ಪ್ರಳಯದ ಮೇಲೆ ಕಂಚಿ ಸ್ವಾಮಿ ಹೊಸ ಬೆಳಕು

ನಗರದಲ್ಲಿ ನ.30ರಿಂದ ಡಿ.2ರವರೆಗೆ ನಡೆಯುತ್ತಿರುವ 4ನೇ ಅಂತಾರಾಷ್ಟ್ರೀಯ ಜ್ಯೋತಿಷ್ಯ ಸಮ್ಮೇಳನ ಮತ್ತು ವೈವಾಹಿಕ ಜ್ಯೋತಿಷ್ಯಶಾಸ್ತ್ರ ಕುರಿತ ಕಾರ್ಯಕ್ರಮದಲ್ಲಿ ಗಣೇಶ ಘನಪಾಟಿ ಅವರು ಶುಕ್ರವಾರ ಮಾತನಾಡುತ್ತಿದ್ದರು. ಈ ಸಮ್ಮೇಳನವನ್ನು ದಿವ್ಯಜ್ಯೋತಿ ಜ್ಯೋತಿಷ್ಯ ಕಾಲೇಜು ಆಯೋಜಿಸಿದೆ.
ಮಾಯನ್ ಕ್ಯಾಲೆಂಡರ್ ಪ್ರಕಾರ ಇದೇ ವರ್ಷದ ಡಿಸೆಂಬರ್ 21ರಂದು ಜಗತ್ ಪ್ರಳಯ ಸಂಭವಿಸಲಿದೆ ಎಂಬ ವದಂತಿ ಈಗಾಗಲೆ ಹಬ್ಬಿದೆ. ಇದನ್ನೆಲ್ಲ ನಂಬದವರು ತಮಾಷೆ ಮಾಡಿಕೊಂಡು ನಿರಾಳರಾಗಿದ್ದಾರೆ. ಆದರೆ, ನಂಬುವವರು ಮಾತ್ರ ವಿಪರೀತ ಗೊಂದಲಕ್ಕೆ ಬಿದ್ದಿದ್ದಾರೆ, ಏನು ಮಾಡಬೇಕೆಂದು ತಿಳಿಯದೆ ಭಯಭೀತರಾಗಿದ್ದಾರೆ. ಇನ್ನು ಕೆಲವೊಂದು ಟಿವಿ ಚಾನಲ್ಲುಗಳು ಪ್ರತಿದಿನ ಕೌಂಟ್ ಡೌನ್ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತ ಜನರನ್ನು ಮತ್ತಷ್ಟು ಭೀತಿಗೆ ತಳ್ಳುತ್ತಿವೆ ಎಂದು ಗಣೇಶ್ ಅವರು ಆತಂಕ ವ್ಯಕ್ತಪಡಿಸಿದರು.
ನಾವಿನ್ನೂ ಕಲಿಗಾಲದಲ್ಲಿ ಇದ್ದೇವೆ. ಕಲಿಗಾಲ ಅಂತ್ಯವಾಗಲು ಇನ್ನೂ ಲಕ್ಷಾಂತರ ವರ್ಷಗಳು ಬೇಕು. ಹಾಗಾಗಿ ಜನರು ಪ್ರಳಯ ಆಗುತ್ತದೆಂದು ಜನರು ನಂಬುವ ಅಗತ್ಯವೇ ಇಲ್ಲ. ಒಂದು ವೇಳೆ ಪ್ರಳಯವಾದರೂ ಇಡೀ ಭೂಮಿ ಮುಳುಗೇನು ಹೋಗುವುದಿಲ್ಲ. ನಮ್ಮ ದೇಶದಲ್ಲಿ ವೇದ, ಶಾಸ್ತ್ರ, ಪುರಾಣ, ದೇವರ ಮೇಲೆ ನಂಬಿಕೆ ಜಾಸ್ತಿ. ಹೀಗಾಗಿ ಅಂತಹ ಹಾನಿಯೇನು ಸಂಭವಿಸುವುದಿಲ್ಲ ಎಂದು ಅವರು ಜನರಲ್ಲಿ ಉದ್ಭವವಾಗಿರುವ ಗೊಂದಲ ನಿವಾರಿಸಲು ಯತ್ನಿಸಿದರು.
ದಿವ್ಯಜ್ಯೋತಿ ಜ್ಯೋತಿಷ್ಯ ಕಾಲೇಜಿನ ಅಧ್ಯಕ್ಷ ಪ್ರೊ.ಎನ್.ಎಸ್. ಮೂರ್ತಿ ಅವರು, ಪ್ರಳಯದ ಬಗ್ಗೆ ಜನರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸುವ ಜವಾಬ್ದಾರಿ ಉತ್ತಮ ಜ್ಯೋತಿಷಿಗಳ ಮೇಲಿದೆ ಎಂದರು. ಈ ಮಾತನ್ನು ಪುಷ್ಟೀಕರಿಸಿದ ಕಾಲೇಜಿನ ಆಸ್ಟ್ರಾಲಜಿ ವಿಭಾಗದ ಎಚ್. ಚಂದ್ರಶೇಖರ್ ಅವರು, ಜ್ಯೋತಿಷ್ಯದ ಬಗ್ಗೆ ಅಲ್ಪಸ್ವಲ್ಪ ತಿಳಿದುಕೊಂಡಿರುವವರು ತಾವು ಜ್ಯೋತಿಷಿಗಳೆಂದು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಮೆರಿಕಾದ ನಾಸಾ ಸಂಸ್ಥೆಯ ವಿಜ್ಞಾನಿಗಳು ಪ್ರಳಯ ಸಂಭವಿಸುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಅಷ್ಟೇ ಏಕೆ, ಭವಿಷ್ಯ ನುಡಿಯುವುದರಲ್ಲಿ ಸಿದ್ಧಹಸ್ತರಾಗಿರುವ ಹಾಸನ ಜಿಲ್ಲೆಯ ಕೋಡಿಮಠ ಸ್ವಾಮೀಜಿಗಳಾದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು ಕೂಡ ಈ ವರ್ಷದ ಡಿಸೆಂಬರ್‌ನಲ್ಲಿ ಪ್ರಳಯ ಸಂಭವಿಸುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಜ್ಯೋತಿಷಿಗಳು ಗ್ರಹಗತಿಗಳ ಲೆಕ್ಕಹಾಕಿ ಹೇಳುತ್ತಾರೆ, ವಿಜ್ಞಾನಿಗಳು ತರ್ಕಬದ್ಧವಾಗಿ ಮತ್ತೇನೋ ಹೇಳುತ್ತಾರೆ, ಟಿವಿ ಚಾನಲ್ಲಿನವರು ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಜ್ಯೋತಿಷಿಗಳನ್ನು ಸ್ಟುಡಿಯೋಗೆ ಕರೆಸಿ ಪುಂಖಾನುಪುಖವಾಗಿ ಚರ್ಚೆ ನಡೆಸುತ್ತಾರೆ. ಅವರು ಏನಾದರೂ ಹೇಳಲಿ ಬಿಡಿ. ಆದರೆ, ಶ್ರೀಸಾಮಾನ್ಯರಾದ, ಪ್ರಜ್ಞಾವಂತರಾದ ನೀವು ಈ ಪ್ರಳಯ ಬಗ್ಗೆ ಏನು ಹೇಳುತ್ತೀರಿ? ಪ್ರಳಯ ಸಂಭವಿಸುತ್ತದಾ? ಇಲ್ಲವಾ? ಕಾಮೆಂಟು ಬರೆದು ಕಳಿಸಿ.












Click it and Unblock the Notifications