ನಿರ್ಗುಣ : ತಂತಾನೇ ಒಳ್ಳೆಯ ಕಥೆಗಳು
- ಎಸ್ಕೆ. ಶಾಮಸುಂದರ
[email protected]
ವರದಿ, ಬಿಡಿ ಲೇಖನ, ಕವನ, ವ್ಯಕ್ತಿಚಿತ್ರ ಬರಹಗಳ ಗೆರೆ ದಾಟಿ ಸೃಜನಶೀಲ ಬರವಣಿಗೆಗೆ ತೊಡಗಿಕೊಳ್ಳುತ್ತಿರುವ ಲೇಖಕ, ಲೇಖಕಿಯರ ದಂಡು ಸಾಂಖ್ಯಿಕವಾಗಿ ಮತ್ತು ಗುಣಾತ್ಮಕವಾಗಿ ವೃದ್ಧಿಸುತ್ತಿರುವುದನ್ನು ಗಮನಿಸಿ ಸಂತೋಷಪಟ್ಟಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ತಮ್ಮ ಬರವಣಿಗೆಗೆ ಪುಸ್ತಕ ರೂಪ ಕೊಡುವ ಒಲವು ಅಮೆರಿಕನ್ನಡಿಗರಲ್ಲಿ ಹೆಚ್ಚಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಅಮೆರಿಕ ಕನ್ನಡಿಗರು ಬೆಳಕು ಕಾಣಿಸಿದ ಪುಸ್ತಕಗಳ ಸಂಖ್ಯೆ 12ಕ್ಕೂ ಹೆಚ್ಚಿದೆ. ವಸ್ತುವಿನಲ್ಲೂ ವೈವಿಧ್ಯ ಕಾಣಿಸಿದೆ. ಕವನ ಸಂಕಲನ, ಕಥಾ ಸಂಕಲನ, ಪ್ರಬಂಧಗಳು, ಕಾದಂಬರಿ, ಇತಿಹಾಸ, ಆತ್ಮ ಚರಿತ್ರೆ ..ಹೀಗೆ ಪುಸ್ತಕ ಪ್ರೀತಿ ಹಲವು ಬಗೆಗಳಲ್ಲಿ ಮೈದಳೆಯುತ್ತಿದೆ. ಅನಿವಾಸಿ ಕನ್ನಡಿಗರ, ಕಂಪ್ಯೂಟರ್ ಬಳಸಿ ಕನ್ನಡ ಬರೆಯುವವರ ಪುಸ್ತಕ ಪ್ರೀತಿ ಬೆಳೆಯುತ್ತಿರುವುದಕ್ಕೆ ನಾಲಕ್ಕು ಪ್ರಮುಖ ಕಾರಣಗಳಿವೆ. ಮೊದಲನೆಯದು ಉಚಿತ ಬರಹ ತಂತ್ರಾಂಶ. ಎರಡನೆಯದು ಮಾಹಿತಿ ಕ್ರಾಂತಿ. ಮೂರನೆಯದು ಅಂತರ್‌ಜಾಲದಲ್ಲಿ ಪ್ರತಿನಿತ್ಯ ಒದಗುತ್ತಿರುವ ಕನ್ನಡದ ಹೊಸ ಓದಿನ ಒಡನಾಟ. ಕೊನೆಯದಾಗಿ ಒಳಕರೆಗೆ ಹೊರಮೈ ಸೃಷ್ಟಿಸುವ ತುಡಿತ.
ನಾಲಕ್ಕೂ ಪ್ರಯೋಜನಗಳನ್ನು ಚೆನ್ನಾಗಿ ದುಡಿಸಿಕೊಂಡಿರುವ ಗುರುಪ್ರಸಾದ್ ಕಾಗಿನೆಲೆ ಅವರದು ಪಳಗಿದ ಕನ್ನಡ ಕೈ. ಕನ್ನಡದ ನೆಲದಿಂದ ದೂರವಿದ್ದು ಪಾಪಪ್ರಜ್ಞೆಯನ್ನು ಅನುಭವಿಸುತ್ತಿದ್ದರೂ ಕನ್ನಡ ಸಂವೇದನೆಗಳನ್ನು ಜತನದಿಂದ ಕಾಪಾಡಿಕೊಂಡು ಬಂದಿರುವ ಲೇಖಕ. ಅವರು ಓದುಗರಿಗೆ ಕಷ್ಟಗಳನ್ನು ಕೊಡುವುದಿಲ್ಲ. ಸರಳತೆ ಮತ್ತು ಮನೋಜ್ಞತೆ ಅವರ ಬರವಣಿಗೆಯ ಜೀವಾಳ. ಇದರಿಂದಾಗಿಯೇ ಅವರ ಬರಹಗಳು ಎಷ್ಟೋ ಸಂದರ್ಭಗಳಲ್ಲಿ ಆತ್ಮೀಯ ಎನಿಸಿಕೊಳ್ಳುತ್ತವೆ.
ಅಮೆರಿಕದ ಮಿನೆಸೊಟಾದಲ್ಲಿ ನೆಲೆಸಿರುವ ಕಥೆಗಾರ ಡಾ.ಗುರುಪ್ರಸಾದ್ ಕಾಗಿನೆಲೆಯವರ ಕಥೆಗಳು ಇಷ್ಟವಾಗಲಿಕ್ಕೆ ಕಾರಣ ಆ ಕಥೆಗಳ ಸರಳತೆ. ಕಥೆ ಇವರ ಪಾಲಿಗೆ ತಿಣುಕುವ ತಾಂತ್ರಿಕ ಕಸರತ್ತಾಗಿ ಪರಿಣಮಿಸಿಲ್ಲ . ಅಜ್ಜಿ ಮೊಮ್ಮಕ್ಕಳ ಕೂರಿಸಿಕೊಂಡು ಕಥೆ ಹೇಳಿದಷ್ಟೇ ಸಲೀಸಾಗಿ ಗುರು ಓದುಗರಿಗೆ ತನ್ನ ಕಥೆಯನ್ನು ತಲುಪಿಸಬಲ್ಲರು.
ಇತ್ತೀಚೆಗೆ ಬಿಡುಗಡೆಯಾದ ಗುರು ಅವರ ಚೊಚ್ಚಲ ಸಂಕಲನ ‘ನಿರ್ಗುಣ’ದ ಕಥೆಗಳನ್ನು ಓದುವಾಗ ಮಾಸ್ತಿ ನೆನಪಾಗುತ್ತಾರೆ. ಮಾಸ್ತಿಯವರ ಜೀವನ ಪ್ರೀತಿ ಹಾಗೂ ವ್ಯಕ್ತಿ ಚಿತ್ರಣದ ಕುಶಲತೆ ‘ನಿರ್ಗುಣ’ ಸಂಕಲನದ ಕಥೆಗಳಲ್ಲಿ ಕಾಣಬಹುದು. ಮಾಸ್ತಿಯ ಕಥೆಗಳಂತೆಯೇ ಇಲ್ಲಿನ ಕಥೆಗಳೂ ಲವಲವಿಕೆಯಿಂದ ಸಾಗುತ್ತವೆ. ಒಳ್ಳೆಯ ಲಲಿತ ಪ್ರಬಂಧವೂ ಆಗಬಹುದಿದ್ದ ಇಲ್ಲಿನ ಕಥೆಗಳಿಗೆ ಪ್ರತಿಯಾಂದನ್ನೂ ವಿವರವಾಗಿ ಹೇಳುವ ಬಯಕೆ. ಈ ವಿವರಣೆಗಳು ಕೆಲವೊಮ್ಮೆ ಕಥನದ ಚೌಕಟ್ಟನ್ನು ಭಾರಗೊಳಿಸಿರುವುದೂ ಉಂಟು. ಆದರೆ, ಕಥೆಯ ಅಂತಸ್ಥಾಯಿಯಾದ ವಿಷಾದ ಓದುಗನನ್ನು ಆವಾಹಿಸಿಕೊಳ್ಳುತ್ತದೆ. ತಿಳಿಹಾಸ್ಯ ಶೈಲಿ ಓದುಗನ ಹಿಡಿದಿಟ್ಟುಕೊಳ್ಳುತ್ತದೆ. ಇದು ಗುರು ಅವರ ಕಥೆಗಳ ಯಶಸ್ಸು .
ಅಮೆರಿಕಾದಲ್ಲಿ ನೆಲೆಸಿದ್ದರೂ ( ತಮ್ಮನ್ನು ಅನಿವಾಸಿ ಬರಹಗಾರ, ಡಾಕ್ಟರು ಎಂದು ಗುರುತಿಸುವುದು ಬೇಡ ಎನ್ನುವುದು ಅವರ ಅರಿಕೆ ) ಗುರು ಅವರ ಕಥೆಗಳ ಬಹುತೇಕ ಪಾತ್ರಗಳು ಈ ನೆಲದ ವ್ಯಕ್ತಿಗಳೇ ಆಗಿರುವುದು ವಿಶೇಷ. ಕಾಂಪೌಂಡರ್ ರಂಗಸ್ವಾಮಿ, ಡಾ. ಮೂರ್ತಿ, ನರ್ಮದಾ, ವೆಂಕಟೇಶಯ್ಯ, ಪದ್ಮಾವತಿ, ಮಂಜ- ಇವರೆಲ್ಲಾ ಯಾವ ಊರುಪರಿಸರದಲ್ಲೂ ಕಾಣುವಂಥವರು. ಪಶ್ಚಿಮದ ನೆಲದಲ್ಲಿ ನಿಂತು ಪೂರ್ವದ ಮೌಲ್ಯಗಳ ವಿಶ್ಲೇಷಣೆ ಅಥವಾ ಪೂರ್ವದ ಕನವರಿಕೆ ಗುರು ಅವರ ಕಥನದಲ್ಲಿ ಕಾಣುವುದಿಲ್ಲ . ಅಂತೆಯೇ ಪಶ್ಚಿಮದ ವೈಭವೀಕರಣವೂ ಇಲ್ಲಿಲ್ಲ . ಪೂರ್ವ ಹಾಗೂ ಪಶ್ಚಿಮವನ್ನು ಒಳಗೊಳ್ಳುತ್ತಾ ಮೀರುವುದು ಇಲ್ಲಿನ ಕಥನದ ವೈಶಿಷ್ಟ್ಯ. ಈ ಪ್ರಯತ್ನದಲ್ಲಿ ಗುರುಪ್ರಸಾದ್ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ ಕೂಡ.
ಅಮೆರಿಕಾದ ಬರಹಗಾರನೊಬ್ಬನ ಕೃತಿಯನ್ನು ‘ಎನ್‌ಆರ್‌ಐ’ ಚೌಕಟ್ಟಿನಲ್ಲಿಟ್ಟು ನೋಡುವುದು ಇವತ್ತಿನ ಫ್ಯಾಷನ್. ಗುರು ಅವರ ಕಥೆಗಳಲ್ಲಿ ಪ್ರಾದೇಶಿಕ ಕಂದರದ ಯಾವ ಸೂಚನೆಯೂ ಕಾಣುವುದಿಲ್ಲ . ಹೀಗಾಗಿ ಯಾವ ಮೀಸಲಾತಿ ಇಲ್ಲದೆಯೂ ಗುರು ಅವರ ಕಥೆಗಳು ತಂತಾನೇ ಒಳ್ಳೆಯ ಕಥೆಗಳು. ಹೊಸ ತಲೆಮಾರಿನ ಭರವಸೆಯ ಕಥೆಗಾರರ ನಡುವೆ ‘ನಿರ್ಗುಣ’ದ ಕಥೆಗಾರ ಶೈಲಿ ಹಾಗೂ ಯೋಚನೆಗಳ ನಿಟ್ಟಿನಲ್ಲಿ ಭಿನ್ನವಾಗಿ ನಿಲ್ಲುವರು. ಇನ್ನಷ್ಟು ಅನುಭವ ಹಾಗೂ ತಂತ್ರಗಾರಿಕೆ ಮೇಳೈಸಿದಲ್ಲಿ ಗುರು ಗಟ್ಟಿ ಕಥೆಗಳನ್ನು ಕಟ್ಟಬಲ್ಲರು ; ಹಾಗಾಗಲಿ.
ಪೂರಕ ಓದಿಗೆ-












Click it and Unblock the Notifications