ಪ್ರಳಯ : ಗೊಂಬೆ ಆಡಸೋನು ಮೇಲೆ ಕುಂತವ್ನೆ

2009ರಲ್ಲಿ ತೆರೆಕಂಡ '2012' ಹಾಲಿವುಡ್ ಸಿನೆಮಾ ಮರೆಯಲು ಹೇಗೆ ಸಾಧ್ಯ? ಪ್ರಳಯ ಆಗತ್ತೊ ಬಿಡತ್ತೊ ಗೊತ್ತಿಲ್ಲ. ಆದರೆ ಅದರ ಮೇಲೆ ಫಿಲ್ಮ್ ಮಾಡಿದ ನಿರ್ಮಾಪಕರ ಜೇಬಂತೂ ಭರ್ತಿ ಆಗಿದೆ. ಅದನ್ನೇ ಅರಿತ ನಮ್ಮ ಈ ನ್ಯೂಸ್ ಚಾನಲ್ ಗಳು ಒಂದು ವರ್ಷದಿಂದ ಹೇಳಿದ್ದನ್ನೇ ಹೇಳಿ ಹೇಳಿ ತಮ್ಮ ಟಿಆರ್‌ಪಿ ಅನ್ನು ಹೆಚ್ಚಿಸಿಕೊಳ್ಳುತ್ತಿವೆ. ದಿನ ಪತ್ರಿಕೆ, ವಾರ ಪತ್ರಿಕೆ, ಮಾಸ ಪತ್ರಿಕೆ, ಅಂತರ್ಜಾಲ ತಾಣಗಳು ಕೂಡ ಇದಕ್ಕೆ ಹೊರತಾಗಿಲ್ಲ.
ಪ್ರಳಯ ಅನ್ನೊ ಬಿಸಿ ಬಿಸಿ ಸುದ್ದಿ ನಮ್ಮ ಕೆಲ ಕೆಲಸವಿಲ್ಲದ ಜ್ಯೋತಿಷಿಗಳಿಗಂತೂ ಹಣ ತುಂಬಿಸೊ ಗಲ್ಲಾಪೆಟ್ಟಿಗೆಯಾಗಿದೆ. ತಮ್ಮ ಮನ ಬಂದಂತೆ ಆಗು ಹೋಗುಗಳನ್ನು ಹೇಳಿ, ಇಲ್ಲ ಸಲ್ಲದ ಹೋಮ ಹವನಗಳನ್ನು ಮಾಡಿಸಿ, ಜನಗಳನ್ನು ಭಯದ ಕೂಪಕ್ಕೆ ತಳ್ಳುತ್ತಿದ್ದಾರೆ. ಅವರಿಗೆ ಕುಮ್ಮಕ್ಕು ಕೊಡುತ್ತಿರುವವರು ನಮ್ಮ ಟಿವಿ ಚಾನಲ್ ಗಳು. ಇವರೆಲ್ಲ ಸೇರಿ ಜನರಿಗೆ ಪ್ರಳಯವನ್ನು ಮರೆಯಲು ಬಿಡುತ್ತಿಲ್ಲ.
ನಮ್ಮ ಆಲಸಿ ಜನರಿಗಂತೂ ಪ್ರಳಯ ಹೇಳಿ ಮಾಡಿಸಿದ್ದು. ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಅನ್ನುವ ಮಾತಿನಂತೆ, ಕೆಲ್ಸ ಮಾಡ್ರೋ ನನ್ಮಕ್ಕಳಾ ಅಂದ್ರೆ ಹೆಂಗೂ ಪ್ರಳಯ ಆಗುತ್ತಲ್ಲ ಏನಕ್ಕೆ ದುಡೀಬೇಕು? ಅನ್ನೋ ಪ್ರತ್ಯುತ್ತರ ದೊರೆಯುತ್ತದೆ. ಸಾಲ ಮಾಡಿದವರೆಲ್ಲ ಮಜಾ ಅನುಭವಿಸುತ್ತಿದ್ದರೆ, ಲಕ್ಷಗಟ್ಟಲೆ ಲೋನ್ ನೀಡಿದವರು ಕ್ರಾಸ್ ಫಿಂಗರ್ಸ್ ಮಾಡಿಕೊಂಡು ಡಿಸೆಂಬರ್ 21ರ 'ಡಿ'ಡೇಗಾಗಿ ಕಾಯುತ್ತ ಕುಳಿತಿದ್ದಾರೆ.
ಕಲಿಯುಗ ಕಲಿಯುಗ ಎಂದು ಕಾಲವನ್ನು ಗೊಣಗುವುದರಲ್ಲೆ ನಮ್ಮ ಕಾಲವೆಲ್ಲ ಕಳೆದು ಹೋಯಿತು. ಒಂದು ಯುಗದಲ್ಲಿ 4 ಲಕ್ಷ 32 ಸಾವಿರ ವರ್ಷಗಳಿರುತ್ತವೆ. ನಾವು ಕಳೆದಿದ್ದು ಕೇವಲ 5 ಸಾವಿರ ವರ್ಷ ಮಾತ್ರ. ಇನ್ನು ಅನೇಕ ವರ್ಷ ಕಲಿಯುಗದಲ್ಲೆ ಇರಬೇಕು. ನಮ್ಮ ಕೋಡಿಮಠದ ಸ್ವಾಮೀಜಿಗಳು, ಕಂಚಿ ಕಾಮಕೋಟಿಯ ಸ್ವಾಮೀಜಿಗಳು ಇದೇ ಮಾತನ್ನು ಹೇಳಿದ್ದಾರೆ. ಪ್ರಳಯ ಆಗುವುದಿಲ್ಲ ಧೈರ್ಯವಾಗಿರಿ ಎಂದು ಹೇಳಿದ್ದಾರೆ.
ಏಕೆ ನಾವೆಲ್ಲರೂ ಕಲಿಯುಗಕ್ಕೆ ಅಂಟಿದ ಈ ಕೆಟ್ಟ ಕಳಂಕವನ್ನು ತೊರೆಯಬಾರದು. ಸದ್ ಭಾವನೆಯಿಂದ ಒಳ್ಳೆ ಕೆಲಸಗಳನ್ನು ಮಾಡುತ್ತ ಕಾಲ ಕಳೆಯಬಾರದು. ಭೂಲೋಕದಲ್ಲಿ ಲಯಗಳು ಆಗಾಗ ಅಗುತ್ತಿರುತ್ತವೆ. ಅದು ಪ್ರಕೃತಿ ನಿಯಮ. ಅದು ತನ್ನ ಸ್ಥಿರತೆಯನ್ನು ಈ ರೀತಿ ಕಾಯ್ದಿರಿಸಿಕೊಳ್ಳುತ್ತದೆ. ಲಯಗಳು ಅನಿರೀಕ್ಷಿತ ಮತ್ತು ಅನಿವಾರ್ಯ. ಭೂಮಿಯ ಯಾವುದೋ ಒಂದು ಭಾಗದಲ್ಲಿ ನಡೆದ ಅವಘಡಕ್ಕೆ ಇಡಿ ಜಗತ್ತಿನ ಜನರೆಲ್ಲಾ ಕಕ್ಕಾಬಿಕ್ಕಿಯಾಗುವುದು ಎಷ್ಟರ ಮಟ್ಟಿಗೆ ಸರಿ ನೀವೆ ಹೇಳಿ?
ನಾಸಾದಂತಹ ಸಂಸ್ಥೆಗಳು 'ನಿಬಿರು'ಯಿಂದಾಗಲೀ ಇನ್ನಾವುದೇ ಆಕಾಶ ಕಾಯಗಳಿಂದ ಮುಂಬರುವ ದಿನಗಳಲ್ಲಿ ಯಾವುದೆ ತೊಂದರೆ ಇಲ್ಲಾ ಎಂದು ಖಚಿತ ಪಡಿಸಿದೆ. ವೈಜ್ಞಾನಿಕ ದಿಕ್ಸೂಚಿಗಳು ಸುನಾಮಿಯಂತಹ ಅವಘಡಗಳನ್ನು ತಪ್ಪಿಸದಿದ್ದರೂ, ಮೂನ್ಸೂಚನೆ ಕೊಟ್ಟು ಜನ ಜಾನುವಾರುಗಳನ್ನು ಸ್ಥಳಾಂತರಿಸಲು ಸಹಾಯ ಮಾಡುತ್ತಿವೆ.
ಪ್ರಳಯ ಕೆಲ ಜ್ಯೋತಿಷಿಗಳಿಗೆ ಹಣದ ಚೀಲವಾಗಿದೆ, ನ್ಯೂಸ್ ಚಾನಲ್ ಗಳಿಗೆ ಕಾಯಕವಾಗಿದೆ, ಕೆಲವರಿಗೆ ಭಯವಾಗಿದೆ, ಇನ್ನೂ ಕೆಲವರಿಗೆ ವಿಶ್ರಾಂತಿಯ ಕಾರಣವಾಗಿದೆ, ವಿಜ್ಞಾನಿಗಳಿಗೆ ಕಾಡುವ ಪ್ರಶ್ನೆಯಾಗಿದೆ, ನನಗಂತೂ ನಿಮ್ಮ ಭಯ ಒಡಿಸಿ ಮುಖದಲ್ಲಿ ಮಂದಹಾಸ ತರಿಸುವ ಹೊಣೆಯಾಗಿದೆ. ಇನ್ನೂ ಪ್ರಳಯ ನಿಮ್ಮ ಅರ್ಥದಲ್ಲಿ ನಿಮಗೇನು ಅನಿಸಿದೆ ಎಂಬುದನ್ನು ನೀವೆ ಹೇಳಬೇಕು.
ಈಗಲಾದರು ಅರ್ಥವಾಗಿರಬೇಕಲ್ಲ "ಗೊಂಬೆ ಆಡಸೋನು ಮೇಲೆ ಕುಂತವ್ನೆ ನಮ್ಗೆ ನಿಮ್ಗೆಲ್ಲಾ ಯಾಕೆ ಟೆನ್ಶನ್" ಆಗೋದನ್ನ ತಡೆಯಲು ಯಾರಿಂದನೂ ಸಾಧ್ಯವಿಲ್ಲ. ಆಗದೆ ಇರುವುದರ ಬಗ್ಗೆ ಯೋಚಿಸುತ್ತ ಕುಳಿತರೆ ಲಾಭವೂ ಇಲ್ಲ. ಎಲ್ಲಾ ನೋಡ್ಕೊಳ್ಳೋಕೆ ದ್ಯಾವ್ರು ಇರಬೇಕಾದರೆ ನಮ್ಗೆ ನಿಮ್ಗೆಲ್ಲಾ ಯಾಕೆ ಟೆನ್ಶನ್? ಪ್ರಳಯದ ಚಿಂತೆ ಬಿಟ್ಟು ಖುಷಿಯಾಗಿರಿ. ಮುಂಬರುವ ಕ್ರಿಸ್ ಮಸ್ ಹಬ್ಬ ಮತ್ತು ಹೊಸ ವರ್ಷವನ್ನು ಸಂತೋಷದಿಂದ ಬರಮಾಡಿಕೊಳ್ಳಿ.












Click it and Unblock the Notifications