ನೌಕರರ ಬಗ್ಗೆ ಕಾಳಜಿ ಇರುವ ಮಾದರಿ ನಾಯಕ

ನಾನು ಜೆ ಆರ್ ಡಿ ಯವರನ್ನು ಮಹಾನ್ ವ್ಯಕ್ತಿ ಎಂದೇ ಪರಿಗಣಿಸುತ್ತೇನೆ. ಏಕೆಂದರೆ ಅವರು ತಮ್ಮ ಬಿಡುವಿರದ, ಅವಿಶ್ರಾಂತ ದುಡಿಮೆಯ ಮಧ್ಯದಲ್ಲೂ ಒಂದು ಪತ್ರದ ಮುಖಾಂತರ ನ್ಯಾಯವನ್ನು ಬೇಡಿದ ಜನಸಾಮಾನ್ಯರನ್ನೂ ಸಹ ಗೌರವದಿಂದ ಕಂಡು ನ್ಯಾಯ ದೊರಕಿಸಿಕೊಟ್ಟರು. ಅವರಿಗೆ ಪ್ರತಿನಿತ್ಯ ಸಾವಿರಾರು ಪತ್ರಗಳು ಬರುತ್ತಿದ್ದಿರಬೇಕು. ನನ್ನ ಪತ್ರವನ್ನು ಅವರು ಕಸದಬುಟ್ಟಿಗೆ ಹಾಕಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಅಪರಿಚಿತ ಹುಡುಗಿಯ ಆಶೋತ್ತರಗಳನ್ನು ಗೌರವಿಸಿದರು. ನನ್ನ ಬಳಿ ಹಣವಿರಲಿಲ್ಲ, ಪ್ರಭಾವಿ ವ್ಯಕ್ತಿಗಳ ಪರಿಚಯವಿರಲಿಲ್ಲ. ಆದರೂ ನನಗೆ ಅವರ ಕಂಪನಿಯಲ್ಲಿ ಕೆಲಸಮಾಡುವ ಅವಕಾಶ ಒದಗಿಸಿದರು. ಅವರು ನನಗೆ ಬರೀ ಕೆಲಸವನ್ನು ಕೊಡಲಿಲ್ಲ. ಬದಲಾಗಿ ನನ್ನ ಜೀವನವನ್ನೇ ರೂಪಿಸಿ ಆದರ್ಶ ಮನಸ್ಥಿತಿಯನ್ನು ನೀಡಿದರು.
ಇಂದಿನ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅರ್ಧದಷ್ಟು ಮಂದಿ ಹುಡುಗಿಯರು. ಪ್ರತಿಯೊಂದು ಔದ್ಯೋಗಿಕ ಕ್ಷೇತ್ರದ ಶಾಪ್ ಫ್ಲೋರ್ ನಲ್ಲೂ ಮಹಿಳೆಯರು ಕಾರ್ಯನಿರತರಾಗಿದ್ದಾರೆ. ಈ ಬದಲಾವಣೆಗಳನ್ನು ಅವಲೋಕಿಸಿದಾಗ, ನನ್ನ ಕಣ್ಣ ಮುಂದೆ ಜೆ ಆರ್ ಡಿ ಯವರು ಬಂದು ನಿಲ್ಲುತ್ತಾರೆ. ಕಾಲಬ್ರಹ್ಮನೇನಾದರೂ ಬಂದು ನನಗೇನು ಬೇಕೆಂದು ಕೇಳಿದರೆ ನಾನು ಜೆ ಆರ್ ಡಿ ಯವರು ಮತ್ತೆ ಬದುಕಿ ಬರಬೇಕೆಂದು ಕೇಳುತ್ತೇನೆ. ಏಕೆಂದರೆ ಈಗ ಅವರು ನಮ್ಮೊಂದಿಗಿದ್ದು, ಅವರು ಸ್ಥಾಪಿಸಿದ ಕಂಪನಿಗಳು ಹೇಗೆ ಅಭಿವೃದ್ಧಿಯನ್ನು ಸಾಧಿಸಿವೆ ಎಂಬುದನ್ನು ನೋಡಬೇಕು. ಸಂಪೂರ್ಣ ಸಂತೃಪ್ತಿಗೆ ಅವರು ಒಡೆಯರಾಗಬೇಕು.
ಕಾಲಪ್ರವಾಹದಲ್ಲಿ ಟಾಟಾ ಹೌಸ್ ನ ಬಗ್ಗೆ ನನ್ನ ಪ್ರೀತಿ ಮತ್ತು ಆದರಗಳು ಕಡಿಮೆಯಾಗಿಲ್ಲ. ನಾನು ಸದಾ ಜೆ ಆರ್ ಡಿ ಯವರನ್ನು ಅತ್ಯುನ್ನತ ಸ್ಥಾನದಲ್ಲಿ ಕುಳ್ಳಿರಿಸಿ, ಗೌರವದಿಂದ ಕಂಡಿದ್ದೇನೆ. ಅವರೊಬ್ಬರು ಸರಳತೆ, ಔದಾರ್ಯ, ಕರುಣೆ, ಮತ್ತು ನೌಕರರ ಬಗ್ಗೆ ಕಾಳಜಿ ಇರುವಂತಹ ಮಾದರಿ ನಾಯಕರಾಗಿದ್ದರು. ಅವರ ನೀಲಿ ಕಣ್ಣುಗಳು ನನಗೆ ಆಕಾಶವನ್ನು ಜ್ಞಾಪಿಸುತ್ತಿದ್ದವು. ಅವುಗಳು ಭವ್ಯತೆ, ಅಗಾಧತೆ ಮತ್ತು ಅನಂತತೆಯನ್ನು ಪ್ರತಿನಿಧಿಸುತ್ತಿದ್ದವು.











Click it and Unblock the Notifications