ಶ್ವೇತಾ, ಸಿಂಧು ಸಹೋದರಿಯರ ಯಶಸ್ವಿ ರಂಗಪ್ರವೇಶ

ಪುಷ್ಪಾಂಜಲಿ, ಗಣೇಶಸ್ತುತಿ, ಜತಿಸ್ವರ, ಶಿವನ ನವರಸಗಳು, ವರ್ಣ, ಅಷ್ಟಪದಿ, ಕೃತಿ, ತಿಲ್ಲಾನ- ಹೀಗೆ ಶಾಸ್ತ್ರೀಯ ಭರತ ನಾಟ್ಯದ ಎಲ್ಲ ಪ್ರಾಕಾರಗಳಲ್ಲೂ ಶ್ವೇತಾ-ಸಿಂಧು ಸಹೋದರಿಯರು ಉತ್ತಮ ಪ್ರದರ್ಶನ ನೀಡಿ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಮನರಂಜಿಸಿದರು.
ಶ್ವೇತಾ-ಸಿಂಧು ಸಹೋದರಿಯರು ಶಾಸ್ತ್ರೀಯ ನೃತ್ಯ ಪ್ರಕಾರಕ್ಕೆ ಹೊಸ ಕೊಡುಗೆ. ಅಗತ್ಯ ತರಬೇತಿ ನೀಡಿ ಈ ಪ್ರತಿಭೆಗಳನ್ನು ಬೆಳಕಿಗೆ ತಂದ ಕೀರ್ತಿ ಗುರು ಶ್ರೀಮತಿ ರಾಧಾ ಶ್ರೀಧರ್ ಅವರದು ಎಂದು ಮುಖ್ಯ ಅತಿಥಿ ಕಲಾ ವಿಮರ್ಶಕ ಡಾ: ಸೂರ್ಯ ಪ್ರಸಾದ್ ನುಡಿದರು.
ಹಿರಿಯ ಕಲಾವಿದೆ, ಗುರು ಶ್ರೀಮತಿ ರಾಧಾ ಶ್ರೀಧರ್‌ರವರ ಮಾರ್ಗದರ್ಶನ, ಶ್ವೇತಾ-ಸಿಂಧು ಸಹೋದರಿಯರ ಹೃದಯಸ್ವರ್ಶಿ ಪ್ರದರ್ಶನ, ಸುಶ್ರಾವ್ಯ ಹಿಮ್ಮೇಳ ಮತ್ತು ಆಕರ್ಷಕ ರಂಗ ಸಜ್ಜಿಕೆಯಿಂದಾಗಿ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂದಿದೆ ಎಂದು ಇನ್ನೋರ್ವ ಮುಖ್ಯ ಅತಿಥಿ ವಿದುಷಿ ಶ್ರೀಮತಿ ದ್ವಾರಕಿ ಕೃಷ್ಣಸ್ವಾಮಿ ಪ್ರಶಂಸೆ ಮಾಡಿದರು.
ಇದೇ ಸಂದರ್ಭದಲ್ಲಿ ಗುರು ಶ್ರೀಮತಿ ರಾಧಾ ಶ್ರೀಧರ್ ಅವರು ತಮ್ಮ ಶಿಷ್ಯೆಯರಾದ ಶ್ವೇತಾ-ಸಿಂಧು ಸಹೋದರಿಯರಿಗೆ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಆಶೀರ್ವದಿಸಿದರು.
ಹಿಮ್ಮೇಳದಲ್ಲಿ ವಿದ್ವಾನ್ ಶ್ರೀವತ್ಸ (ಹಾಡುಗಾರಿಕೆ), ವಿದ್ವಾನ್ ಪುಲಿಕೇಶಿ (ನಟುವಾಂಗ), ವಿದ್ವಾನ್ ಚಂದ್ರಶೇಖರ್ (ಮೃದಂಗ), ವಿದ್ವಾನ್ ಪ್ರಸನ್ನ (ರಿದಂ ಪ್ಯಾಡ್), ವಿದ್ವಾನ್ ದಯಾಶಂಕರ್ (ವಯೋಲಿನ್) ಮತ್ತು ವಿದುಷಿ ಶ್ರೀಮತಿ ಮಧುರಾ (ಕೊಳಲು) ಸಾಥ್ ನೀಡಿದರು. ಷಡಕ್ಷರಿ ಕಾರ್ಯಕ್ರಮ ನಿರೂಪಿಸಿದರು.
ಗುರುಗಳಾದ ಶ್ರೀಮತಿ ಮೀರಾ, ವಿಜಯ ವೆಂಕಟೇಶ್, ಅಶ್ವಿನಿ, ಗಣೇಶ್, ಎಂಎಲ್‌ಸಿ ಬಿ.ರಾಮಕೃಷ್ಣ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಸಿ.ಸಿಪ್ಪೇಗೌಡ , ಮಹಾನಗರ ಪಾಲಿಕೆ ಸದಸ್ಯ ಬಿ.ಎನ್.ಸತ್ಯನಾರಾಯಣ (ಕಟ್ಟೆ ಸತ್ಯ), ಸತ್ಯ ಜ್ಞಾನಾಚಾರ್ ಕಟ್ಟಿ, ಡಾ:ಎ.ವಿ.ಸತ್ಯನಾರಾಯಣ, ಡಾ:ಫಣಿರೇಣು ಮತ್ತಿತರರು ಉಪಸ್ಥಿತರಿದ್ದರು.











Click it and Unblock the Notifications