ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಆರ್ ರಾವ್ ನೆನಪು : ಜುಲೈ 1974ರ ಒಂದು ಭಾನುವಾರ

By ಮಂಜುನಾಥ ಅಜ್ಜಂಪುರ
|
Google Oneindia Kannada News

ಶಿವಮೊಗ್ಗ ಜಿಲ್ಲೆಯ ಮೂಲದ ಮಹಾಪುರುಷರು ಅನೇಕರು. ಅದರಲ್ಲೊಬ್ಬರು ಶಿಕಾರಿಪುರ ರಂಗನಾಥರಾವ್. ಹಾಗೆಂದರೆ ಗೊತ್ತಾಗುವುದೇ ಇಲ್ಲ, ಎಸ್.ಆರ್.ರಾವ್ ಎಂದರೆ ಲಕ್ಷ ಲಕ್ಷ ಜನರಿಗೆ ಸುಲಭವಾಗಿ ಅರ್ಥವಾಗಿಬಿಡುತ್ತದೆ. ಹೊಟ್ಟೆಪಾಡಿನ ಯಾವುದೋ ಒಂದು ಕ್ಷುದ್ರ ಕೆಲಸಕ್ಕೆ 1974ರಲ್ಲಿ ನಾನು ಬೆಂಗಳೂರಿಗೆ ಬಂದಿದ್ದೆ. 'ನಗರದಲ್ಲಿ ಇಂದು' ನೋಡಿದಾಗ ಎಸ್.ಆರ್.ರಾವ್ ಅವರು ವಾಡಿಯಾ ರಸ್ತೆಯ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ, ಹರಪ್ಪಾ - ಮೊಹೆಂಜೋದಾರೋ ಲಿಪಿಗಳ ಬಗ್ಗೆ ಮಾತನಾಡುತ್ತಾರೆ ಎಂದು ಓದಿ ರೋಮಾಂಚನವಾಯಿತು. ಆಗೆಲ್ಲಾ ಸಿಟಿ ಬಸ್ ವ್ಯವಸ್ಥೆ ಇಂದಿನಷ್ಟು ಅನುಕೂಲಕರವಾಗಿರಲಿಲ್ಲ. ಹಾಗಾಗಿ ಮೆಜೆಸ್ಟಿಕ್‌ನಿಂದ ಕೇಳಿಕೊಂಡು ಕೇಳಿಕೊಂಡು ಮೂರ‍್ನಾಲ್ಕು ಕಿಲೋಮೀಟರ್ ನಡೆದು, ವರ್ಲ್ಡ್ ಕಲ್ಚರ್ ಸಂಸ್ಥೆಯನ್ನು ಹುಡುಕಿದೆ. ಅದು ಸಾರ್ಥಕವಾಯಿತು.

ಅಂದಿನ ದಿನಗಳು ಆತ್ಮವಿಸ್ಮೃತಿಯ ದುರ್ಭರ ದಿನಗಳು. ಆರ್ಯರು ದ್ರಾವಿಡರನ್ನು ದಕ್ಷಿಣ ಭಾರತದ ಕಡೆ ಓಡಿಸಿದರು. ಇದೊಂದು ದೇಶವೇ ಅಲ್ಲ. ಬ್ರಿಟಿಷರು ಬರುವವರೆಗೆ ನಾವು ಮನುಷ್ಯರೇ ಆಗಿರಲಿಲ್ಲ. ನಮ್ಮದು ಅಸಮಾನತೆಯ, ಶೋಷಣೆಯ ಸಮಾಜ. ಇವು ಆಗ ನಾವೆಲ್ಲ ಪರಿಭಾವಿಸಿದ ಪರಮಸತ್ಯಗಳು. ಶಾಲಾ ಕಾಲೇಜುಗಳ ನಮ್ಮ ಪಠ್ಯಕ್ರಮವೇ ಹಾಗಿತ್ತು. ಎಸ್.ಆರ್.ರಾವ್ ಅವರು ಈಜಿಪ್ಟಿನ ಚಿತ್ರಲಿಪಿಗೂ, ನಮ್ಮ ಹರಪ್ಪಾ ಲಿಪಿಗೂ ಇರುವ ವ್ಯತ್ಯಾಸಗಳನ್ನು ಕುರಿತು ಅಂದು ಉಪನ್ಯಾಸ ನೀಡಿದರು. ಅದೊಂದು ನಿಜಕ್ಕೂ ಕಣ್ತೆರೆಸುವ ವಾಗ್‌ಧಾರೆ. ಅವರು ಹೇಳಿದ್ದನ್ನೆಲ್ಲಾ ನಾನು ವಿದ್ಯಾರ್ಥಿಯಂತೆಯೇ ನೋಟ್ಸ್ ಮಾಡಿಕೊಂಡೆ. ಇಡಿಯ ವಿಶ್ವವೇ ನಿಬ್ಬೆರಗಾಗುವಂತಹ ಗಹನವಾದ ಉತ್ಖನನಗಳನ್ನು ಮಾಡಿದ ರಾವ್ ಅವರು, ಮಕ್ಕಳಿಗೆ ಹೇಳುವಂತೆ ಸರಳವಾಗಿ ಚಿತ್ರ ಬರೆದು ವಿವರಿಸುತ್ತಿದ್ದರು. ಹಳ್ಳಿಯ ಮೂಲೆಯಿಂದ ಬಂದ ನಮ್ಮಂತಹವರಿಗಂತೂ, ಅದೊಂದು ನ ಭೂತೋ ಎನ್ನುವಂತಹ ಸುವರ್ಣಾವಕಾಶ.

ಎಸ್.ಆರ್.ರಾವ್ ಅವರು ಅಪೂರ್ವ ಸಾಧಕರು. ಹರಪ್ಪಾ ಸಂಸ್ಕೃತಿಯ ಉತ್ತರೋತ್ತರ ಪ್ರತಿನಿಧಿತ್ವದ ಗುಜರಾತಿನ ಲೋಥಾಲ್ ಉತ್ಖನನದ ಶ್ರೇಯಸ್ಸು - ಸಾಧನೆ ಅವರದ್ದೇ. ಅದು ನಾಲ್ಕು ಸಾವಿರ ವರ್ಷಗಳ ಹಿಂದಿನ ಮೊಟ್ಟ ಮೊದಲ ಬಂದರು. ಮೆಸಪಟೋಮಿಯಾ, ಇರಾನ್ ಮತ್ತು ಅರಬ್ ರಾಷ್ಟ್ರಗಳೊಂದಿಗೆ ಈ ಲೋಥಾಲ್ ಆ ಕಾಲದಲ್ಲಿಯೇ ಸಂಪರ್ಕ, ವ್ಯಾಪಾರ ಸಾಧಿಸಿತ್ತು. ರಾವ್ ಅವರು ನೀಡಿದ ಲೋಥಾಲ್ ಮತ್ತು ಪ್ರಾಚೀನ ದ್ವಾರಕೆಗಳ ಉತ್ಖನನದ ಮಾಹಿತಿ, ಇಡೀ ಭೂಮಂಡಲದ ಇತಿಹಾಸಕ್ಕೇ ಹೊಸ ತಿರುವು ನೀಡಿತು.

ಹದಿನೈದು ವರ್ಷಗಳ ಹಿಂದೆ ಶಿವಮೊಗ್ಗದ ವಿಕಾಸ ಶಾಲೆಯಲ್ಲಿ ರಾವ್ ಅವರು, ದ್ವಾರಕೆಯ ಕುರಿತಾದ ಸ್ಲೈಡ್‌ಗಳನ್ನು ತೋರಿಸಿ ಉಪನ್ಯಾಸ ಮಾಡಿದ್ದರು. ಸಾಗರದಾಳದ ಪುರಾತತ್ತ್ವ ವಿಜ್ಞಾನ(Marine Archaelogy)ವನ್ನು ಭಾರತಕ್ಕೆ ಪರಿಚಯಿಸಿದವರೇ ಅವರು. ಅಲ್ಲಿಯವರೆಗೆ ಪರಿಚಯವಿದ್ದುದು ಭೂಮಿಯ ಮೇಲಿನ ಉತ್ಖನನ ಮಾತ್ರ. ಇದೊಂದು ಹೊಸ ಪರಿಕಲ್ಪನೆ. ಸಮುದ್ರದಾಳದಲ್ಲಿ ಶೋಧಿಸುವವರಿಗೆ (Divers) ಉತ್ಖನನದ ರೀತಿ ನೀತಿ ಗೊತ್ತಿರಲಿಲ್ಲ, ಭೂಮಿಯ ಮೇಲೆ ಉತ್ಖನನ ಮಾಡುವವರಿಗೆ (Excavators) ನೀರಿನೊಳಗೆ ಮುಳುಗಿ ಕೆಲಸ ಮಾಡುವುದು ತಿಳಿಯದು. ರಾವ್ ಅವರು ಅಂತಹ ತರಬೇತಿಯನ್ನೇ ನೀಡಿ ಕೆಲಸ ಮಾಡಿಸಿದರು.

ದ್ವಾರಕಾನಗರಿ ಸಂಶೋಧನೆ : 1922ರಲ್ಲಿ ಜನಿಸಿದ ರಾವ್ ಅವರು 1980ರಲ್ಲಿಯೇ ನಿವೃತ್ತರಾದರು. ನಂತರದ್ದು ಈ ಮಹತ್ತ್ವದ ಯೋಜನೆ. ರಾಷ್ಟ್ರೀಯ ಸಾಗರವಿಜ್ಞಾನ ಸಂಸ್ಥೆಯು (NIO) ರಾವ್ ಅವರ ಒತ್ತಾಸೆಯಂತೆ ಸಾಗರದಾಳದ ಪುರಾತತ್ತ್ವವಿಜ್ಞಾನದ ಸಂಶೋಧನಾ ಕೇಂದ್ರವನ್ನು 1981ರಲ್ಲಿ ಸ್ಥಾಪಿಸಿತು. ಮಹಾಭಾರತ, ಶ್ರೀಕೃಷ್ಣ ಕಥೆಗಳು ಇತಿಹಾಸವಲ್ಲ, ಬರಿಯ ಕಗ್ಗ ಎನ್ನುವ ವಿಷಮಸ್ಥಿತಿಯಲ್ಲಿ, ರಾವ್ ಅವರ ಸಂಶೋಧನೆಯು ಅಂತಾರಾಷ್ಟ್ರೀಯ ಮಹತ್ತ್ವ ಪಡೆಯಿತು. ರಾವ್ ಅವರ ಮಾರ್ಗದರ್ಶನದಲ್ಲಿ ಪ್ರಾಚೀನ ದ್ವಾರಕಾನಗರಿಯ ಹದಿನೆಂಟು ನೂರು ಅಡಿಗಳ ಕೋಟೆ ಗೋಡೆ ಸಿಕ್ಕಿತು. ಮೊಹೆಂಜೋದಾರೋ - ಲೋಥಾಲ್ ನಾಗರಿಕತೆಗಳಲ್ಲಿ ರೂಪುಗೊಂಡ ಹಡಗಿನ ಲಂಗರು ವಿಕಾಸಗೊಂಡು ದ್ವಾರಕೆಯಲ್ಲಿ ಅಧಿಕ ಸಂಖ್ಯೆಯಲ್ಲಿ ದೊರೆತಿರುವ ತ್ರಿರಂಧ್ರಗಳ ಲಂಗರು ರೂಪುಗೊಂಡ ಬಗೆಗೆ, ರಾವ್ ತಮ್ಮ ವಾದ ಮಂಡಿಸಿದ್ದಾರೆ. ಶ್ರೀಕೃಷ್ಣನು ಪ್ರತಿಯೊಬ್ಬ ನಾಗರಿಕನೂ ಇಟ್ಟುಕೊಳ್ಳಬೇಕೆಂದು ಹೇಳಿದ್ದ ಗುರುತಿನ ಮುದ್ರೆಯನ್ನು ಅವರು ಹೆಕ್ಕಿ ತೆಗೆದಿದ್ದಾರೆ.

ಎಸ್.ಆರ್.ರಾವ್ ಅವರ ವೃತ್ತಿಜೀವನದ ಮಜಲುಗಳು ವಿಸ್ತೃತ, ಅನೇಕಾನೇಕ. ಹಿಂದಿನ ಬರೋಡಾ ಸಂಸ್ಥಾನದ ಪುರಾತತ್ತ್ವ ಸರ್ವೇಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿದರು. ನಂತರ ಭಾರತೀಯ ಪುರಾತತ್ತ್ವ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಮುಂದುವರಿಸಿದರು. ರಂಗಪುರ, ಅಮರೇಲಿ, ಭಾಗತ್ರವ, ದ್ವಾರಕೆ, ಹನೂರು, ಐಹೊಳೆ, ಕಾವೇರಿಪಟ್ಟಣಂ ಇತ್ಯಾದಿ ಉತ್ಖನನಗಳ ಮೇಲುಸ್ತುವಾರಿ ಅವರದ್ದೇ. ತಾಜ್‌ಮಹಲ್ ಮುಂತಾದ ಅನೇಕ ಸ್ಮಾರಕಗಳ ಸಂರಕ್ಷಣೆಯ ಕಾರ್ಯ ಮಾಡಿಸಿದರು. ಹಂಪಿ ವಿಜಯನಗರದ ಅಭೂತಪೂರ್ವ ಪುನರ್ಜೋಡಣೆ ಮತ್ತು ಸಂರಕ್ಷಣೆಗಳಿಗೆ ಕಾರಣಕರ್ತರಾದರು. ಸಿಂಧೂ ಲಿಪಿಯನ್ನು ಸಂಸ್ಕೃತ ಭಾಷೆಯೊಂದಿಗೆ ಸಮೀಕರಿಸಿ ಸುದ್ದಿ ಸ್ಫೋಟವನ್ನೇ ಮಾಡಿದರು. ಬಹಳ ವರ್ಷಕಾಲ ಅನೇಕ ವಿದ್ವಾಂಸರು ಅದನ್ನು ಒಪ್ಪಲೇ ಇಲ್ಲ. ಆಧಾರಗಳು ಸಾಲವು, ನಿರಾಧಾರ, ಊಹೆ ಎಂದೂ ಟೀಕೆಗಳು ಬಂದವು. ಇತ್ತೀಚಿನ ವರ್ಷಗಳಲ್ಲಿ ಅಮೆರಿಕೆಯ ಫ್ಲೋರಿಡಾ ವಿಶ್ವವಿದ್ಯಾನಿಲಯದ ಪ್ರೊ|| ಡಬ್ಲ್ಯೂ.ಡಬ್ಲ್ಯೂ.ಗ್ರಮಂಡ್ ಅವರು, ರಾವ್ ಅವರ ವಾದಸರಣಿಯನ್ನು ಒಪ್ಪಿ ಬರೆದ ಮೇಲೆ ಟೀಕೆಗಳು ಕಡಿಮೆಯಾಗಿವೆ.

ವೇದ ಸಂಸ್ಕೃತಿಯ ತವರು ಎನಿಸಿದ ಸರಸ್ವತೀ ನದಿಯು ಕಾಲಗರ್ಭದಲ್ಲಿ ಸೇರಿಹೋಗಿದೆ. ಸ್ವತಂತ್ರ ನದಿಯಾಗಿದ್ದ ಯಮುನೆ, ಗಂಗಾನದಿಯ ಉಪನದಿಯಾಗಿದೆ. ಶತಮಾನಗಳ ಕಾಲ ಮಳೆಯಾಗದೇ ಹರಪ್ಪಾ - ಮೊಹೆಂಜೋದಾರೋಗಳಲ್ಲಿನ ಜನ ಪೂರ್ವಾಭಿಮುಖವಾಗಿ ವಲಸೆ ಹೋಗಬೇಕಾಯಿತು. ಉತ್ಖನನಗಳ ಸಂಶೋಧನೆಗಳ ಇಂತಹ ತಂತುಗಳನ್ನು ಜೋಡಿಸಲು, ಸರಸ್ವತೀ ನದಿಯ ಪಾತ್ರವನ್ನು ಗುರುತಿಸಬೇಕಾಗಿತ್ತು. ವಿಮಾನವೊಂದರಲ್ಲಿ ಕೆಳಮಟ್ಟದಲ್ಲಿ ಹಾರಾಟ ನಡೆಸಿ, ನದೀಪಾತ್ರ ಗುರುತಿಸಿದ ರೋಚಕ ಅನುಭವಗಳನ್ನು ಶಿವಮೊಗ್ಗದಲ್ಲಿ ರಾವ್ ಅವರು ಹೇಳುವಾಗ, ನಮಗೆಲ್ಲ ಬೆರಗು. ಕೊಳೆತು ನಾರುವ, ಜನವಿರೋಧಿ ಸರ್ಕಾರಿ ವ್ಯವಸ್ಥೆಯಲ್ಲಿ ಇಷ್ಟೆಲ್ಲಾ ಸಾಧನೆ ಮಾಡಲು ಹೇಗೆ ರಾವ್ ಅವರಿಗೆ ಸಾಧ್ಯವಾಯಿತು, ಎಂಬ ಯಕ್ಷಪ್ರಶ್ನೆ ನನಗೆ ಹಾಗೆಯೇ ಉಳಿದುಹೋಯಿತು. ಇಂದು ಮನೆಗೆಲಸದವರೂ ವಿಮಾನ ಪ್ರಯಾಣ ಮಾಡುವಂತಹ ಬದಲಾವಣೆಯಾಗಿದೆ. ಅಂದು ಮೂರ‍್ನಾಲ್ಕು ದಶಕಗಳ ಹಿಂದೆ, ವಿಶೇಷ ವಿಮಾನದ ಆಯೋಜನೆಯನ್ನು - ಮಂಜೂರಾತಿಯನ್ನು ಕಲ್ಪಿಸಿಕೊಳ್ಳುವುದೂ ಅಶಕ್ಯವಾಗಿತ್ತು.

ಅಚ್ಚರಿ ತರುವ ಸಾಧನೆ : ಹಾಗೆಂದೇ ರಾವ್ ಅವರ ಸಾಧನೆಗಳ ಬಗೆಗೆ ತುಂಬ ತುಂಬ ಆಶ್ಚರ್ಯವಾಗುತ್ತದೆ. ಪಶ್ಚಿಮ ಭಾರತ, ದಕ್ಷಿಣ ಭಾರತಗಳಲ್ಲಿ ಇನ್ನಿಲ್ಲವೆನ್ನುವಷ್ಟು ಉತ್ಖನನಗಳನ್ನು ಅವರು ಕೈಗೊಂಡರು. ನಮ್ಮ ಕಾವೇರಿ ನದಿಯು ಪೂರ್ವದ ಗಂಗಾಸಾಗರವನ್ನು (ಬಂಗಾಳ ಕೊಲ್ಲಿ) ಸೇರುವ ಸಮುದ್ರತೀರದ ಕಾವೇರಿಪಟ್ಟಣಂ (ಪೂಂಪುಹಾರ್) ಬಳಿಯೂ ಕೆಲಸ ನಡೆಯಿತು. ಅಲ್ಲಿ ಅವರು ತುಂಬ ದೊಡ್ಡ ಪ್ರಾಕೃತಿಕ ಬಂದರನ್ನು ಗುರುತಿಸಿದರು. ಅದು 23 ಶತಮಾನಗಳಷ್ಟು ಹಳೆಯದು. ಸಮುದ್ರದ ಒಳಗೆ ನಾಲ್ಕು ಕಿಲೋಮಿಟರ್ ದೂರದಲ್ಲಿ ಮುಳುಗಿಹೋದ ಪಟ್ಟಣದ ವಿವರ ನೀಡಿದ್ದಾರೆ. ಎಂಬತ್ತು ಅಡಿ ನೀರಿನ ಆಳದಲ್ಲಿ ಕಲ್ಲಿನ ಮತ್ತು ಮಡಕೆಯ ಅನೇಕ ಅವಶೇಷಗಳನ್ನು ಹೆಕ್ಕಿ ತೆಗೆದಿದ್ದಾರೆ. ಸಿಂಧು ಸಾಗರದ ನೀರಿನೊಳಗೆ (ಅರಬ್ಬೀ ಸಮುದ್ರ), ಉತ್ತಮತರವಾದ ಪಾರದರ್ಶಕತೆಯಲ್ಲಿ ಕೆಲಸ ಮಾಡಿದುದಕ್ಕಿಂತ ಇದು ಕಠಿಣವಾಗಿತ್ತು. ಮಣ್ಣು, ಮರಳು, ಕೆಸರಿನ ರಾಡಿಯಲ್ಲಿ ತಮ್ಮ ಕೈಗಳೇ ತಮಗೆ ಕಾಣುತ್ತಿರಲಿಲ್ಲ, ಹಾಗಿತ್ತು, ಗಂಗಾಸಾಗರದ ಸಮುದ್ರದಾಳದ ಉತ್ಖನನದ ಅನುಭವ, ಎಂದಿದ್ದಾರೆ ರಾವ್. ಸರ್ಕಾರವು ಹಣ ನೀಡದೆ ಹೋದುದರಿಂದ ಕಾವೇರಿಪಟ್ಟಣಂನ ಉತ್ಖನನ ನಿಂತುಹೋಯಿತು. ಕಾವೇರಿಪಟ್ಟಣಂ, ಒಂದು ಕಾಲದ ಚೋಳ ಸಾಮ್ರಾಜ್ಯದ ವೈಭವೋಪೇತವಾಗಿದ್ದ ರಾಜಧಾನಿ.

ನಾಲ್ಕೂವರೆ ಸಹಸ್ರ ವರ್ಷಗಳ ಹಿಂದಿನ ಹರಪ್ಪ ಸಂಸ್ಕೃತಿ ವಿಶ್ವದಲ್ಲಿಯೇ ವಿಶಿಷ್ಟವಾದುದು. ಬೇರೆ ನಾಗರಿಕತೆಗಳು, ಸಂಸ್ಕೃತಿಗಳು, ಇಸ್ಲಾಂ - ಕ್ರೈಸ್ತ ಸಾಮ್ರಾಜ್ಯಶಾಹಿ ಆಕ್ರಮಣಗಳಿಗೆ ಸಿಕ್ಕು ನಾಶವಾಗಿಹೋಗಿವೆ. ಹರಪ್ಪಾದ ಧರ್ಮ, ತತ್ತ್ವಶಾಸ್ತ್ರ ಲೇಖನಕಲೆ, ಯೋಗವಿಜ್ಞಾನಗಳು ಇಂದಿಗೂ ಉಳಿದಿವೆ ಬೆಳೆದಿವೆ. ಇಂದಿಗೂ ಜೀವಂತವಿರುವ ಸಂಸ್ಕೃತಿಯ ಪ್ರತೀಕಗಳಾಗಿವೆ. ಆರ್ಯರ ದಾಳಿಯಿಂದ ಹರಪ್ಪಾ ನಾಗರಿಕತೆ ನಾಶವಾಯಿತೆಂಬ ಕಟ್ಟುಕಥೆಗಳನ್ನು, ರಾವ್ ಅವರ ಕೃತಿಗಳು ಸಮರ್ಥವಾಗಿ ಬಯಲು ಮಾಡಿವೆ. ದೆಹಲಿಯ ಆದಿತ್ಯ ಪ್ರಕಾಶನ ಹೊರತಂದಿರುವ ‘Dawn and devolution of the Indus Civilization', ‘The Lost city of Dvaraka' ಮುಂತಾದ ಉದ್ಗ್ರಂಥಗಳು, ರಾವ್ ಅವರ ಶ್ರಮ, ಸಾಧನೆ, ವಿದ್ವತ್ತುಗಳನ್ನು ಪರಿಚಯಿಸುತ್ತವೆ.

ಎಸ್.ಆರ್.ರಾವ್, ಕುವೆಂಪು, ಹಾಮಾನಾ, ತೇಜಸ್ವಿಯಂತಹವರು ಶಿವಮೊಗ್ಗ ಜಿಲ್ಲೆ ಎಂದಾಗ ಸಹಜವಾಗಿ ನೆನಪಾಗುತ್ತಾರೆ. ಸರ್ಕಾರಿ ವ್ಯವಸ್ಥೆಯಲ್ಲಿ ಅಧಿಕಾರಿಯಾಗಿ, ಕೆಂಪು ಪಟ್ಟಿಯ ನೂರೆಂಟು ಕಿರಿಕಿರಿ ಗೋಳುಗಳ ನಡುವೆಯೂ ಸಾಗರಸದೃಶ, ಸಮುದ್ರೋಪಮ ಸಾಧನೆ ಮಾಡಿದ ಶಿಕಾರಿಪುರ ರಂಗನಾಥರಾವ್ ಅವರು ಸಕಾರಾತ್ಮಕ ಕಾರಣಗಳಿಗೆ, ರಚನಾತ್ಮಕ ನಿರ್ವಹಣೆಗೆ ನೆನಪಾಗುತ್ತಾರೆ. ಮುಂದಿನ ಪೀಳಿಗೆಗೆ, ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗುತ್ತಾರೆ.

(ಜನವರಿ 3, ಗುರುವಾರ ಬೆಂಗಳೂರಿನ ಜಯನಗರದ ತಮ್ಮ ಸ್ವಗೃಹದಲ್ಲಿ ಪುರಾತತ್ವ ತಜ್ಞ ಎಸ್ಆರ್ ರಾವ್ ಅವರು ಕೊನೆಯುಸಿರೆಳೆದರು. ರಾವ್ ಅವರ ಬಗೆಗೆ ಮಂಜುನಾಥ ಅಜ್ಜಂಪುರ ಅವರು ಬರೆದ ಈ ಮೇಲಿನ ಲೇಖನ "ಬಿಸಿ ಬಿಸಿ ಕಾಫಿ" ಸಂಕಲನದಲ್ಲಿ ಪ್ರಕಟವಾಗಿದೆ. ಅದನ್ನು ಇಲ್ಲಿ ಮತ್ತೆ ಪ್ರಕಟಿಸಲಾಗಿದೆ.)

English summary
India's reknowned archaeologist Shikaripura Ranganath Rao (SR Rao) passed away on January 3, Thursday in Bangalore. Manjunath Ajjampura recalls SR Rao's works and goes back to 1974 when he listened to Rao's speach in Bangalore at IIWC, Basavanagudi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X