ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನಸಿದ್ದರೆ ಮಾರ್ಗವೇ? ಮನಸ್ಸೇ ಮಹಾದೇವನೇ?

By ಡಾ. ವಿನೋದ ಜಿ. ಕುಲಕರ್ಣಿ, ಹಿರಿಯ ಮನೋರೋಗ ತಜ್ಞರು, ಹುಬ್ಬಳ್ಳಿ
|
Google Oneindia Kannada News

ವ್ಯಕ್ತಿಗೆ ಮನಸ್ಸೇ ಮುಖ್ಯವೇ? ಅವನ ಎಲ್ಲಾ ಅಂಗಾಂಗಗಳನ್ನು ನಿಯಂತ್ರಿಸುವದು ಅವನ ಮನಸ್ಸೇ? ಅವನ ಭಾವನೆ, ಕಾರ್ಯ ತತ್ಪರತೆ, ವಿಚಾರಧಾರೆ, ವರ್ತನೆ, ಅವನು ಜನರನ್ನು ನೋಡುವ ಪರಿ, ಬಗೆ, ಇದಕ್ಕೆಲ್ಲಾ ಅವನ ಮನಸ್ಸೇ ಪ್ರಾಮುಖ್ಯತೆ ಪಡೆದಿರುತ್ತದೆಯೋ? ನಿಜವಾಗಿಯೂ ಮನಸಿದ್ದರೆ ಮಾರ್ಗವೇ? ಮನಸ್ಸೇ ಮಹಾದೇವನೇ? ಮನಸ್ಸಿಂದಲೇ ಹಲವಾರು-ಅಲ್ಲಲ್ಲಾ-ನೂರಾರು ಕಾಯಿಲೆಗಳು ಹುಟ್ಟಿಕೊಳ್ಳುತ್ತಿವೆಯೇ?

ನೋಡಿ, ಮನದ ಬಗ್ಗೆ, ಮನಸ್ಸಿನ ಬಗ್ಗೆ, ಸ್ವಲ್ಪ ಬರೆಯಬೇಕೆಂದರೆ, ಸುದೀರ್ಘ ವಿಚಾರಗಳೇ ಮನದಾಳವನ್ನು, ನಮಗರಿವಿಲ್ಲದಂತೆ ಉತ್ಪನ್ನವಾಗುತ್ತಿದೆ. ನಾವೇ ಮೈಮರೆತಂತೆ, ಮನಸ್ಸಿನಲ್ಲೂ ವಿಚಾರಗಳು ಭೋರ್ಗರೆಯುತ್ತಲೇ ಇರುತ್ತವೆ.

ಓರ್ವ ವ್ಯಕ್ತಿಯ ಆರೋಗ್ಯಕ್ಕೆ ಅವನ ಮನಸ್ಸೇ ಭದ್ರ ಅಡಿಪಾಯ, ಭದ್ರ ತಳಹದಿ, ಭದ್ರ ಬುನಾದಿ! ಈ ವರುಷದ ಅಕ್ಟೋಬರ್ 10ರಂದು ವಿಶ್ವದಾದ್ಯಂತ "ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ" ಹಮ್ಮಿಕೊಳ್ಳಲಾಯಿತು. ವಿಶ್ವ ಆರೋಗ್ಯ ಸಂಸ್ಥೆಯು ಈ ವರುಷದ ದಿನಾಚರಣೆಗೋಸ್ಕರ, ಈ ರೀತಿಯ ಘೋಷಣೆಯನ್ನು ಬಿಡುಗಡೆ ಮಾಡಿದೆ. "ಮಾನಸಿಕ ಆರೋಗ್ಯದಲ್ಲಿ ಘನತೆ" (ಡಿಗ್ನಿಟಿ ಇನ್ ಮೆಂಟಲ್ ಹೆಲ್ತ್)". ಸ್ವಲ್ಪ ವಿವರವಾಗಿ ಅವಲೋಕಿಸಿದರೆ, ಮಾನಸಿಕ ಆರೋಗ್ಯದಲ್ಲಿ ಘನತೆ, ಗೌರವ, ಮರ್ಯಾದೆ ಇದ್ದೇ ಇದೆ. ಆದರೆ ಸಮಸ್ಯೆಯ ಸುಳಿವಾಗುವದು "ಮಾನಸಿಕ- ಅನಾರೋಗ್ಯದಲ್ಲಿ"!

Dr Vinod Kulkarni on World Mental Health Day

ವೈಮನಸ್ಸಿನಿಂದ ರೋಗಗಳ ಉತ್ಪತ್ತಿ

ಯಾವದೇ ಒಬ್ಬ ವ್ಯಕ್ತಿ ಮಾನಸಿಕ ಅನಾರೋಗ್ಯಕ್ಕೆ ತುತ್ತಾದರೆ, ಅವನ ಬಾಳು ದೇವರಿಗೇನೇ ಪ್ರೀತಿ. "ಆಟಕ್ಕುಂಟು ಲೆಕ್ಕಕ್ಕಿಲ್ಲ", "ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ", "ಕುಣಿಯಲಾರದ ಸೂಳೆ ನೆಲ ಡೊಂಕು ಎಂದಳು" ಎಂಬ ನಾಣ್ಣುಡಿಗಳಂತೆ ಆದೀತು, ಬಾಡೀತು, ಕಾಡೀತು, ಅವನ ಬಾಳು. ಇದಕ್ಕೆಲ್ಲಾ ಕಾರಣವೆಂದರೆ ಜನರಲ್ಲಿ ಪ್ರಚಲಿತವಿರುವ ಮೌಢ್ಯ!

ಸಕ್ಕರೆ ರೋಗ, ಬ್ಲಡ್ ಪ್ರೆಶರ್, ಹೃದಯಾಘಾತದ ಬಗ್ಗೆ ಕೇಳಿರಿ-ಒಬ್ಬ ಹಳ್ಳಿ ಹೈದನೂ, ಅವುಗಳ ಬಗ್ಗೆ ಕಿಂಚಿತ್ತಾದರೂ ಅರಿತುಕೊಂಡಾನು-ಆದರೆ ಅದೇ ಮನೋಬೇನೆಗಳಾದ ಆತಂಕ, ಖಿನ್ನತೆ, ಹಿಸ್ಟೀರಿಯಾ, ವ್ಯಕ್ತಿತ್ವ ದೋಷ, ಮದ್ಯಪಾನದ ಅವಲಂಬನೆ, ನಿದ್ರಾಹೀನತೆ, ಮರೆವು, ಲೈಂಗಿಕ ಸಮಸ್ಯೆಗಳ ಬಗ್ಗೆ ಕೇಳಿರಿ. ಒಬ್ಬ ಅತ್ಯಂತ, ಸುಸಂಸ್ಕೃತ, ಆಗರ್ಭ ಶ್ರೀಮಂತ ವ್ಯಕ್ತಿಯೂ ಕೂಡಾ, ಇವುಗಳೂ ಒಂದು ಕಾಯಿಲೆ, ಇದಕ್ಕೆ ಕೂಡಾ ಚಿಕಿತ್ಸೆ ಲಭ್ಯವಿರುತ್ತದೆ, ಎಂದು ಸುತಾರಾಂ ಒಪ್ಪುವದಿಲ್ಲಾ. (ತಿಳಿದಿದ್ದರೂ ಕೂಡಾ!)

ನಮ್ಮ ಮನಸ್ಸಿನ ಆತಂಕದಿಂದ, ಅಲ್ಲೋಲ ಕಲ್ಲೋಲದಿಂದ, ಆರ್ಭಟದಿಂದ, ವೈಮನಸ್ಸಿನಿಂದ ಉತ್ಪತ್ತಿಯಾದ ಕಾಯಿಲೆಗಳು ಹಲವಾರು- ಡಯಾಬಿಟಿಸ್, ಬ್ಲಡ್ ಪ್ರೆಶರ್, ಅಸ್ತಮಾ, ಚರ್ಮದ ವ್ಯಾಧಿಗಳು, ಹೊಟ್ಟೆನೋವು, ಐ.ಬಿ.ಎಸ್., ಕೀಲು ನೋವು, ಬೆನ್ನು ನೋವು, ಕುತ್ತಿಗೆ ನರಗಳ ನೋವು, ತಲೆಶೂಲೆ, ಮೈಗ್ರೇನ್, ಹೃದಯಾಘಾತ-ಒಂದೇ? ಎರಡೇ? ಅಷ್ಟೇ ಏಕೆ, ನಮ್ಮ ಜೀವಕ್ಕೇನೇ ಶೀಘ್ರವಾಗಿ ಕುತ್ತು ತರಬಲ್ಲ ಮಹಾಮಾರಿ ರೋಗ,- ಆ "ಆರ್ಬುದ" ರೋಗ, ಆ "ಕ್ಯಾನ್ಸರ್ ರೋಗ" ಕೂಡಾ ದೀರ್ಘವಾದ, ಪರಿಹಾರ ಕಾಣದ, ಮನೋ ಒತ್ತಡದಿಂದ ಉದ್ಭವಿಸುವುದು ಎಂದು, ಎಷ್ಟು ಜನ ವಿದ್ವಾಂಸರು ಅರಿತುಕೊಂಡಿರುವರು?

"ಆರೋಗ್ಯಕರವಾದ ಮನಸ್ಸಿನಲ್ಲಿ ಗಟ್ಟಿಯಾದ ದೇಹ" ಎಂಬ ನಾಣ್ಣುಡಿ ಪ್ರಚಲಿತದಲ್ಲಿದೆ. ನಮ್ಮ ಮಾನಸಿಕ ಆರೋಗ್ಯ ಸ್ಥಿಮಿತದಲ್ಲಿದ್ದರೆ ಮಾತ್ರ, ನಮ್ಮ ದೇಹ ಸಮತೋಲನ ಕಾಯ್ದುಕೊಳ್ಳಬಹುದು. ನಮ್ಮ ಅತಿಯಾದ ಮನೋ ಒತ್ತಡದಿಂದ, ನಾವು ಮಿತಿ ಮೀರಿ ಭುಂಜಿಸುಬಹುದು. ಆತಂಕ ಶಮನಗೊಳಿಸಲು, ಹಿಗ್ಗಾ ಮುಗ್ಗಾ ತಿಂದು "ಸ್ಥೂಲ ಕಾಯ" ರಾಗಬಹುದು. "ಸ್ಥೂಲಕಾಯ" ಕೂಡಾ ಒಂದು ಮನೋ ದೈಹಿಕ ಬೇನೆಯೇ. ಅದೇ ರೀತಿ ಇನ್ನೊಂದು ಮನೋದೈಹಿಕ ಕಾಯಿಲೆಗೆ "ಅನುರೆಕ್ಸಿಯಾ ನರ್ವೋಸಾ" ಎಂದು ಹೆಸರಿಟ್ಟಿರುವರು. (ತನ್ನ ದೇಹದ ಬಗ್ಗೆ ಅಪಾರ ಆಸಕ್ತಿ ಹೊಂದಿದ ಮಹಿಳೆ, ಊಟವನ್ನು ತ್ಯಜಿಸಿ, ಸ್ವಲ್ಪ ಆಹಾರ ಸೇವಿಸಿದರೂ, ಅದನ್ನು ಮತ್ತೆ ತಾನೇ ಬಾಯಿಯಲ್ಲಿ, ಗಂಟಲುಗಳಲ್ಲಿ ಬೆರಳು ತೂರಿಸಿಕೊಂಡು ವಾಂತಿ ಮಾಡಿಕೊಂಡು- ಒಟ್ಟಾರೆ, ಅತೀ ತೆಳ್ಳಗಿನ ದೇಹ ಪಡೆಯುವದು). ಈ ತೆಳ್ಳಗಾಗುವ ಹುಚ್ಚು, ಹಲವು ರೂಪದರ್ಶಿಗಳಲ್ಲೂ-ಕಂಡು ಬಂದಿದೆ, ಅವರೂ ಕೂಡಾ ಮನೋರೋಗ ಚಿಕಿತ್ಸೆ ಪಡೆಯುತ್ತಿರುವದು ಒಂದು ವಿಪರ್ಯಾಸವಲ್ಲವೇ?

"ಮನಸ್ಸಿನ" ಬಗ್ಗೆ, ನಮ್ಮ ಪ್ರಾಚೀನ ಗ್ರಂಥಗಳಾದ ರಾಮಾಯಣ, ಮಹಾಭಾರದಲ್ಲಿಯೂ ಉಲ್ಲೇಖವಿದೆ. ಸುಮಾರು 150 ವರ್ಷಗಳ ಹಿಂದೆ ಒಬ್ಬ ಯಹೂದಿ ಸಮುದಾಯಕ್ಕೆ ಸೇರಿದ ಶ್ರೇಷ್ಠ ಮೇಧಾವಿ, ಮನೋ ವಿಜ್ಞಾನಿಯಾದ, ಸಿಗ್ಮಂಡ್ ಫ್ರಾಯ್ಡ್- ಮನಸ್ಸಿನ ಬಗ್ಗೆ ಒಂದು ಕಟು ಸತ್ಯವನ್ನು ಹೇಳಿದ- ಅವನು ಹೇಳಿದ ಸತ್ಯವು ಇಂದಿಗೂ, ಆಧುನಿಕ ಮನೋರೋಗ ತಜ್ಞರು ಅಲ್ಲಗಳೆಯುವಂತಿಲ್ಲಾ. ಫ್ರಾಯ್ಡ್ ಹೇಳಿದ "ಮನಸ್ಸಿನಲ್ಲಿ ಎರಡು ಬಗೆ, ಒಂದು ಜಾಗ್ರತ ಮನಸ್ಸು- (ಕಾಲು ಭಾಗ ಮಾತ್ರ) ಇನ್ನೊಂದು ಮುಕ್ಕಾಲು ಭಾಗದ ಮನಸ್ಸು ಅಂದರೆ ವ್ಯಕ್ತಿಯ "ಸುಪ್ತ ಮನಸ್ಸು." ಆಂಗ್ಲ ಭಾಷೆಯಲ್ಲಿ ಅದಕ್ಕೆ "ಸಬ್ಕಾನಶಿಯಸ್ ಅಥವಾ ಅನ್ಕಾನ್ಶಿಯಸ್" ಮನಸ್ಸೆಂದು ಸಂಬೋಧಿಸುವರು. ಫ್ರಾಯ್ಡ್ನ ಪ್ರಕಾರ, ನಾವು ನಮಗರಿವಿಲ್ಲದಂತೆ, ನಮ್ಮ ಆಸೆ, ಆಕಾಂಕ್ಷೆ, ಹತಾಶೆ, ನಿರಾಶೆ, ಎಲ್ಲವನ್ನೂ ನಮ್ಮ ಸುಪ್ತ ಮನಸ್ಸಿನಲ್ಲಿ ಅದುಮುತ್ತೇವೆ. ಅದಷ್ಟೇ ಏಕೆ, ನಮ್ಮ ಈಡೇರದ ಲೈಂಗಿಕ ಆಸೆ, ಬಯಕೆಗಳನ್ನು ಕೂಡಾ! ಅವುಗಳೇ ಮುಂದೆ, ಸೂಕ್ತ ಸಮಯ ಒದಗಿದಾಗ, ಸೂಕ್ಷ್ಮ ಒತ್ತಡ ನಿರ್ಮಾಣವಾದಾಗ, ಮನೋಬೇನೆಗಳಾಗಿ ಪರಿವರ್ತನೆ ಹೊಂದುತ್ತವೆ.

ಈಗ ಆಧುನಿಕ ಮನೋವಿಜ್ಞಾನ, ಲೀಲಾಜಾಲವಾಗಿ ಬೆಳಕಿನ ವೇಗದಲ್ಲಿ ಸಾಗುತ್ತಿದೆ. ನಮ್ಮ ಮೆದುಳಿನಲ್ಲಿರುವ ದ್ರವಗಳಾದ ಸೆರೋಟೊನಿನ್, ಎಂಡಾರ್ಫಿನ್ ಮೊದಲಾದವುಗಳೇ ನಮ್ಮ ಮನಸ್ಸಿಗೂ, ಮಾನಸಿಕ ಆರೋಗ್ಯಕ್ಕೂ ಬುನಾದಿ ಎಂದು ಸಾಬೀತಾಗಿದೆ. ಭಾರತ ಅಷ್ಟೇ ಏಕೆ, ಪಾಶ್ಚಾತ್ಯ ದೇಶಗಳಲ್ಲಿಯೂ, ಮನೋಬೇನೆಗಳ ಬಗ್ಗೆ ಒಂದು ಅಗಾಧವಾದ ಮೌಢ್ಯ, ಇಂದಿಗೂ ಪ್ರಚಲಿತದಲ್ಲಿರುವದು ಅತ್ಯಂತ ಖೇದಕರ. ಮಾಟ, ಮಂತ್ರ, ದೆವ್ವ, ಭೂತ, ಗಾಳಿಶಕ "ಎಕ್ಸಾರ್ಸಿಸಂ" ಮುಂತಾದ ಮೂಢನಂಬಿಕೆಗಳಿಗೆ ಕೊನೆ ಎಂದು? ಇವುಗಳಿಗೆ ಎಂದು ನಾವುಗಳು ಇತಿಶ್ರೀ ಹಾಡಬಲ್ಲೆವು? ಒಂದು ಪ್ರಬಲವಾದ ಶಕ್ತಿಯಾದ ದೇವರು ಇದ್ದಾನೆ ಎಂದು ನಂಬೋಣ-ಆದರೆ ಯಾವ ದೇವರೂ ಮನುಷ್ಯನಿಗೆ ಕೆಡಕನ್ನು ಮಾಡಲಾರ. ಹಾಗೆ ಮಾಡಿದರೆ ಅವನು ದೇವರೇ ಅಲ್ಲ. ಇನ್ನು ದೆವ್ವಗಳು, ಭೂತಗಳು ಮಾನಸಿಕ ಕಾಯಿಲೆಯನ್ನು ತರಲಾರವು. ಇದಕ್ಕೆ ಸಾಕಷ್ಟು ಪುರಾವೆಗಳು, ಚರ್ಚೆಗಳು, ವೈಜ್ಞಾನಿಕ ಸಂಶೋಧನೆಗಳು ಲಭ್ಯ.

ಮನೋರೋಗಗಳು ಮುಖ್ಯವಾಗಿ ಎರಡು ಬಗೆಯದ್ದು:

1. ಸಾಮಾನ್ಯ ಅಥಾವಾ ಮೈನರ್ ಕಾಯಿಲೆಗಳಾದ ಆತಂಕ, ಗಾಬರಿ, ಖಿನ್ನತೆ ಮೊದಲಾಗಿ.
2. ತೀವ್ರವಾದ, ಭೀಕರವಾದ ರೋಗವಾದ "ಮತಿಭ್ರಾಂತಿ." ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ "ಸ್ಕಿಜೋಫ್ರಿನಿಯಾ" ಎಂದು ಹೆಸರು.

ಹಲವು ಬಾರಿ ಖಿನ್ನತೆ ಅಥವಾ ಜಿಗುಪ್ಸೆ, ತೀವ್ರ ಭೀಕರ ರೋಗವಾಗಿಯೂ ಪರಿವರ್ತನೆ ಹೊಂದಬಹುದು. ಈ ರೋಗದ ಮುಖ್ಯ ಲಕ್ಷಣಗಳೆಂದರೆ-ನಿರಾಸಕ್ತಿ, ಆಯಾಸ, ನಿದ್ರಾಹೀನತೆ, ಹಸಿವಾಗದಿರುವಿಕೆ, ಮೈಕೈನೋವು, ಕುತ್ತಿಗೆ ನೋವು, ನರಗಳ ನೋವು, ತಲೆಶೂಲೆ ಇತ್ಯಾದಿ. ಹಲವರಿಗೆ ಮಲಗಿದ ಕೂಡಲೇ ನಿದ್ರಾದೇವತೆ ಅಪ್ಪಿಕೊಂಡರೂ ಕೂಡ, ಇವರು ಬೆಳಗಿನ ಜಾವ 3 ಅಥವಾ 4 ಗಂಟೆಗೆ ಎಚ್ಚರಗೊಂಡು, ಒಂದು ವಿಚಿತ್ರವಾದ ವೇದನೆಯಿಂದ ಬಳಲುವರು. ಶಾಂತಚಿತ್ತ, ಸಮಚಿತ್ತ ಮನೋಭಾವನೆ ಇವರಿಗೆ ಇರಲಾರದು. ಏನೋ ಒಂದು ತರಹದ ಭಯ, ಭೀತಿ, ಆತಂಕ, ಗಾಬರಿ, ಹಲವು ಬಾರಿ ಆತ್ಮಹತ್ಯೆಯ ವಿಚಾರಗಳೂ, ಸಾಮಾನ್ಯ. ಇವರಿಗೆ ಯುದ್ಧೋಪದಾಯದಲ್ಲಿ ಮನೋವೈದ್ಯರ ಚಿಕಿತ್ಸೆ ಅಗತ್ಯ.

ಒಬ್ಬ ಕುಟುಂಬ ವೈದ್ಯನ ಬಳಿಗಾಗಲಿ, ಓರ್ವ ಫಿಜಿಶೀಯನ್ ಬಳಿಗಾಗಲಿ, ನರರೋಗ ತಜ್ಞರ ಬಳಿ ಆಗಲಿ (ನ್ಯೂರಾಲಾಜಿಸ್ಟ್) ತೆರಳುವ 40%-50% ಜನರಿಗೆ "ಮನೋ"ರೋಗ ವಿರುತ್ತದೆ ಎಂದು ಸಾಕ್ಷ್ಯಾಧಾರಗಳು, ಸಮೀಕ್ಷೆಗಳು ಪುಂಖಾನುಪುಂಖವಾಗಿ ಸಾರುತ್ತಲಿವೆ. ತಜ್ಞ ಮನೋವೈದ್ಯರ ಬಳಿಯೇ ಇವರಿಗೆ ಸಂಪೂರ್ಣವಾದ ಹಾಗೂ ಸೂಕ್ತವಾದ ಹಾಗೂ ಅತ್ಯಂತ ಶೀಘ್ರವಾಗಿ ಫಲಕಾರಿಯಾಗಬಲ್ಲ ಚಿಕಿತ್ಸೆಯು ಲಭ್ಯ. ಇನ್ನು ಭೀಕರ ರೋಗಗಳಾದ ಸ್ಕಿಜೋಫ್ರಿನಿಯಾದಿಂದ ವ್ಯಕ್ತಿಯು ತನ್ನ ಹೆಂಡತಿಯ ಮೇಲೆ ಸಂಶಯ ಮಾಡಬಹುದು. ತನ್ನ ಮಡದಿ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಸುಳ್ಳು ನಂಬಿಕೆಗಳಿಂದ, ಮಡದಿಯನ್ನು ಕೊಲೆಗೈಯ್ದು, ಅಜೀವ ಪರ್ಯಂತ ಸೆರೆಮನೆ ವಾಸವನ್ನು ಅನುಭವಿಸುವವರ ಸಂಖ್ಯೆಯನ್ನು ನಾವು ಕಾಣುತ್ತೇವೆ.

ಇನ್ನು ಸಿಗರೇಟು ಸೇವನೆ, ಮದ್ಯಪಾನದ ಮೇಲೆ ಅವಲಂಬನೆ, ಇವೆಲ್ಲವೂ ಒಂದು ತರಹದ ಮನೋರೋಗಗಳು. ಇಂಥವರು ಮನೋವೈದ್ಯರ ಚಿಕಿತ್ಸೆ, ಆಪ್ತ ಸಮಾಲೋಚನೆ, ನಾರ್ಕೋ ಥೆರಪಿ ಪಡೆದರೆ ಖಂಡಿತವಾಗಿಯೂ ಮರುಜನ್ಮವನ್ನು ಪಡೆಯಬಲ್ಲರು. ನಮ್ಮ ದೇಶದಲ್ಲಿ ಇನ್ನೂ ಮನೋವೈದ್ಯರ ಸಂಖ್ಯೆ ಸಾಲದು. ಇಡೀ ಭಾರತದಲ್ಲಿಯೇ ಮನೋವೈದ್ಯರ ಸಂಖ್ಯೆ ಎಂಟರಿಂದ ಹತ್ತು ಸಾವಿರ ದಾಟಿಲ್ಲ. ನಮ್ಮ ಕರ್ನಾಟಕದಲ್ಲಿಯೇ ಇವರ ಸಂಖ್ಯೆ ಬರೀ 500ರಿಂದ 600. ಹಲವಾರು ಮನೋವೈದ್ಯರು ಡಿಗ್ರಿ ಪಡೆದ ಕೂಡಲೇ ವಿದೇಶಕ್ಕೆ ಹಾರುವದು ನಿಲ್ಲಬೇಕು. ತಮ್ಮ ಸ್ವಂತ ಊರುಗಳಲ್ಲಿಯೇ ಮನೋವೈದ್ಯಕೀಯ ವೃತ್ತಿಯನ್ನು ಆರಂಭಿಸಬೇಕು. ಜನರಲ್ಲಿ ಒಂದು ಜಾಗ್ರತಿ, ಒಂದು ಅರಿವು ಮೂಡಿಸಬೇಕು. ಅಂದಾಗ ಮನೋಕಾಯಿಲೆಗಳಿಗೆ ಒಂದು ತರಹದ "ಘನತೆ"ಯನ್ನು ನಾವು ತಂದುಕೊಟ್ಟೇವು.

ಈಗ ಮನೋರೋಗಿಗಳಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವಿಲ್ಲ, ಅವರೂ ಕೂಡಾ ಮದುವೆ ಆಗಿ ಸುಖೀ ಸಂಸಾರ ನಡೆಸಬಹುದೆಂದು, ಯುದ್ಧೋಪಾದಿಯದ ತಳಹದಿಯ ಮೇಲೆ ಜಾಗ್ರತೆ ಮೂಡಿಸಬೇಕು. ಇದು ಎಲ್ಲಾ ಮನೋವೈದ್ಯರ, ಮಾಧ್ಯಮಗಳ ಆದ್ಯ ಕರ್ತವ್ಯ. ಅಂದಾಗ ಮಾತ್ರ ಮಾನಸಿಕ ರೋಗಿಗಳಿಗೂ ಇ ವರುಷದ "ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಘೋಷಣೆಯಿಂದ "ಘನತೆ, ಗಂಭೀರತೆ"ಯನ್ನು ನಾವು ತರಬಲ್ಲೆವು. ಮತ್ತೊಮ್ಮೆ ಪುನರುಚ್ಛರಿಸೋಣ "ಮನಸಿದ್ದಲ್ಲಿ ಮಾರ್ಗವಿದೆ", "ಮನಸ್ಸೇ ಮಹದೇವ", "ಮನದಿಂದಲೇ ಬಂಧನ ಹಾಗೂ ಮೋಕ್ಷ".

English summary
Is our mind directly related to many of our physical health? Is it possible to control some of the ailments through our mind? Dr Vinod Kulkarni, famous neurosurgeon from Hubballi, on World Mental Health Day on October 10, writes why our mental health is very important for our well being.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X