• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಸ್ತಿಲು ಹಿಮಾಲಯದ ಮಧ್ಯೆ ಕವಿತೆ

By Staff
|

*ರಘುನಾಥ ಚ.ಹ.

'ಹೊಸ್ತಿಲು ಹಿಮಾಲಯದ ಮಧ್ಯೆ" ವಾಸುದೇವ ನಾಡಿಗರ ಎರಡನೆಯ ಕವನ ಸಂಕಲನ. ಮೊದಲ ಸಂಕಲನ 'ವೃಷಭಾಚಲದ ಕನಸು" ಬಿಡುಗಡೆಯಾಗಿ ಆರೇಳು ವರ್ಷಗಳ ನಂತರ ನಾಡಿಗರು ಬರೆದ ಪದ್ಯಗಳು ಸಂಕಲನ ರೂಪದಲ್ಲಿ ಪ್ರಕಟವಾಗುತ್ತಿವೆ. 'ವೃಷಭಾಚಲದ ಕನಸು" ಸಂಕಲನ 'ಅಭಿನವ" ಬಳಗದ ಬೇಂದ್ರೆ-ಅಡಿಗ ಕಾವ್ಯ ಪ್ರಶಸ್ತಿ ಪಡೆದಿತ್ತು . ಮೊದಲ ಸಂಕಲನಕ್ಕೊಂದು ಪ್ರಶಸ್ತಿ , ಇನ್ನೊಂದು ಸಂಕಲನ ಪ್ರಕಟವಾಗಲು ಆರೇಳು ವರ್ಷಗಳ ಅಂತರ- ಈ ಕಾರಣದಿಂದಾಗಿ 'ಹೊಸ್ತಿಲು ಹಿಮಾಲಯದ ಮಧ್ಯೆ" ಕೃತಿ ನಿರೀಕ್ಷೆ ಹುಟ್ಟಿಸುತ್ತದೆ.

ಬಹಳಷ್ಟು ಕವಿಗಳನ್ನು ಕಾಡುವ ಜಾಗತಿಕ ವಿದ್ಯಮಾನಗಳಿಂದ ವಾಸುದೇವ ನಾಡಿಗ್‌ ಪಾರಾಗಿದ್ದಾರೆ. 'ಹೊಸ್ತಿಲು ಹಿಮಾಲಯದ ಮಧ್ಯೆ" ಸಂಕಲನದಲ್ಲಿನ ಕವಿತೆಗಳು ಇಷ್ಟವಾಗಲಿಕ್ಕೆ ಕಾರಣ ನಾಡಿಗ್‌ರ ಈ ಬಿಡುಗಡೆ. ನೀರು, ಖಾಲಿಸೈಟು, ಮಲ್ಲಿಗೆಬಳ್ಳಿ, ಪುರಾಣದ ವ್ಯಕ್ತಿಗಳು, ಶವ ವಾಹನ, ನಾಯಿಪಾಡು, ಕೊಳಲ ವ್ಯಾಪಾರ.. ಇಂಥ ವಸ್ತುಗಳ ಬಗ್ಗೆ ನಾಡಿಗ್‌ ಆಪ್ತವಾಗಿ ಬರೆಯುತ್ತಾರೆ. ನಾಡಿಗ್‌ ಈ ನೆಲದ ತುಡಿತಗಳನ್ನೇ ಕವಿತೆಯಾಗಿಸಿಕೊಳ್ಳಲು ಅವರು ತವರು ನೆಲದಿಂದ ದೂರವಿರುವುದೂ ಕಾರಣವಿರಬಹುದು. ಛತ್ತೀಸಗಡದ ನವೋದಯ ಶಾಲೆಯಾಂದರಲ್ಲಿ ನಾಡಿಗ್‌ ಕನ್ನಡದ ಮೇಷ್ಟ್ರು. ತವರಿನಿಂದ ದೂರವಿರುವಾಗ ಜಾಗತಿಕ ವಿದ್ಯಮಾನಗಳಿಗಿಂತ ಮುಖ್ಯವಾಗುವ ಭಾಷೆಯ ಹಸಿವು ಹಾಗೂ ನೆಲದ ಸೆಳೆತ ನಾಡಿಗ್‌ರ ಕವಿತೆಗೆ ಅನುಕೂಲಕರವಾಗಿ ಪರಿಣಮಿಸಿವೆ.

Cover Page of Vasudeva Nadigs Hosthilu Himalayada Madhye Poetry Collectionಆದರೆ, ನಮ್ಮ ಕವಿಗಳ ಇವತ್ತಿನ ಕಾವ್ಯ ವಸ್ತುಗಳನ್ನು ಗಮನಿಸಿ- ಜಾಗತೀಕರಣ, ಉದಾರೀಕರಣ, ಬುಷ್ಷು , ಕ್ಲಿಂಟನ್ನು, ಸದ್ದಾಂ, ಲ್ಯಾಡೆನ್ನು ಹಾಗೂ ಬುದ್ಧ - ಇವರೆಲ್ಲ ತುಂಬಾ ಪ್ರೀತಿಯ ಕಾವ್ಯ ವಸ್ತುಗಳು. ನಮ್ಮ ಯುವಕವಿಗಳಿಂದು- ಪ್ರೇಮದ ಬಗ್ಗೆ ಬರೆಯುತ್ತಿಲ್ಲ , ಕಾಮದ ಬಗ್ಗೆ ಬರೀತಾ ಇಲ್ಲ . ಆದರೆ ಜಾಗತೀಕರಣದ ಬಗ್ಗೆ ಬರೀತಿದ್ದಾರೆ. ಜಾಗತೀಕರಣ ಸಾಹಿತಿಗಳ ಪಾಲಿಗೆ ತಮ್ಮ ಬುದ್ಧಿವಂತಿಕೆಯನ್ನು ತೋರಿಸಿಕೊಳ್ಳುವ ಸಾಧನವಾಗಿದೆ. ಜಾಗತೀಕರಣದ ಬಗ್ಗೆ ಬರೆಯುವ ಮೂಲಕ ಅನೇಕರಿಗೆ ವಿಶ್ವಕವಿಗಳಾಗುವ ಆಸೆ ಇರಬಹುದು! ಈ ಆಸೆಯಿಂದ ವಾಸುದೇವ್‌ ನಾಡಿಗ್‌ ಬಿಡುಗಡೆ ಹೊಂದಿದ್ದಾರೆ ಅನ್ನುವುದು ನನಗೆ ಬಹಳ ಮುಖ್ಯ. ಅವರಿಗೆ ಅಭಿನಂದನೆಗಳು.

ವಾಸುದೇವ ನಾಡಿಗರಿಗೆ ಭಾಷೆಯ ಬಿಗಿ, ಕವಿತೆಯ ಲಯ ಎರಡೂ ಸಿದ್ಧಿಸಿದೆ. 'ಹೊಸ್ತಿಲು ಹಿಮಾಲಯದ ಮಧ್ಯೆ" ಕಾವ್ಯ ಧ್ಯಾನದಲ್ಲಿ ತೊಡಗಿರುವ ಕವಿಗೆ ಕವಿತೆಯೆನ್ನುವುದು ಕೂತಕೂತಲ್ಲೇ ಹುಟ್ಟುವಂತದ್ದು . ಆ ಕೂತಕೂತಲ್ಲೇ ಹುಟ್ಟುವ ಕ್ರಿಯೆ ಕವಿತೆಯ ಸಹಜತೆಯನ್ನು ಧ್ವನಿಸುತ್ತದೆಯೇ ಹೊರತು ಸಾಮಾನ್ಯತೆಯನ್ನಲ್ಲ ಅನ್ನುವುದನ್ನು ಗಮನಿಸಬೇಕು.

ತನ್ನೆದುರಿಗೇ ತನ್ನ ಬಂಧು

ಬಾಂಧವರ ವಧೆ ಕಂಡ ಕುರಿಮರಿ

ಅಮೃತ ಸದೃಶ ಹಾಲ ಕೆನೆಯಲಿ

ಬಿದ್ದು ಮೃತವಾದ ಇರುವೆ

ಕಾಯಬೇಕಾದ ಕಣ್ಣಂಗಳದಲಿ

ಬಿದ್ದು ಚುಚ್ಚುವ ರೆಪ್ಪೆಗೂದಲು

ಈ ಇಂಥದ್ದೆಲ್ಲದರ ಚಿಂತೆ

ಕೂತಕೂತಲ್ಲೇ ಕವಿತೆ

- ಎನ್ನುತ್ತಾರೆ ಕವಿ. ಇದೇ ಕವಿ -

ಜೀರ್ಣವಾಗುವುದಿಲ್ಲ ಕರುಳಿನಲ್ಲಿ ಹಾದ ಎಲ್ಲವೂ

ನುರಿಯುವುದಿಲ್ಲ

ರಕ್ತವಾಗುವುದಿಲ್ಲ ನಾಡಿನಾಳದಿ ಸರಿದ ಎಲ್ಲವೂ

ಹರಿಯುವುದಿಲ್ಲ

- ಎಂದು ಬರೆಯುತ್ತಾರೆ. ಇದೇ ಸಂಕಲನದ 'ವಿಸ್ಮಯ ಗೀತೆ" ಕಾವ್ಯದ ಅರಿವಿನ- ಹುಟ್ಟಿನ ವಿಸ್ಮಯವೂ ಹೌದು. ಕವಿತೆಯ ಬಗೆಗೆ ವಿಸ್ಮಯಗೊಳ್ಳುವ, ಪ್ರಕೃತಿಯ ಬಣ್ಣಗಳಿಗೆ ಮೋಹಗೊಳ್ಳುವ ಕವಿಗೆ ಕವಿತೆ ವಿಷಾದದ ಅಭಿವ್ಯಕ್ತಿಯೂ ಆಗುತ್ತದೆ.

ಬತ್ತುವುದಿಲ್ಲ ಕಣ್ಣೀರು

ಮಾಯುವುದಿಲ್ಲ ವ್ರಣ

ಚಿರಪರಿಚಿತ ನೋವಿನೊಂದಿಗೇ

ನಗೆಯ ಸ್ನೇಹ

ಒಗ್ಗಿ ಹೋಗಿದ್ದೇವೆಂಬ

ಒಣ ಭ್ರಮೆಯಡಿಯಲ್ಲಿಯೂ

ಒಸರುತ್ತದೆ ಅಳು ನುಗ್ಗಿ

ಬರೆಯುವುದಾದರೂ ಏನು ?

ಕಣ್ಣೀರಲ್ಲದ್ದಿದ ಕವಿತೆ ?

ಮಸುಕು ಅಕ್ಷರದ ಹಾದಿ

ಇನ್ನು ಓದುವವರ ಸರದಿ.

ಬರೆಯುವುದಾದರೂ ಏನು/ಕಣ್ಣೀರಲ್ಲದ್ದಿದ ಕವಿತೆ ಎನ್ನುವ ಅಳಲು ತೀವ್ರವಾಗಿ ಕಾಡುವ ಸಾಲುಗಳು. ನಮ್ಮೆಲ್ಲ ಸಂಕಟಗಳು ತಲ್ಲಣಗಳು ಅಸ್ಪಷ್ಟವಾಗಿಯೇ ಅಪ್ರಕಟಿತವಾಗಿಯೇ ಉಳಿಯುವ ಸಾಧ್ಯತೆ ಮನಸ್ಸನ್ನು ಕ್ಷೋಭೆಗೊಳಿಸುವಂಥದ್ದು . ಈ ಸಾಲುಗಳು ಇವತ್ತಿನ ಕವಿಗಳ ಗೊಂದಲ- ಅಸಹಾಯಕತೆಯ ಭಾಷ್ಯದಂತೆಯೂ ತೋರುತ್ತವೆ.

ಸಂಕಲನದಲ್ಲಿ ಥಟ್ಟನೆ ಗಮನ ಸೆಳೆಯುವ ಇನ್ನೊಂದು ಕವಿತೆ 'ಹೊಸ ಶೂಗಳು". ಕಾಲಿಗೆ ಒಗ್ಗಿಕೊಳ್ಳದ ಹೊಸ ಶೂಗಳ ಕಿರಿಕಿರಿಯನ್ನು ಬಣ್ಣಿಸುತ್ತಾ ಸಾಗುವ ಕವಿತೆ ಕೊನೆಗೆ ನಿಲ್ಲುವುದು ಹೊಂದಾಣಿಕೆಯಾಂದೆ ಗತಿ ಎನ್ನುವ ಕಟು ವಾಸ್ತವದ ನಿಲುವಿಗೆ.

ಬೇಡ ಎನಿಸಿದಾಗಲೆಲ್ಲ

ಬಿಚ್ಚಿಡುವುದಕ್ಕೆ

ಬದುಕು ಶೂಗಳಲ್ಲ !

ಎನ್ನುವ ಸಾಲುಗಳು ತೀವ್ರತೆಯನ್ನು ಹೊಂದಿವೆ. ಆದರೆ ಅದೇಕೊ, ಕೊನೆಯ ಈ ಮೂರು ಸಾಲುಗಳು ಕವಿತೆಯಿಂದ ಪ್ರತ್ಯೇಕವಾಗಿಯೇ ಉಳಿದಂತೆ ಕಾಣುತ್ತವೆ. 'ಕಣ್ಣೀರಲ್ಲದ್ದಿದ ಕವಿತೆ" ಕಟ್ಟಿಕೊಡುವ ಓದಿನ ನಂತರದ ಸಮಾಧಾನ ಈ ಕವಿತೆಯಿಂದ ಸಿಗೊಲ್ಲ .

ವಾಸುದೇವ ನಾಡಿಗ್‌ರ 'ಹೊಸ್ತಿಲು ಹಿಮಾಲಯದ ಮಧ್ಯೆ" ಸಂಕಲನದ ಇನ್ನೊಂದು ಒಳ್ಳೆಯ ಕವಿತೆ 'ನೀರು" ಕೂಡ ಅಸಮಾಧಾನ ಉಳಿಸಿಯೇ ಕೊನೆಗೊಳ್ಳುತ್ತದೆ. ನೀರು ತುಂಬಾ ಅಚ್ಚುಕಟ್ಟಾದ ಪದ್ಯ. ಚೆಂದದ ಸಾಲುಗಳನ್ನು ನಾಡಿಗ್‌ ಈ ಕವಿತೆಯಲ್ಲಿ ಕಟ್ಟಿ ಓದುಗರ ಮುಂದಿಡುತ್ತಾರೆ.

ನೀರು

ಹರಿದರೆ ಹೊಳೆ

ಸ್ವಚ್ಛಂದ ಜೀವ ನಿರಾಳ.

ನಿಂತರೆ ಕೆರೆ

ಮಡುಗಟ್ಟುವ ಜೀವ ನಿರಾಶೆ.

ಎಂದು ನಾಡಿಗ್‌ ಬರೆಯುತ್ತಾರೆ. ಈ ಕವಿತೆಯಲ್ಲಿನ ಮೋಹಕತೆ ಹಾಗೂ ಚಿತ್ರಗಳು ಇಷ್ಟವಾದರೂ ಒಟ್ಟಾರೆ ಕವಿತೆಯ ಯಶಸ್ಸು ಅಷ್ಟಕ್ಕಷ್ಟೆ . ಈ ಅಸಮಾಧಾನಕ್ಕೆ ಕಾರಣ- ಇಡೀ ಕವಿತೆ ನಮ್ಮ ನಿರೀಕ್ಷೆಯಂತೆಯೇ ಸಾಗುವುದು. ನೀರಿನ ನಿಗೂಢತೆಯನ್ನು ಈ ಕವಿತೆ ಉಳಿಸಿಕೊಂಡಿಲ್ಲದಿರುವುದು. ಈ ಅಸಮಾಧಾನದ ನಡುವೆಯೂ ಈ ಸಂಕಲನದಲ್ಲಿ ನೀರು ಗಮನ ಸೆಳೆಯುವ ಪದ್ಯಗಳಲ್ಲೊಂದು.

'ಹೊಸ್ತಿಲು ಹಿಮಾಲಯದ ಮಧ್ಯೆ" ಸಂಕಲನದ ಬಹುಪಾಲು ಕವಿತೆಗಳು ಇಷ್ಟವಾಗುವುದು ಅವುಗಳ ಚಿತ್ರಕ ಶಕ್ತಿ ಹಾಗೂ ಸರಳತೆಯಿಂದ. 'ಗಣಿತದಲ್ಲಿ ನಪಾಸಾದ ತಮ್ಮನಿಗೆ" ಕವಿತೆ ತನ್ನ ಸರಳತೆಯಿಂದಲೇ ಗಮನ ಸೆಳೆಯುವ ಕವಿತೆ. ಪರೀಕ್ಷೆಯಲ್ಲಿ ಫೇಲಾದ ಇಲ್ಲಿನ ತಮ್ಮ ನಮ್ಮೆಲ್ಲರ ತಮ್ಮನೂ ಆಗಿರಬಹುದು. ತಮ್ಮನಿಗೆ ಸಮಾಧಾನ ಹೇಳುವ ಅಣ್ಣ ಕೊನೆಯಲ್ಲಿ ಹೇಳುವ ಮಾತು ಕವಿತೆಯ ಯಶಸ್ಸು .

ತಮ್ಮಾ ,

ಮಂತ್ರ ಮರೆತವನಂತೆ

ಕುಳಿತಿರುವೆ ಏಕೆ ?

ಲೆಕ್ಕದ ಪುಸ್ತಕ ಮುಚ್ಚಿ

ಹೊರಗೆ ಬಾ

ತೆರೆದ ಬಾಗಿಲಿನಾಚೆ ಎಷ್ಟೊಂದು ಲೆಕ್ಕಗಳಿವೆ !

- ವ್ಯಕ್ತಿ ಎದುರಿಸಬೇಕಾದ ಬದುಕಿನ ಲೆಕ್ಕಗಳ ಮುಂದೆ ಗಣಿತದ ಲೆಕ್ಕಗಳು ಲೆಕ್ಕಗಳೇ ಅಲ್ಲವೆನ್ನುವ ಜೀವನದರ್ಶನ ನಪಾಸಾದ ಎಲ್ಲರಿಗೂ ಮನೆಯವರು ಹೇಳಬೇಕಾದ ಸಮಾಧಾನ.

'ಖಾಲಿಸೈಟು" ಹಾಗೂ 'ಹುಟ್ಟು" ಗಮನ ಸೆಳೆಯುವ ಪದ್ಯಗಳು. ಇಲ್ಲಿನ ಖಾಲಿಸೈಟು ಕೇವಲ ಭೂಮಿಯಾಗಿಯಷ್ಟೇ ಉಳಿಯದೆ ನಮ್ಮ ಖಾಲಿ ಮನಸ್ಸೂ ಆಗಬಲ್ಲದು. ಖಾಲಿಸೈಟಿಗೆ ಬೆವರುಣಿಸಿ ನಿಲ್ಲುವ ಮನೆ , ಗೋಡೆಗಳ ನಡುವಿನ ನೆಮ್ಮದಿಯ ಶೋಧ- ಮನಸ್ಸು ಕಂಡುಕೊಳ್ಳಬೇಕಾದ ನೆಮ್ಮದಿಯ ದಾರಿಯೂ ಹೌದು.

'ಹುಟ್ಟು" ಕವಿತೆ ಬದುಕಿನ ಪದರಗಳು ಕೆದಕಿ ಬದುಕನ್ನು ಅರ್ಥೈಸಿಕೊಳ್ಳುವ ಪ್ರಯತ್ನ . ಈ ಕವಿತೆಯಲ್ಲಿ ನಾಡಿಗ್‌ ತಾಳುವ-

ಮಳೆಯೋ ಮೋಡವೋ ಬಿಸಿಲೋ

ಬೆಳ್ಳಂಬೆಳಗಿನಲ್ಲಿಯೂ

ಸಂಜೆಯ

ಆವಾಹಿಸಿಕೊಳ್ಳಲೇಬೇಕು.

- ಎನ್ನುವ ನಿಲುವು ಕುತೂಹಲಕರವಾದುದು.

ವಾಸುದೇವ ನಾಡಿಗ್‌ರ 'ಹೊಸ್ತಿಲು ಹಿಮಾಲಯದ ಮಧ್ಯೆ" ಸಂಕಲನದ ಕವಿತೆಗಳಲ್ಲಿ ಲವಲವಿಕೆಯಿದೆ, ಜೀವಂತಿಕೆಯಿದೆ. ಮುಖ್ಯವಾಗಿ- ನಾಡಿಗ್‌ ಕಟ್ಟಿಕೊಡುವ ಚಿತ್ರಗಳೆಲ್ಲ ಇದೇ ನೆಲದಿಂದ ಮೂಡಿಬಂದವೆ ; ಎಲ್ಲಿಂದಲೋ ಎರವಲು ತಂದ ಚಿತ್ರಗಳಲ್ಲ . ಕವಿಯ ಧೋರಣೆಯೂ ಆರೋಗ್ಯಕರವಾದುದು. ಇಷ್ಟೆಲ್ಲ ಇದ್ದೂ - ಕವಿತೆಯ ಅರ್ಥ ಸಾಧ್ಯತೆಗಳನ್ನು ಹೆಚ್ಚಿಸುವ ವಿಲಕ್ಷಣತೆ ಹಾಗೂ ಮುಂಜಾವಿನಲ್ಲೂ ಸಂಜೆಯ ಆವಾಹಿಸಿಕೊಳ್ಳುವ ಗಾಢತೆ ಇಲ್ಲಿನ ಕವಿತೆಗಳಲ್ಲಿ ತೃಪ್ತಿಕರವಾಗಿ ಕಾಣುವುದಿಲ್ಲ . ಕವಿತೆಯ ಜೀವದ್ರವ್ಯಗಳಲ್ಲೊಂದಾದ ವ್ಯಂಗ್ಯ-ವಿಡಂಬನೆ ನಾಡಿಗ್‌ ಕವಿತೆಗಳಲ್ಲಿ ನಾಟುವ ಮಟ್ಟಿಗೆ ಕಾಣುವುದಿಲ್ಲ .

ಗೇಯತೆ ಹಾಗೂ ಚಿತ್ರಕ ಶಕ್ತಿಯಾಂದಿಗೆ ವ್ಯಂಗ್ಯ-ವಿಲಕ್ಷಣತೆಗಳನ್ನೂ ಕಾವ್ಯಗತಗೊಳಿಸಿಕೊಂಡಲ್ಲಿ 'ಹೊಸ್ತಿಲು ಹಿಮಾಲಯದ ಮಧ್ಯೆ" ಸಂಕಲನದ ಕವಿ ಮಹತ್ವದ ಕವಿತೆಗಳನ್ನು ಬರೆಯಬಲ್ಲರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more