹಾಗೂ ಗೊಂದಲಗಳನ್ನು ಪ್ರಾಮಾಣಿಕವಾಗಿ ಓದುಗರ ಮುಂದಿಡುತ್ತದೆ.
‘ಆಚೀಚೆಯ ಕತೆಗಳು’ ಕನ್ನಡದಲ್ಲಿ ನಡೆದ ಇತ್ತೀಚಿನ ಆಕರ್ಷಕ ಪ್ರಯೋಗವಾಗಿದೆ. ತಾಯಿ ನೆಲದಿಂದ ದೂರವಾದ- ಕನ್ನಡದ ಜೀವಂತ ಸಂಪರ್ಕ ಅಸಾಧ್ಯವಾದ ಜಾಗದಲ್ಲಿ ಕುಳಿತು, ಕೇವಲ ತಮ್ಮ ಮಾತೃಭಾಷೆ ಪ್ರೀತಿಗಾಗಿ ಎಂದೆಂದಿಗೂ ಕನ್ನಡವಾಗಿರುವ ಹಟದಲ್ಲಿ- ರಚಿಸಿದ ಈ ಕಥೆಗಳು ಕನ್ನಡ ಸಾಹಿತ್ಯ ಲೋಕಕ್ಕೆ ಕಡಲಾಚೆಯ ಕನ್ನಡಿಗರಿತ್ತ, ಅಪೂರ್ವ ಕೊಡುಗೆಯಾಗಿದೆ ಎಂದು ಹಿರಿಯ ಕಥೆಗಾರ ಯಶವಂತ ಚಿತ್ತಾಲ ಬೆನ್ನುಡಿಯಲ್ಲಿ ಬೆನ್ನು ತಟ್ಟಿದ್ದಾರೆ.
ನಿಜ, ಶ್ರೇಷ್ಠತೆಯ ಅಳತೆಗೋಲಿನಿಂದ ನೋಡಿದರೆ ಈ ಸಂಕಲನಕ್ಕೆ ಹೇಳಿಕೊಳ್ಳುವಂಥ ಮಹತ್ವವಿಲ್ಲ. ಆದರೆ ಅಭಿಮಾನ ಹಾಗೂ ಕನ್ನಡದ ಹಂಬಲವನ್ನು ಅಳೆಯಲು ಯಾವ ಅಳತೆಪಟ್ಟಿಯಿದೆ?
(ಮುನ್ನೂರು ಪುಟಗಳ ‘ಅಚೀಚೆಯ ಕತೆಗಳು’ ಕೃತಿಯ ಬೆಲೆ 150 ರೂಪಾಯಿ. ಪ್ರತಿಗಳಿಗಾಗಿ ಸಂಪರ್ಕಿಸಬೇಕಾದ ವಿಳಾಸ : ಅಭಿನವ, 17ಯ18-2, ಮೊದಲನೇ ಮುಖ್ಯರಸ್ತೆ(ಮುನೇಶ್ವರ ದೇವಸ್ಥಾನದ ಹತ್ತಿರ), ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560 040. ಸೆಲ್‌ಫೋನ್ : 98456-36288).
ಪೂರಕ ಓದಿಗೆ-
ಕನ್ನಡಸಾಹಿತ್ಯ ಸಮ್ಮೇಳನವೆಂಬ ಸ್ನೇಹಕೂಟ












Click it and Unblock the Notifications