ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡ ಭಾಷಾದಾಗ ಏನೈತಿ ಅಂಥದ್ದೇನೈತಿ

By * ಮಹೇಶ್ ಗಜಬರ, ಚಿಕ್ಕೋಡಿ
|
Google Oneindia Kannada News

Mahesh Gajabar, Belgaum
ಇತ್ತೀಚಿನ ದಿನಗಳಲ್ಲಿ ಕನ್ನಡ ಶಬ್ದ ಬಳಕೆ ಬಹಳ ಕಡಿಮೆ ಆಗ್ತಾ ಇದೆ. ಆ ಸ್ಥಾನವನ್ನು ಹೆಚ್ಚಾಗಿ ಇಂಗ್ಲಿಷ್ ನುಂಗಿ ನೀರು ಕುಡಿಯುತ್ತಿದೆ. ಕನ್ನಡ ಭಾಷೆಯ ವಿವಿಧ ಪ್ರಕಾರದ ಶೈಲಿಗಳಲ್ಲಿ (Slang) ಪ್ರಮುಖವಾಗಿ ಮೂರು ಪ್ರಕಾರಗಳು.

1. ಉತ್ತರ ಕರ್ನಾಟಕ ಕನ್ನಡ ಶೈಲಿ
2. ದಕ್ಷಿಣ ಕರ್ನಾಟಕ ಕನ್ನಡ ಶೈಲಿ
3. ಕರಾವಳಿ ಕನ್ನಡ ಶೈಲಿ

ಆದ್ರೆ ಈ ರೀತಿಯ ವಿಂಗಡನೆ ನನ್ನ ಪ್ರಕಾರ ಬಹಳ ತಪ್ಪು. ಯಾಕಂದ್ರೆ ಪ್ರತಿಯೊಂದು ವಿಭಾಗದಲ್ಲಿ(ಮು೦.ಕ,ಹೈ.ಕ,ದ.ಕ) ಮಾತಾಡೋ ಶೈಲಿ ಇನ್ನೊಂದು ಶೈಲಿಗೆ ಸಂಬಂಧವೆ ಇರೋದಿಲ್ಲ. ಉದಾ: ದಕ್ಷಿಣ ಕರ್ನಾಟಕ ಶೈಲಿಯಲ್ಲಿ ಚಿತ್ರದುರ್ಗ ಮತ್ತು ಮಂಡ್ಯ ಭಾಷೆಗೂ ಅಜಗಜಾಂತರ ವ್ಯತ್ಯಾಸವಿದೆ. ಆದ್ರು ಅವೆರಡನ್ನು ಒಂದೇ ಪ್ರಕಾರದಲ್ಲಿ ಸೇರಿಸಲಾಗುತ್ತೆ. ಅದೇ ತರಹ ದೃಶ್ಯ ಮಾಧ್ಯಮಗಳಲ್ಲಿ ತೋರಿಸೊ ಉತ್ತರ ಕರ್ನಾಟಕದ ಶೈಲಿ ಅಂತಾ ಹೇಳಿಕೊಳ್ಳೊ ಕನ್ನಡ ನಿಜವಾಗಿಯೂ ಇಲ್ಲಿದ್ದು (ವಿಶಾಲ ಉತ್ತರ ಕರ್ನಾಟಕದ್ದು) ಅಲ್ಲವೇ ಅಲ್ಲ.

ಸುಮ್ಮನೆ ಅದನ್ನ ಹೈಪ್ ಮಾಡಿ ಉತ್ತರ ಕರ್ನಾಟಕಕ್ಕೆ ಮಹಾ ಮೋಸ ಮಾಡ್ತಾರೆ. ಹಾಗೆ ನೋಡಿದ್ರೆ ಪ್ರತಿ ನೂರು ಕೀ.ಮೀ.ಗೂ ಭಾಷೆ ಶೈಲಿ ಬದಲಾಗ್ತಾ ಹೋಗುತ್ತೆ. ಇಡೀ ಉತ್ತರ ಕರ್ನಾಟಕದಲ್ಲೆ ನೋಡಿ, ಇಲ್ಲಿನ ಪರಿಸರ ವೈವಿಧ್ಯತೆ ಹಾಗೆ ಭಾಷೆಯಲ್ಲಿ ಕೂಡ ಭಾರೀ ವೈವಿಧ್ಯತೆಯನ್ನು ನಾವು ಕಾಣಬಹುದು. ಕೃಷಿ, ಕಾಡು ಸಂಪನ್ನ ಕಾರವಾರ, ಬೆಳಗಾವಿ ಒಂದು ಕಡೆ ಆದ್ರೆ ತೀವ್ರ ಬಿರು ಬೇಸಿಗೆಯ ಗುಲ್ಬರ್ಗಾ, ರಾಯಚೂರು ಒಂದು ಕಡೆ. ಎಸ್.ಎಸ್.ಎಲ್.ಸಿ ಯಲ್ಲಿ ನಂ. ಒನ್ ಚಿಕ್ಕೋಡಿ ಒಂದು ಮೂಲೆಲಿದ್ರೆ ಕೊನೆ ಸ್ಥಾನದಲ್ಲಿ ನಿಲ್ಲೊ ಬೀದರ ಇನ್ನೊಂದು ಮೂಲೆಯಲ್ಲಿ ಇದೆ. ಎರಡೂ ಉತ್ತರ ಕರ್ನಾಟಕದ ಊರುಗಳೇ.

ನಮಗಿಂತ ನಮ್ಮ ಊರು ಚೆಂದ, ಊರಿಗಿಂತ ಭಾಷೆ ಚೆಂದ.
ಉತ್ತರ ಕರ್ನಾಟಕವನ್ನು ಒಂದು ಅಂತಾ ಹೇಳೋಕ್ಕೆ ಕಾರಣ ಏನಾದ್ರು ಇದ್ರೆ, ಅದು ಇಲ್ಲಿನ ಜೋಳದ ರೊಟ್ಟಿ ಊಟ ಮತ್ತು ಭಾಷಾ ಶೈಲಿ ಬೇರೆಯಾಗಿದ್ರೂ ಮಾತಿನ ಸ್ವರ ಒಂದೇ ತರಹ ಇರುವುದು. ನಾನು ನಿಜವಾಗಲೂ ಹೇಳ್ತಿನಿ, ಕನ್ನಡ ಚಿತ್ರರಂಗವನ್ನು ಒಳಗೊಂಡಂತೆ ಯಾವುದೇ ದೃಶ್ಯ ಮಾಧ್ಯಮದಲ್ಲಿ ಉತ್ತರ ಕರ್ನಾಟಕದ ಶೈಲಿ ಅಂತಾ ಹೇಳಿಕೊಳ್ಳೊ ಕನ್ನಡ ಹಾಸ್ಯ ಮಾಡಲು ಹೋಗಿ ಅಪಹಾಸ್ಯಕ್ಕೆ ಒಳಗಾಗ್ತಾ ಇದೆ. ಉತ್ತರ ಕರ್ನಾಟಕದಲ್ಲಿ ಪ್ರತಿ ಜಿಲ್ಲೆಯಲ್ಲಿ ಕೂಡ ಶಬ್ದ ಬಳಕೆಯಲ್ಲಿ ಏಕರೂಪ ಇಲ್ಲವೇ ಇಲ್ಲ. ಉ.ಕ ಶೈಲಿಯನ್ನು ಕೂಡ ಮು೦ಬೈ.ಕ ಮತ್ತು ಹೈ.ಕ ಶೈಲಿ ಅಂತಾ ಸಾಮಾನ್ಯವಾಗಿ ವಿಂಗಡಿಸಬಹುದು.

ಇಲ್ಲೂ ಕೂಡ ಮತ್ತೆ ಜಿಲ್ಲಾವಾರು ಶಬ್ದ ಬಳಕೆ ಬೇರೆನೆ ಇರುತ್ತೆ. ಆದ್ರೂ ಬೆಳಗಾವಿ ಮತ್ತು ಧಾರವಾಡ ಶೈಲಿಯಲ್ಲಿ ತುಂಬ ಸಾಮ್ಯತೆ ಇದೆ. ಇದೇ ಶೈಲಿಯನ್ನು ಕಾರವಾರ, ಹಳಿಯಾಳ, ದಾಂಡೇಲಿ, ಜೋಯಿಡಾದಲ್ಲಿ ಬಳಸಲಾಗುತ್ತೆ. ಇತ್ತೀಚಿಗೆ ಈ ಶಬ್ದಗಳನ್ನು ಬಳಸುವುದು ತುಂಬಾ ಕಡಿಮೆ ಆಗ್ತಾ ಇದೆ. ಅವು ನಶಿಸಿ ಹೋಗೊ ಅಪಾಯ ಇದೆ. ಅವುಗಳು ಮರೆತು ಹೋಗುವ ಮುನ್ನ ನಿಮ್ಮ ಕಣ್ಣ ಮುಂದೆ ಹಾದು ಹೋಗಲಿ ಅಂತಾ ಅವನ್ನ ನಿಮಗೆ ಸಂಗ್ರಹಿಸಿ ಕೊಡುತ್ತಾ ಇದ್ದೇನೆ.

ಇಲ್ಲಿ ಬಳಸಿರೊ ಬಹುತೇಕ ಶಬ್ದಗಳು ಈ ಎರಡು ಜಿಲ್ಲೆಗಳಲ್ಲಿ ಕೆಲವು ಇಡೀ ಉತ್ತರ ಕರ್ನಾಟಕದಲ್ಲಿ ಬಳಕೆಯಲ್ಲಿವೆ. ಉ.ಕ ಶೈಲಿ ಭಾಷೆ ಕಲಿಯುವವರಿಗೆ, ಸ್ಮರಿಸಿಕೊಳ್ಳುವವರಿಗೆ ಇದು ಬಹಳ ಉಪಯುಕ್ತ. ಈ ಶಬ್ದ ಸಂಗ್ರಹಕ್ಕೆ ನಾನು ಕೆಲವು ಶಬ್ದಗಳನ್ನು ಬೇರೆಯವರ ಕನ್ನಡ ಬ್ಲಾಗ್ ಮತ್ತು ಭಾರದ್ವಾಜ್ ಶಬ್ದಕೋಶದಿಂದ ಎರವಲು ಪಡೆದಿದ್ದೇನೆ. ಇನ್ನುಳಿದವು ನನ್ನ ಸ್ವಂತದ್ದು. ನಾ ಕೇಳಿದ್ದು, ಮಾತಾಡಿದ್ದು. ದಯವಿಟ್ಟು ಒಮ್ಮೆ ಓದಿ ಉತ್ತರ ಕರ್ನಾಟಕ ಶೈಲಿಯ ಬಗ್ಗೆ ಸಂದೇಹ ಪರಿಹರಿಸಿಕೊಳ್ಳಿ.

ಇಲ್ಲಿ ಪಟ್ಟಿ ಮಾಡದೆ ಹೋದ ಶಬ್ದಗಳನ್ನು ದಯವಿಟ್ಟು ನನಗೆ ನೆನಪಿಸಿ. ಇನ್ನೊಂದು ವಿಷಯ ಏನಂದ್ರ ದಕ್ಷಿಣ ಕರ್ನಾಟಕದಲ್ಲಿ ಎ.ಏ ಕಾರದಲ್ಲಿ ಉಪಯೋಗಿಸುವ ಬಹುತೇಕ ಶಬ್ದಗಳನ್ನ ಉತ್ತರ ಕರ್ನಾಟಕದಲ್ಲಿ ಇ.ಈ ಕಾರದಲ್ಲಿ ಉಪಯೋಗಿಸಲಾಗುತ್ತೆ (ಉದಾ: ಮಳಿ=ಮಳೆ, ಮನೆ=ಮನಿ, ಆನಿ=ಆನೆ, ಕಾಗಿ=ಕಾಗೆ, ಕತಿ=ಕತೆ ಇನ್ನು ಬಹಳ ಇವೆ) ಅಂತಹ ಶಬ್ದಗಳನ್ನ ಇಲ್ಲಿ ಪಟ್ಟಿ ಮಾಡಿಲ್ಲ. ಅದನ್ನು ನೀವೇ ತಿಳಿದುಕೊಳ್ಳಬೇಕು. ಶೈಲಿ ಯಾವುದಾದರೇನು ಇಡೀ ಕರ್ನಾಟಕದ ಕನ್ನಡ ಒಂದೇ. ಜೈ ಕರ್ನಾಟಕ ಮಾತೆ.

ನನ್ನ ಪದ ಸಂಗ್ರಹದ ಪ್ರಕಟಣೆಯನ್ನು ಶಾಮ್ ಸರ ನಾಳೆ 12ನೇ ತಾರೀಖು ಶನಿವಾರ ಪ್ರಕಟಿಸುತ್ತಾರಂತೆ. ಹಾಗಂತ ಅವರೇ ನನಗೆ ಫೋನ್ ಮಾಡಿ ಹೇಳ್ಯಾರ.

ಧಾರವಾಡ ಕನ್ನಡದಾಗ ಏನಿಲ್ಲ?
ಗರಿಗರಿ ಧಾರವಾಡ ಕನ್ನಡ ಪದಗಳ ಗಿರಮಿಟ್ಟು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X