ಅರಮನೆ ಮೈದಾನದಲ್ಲಿ ಶುಕ್ರವಾರದಿಂದ ಪುಸ್ತಕ‘ಜಾತ್ರೆ’
ಬೆಂಗಳೂರು : ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ(ನ.11)ದಿಂದ ಸತತ 10ದಿನಗಳ ಕಾಲ ಬೃಹತ್ ಪುಸ್ತಕೋತ್ಸವ ನಡೆಯಲಿದೆ.
ಬೆಂಗಳೂರು ಮುದ್ರಕರು ಹಾಗೂ ಪ್ರಕಾಶಕರ ಸಂಘ ಪ್ರದರ್ಶನವನ್ನು ಆಯೋಜಿಸಿದೆ. ಸಂಘದ ಅಧ್ಯಕ್ಷ ರಾಮ್ ಸಾಧ್ವಾನಿ ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ಒದಗಿಸಿದ್ದಾರೆ.
ಜಗತ್ತಿನ ಪ್ರಸಿದ್ಧ ಪ್ರಕಾಶನ ಸಂಸ್ಥೆಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ. ಕನ್ನಡ ಪುಸ್ತಕ ಮಾರಾಟಕ್ಕೆ ಕನ್ನಡ ಮಂಟಪ ಎಂಬ ಪ್ರತ್ಯೇಕ ವಿಭಾಗ ತೆರೆಯಲಾಗುವುದು. ಮೇಳದಲ್ಲಿ ಕನ್ನಡದ ಜೊತೆಗೆ ಬೇರೆ ಭಾಷೆಗಳ ಪುಸ್ತಕಗಳಿಗೂ ಅವಕಾಶ ನೀಡಲಾಗಿದೆ.
ಶುಕ್ರವಾರ(ನವೆಂಬರ್ 11)ಬೆಳಗ್ಗೆ 11.30ಕ್ಕೆ ರಾಜ್ಯಪಾಲ ಟಿ.ಎನ್.ಚತುರ್ವೇದಿ ಪುಸ್ತಕೋತ್ಸವ ಉದ್ಘಾಟಿಸುವರು. ಹಿರಿಯ ಕವಿ, ನಾಟಕಕಾರ ಹಾಗೂ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಕಂಬಾರ ಅಧ್ಯಕ್ಷತೆ ವಹಿಸಲಿದ್ದು, ಜಲಸಂಪನ್ಮೂಲ ಸಚಿವ ಮಲ್ಲಿಕಾರ್ಜುನ ಖರ್ಗೆ ಅತಿಥಿಯಾಗಿ ಆಗಮಿಸಲಿದ್ದಾರೆ.
ಮೇಳದ ನಿಮಿತ್ತ ಉಪನ್ಯಾಸ, ಭಾವಗೀತೆ, ಜನಪದಗೀತೆ, ನಾಟಕ, ಹಾಸ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ನವೆಂಬರ್ 20ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ , ಹಿರಿಯ ನಿಘಂಟು ತಜ್ಞ ಡಾ.ಜಿ.ವೆಂಕಟಸುಬ್ಬಯ್ಯ, ಮಾಧ್ಯಮ ಅಕಾಡೆಮಿ ಅಧ್ಯಕ್ಷ ವಿ.ಎನ್.ಸುಬ್ಬರಾವ್ ಮೊದಲಾದವರು ಭಾಗವಹಿಸುವರು. ಸಮಾರೋಪ ಭಾಷಣವನ್ನು ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಮಾಡಲಿದ್ದಾರೆ.
(ಇನ್ಫೋ ವಾರ್ತೆ)












Click it and Unblock the Notifications