ಕೊಡಗಿನ ಮಳೆಗಾಲದ ಸುಂದರಿ ಡೇಲಿಯಾ

By: ಬಿ.ಎಂ.ಲವಕುಮಾರ್
Subscribe to Oneindia Kannada

ಮುಂಗಾರು ಮಳೆ ಸುರಿದಾಗ ಮನೆಮುಂದಿನ ಹೂತೋಟದಲ್ಲಿ ಸುಪ್ತವಾಗಿದ್ದ ಡೆಲೀಯಾ ಗೆಡ್ಡೆಗಳು ಮೊಳಕೆಯೊಡೆದು ಗಿಡಗಳಾಗಿ ವಿವಿಧ ಆಕಾರ, ಬಣ್ಣಗಳಲ್ಲಿ ಗೊಂಚಲುಗೊಂಚಲಾಗಿ ಹೂಬಿಟ್ಟು ಕಂಗೊಳಿಸುತ್ತವೆ.

ಡೆಲೀಯಾಗಳ ಚೆಲುವನ್ನು ಹತ್ತಿರದಿಂದ ನೋಡಿ ಖುಷಿಪಡಬೇಕಾದರೆ ಮಳೆಗಾಲದಲ್ಲಿ ಕೊಡಗಿಗೊಂದು ಸುತ್ತುಹೊಡೆಯಬೇಕು. ಇಲ್ಲಿನ ಮನೆ ಮುಂದಿನ ಹೂತೋಟದಲ್ಲಿ... ಕುಂಡಗಳಲ್ಲಿ... ಎಲ್ಲೆಂದರಲ್ಲಿ ಹೂಗಳು ಅರಳಿ ನಿಂತು ಮನಸ್ಸೆಳೆಯುತ್ತವೆ.[ಬಿಸಿಲ ನಾಡಲ್ಲಿ ಅರಳುತ್ತಿರುವ ಜರ್ಬೆರಾ ಹೂಗಳು!]

ಹಾಗೆ ನೋಡಿದರೆ ಕೊಡಗಿನಲ್ಲಿ ಡೇಲಿಯಾ ಗಿಡಗಳಿಲ್ಲದ ಮನೆಯೇ ವಿರಳ ಎನ್ನಬೇಕು. ಪ್ರತಿ ಮನೆಯ ಮುಂದೆಯೂ ಒಂದಲ್ಲಾ ಒಂದು ರೀತಿಯ ಡೇಲಿಯಾ ಹೂಗಿಡ ಇದ್ದೇ ಇರುತ್ತದೆ. ಇದನ್ನು ಇಲ್ಲಿನವರು ವಾಣಿಜ್ಯ ದೃಷ್ಟಿಯಿಂದ ಬೆಳೆಯದೆ ಕೇವಲ ಅಲಂಕಾರಕ್ಕಷ್ಟೆ ಬೆಳೆಯುತ್ತಾರೆ.

ಆದರೆ ಕೆಲವೆಡೆ ಡೇಲಿಯಾವನ್ನು ವಾಣಿಜ್ಯ ದೃಷ್ಟಿಯಿಂದಲೂ ಬೆಳೆಯಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಪುಷ್ಪೋದ್ಯಮ ತನ್ನ ಮಾರುಕಟ್ಟೆಯನ್ನು ವಿಸ್ತರಿಸುತ್ತಿರುವುದರಿಂದ ಕೆಲವು ಹೂಗಳು ಸ್ಥಾನಗಿಟ್ಟಿಸಿಕೊಳ್ಳುತ್ತಿವೆ. ಆ ಪೈಕಿ ಡೇಲಿಯಾ ಕೂಡ ಒಂದಾಗಿದೆ. ಇದನ್ನು ಹೂದಾನಿಗಳಲ್ಲಿಡಲು, ಹಾರ ತುರಾಯಿಗೂ ಬಳಸಲಾಗುತ್ತಿದೆ.

ಅಧಿಕ ಹೂಗಳನ್ನು ಪಡೆಯಲು ಹೀಗೆ ಮಾಡಿ

ಅಧಿಕ ಹೂಗಳನ್ನು ಪಡೆಯಲು ಹೀಗೆ ಮಾಡಿ

ಗಿಡಗಳು ಬೆಳೆಯುತ್ತಿದ್ದಂತೆಯೇ ರಾಸಾಯನಿಕ ಗೊಬ್ಬರದ ಬದಲು ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರವನ್ನು ನೀಡುವುದು ಒಳ್ಳೆಯದು. ಗಿಡಗಳು ಬೆಳೆದು ಸುಮಾರು 25ರಿಂದ 30 ಸೆಂ.ಮೀ. ಎತ್ತರ ತಲುಪಿದಾಗ ಗಿಡದ ತುದಿಯನ್ನು ಚಿವುಟಿ ಹಾಕಬೇಕು. ಹೀಗೆ ಮಾಡುವುದರಿಂದ ಕಾಂಡದಲ್ಲಿ ಹೆಚ್ಚು ಕವಲೊಡೆದು ಅಧಿಕ ಹೂಗಳನ್ನು ಬಿಡುತ್ತವೆ.

ಹೂಗಳು ಬಿಡುವ ಸಂದರ್ಭದಲ್ಲಿ

ಹೂಗಳು ಬಿಡುವ ಸಂದರ್ಭದಲ್ಲಿ

ಹೂಗಳು ಬಿಡುವ ಸಂದರ್ಭದಲ್ಲಿ ಗಿಡಕ್ಕೆ ಆಧಾರವಾಗಿ ಕೋಲನ್ನು ಕಟ್ಟಬೇಕು. ಹೀಗೆ ಮಾಡುವುದರಿಂದ ಗಿಡವು ಹೂವಿನ ಭಾರಕ್ಕೆ ಮುರಿದು ಬೀಳುವುದನ್ನು ತಪ್ಪಿಸಬಹುದು.

ಸಾಮಾನ್ಯವಾಗಿ ಗಿಡನೆಟ್ಟು ಎರಡು ತಿಂಗಳೊಳಗೆ ಗಿಡದಲ್ಲಿ ಹೂಬಿಡಲಾರಂಭಿಸುತ್ತವೆ. ಒಂದು ಗಿಡದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಹೂಗಳನ್ನು ಪಡೆಯಬಹುದಾಗಿದೆ.

ಹೂಬಿಟ್ಟು ಮುಗಿದ ನಂತರ ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಸಾಯುತ್ತವೆ. ಈ ಸಂದರ್ಭ ಗಿಡವನ್ನು ಭೂಮಿಯಿಂದ 20ಸೆಂ.ಮೀ ಎತ್ತರದಿಂದ ಕತ್ತರಿಸಬೇಕು.

ಹೂಬಿಟ್ಟು ಮುಗಿದ ನಂತರ

ಹೂಬಿಟ್ಟು ಮುಗಿದ ನಂತರ

ಕೆಲವು ದಿನಗಳ ನಂತರ ಭೂಮಿಯಿಂದ ಅಗೆದು ನೋವಾಗದಂತೆ ಗೆಡ್ಡೆಗಳನ್ನು ಹೊರತೆಗೆದು ಅಂಟಿಕೊಂಡಿದ್ದ ಮಣ್ಣನ್ನು ಬೇರ್ಪಡಿಸಿ ಸ್ವಚ್ಛಗೊಳಿಸಿ ನಂತರ ಎರಡು ವಾರಗಳ ಕಾಲ ಒಣಗಿಸಿ ಶೇ.5ರ ಬಿಎಚ್ಪಿ ಹಾಗೂ ಗಂಧಕದ ಪುಡಿಯಿಂದ ಉಪಚರಿಸಿ ಮರಳಿನಲ್ಲಿ ಮುಚ್ಚಿಟ್ಟು ಮುಂದಿನ ನಾಟಿಗೆ ಅದನ್ನು ಬಳಸಿಕೊಳ್ಳಬಹುದು. ಕೊಡಗಿನಲ್ಲಿ ಮಾತ್ರ ಯಾರೂ ಕೂಡ ಡೇಲಿಯಾವನ್ನು ವಾಣಿಜ್ಯ ದೃಷ್ಟಿಯಿಂದ ಬೆಳೆಯುತ್ತಿಲ್ಲ.

ಡೇಲಿಯಾದಲ್ಲಿ ಸುಮಾರು ಹತ್ತುಬಣ್ಣಗಳಿದ್ದು

ಡೇಲಿಯಾದಲ್ಲಿ ಸುಮಾರು ಹತ್ತುಬಣ್ಣಗಳಿದ್ದು

ಒಂದೊಂದು ಬಣ್ಣದಲ್ಲಿಯೂ ಹಲವಾರು ತಳಿಗಳಿವೆ. ಹಳದಿ ಬಣ್ಣದಲ್ಲಿ ಅಲ್ವಾಸ್ ಸುಪ್ರೀಮ್, ಸನ್‍ಬಸ್ರ್ಟ್ ಕೆನ್ಯಾಯಲೋ, ಕ್ವೀನ್ ಎಲಿಜಬೆತ್, ದೇವನ್‍ಪೋರ್ಟ್, ಸನ್‍ಲೈಟ್, ಗಿನಿ, ಗೋಲ್ಡನ್ ಸ್ಟಾರ್, ಕಿತ್ತಳೆ ಬಣ್ಣದಲ್ಲಿ ಕಿಂಗ್ ಸಕರ್, ಮಾಂಡರಿನ್, ನೆಪೋಲಿನ್, ಕೆಂಪುಬಣ್ಣಗಳಲ್ಲಿ ಬಾರ್ಬರಾ ಮಾರ್ಷೆಲ್, ಅಲ್ಡನ್ ಗ್ಯಾಲಕ್ಸಿ ಸೂಪರ್, ಬ್ಯಾಂಕರ್ ಇಸ್ಟೀಡರ್, ವಿಲೋ ನೈಟ್, ಮಾರ್ಷ್, ನೀಲಿ ಬಣ್ಣದಲ್ಲಿ ನಿಯರೆಸ್ಟ್ ಬ್ಲೂ ರಿಸ್ಕಾ ಮೈನರ್, ಐರಿಸ್, ಮೂರ್‍ಪ್ಲೇಸ್, ವಿಲೋವೈಲೆಟ್, ಗುಲಾಬಿ ಬಣ್ಣದಲ್ಲಿ ಐಲ್ಯಾಂಡರ್

ಬಾದಾಮಿ ಬಣ್ಣದಲ್ಲಿ ಸಿಂಬಲ್

ಬಾದಾಮಿ ಬಣ್ಣದಲ್ಲಿ ಸಿಂಬಲ್

ಏಪ್ರಿಲ್‍ಡಾನ್, ಪಿಂಕ್‍ಜುಪಿಟರ್, ಸುಲ್ತಾನ್, ಸ್ಲೋಹಿಲ್ ರೋಜ್, ಫಿಂಕ್ ಜಿರಾಫೆ, ಬಿಳಿಬಣ್ಣದಲ್ಲಿ ಸಿಲ್ವರ್ ಸಿಟಿ, ಕಾರ್ಟನ್ ಲಿಂಡಾ, ನೀನಾ ಚೆಸ್ಟರ್, ಡೇಟ್‍ವೇ, ಈಸ್ಟ್‍ವುಡ್ ಸ್ನೋ, ಲೇಸ್‍ಮೇಕರ್, ಪೊರ್ಸೆಲೀನ್, ಸ್ನೋಫಾಲ್, ಲಿಟಲ್‍ಸ್ನೋಡ್ರಾಫ್, ಬೂದು ಬಣ್ಣದಲ್ಲಿ ಕ್ರೋಡಾನ್ ಜಂಬೋ, ಕಾಮೆಟ್, ಬಾದಾಮಿ ಬಣ್ಣದಲ್ಲಿ ಸಿಂಬಲ್, ಕ್ರೋಡಾನ್ ಮಾಸ್ಟರ್‍ಫೇಸ್, ಮಿಶ್ರಬಣ್ಣದಲ್ಲಿ ಡಿಸ್ನಿಲ್ಯಾಂಡ್, ಜೋತ್ಸ್ನಾ, ನೀತಾ, ಪೆನಾಮನನ್, ಕಾಂಪ್ಲಿಮೆಂಟ್ ಹೀಗೆ ನೂರಾರು ತಳಿಗಳಿದ್ದು, ಎಲ್ಲಾ ಹೂಗಳು ಒಂದಕ್ಕಿಂತ ಒಂದು ಸುಂದರವಾಗಿದ್ದು ನೋಡುಗರ ಗಮನಸೆಳೆಯುತ್ತವೆ.

ಮಳೆಗಾಲದಲ್ಲಿ ಅರಳಿ ಕಂಗೊಳಿಸುವ ಹೂವು

ಮಳೆಗಾಲದಲ್ಲಿ ಅರಳಿ ಕಂಗೊಳಿಸುವ ಹೂವು

ಕೊಡಗಿನಲ್ಲಿ ಮಾತ್ರ ಯಾರೂ ಕೂಡ ಡೇಲಿಯಾವನ್ನು ವಾಣಿಜ್ಯ ದೃಷ್ಟಿಯಿಂದ ಬೆಳೆಯುತ್ತಿಲ್ಲ. ಇದು ಇತರೆ ಪುಷ್ಪಗಿಡಗಳ ನಡುವೆ ಸ್ಥಾನಗಿಟ್ಟಿಸಿಕೊಂಡು ಮಳೆಗಾಲದಲ್ಲಿ ಅರಳಿ ಕಂಗೊಳಿಸುತ್ತಾ ಬಳಿಕ ಸೊರಗಿ ಸಾವನ್ನಪ್ಪುತ್ತವೆ. ಆದರೆ ಗೆಡ್ಡೆಗಳು ಮಣ್ಣಿನಲ್ಲಿ ಸುರಕ್ಷಿತವಾಗಿದ್ದುಕೊಂಡು ಮತ್ತೆ ತಮ್ಮ ಚೆಲುವು ಪ್ರದರ್ಶಿಸಲು ಮುಂದಿನ ಮಳೆಗಾಲಕ್ಕಾಗಿ ಕಾಯುತ್ತಿರುತ್ತವೆ.

ಡೇಲಿಯಾ ಕೃಷಿ ಮಾಡಲು ಮೇ ಅಥವಾ ಜೂನ್ ತಿಂಗಳು ಸೂಕ್ತವಾಗಿದ್ದು, ನೀರು ಬಸಿದು ಹೋಗುವ ಮಣ್ಣು, ಚೆನ್ನಾಗಿ ಬಿಸಿಲು ಬೀಳುವ ತಂಪಾದ ವಾತಾವರಣ ಉತ್ತಮವಾಗಿದೆ.

ಡೇಲಿಯಾದ ಸಸ್ಯಾಭಿವೃದ್ಧಿಯನ್ನು ಗೆಡ್ಡೆಗಳಿಂದ ಹಾಗೂ ಕಾಂಡಗಳಿಂದ ಮಾಡಬಹುದು. ಆದರೆ ಹೆಚ್ಚಿನವರು ನಾಟಿಗೆ ಗೆಡ್ಡೆಗಳನ್ನೇ ಬಳಸುವುದು ಹೆಚ್ಚಾಗಿ ಕಂಡು ಬರುತ್ತದೆ. ನಾಟಿಗೆ ಕನಿಷ್ಟ ಒಂದಾದರೂ ಕಣ್ಣಿರುವ ಗೆಡ್ಡೆಗಳನ್ನೇ ಆಯ್ದುಕೊಳ್ಳಬೇಕು.

ಕೃಷಿ ಮಾಡಲುದ್ದೇಶಿಸಿರುವ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಮಣ್ಣಿಗೆ ಕೊಟ್ಟಿಗೆ ಗೊಬ್ಬರ ಬೆರೆಸಿ ಹದ ಮಾಡಬೇಕು. ಬಳಿಕ ಎರಡರಿಂದ ಮೂರು ಅಡಿ ಅಂತರದಲ್ಲಿ ಹದಿನೈದು ಸೆಂಟಿಮೀಟರ್ ಆಳದಲ್ಲಿ ನಾಟಿ ಮಾಡಬೇಕು. ಆ ನಂತರ ವಾತಾವರಣ ನೋಡಿಕೊಂಡು ವಾರಕ್ಕೊಮ್ಮೆ ನೀರು ಹಾಯಿಸಬೇಕು. ಜೊತೆಗೆ ಕಳೆ ಬಾರದಂತೆಯೂ ಎಚ್ಚರವಾಗಿರಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Winter is the season for flowers. Flowers are in full bloom during this season. Dahlia is one of the most popular flowers grown in Kodagu during winter season.
Please Wait while comments are loading...