ಒಂದೊಂದು ತುತ್ತು ತಿನ್ನುವಾಗಲೂ ನೆನಪಾಗುವ ಕನ್ನಡ ಮೇಷ್ಟ್ರು

Posted By:
Subscribe to Oneindia Kannada

ನವೆಂಬರ್ 1 ಬಂದರೆ ಮತ್ತೊಮ್ಮೆ ಶಿಕ್ಷಕರ ದಿನಾಚರಣೆ ಬಂದಷ್ಟೇ ಖುಷಿಯಾಗುತ್ತದೆ. ಕನ್ನಡ ಹೇಳಿಕೊಟ್ಟ ಮೇಷ್ಟ್ರುಗಳು, ಅವರು ಪಾಠ ಮಾಡುತ್ತಿದ್ದ ರೀತಿ ನೆನಪಾಗುತ್ತದೆ. ಏಳನೇ ಕ್ಲಾಸ್ ವರೆಗೆ ನಾನು ಓದಿದ್ದು ಕನ್ನಡ ಮೀಡಿಯಂ. ಚಾಮರಾಜಪೇಟೆ ಐದನೇ ಮುಖ್ಯರಸ್ತೆಯಲ್ಲಿರುವ ಶ್ರೀರಾಮಮಂದಿರ ಶಾಲೆಯಲ್ಲಿ.

ಕನ್ನಡ ಒಂದು ಅದ್ಭುತ ಭಾಷೆ ಎಂಬುದಕ್ಕೆ ಇಲ್ಲಿವೆ ನೋಡಿ 10 ಸಾಕ್ಷಿ!

ಅಲ್ಲಿ ಗೋಪಿನಾಥ ಮೇಷ್ಟ್ರು ಕನ್ನಡ ಹೇಳಿಕೊಡುತ್ತಿದ್ದರು. ಪಾಠ ಶುರು ಮಾಡುವ ಮುಂಚೆ ಅದಕ್ಕೆ ಸಂಬಂಧಪಟ್ಟ ವಿಚಾರಗಳ ಸುತ್ತ ನಮ್ಮನ್ನೆಲ್ಲ ಪ್ರಶ್ನೆ ಮಾಡಿ, ನಮ್ಮಿಂದಲೇ ಪಾಠದ ಹೆಸರು ಕೂಡ ಬರುವ ಹಾಗೆ ಮಾಡುತ್ತಿದ್ದರು. ಕಾಗುಣಿತವನ್ನು ಕಲಿತಿದ್ದು ಅವರಿಂದಲೇ. ಪುಣ್ಯಕೋಟಿ ಪದ್ಯವನ್ನು ಕೇಳಿದ್ದು, ಕಲಿತಿದ್ದು ಅವರಿಂದಲೇ.

Kannada Rajyotsava: This is the day to remember Kannada teachers

ಕೆಂಪಗೆ, ಎತ್ತರವಾಗಿದ್ದ ನಿಲುವು ಅವರದು. ಅವರ ಹತ್ತಿರ ಕೋಲಿನಿಂದ ಹೊಡೆತ ತಿನ್ನುವಾಗಲೂ ನಗು ಬರುತ್ತಿತ್ತು. ಜಾದೂಗಾರ ತನ್ನ ಕೋಲನ್ನು ಗಾಳಿಯಲ್ಲಿ ತಿರುಗಿಸಿ, ಏನನ್ನೋ ಸೃಷ್ಟಿಸುವ ಕೌತುಕ ತೋರುವಂತೆ, ಕೈ ಮೇಲೆ ನಾಲ್ಕೈದು ಬಾರಿ ಕೋಲನ್ನು ಸವರಿ, ಠಪ್ ಅಂತ ಹೊಡೆತ ಬೀಳುತ್ತಿತ್ತು. ಅದಕ್ಕೂ ಮುಂಚೆ, ಸಾರಿಸಿ- ಗುಡಿಸಿ, ರಂಗೋಲಿ ಹಾಕಿ ಅಂತ ಹೇಳಿದ ನಂತರವೇ ಹೊಡೆತ ಕೊಡುತ್ತಿದ್ದರು.

ವಿಭಕ್ತಿ ಪ್ರತ್ಯಯ, ಕಾಗುಣಿತ, ಪುಲಿಗೆರೆ ಸೋಮನಾಥನ ಶತಕ...ಇವೆಲ್ಲ ಕಲಿತಿದ್ದು ಅವರಿಂದಲೇ. ಕಾಗುಣಿತ ತಪ್ಪಿಲ್ಲದೆ ಬರೆಯುವುದನ್ನು ಕಲಿಸಿಕೊಟ್ಟ ನನ್ನ ಪಾಲಿನ ಮಹಾನ್ ಗುರು ಅವರು. ಕನ್ನಡದ ಪ್ರೀತಿ ಆಳವಾಗಿ ಮನಸಿನೊಳಗೆ ಇಳಿಯುವಂತೆ ಮಾಡಿದ ಶ್ರೀರಾಮ ಮಂದಿರ ಹಾಗೂ ಗೋಪಿನಾಥ ಮೇಷ್ಟ್ರಿಗೆ ಶಿರ ಸಾಷ್ಟಾಂಗ ನಮಸ್ಕಾರ.

ನ. 1ರಂದು ಗುಂಡ್ಲುಪೇಟೆ ಬಸ್ ಕಂಡಕ್ಟರ್ ಎಳೆಯಲಿದ್ದಾರೆ ಕನ್ನಡದ ತೇರು

ಇನ್ನು ಹೈಸ್ಕೂಲ್ ಕಲಿತಿದ್ದು ಬ್ಯಾಂಕ್ ಕಾಲೋನಿಯ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ. ಅಲ್ಲಿ ಹತ್ತನೇ ತರಗತಿಗೆ ತೃತೀಯ ಭಾಷೆ ಕನ್ನಡ ಹೇಳಿಕೊಡುತ್ತಿದ್ದವರು ಎನ್.ನಾಗರಾಜ್ (ಎನ್.ಎನ್). ಅವರ ಆಕೃತಿ ಸ್ವಲ್ಪ ಕುಳ್ಳು. ಲೂನಾದ ಮೇಲೆ ಬರುತ್ತಿದ್ದರು. ಆದರೆ ಸ್ವಲ್ಪ ಶಿಸ್ತು ತಪ್ಪಿದರೂ ಚೇಷ್ಟೆ ಪ್ರಶ್ನೆ ಕೇಳಿದರೂ ಅವರಿಗೆ ಸರ್ರನೆ ಸಿಟ್ಟು ಬರುತ್ತಿತ್ತು. ಸರಿಯಾಗಿ ಹೊಡೆತ ಬೀಳುತ್ತಿತ್ತು.

ಆದರೆ, ಪಾಠ ಮಾಡುವಾಗ ಪದಗಳ ವ್ಯುತ್ಪತ್ತಿ, ಎರಡು ಪದ ಸೇರಿ ಆಗುವ ಸಂಧಿ, ಉಚ್ಚಾರಣೆ ಇವುಗಳ ಬಗ್ಗೆ ತುಂಬ ಸೊಗಸಾಗಿ, ಮನದಟ್ಟಾಗುವಂತೆ ಹೇಳಿಕೊಟ್ಟರು.

ಆ ನಂತರ ಕಾಲೇಜು ಕಲಿತಿದ್ದು ಶ್ರೀನಿವಾಸ ನಗರದ ಕನಕ ಕಾಲೇಜಿನಲ್ಲಿ. ಅಲ್ಲಿ ಕನ್ನಡ ಲೆಕ್ಚರರ್ ಆಗಿದ್ದವರು ಮಂಜುನಾಥ್. ಮೂರು ವರ್ಷ ಪ್ರಥಮ ಭಾಷೆ ಸಂಸ್ಕೃತ ಕಲಿತಿದ್ದ ನನಗೆ ಕಾಲೇಜಿನಲ್ಲಿ ಕನ್ನಡವನ್ನು ಮೊದಲ ಭಾಷೆಯಾಗಿ ಕಲಿಯೋದು ದೊಡ್ಡ ಕಷ್ಟದಂತೆ ಕಂಡಿತು.

2017ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಹಳೆಗನ್ನಡ ಪದ್ಯ, ಗದ್ಯ ಬಲು ಗೋಳಾಡಿಸಿದವು. ಆದರೆ ಅದು ಕೆಲ ಕಾಲ ಮಾತ್ರ. ಮಂಜುನಾಥ್ ಅವರು ನನ್ನೊಬ್ಬನಿಗೆ ಅಂತಲೇ ಕೆಲ ಸಲ ಎರಡೆರಡು ಬಾರಿ ಪಾಠ ಮಾಡಿದರು. ಹಳಗನ್ನಡ ಅಕ್ಷರಗಳನ್ನು, ಓದುವ ರೀತಿಯನ್ನು ಹೇಳಿಕೊಟ್ಟರು. ಪದವಿ ಓದುವಾಗ ಒಂದು ಗಂಟೆಯ ತರಗತಿಯಲ್ಲಿ ಇಪ್ಪತ್ತು ನಿಮಿಷ ಪತ್ರಿಕೆಗಳಲ್ಲಿ ಬರುವ ಪದಬಂಧ ಬಿಡಿಸುವುದಕ್ಕೆ ಮೀಸಲಾಗಿಡುತ್ತಿದ್ದರು.

ಈ ಮೂವರನ್ನು ನೆನಪಿಸಿಕೊಳ್ಳಬೇಕು ಏಕೆಂದರೆ, ಒಂದು ತುತ್ತು ಅನ್ನ ತಿನ್ನುವಾಗಲೂ ಇದು ಕನ್ನಡ ಭಾಷೆ ಕೊಟ್ಟಿದ್ದು, ನನ್ನ ದುಡಿಮೆ ಸಾಧ್ಯವಾಗುತ್ತಿರುವುದು ಕಾಗುಣಿತ ತಪ್ಪಿಲ್ಲದ, ಓದಿಸಿಕೊಂಡು ಹೋಗುವಂಥ ಕನ್ನಡ ಬರುವುದರಿಂದ. ನಾನೊಬ್ಬ ಪತ್ರಕರ್ತ. ಆ ಮೂವರ ಋಣ ನನ್ನ ಮೇಲಿದೆ. ಕನ್ನಡ ರಾಜ್ಯೋತ್ಸವದ ದಿನ ಕೈ ತುತ್ತು ನೀಡುವ ಅಮ್ಮನಂಥ ಕನ್ನಡ ನೆನಪಾಗುವ ಜತೆಗೆ, ಅಮ್ಮನನ್ನು ಇನ್ನೂ ಹೆಚ್ಚು ಅರ್ಥ ಮಾಡಿಕೊಳ್ಳಲು ದಾರಿ ತೋರಿಸಿದ ಈ ಮೂವರು ನೆನಪಾಗುತ್ತಾರೆ.

ನಿಮಗೆ ಕನ್ನಡ ಕಲಿಸಿದವರ ಬಗ್ಗೆ ಹೇಳಿಕೊಳ್ಳಬೇಕು ಅನ್ನಿಸಿದರೆ ಖಂಡಿತಾ ತಿಳಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
On the occasion of Kannada Rajyotsava on November 1st, remembrance of teachers who are all taught Kannada.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ