‘ಡಾಲರ್‌ ಕಾಲೊನಿ’ ಕಂಬಾರರ ಹೊಸ ಕೃತಿ?

* ಟಿ.ಎಂ. ಸತೀಶ್‌

Dr. Chandrashekar Kambaraವಸಾಹತು ಶಾಹಿಯ ಹೆಸರಿನಲ್ಲಿ ಒಮ್ಮೆ ದೀರ್ಘಕಾಲ ದಾಸ್ಯವನ್ನು ಅನುಭವಿಸಿಯಾಯ್ತು. ಈಗ ಜಾಗತೀಕರಣದ ಹೆಸರಿನಲ್ಲಿ ಮತ್ತೆ ಭಾರತವನ್ನು ವಿದೇಶೀಯರ ವಶಕ್ಕೆ ಒಪ್ಪಿಸುತ್ತಿದ್ದೇವೆ. ಹುಟ್ಟಿದಾರಭ್ಯದಿಂದ ಸ್ವದೇಶೀ ಮಂತ್ರ ಜಪಿಸುತ್ತಿದ್ದ ಇಂದಿನ ಸರಕಾರ ಜಾಗತೀಕರಣದ ಹೆಸರಿನಲ್ಲಿ ವಿದೇಶೀ ಸಂಸ್ಕೃತಿಗೆ ರತ್ನಗಂಬಳಿ ಹಾಸಿದೆ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟಿದ್ದಾರೆ.

ಮನೆಯಾಂದಾಗಲು, ರಕ್ಷಣೆಗೆ ಗೋಡೆಗಳು ಬೇಕು, ಹೊರಗಿನ ಸಂಪರ್ಕಕ್ಕೆ ಬಾಗಿಲುಗಳಿರಬೇಕು. ಆದರೆ, ಇಂದಿನ ಸರಕಾರ ಗೋಡೆಗಳೇ ಇಲ್ಲದ ಬರೀ ಬಾಗಿಲುವಾಡಗಳ ಮನೆಕಟ್ಟಲು ಹೊರಟಿದೆ. ಈ ಮನೆಯ ಬಾಗಿಲುವಾಡಗಳೊಂದಕ್ಕೂ ಕದಗಳೇ ಇಲ್ಲ ಎಂದು ಕನ್ನಡ.ಇಂಡಿಯಾಇನ್‌ಫೋ.ಕಾಂಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವ-ರು ತಿಳಿಸಿದ್ದಾರೆ.

ಜಾಗತೀಕರಣ - ಮುಕ್ತ ಮಾರುಕಟ್ಟೆಯ ದುಷ್ಪರಿಣಾಮಗಳ ಕಥೆಯನ್ನೇ ಆಧರಿಸಿ, ಜನಪದ ನೆಲೆಗಟ್ಟಿನಲ್ಲಿ ಈಗ ಕಾದಂಬರಿಯಾಂದನ್ನು ಕಂಬಾರರು ಬರೆಯುತ್ತಿದ್ದಾರೆ. ಈ ಕಾದಂಬರಿಗೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ಈ ಹೊಸ ಕಾದಂಬರಿಯ ಹೆಸರು ಡಾಲರ್‌ ಕಾಲೋನಿ ಆಗಬಹುದು ಎಂಬ ಸೂಚನೆಯನ್ನಷ್ಟೇ ನೀಡಿದ್ದಾರೆ.

ಬದ್ಧತೆ ಇಲ್ಲದ ಬೆಂಗಳೂರಿಗರಿಂದ ಕನ್ನಡ ಉಳಿಯಲು ಸಾಧ್ಯವೇ ಇಲ್ಲ ಎಂಬುದು ಕಂಬಾರರ ಖಚಿತ ಅಭಿಪ್ರಾಯ. ಇಂದು ಬೆಂಗಳೂರಿನಲ್ಲಿ ಹತ್ತಾರುವ ವರ್ಷದಿಂದ ಇರುವವರಿಗೂ ಕನ್ನಡ ಬರುವುದಿಲ್ಲ. ಅವರು ಬಾಯಿ ತೆರೆಯುವ ಮುನ್ನವೇ ನಾವು ಅವರ ಭಾಷೆಯಲ್ಲೇ ಉತ್ತರ ಕೊಡುತ್ತೇವೆ. ಎಂದಿನವರೆಗೆ ನಾವು ಅನ್ಯ ಭಾಷಿಕರೊಂದಿಗೆ ಕಡ್ಡಾಯವಾಗಿ ಕನ್ನಡದಲ್ಲೇ ಮಾತನಾಡುವುದಿಲ್ಲವೋ ಅಲ್ಲಿಯವರೆಗೆ ಕನ್ನಡ ಉಳಿಯಲು, ಬೆಳೆಯಲು ಸಾಧ್ಯವೇ ಇಲ್ಲ ಎನ್ನುವ ಕಂಬಾರರು ಕನ್ನಡ ಉಳಿದರೆ, ಅದು ಕೇವಲ ಹಳ್ಳಿಗರಿಂದ ಮಾತ್ರ ಎನ್ನುತ್ತಾರೆ.

ಕಂಬಾರರೊಂದಿಗೆ ಮಾತಿಗಿಳಿದಾಗ ..

ಪ್ರ : ಈಗ ನೀವು ಏನು ಬರೆಯುತ್ತಿದ್ದೀರಿ?

ಉ: ಹೊಸದೊಂದು ಕಾದಂಬರಿ ಬರಿಯುತ್ತಿದ್ದೇನೆ

ಪ್ರ: ಕಾದಂಬರಿಯ ಕಥಾವಸ್ತು?

ಉ: ಜಾಗತೀಕರಣ - ಮುಕ್ತ ಮಾರುಕಟ್ಟೆ ಹೆಸರಿನಲ್ಲಿ ರೈತರ ಶೋಷಣೆ ಆಗುತ್ತಿದೆ. ಇದು ಜಾನಪದ ನೆಲೆಗಟ್ಟಿನಲ್ಲಿ ಕಾದಂಬರಿಯಾಗಿ ಹೊರಹೊಮ್ಮಲಿದೆ.

ಪ್ರ: ಮುಂದಿನ ಜ್ಞಾನಪೀಠ ಪ್ರಶಸ್ತಿ ಕನ್ನಡದ ಯಾವ ಸಾಹಿತಿಗೆ ಬರಬಹುದು?

ಉ: ನೀವೇ ನನ್ನ ಬಾಯಿ ಕಟ್ಟಿ ಹಾಕಿದ್ದೀರಿ. (ಕನ್ನಡ.ಇಂಡಿಯಾ ಇನ್‌ಫೋ ) ನಿಮ್ಮ ಓಟು ವಿಭಾಗದಲ್ಲಿ ಮುಂದಿನ ಜ್ಞಾನಪೀಠ ಪ್ರಶಸ್ತಿಗೆ ನನ್ನನ್ನೂ ಒಬ್ಬ ಉಮೇದುವಾರನನ್ನಾಗಿ ಮಾಡಿದ್ದೀರಿ. ಕನ್ನಡದ ಸಾಹಿತ್ಯಾಭಿಮಾನಿಗಳೂ, ಜ್ಞಾನಪೀಠ ಪ್ರಶಸ್ತಿಗೆ ನನ್ನ ಹೆಸರನ್ನು ಸೂಚಿಸಿದ್ದಾರೆ. ಈ ಬಗ್ಗೆ ನಾನು ಏನೂ ಹೇಳಲು ಇಷ್ಟಪಡಲಾರೆ.

ಪ್ರ: ನೀವು ಜ್ಞಾನಪೀಠ ಪ್ರಶಸ್ತಿ ನಿರೀಕ್ಷಿಸಿದ್ದೀರಾ?

ಉ: ನಾನು ಎಂದೂ ಪ್ರಶಸ್ತಿಗಾಗಿ ಬರೆದವನಲ್ಲ. ಆದರೆ, ಮನುಷ್ಯನಿಗೆ ಪ್ರಶಸ್ತಿಗಳ ಆಸೆ ಇರತ್ತೆ. ನನ್ನ ಮನಸ್ಸು ನೊಬೆಲ್‌ ಪ್ರಶಸ್ತಿಯನ್ನೇ ಬಯಸತ್ತೆ. ಹಾಗೆಂದು ಪ್ರಶಸ್ತಿಗಾಗಿ ಕಾವ್ಯ ಬರೆಯಲ್ಲ. ನಾವು ಬರೆವ ಸಾಹಿತ್ಯಕ್ಕೆ ಪ್ರಾಸಂಗಿಕವಾಗಿ ಪ್ರಶಸ್ತಿ ಬರತ್ತೆ ಅಷ್ಟೆ. ನನ್ನ ನೋವು, ನನ್ನ ಶಿವಪುರ, ನಾಕಂಡ ವ್ಯಕ್ತಿಗಳಿಂದ ಕಾವ್ಯ - ಕಥೆ - ನಾಟಕ ಹುಟ್ಟತ್ತೆ. ಈ ಯಾವ ಕೃತಿಯೂ ಪ್ರಶಸ್ತಿಗಾಗಿ ಹುಟ್ಟಿದವುಗಳಲ್ಲ.

ನಾವೆಲ್ಲ ನಮ್ಮ ಸಂಸ್ಕೃತಿ ಬಗ್ಗೆ ಚಿಂತಿಸಬೇಕು. ಯಾವುದೇ ವೇದಿಕೆಯಲ್ಲಾದರೂ ನಾನು, ನಮ್ಮ ಸಂಸ್ಕೃತಿ, ನಮ್ಮ ಭಾಷೆ, ಸಾಹಿತ್ಯದ ಉಳಿವಿಗೆ ಹೋರಾಟ ಮಾಡ್ತೀನಿ. ಕನ್ನಡ ಒಂದು ಶ್ರೀಮಂತ ಭಾಷೆ. ಹಿಂದೆ ಕಂದಪದ್ಯಗಳಲ್ಲಿ - ಸಮರ್ಥನೀಯವಲ್ಲದ ಭಾಷೆಯಲ್ಲಿ ಜಾಹೀರಾತು ನೀಡುವಂತಹ ಪರಿಸ್ಥಿತಿ ಇತ್ತು. ಈಗ ಕನ್ನಡ ಭಾಷೆಗೆ ಕ್ರಿಯಾತ್ಮಕತೆ ದೊರೆತಿದೆ. ಕನ್ನಡ ಭಾಷೆಗೆ ಒಂದು ಸಾಮರ್ಥ್ಯ ಇದೆ. ಕನ್ನಡ ಭಾಷೆಗೆ, ಶಾಸ್ತ್ರಕ್ಕೆ, ಸೂತ್ರಕ್ಕೆ ಸೂಕ್ತವಾದ ಸಾಮರ್ಥ್ಯವನ್ನು ಕೊಡಲಾಗಿದೆ. ವಚನಕಾರರು ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.

ಮುಂದಿನ ಪೀಳಿಗೆ ಮುಂದುವರಿಸಿಕೊಂಡು ಬಂದಿದೆ. ನಮ್ಮ ಭಾಷೆಗೆ ಸಾಮರ್ಥ್ಯ ಇದೆಯಾದರೂ, ಅದರ ಬಳಕೆ ಸೂಕ್ತವಾಗಿ ಆಗುತ್ತಿಲ್ಲ. ಆಡಳಿತದಲ್ಲಂತೂ ಕನ್ನಡ ಬಳಕೆ ಸಂಪೂರ್ಣ ಕುಸಿದಿದೆ. ಹಿರಿಯರು ದಾರಿತಪ್ಪಿದರೆ, ಭಾಷೆ ಅಧೋಗತಿ ಮುಟ್ಟಿದಂತೆಯೇ? ಹಾಗಾದಾಗ ಆಫ್ರಿಕಾದ ಭಾಷೆಗಳ ಹಾಗೆ ಆಗತ್ತೆ. ಅಲ್ಲಿನ ಲೇಖಕರು ತಮ್ಮ ಭಾಷೆಯನ್ನು ಬಿಟ್ಟು ಇಂಗ್ಲಿಷ್‌ನಲ್ಲಿ ಸಾಹಿತ್ಯ ರಚಿಸುತ್ತಾರೆ.

ನಾನು ನಮ್ಮ ಭಾಷೆಯಲ್ಲಿ ಸಾಹಿತ್ಯ ರಚಿಸಿ, ನಮ್ಮ ಭಾಷೆಯನ್ನು ಶ್ರೀಮಂತಗೊಳಿಸಬೇಕು. ನಮ್ಮವರೂ ಮೊದಮೊದಲು ಇಂಗ್ಲಿಷಿನಲ್ಲೇ ಬರೆದರು, ಆಮೇಲೆ ಕನ್ನಡದಲ್ಲೇ ತಮ್ಮ ಅನುಭವವನ್ನು ಕೊಟ್ಟರು. ಕನ್ನಡದಲ್ಲಿ ಉತ್ತಮ ಕಥೆ, ಕಾದಂಬರಿ, ನಾಟಕ, ಕಾವ್ಯಗಳು ಬಂದಿವೆ. ವಿಶ್ವಮಟ್ಟದಲ್ಲಿ ಕನ್ನಡ ತನ್ನನ್ನು ಗುರುತಿಸಿಕೊಂಡಿದೆ. ಈ ಭಾಷೆಯನ್ನು ಬೆಳಸುವಲ್ಲಿ ತಂತ್ರಜ್ಞಾನವೂ ಈಗ ನೆರವಾಗಿದೆ.

ಸಾಗರದಾಚೆಯ ಜನರೂ ಕನ್ನಡವನ್ನು ನಿತ್ಯ ಓದುವಂತಾಗಿರುವುದು ಸಂತಸದ ವಿಷಯ. ಒಂದು ಕಾಲದಲ್ಲಿ ಇಂಗ್ಲಿಷ್‌ ಕೂಡ ಪ್ರಾದೇಶಿಕ ಭಾಷೆಯಂತೆಯೇ ಇತ್ತು. ಆ ಭಾಷೆಯ ಮಂದಿ ಇಂಗ್ಲಿಷ್‌ನಲ್ಲೇ ಚಿಂತಿಸುವುದನ್ನು ಕಲಿತಿದ್ದರಿಂದ ಅದು ವಿಶ್ವವ್ಯಾಪಿಯಾಯಿತು. ನಾವು ನಮ್ಮ ಭಾಷೆ, ನಮ್ಮ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಚಿಂತಿಸುವುದನ್ನು ಕಲಿತರೆ, ಕನ್ನಡ ಡಿಂಡಿಮವೂ ವಿಶ್ವಾದ್ಯಂತ ಮೊಳಗುತ್ತದೆ ಎಂದು ಕಂಬಾರರು ಖಡಾಖಂಡಿತವಾಗಿ ಹೇಳುತ್ತಾರೆ.

ನೀವೇನಂತೀರಿ?

ವಾರ್ತಾ ಸಂಚಯ

Click here to go to top
ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+