• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿಯೊಬ್ಬ ಭಾರತೀಯ ತಿಳಿಯಬೇಕಾದ ಸಂಗತಿ

By Prasad
|
ತಾವು ಮಾಡಿದ್ದು ಮತ್ತು ಮಾಡಿದ್ದಕ್ಕಿಂತ ಹೆಚ್ಚಾಗಿ ಬಿಂಬಿಸಿಕೊಳ್ಳುವವರು ನಮ್ಮ ದೇಶದಲ್ಲಿ ಕಾಲಿಗೊಬ್ಬರು ಸಿಗುತ್ತಾರೆ. ಆದರೆ, ಬಲಗೈಯಲ್ಲಿ ಕೊಟ್ಟಿದ್ದನ್ನು ಎಡಗೈಗೆ ಕೂಡ ತಿಳಿಯಬಾರದಂತೆ ಇರುವವರು ಕೋಟಿಗೊಬ್ಬರು. ಅಂತಹ ಕೋಟ್ಯಾಧಿಪತಿಗಳಲ್ಲೊಬ್ಬರು ಪ್ರತಿಷ್ಠಿತ ತಾಜ್ ಗ್ರೂಪ್ ನ ಮಾಲಿಕ ರತನ್ ಟಾಟಾ. 2008ರ ನವೆಂಬರ್ 26ರಂದು ಮುಂಬೈ ಮೇಲೆ ಭಯೋತ್ಪಾದಕ ದಾಳಿ ನಡೆದ ನಂತರ ಸಂತ್ರಸ್ತರಿಗಾಗಿ ಅವರು ಮಾಡಿದ 'ನ್ಯಾನೋ' ಸಹಾಯಗಳು ಅವರ ವ್ಯಕ್ತಿತ್ವವನ್ನು ಹಿಮಾಲಯವನ್ನು ದಾಟಿಸಿವೆ.

* ಮೃತ್ಯುಂಜಯ ಬಿ ಗುಬ್ಬಿ, ಬೆಂಗಳೂರು

ಹೊಟೆಲ್ ತಾಜ್ - ನವೆಂಬರ್ 26, 2008ರಂದು ಭಯೋತ್ಪಾದಕರ ದಾಳಿಗೆ ತುತ್ತಾದ ಮುಂಬೈನ ರತನ್ ಟಾಟಾ ಒಡೆತನದ ಐಶಾರಾಮಿ ಹೊಟೆಲ್. ಇಡೀ ದೇಶವೇ ಆಶ್ಚರ್ಯದಿಂದ ದಿನವಿಡೀ ಈ ದಾಳಿಯ ಕುರೂಪವನ್ನು ಅದರ ಭೀಕರತೆಯನ್ನು ನೋಡುತ್ತಾ ಬೆರಗಾಗಿದ್ದಾಗ ಅದರ ಪುನರುತ್ಥಾನ ಹಾಗೂ ಮುಂಬೈ ಏಳಿಗೆಗಾಗಿ ತಾಜ್ ಮಾಲೀಕರಾದ ರತನ್ ಟಾಟಾರವರು ಕೈಗೊಂಡ ಕಾರ್ಯಗಳು ನಿಜಕ್ಕೂ ಶ್ಲಾಘನೀಯ ಹಾಗೂ ಇವು ನಮ್ಮ ಮನವನ್ನು ಧನ್ಯತೆಯ ಭಾವದಿಂದ ಅವರತ್ತ ನೋಡುವ ಹಾಗೆ ಮಾಡಿವೆ.

ದುರಂತದ ನಂತರದ ರತನ್ ಟಾಟಾ ಮಾಡಿದ ಮೊದಲ ತುಂಬಾ ಶ್ಲಾಘನೀಯ ಕೆಲಸವೇನೆಂದರೆ, ಸ್ವತಃ ಅವರು ಹಾಗೂ ಹೊಟೇಲ್‌ನ ಹಿರಿಯ ಅಧಿಕಾರಿಗಳು ಸತತವಾಗಿ ಮೂರುದಿನ ದುರಂತದಲ್ಲಿ ಮಡಿದ ನೌಕರರ ಅಂತಿಮ ಸಂಸ್ಕಾರಕ್ಕೆ ಹಾಜರಾದುದು. ನಂತರ ತಾಜ್ ಹೊಟೇಲ್‌ನಲ್ಲಿ ಅಂದೇ ಕೆಲಸಕ್ಕೆ ಸೇರಿದ್ದ ಪ್ರತಿ ಹಂಗಾಮಿ ದಿನಗೂಲಿ ನೌಕರರನ್ನೂ ಸೇರಿಸಿ ಎಲ್ಲಾ ನೌಕರರನ್ನೂ ತಾಜ್‌ನ ನೌಕರರೆಂದೇ ಗುರುತಿಸಿ, ಗಾಯಗೊಂಡ ಹಾಗೂ ಮೃತಪಟ್ಟ ಎಲ್ಲರಿಗೂ ಪರಿಹಾರ/ಆಪತ್ಕಾಲಿಕ ಸಹಾಯವನ್ನು ನೀಡಿದರು. ಹೊಟೇಲ್ ದುರುಸ್ತಿಗಾಗಿ ಮುಚ್ಚಿದಾಗ ಕಾರ್ಮಿಕರೆಲ್ಲರಿಗೂ ಸಂಬಳವನ್ನು ಮನಿ ಆರ್ಡರ್ ಮೂಲಕ ಅವರವರ ಮನೆಗಳಿಗೆ ತಲುಪಿಸಿದರು. ಮುಂಬೈ ಹೊರವಲಯದಲ್ಲಿದ್ದ ಎಲ್ಲಾ ನೌಕರರ ಕುಟುಂಬದವರನ್ನು ಹೊಟೆಲ್ ಪ್ರೆಸಿಡೆನ್ಸಿಯಲ್ಲಿ ಮೂರು ವಾರ ಉಳಿಸಿಕೊಂಡು, ಒಟ್ಟುಗೂಡಿಸಿ ಧೈರ್ಯ ತುಂಬಿದರು.

ಬರೀ 20 ದಿನದ ಒಳಗೆ ತಾಜ್ ನೌಕರರ ಪರಿಹಾರ ಸಮಿತಿ(ಟ್ರಸ್ಟ್)ಯನ್ನು ಸ್ಥಾಪಿಸಿ, ಈ ದುರಂತದಿಂದ ಮಾನಸಿಕ ಆಘಾತಕ್ಕೊಳಗಾದ ನೌಕರ ನೌಕರೇತರೆಲ್ಲರಿಗೂ ವಿಕಸನ ಕಾರ್ಯಕ್ರಮಗಳನ್ನು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ವತಿಯಿಂದ ನಡೆಸಿದರು. ಸುಮಾರು 1600 ನೌಕರರಿಗೆ ಪರಿಹಾರ ಕೇಂದ್ರಗಳ ಮೂಲಕ ಆಹಾರ, ನೀರು, ಶೌಚ, ಪ್ರಥಮ ಚಿಕಿತ್ಸೆ ಹಾಗೂ ಸಲಹೆಗಳನ್ನು ನೀಡಿ ಅವರ ಆತ್ಮಸ್ಥೈರ್ಯವನ್ನು ಇಮ್ಮಡಿಗೊಳಿಸಲಾಯಿತು. ನೊಂದ ಪ್ರತಿಯೊಬ್ಬರ ವೈಯುಕ್ತಿಕ ನೋವುಗಳನ್ನೂ ಸಹ ಸ್ವತಃ ರತನ್ ಟಾಟಾರವರೇ ಆಲಿಸಿ ಪರಿಹಾರ ಒದಗಿಸಲು ವ್ಯವಸ್ಥೆ ಮಾಡಿದ್ದಲ್ಲದೇ, ಮೃತಪಟ್ಟ ಅಥವಾ ತೀವ್ರವಾಗಿ ಗಾಯಗೊಂಡ ಸುಮಾರು 80 ಕುಟುಂಬಗಳನ್ನು ಸ್ವತಃ ರತನ್ ಟಾಟಾರವರೇ ಭೇಟಿ ಮಾಡಿ ಸಾಂತ್ವನ ನೀಡುವ ಮೂಲಕ ಆ ಕುಟುಂಬಗಳ ಆತ್ಮಸ್ಥೈರ್ಯ ವೃದ್ಧಿಸಿದರು.

ತುಂಬಿದ ಕೊಡ ಯಾವತ್ತಿದ್ದರೂ ತುಳುಕುವುದಿಲ್ಲ.
ದುರಂತದಲ್ಲಿ ಮೃತರಾದ ಪ್ರತಿ ನೌಕರರ ಕುಟುಂಬಕ್ಕೆ ನೀಡಿದ ಸೌಲಭ್ಯಗಳು ಹೀಗಿವೆ : ನವೆಂಬರ್ 2008ರ ಪೂರ್ಣ ಸಂಬಳ, 36ರಿಂದ 85 ಲಕ್ಷದವರೆಗೆ ಧನ ಪರಿಹಾರ, ನೌಕರರ ಮಕ್ಕಳು ಪ್ರಪಂಚದಲ್ಲೆಲ್ಲೇ ಓದುತ್ತಿರಲಿ, ಅವರ ಪೂರ್ಣ ವಿದ್ಯಾಭ್ಯಾಸದ ಜವಾಬ್ಧಾರಿ ಮತ್ತು ಆಶ್ರಿತ ಕುಟುಂಬದ ಎಲ್ಲರ ಆಜೀವನ ವೈದ್ಯಕೀಯ ಸೌಲಭ್ಯವನ್ನು ಟಾಟಾ ವಹಿಸಿಕೊಂಡರು. ಇವರಿಗೆ ನೀಡಿದ್ದ ಎಲ್ಲಾ ರೀತಿಯ ಸಾಲವನ್ನೂ ಮನ್ನಾ ಮಾಡಲಾಯಿತು.

ಇವೆಲ್ಲದ್ದಕ್ಕಿಂತ ವಿಶೇಷವೇನೆಂದರೆ, ರತನ್ ಟಾಟಾರವರಿಗೆ ಯಾವುದೇ ಸಂಬಂಧವಿಲ್ಲದ ಗಾಯಗೊಂಡ ರೈಲ್ವೇ, ಪೊಲೀಸ್ ನೌಕರರು, ರೈಲು ನಿಲ್ದಾಣದಲ್ಲಿದ್ದ ಪ್ರಯಾಣಿಕರು, ಪಾನ್, ಪಾವ್-ಬಾಜಿ ಅಂಗಡಿಯವರು, ದಾರಿಹೋಕರಿಗೂ ಸಹ ಪರಿಹಾರವನ್ನು ವಿಸ್ತರಿಸಲಾಯಿತಲ್ಲದೇ ಗಾಯಗೊಂಡ ಕುಟುಂಬದವರಿಗೆ ಮಾಸಿಕ 10 ಸಾವಿರದಂತೆ 6 ತಿಂಗಳು ಸಹಾಯಧನವನ್ನು ಹಾಗೂ ಮೃತರಾದವರಿಗೆ ಪರಿಹಾರ ನೀಡಿದರು. ಈ ದುರಂತದಲ್ಲಿ ಹಲವಾರು ರಸ್ತೆ ಬದಿ ಮಾರಾಟಗಾರರು ತಮ್ಮ ಆಸ್ತಿಯಾದ ತಳ್ಳುವ ಗಾಡಿಗಳನ್ನು ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿದ್ದವರಿಗೆ ಉಚಿತವಾಗಿ ತಳ್ಳುವ ಗಾಡಿಗಳನ್ನು ವಿತರಿಸಿ ಅವರ ಜೀವನಕ್ಕೆ ದಾರಿದೀಪವಾದರು. ದುರಂತದಲ್ಲಿ ಬಲಿಪಶುಗಳಾದವರ, ವಿವಿಧ ವಿದ್ಯಾಭ್ಯಾಸ ಮಾಡುತ್ತಿದ್ದ 46 ಮಕ್ಕಳ ಓದಿನ ಪೂರ್ಣ ಜವಾಬ್ಧಾರಿಯನ್ನು ಟಾಟಾ ವಹಿಸಿಕೊಂಡರು.

ರಸ್ತೆ ಬದಿ ಮಾರುತ್ತಿದ್ದ ಬಡವನೊಬ್ಬನ ಮೊಮ್ಮಗಳು ದಾಳಿಗೀಡಾಗಿ 4 ಗುಂಡುಗಳು ಆಕೆಯ ದೇಹದ ಒಳಹೊಕ್ಕಾಗ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಗುಂಡನ್ನು ತೆಗೆಯಲು ಮಾತ್ರ ಸಾಧ್ಯವಾಗಿತ್ತು. ಟಾಟಾ ಅದೇ ಮಗುವನ್ನು ಬಾಂಬೇ ಹಾಸ್ಪಿಟಲ್‌ನಲ್ಲಿ ಸೇರಿಸಿ ಹಲವು ಲಕ್ಷ ಹಣ ವ್ಯಯ ಮಾಡಿ, ಆಕೆ ಗುಣವಾಗುವವರೆಗೆ ಶಸ್ತ್ರಚಿಕಿತ್ಸೆ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಿದರು.

ಮೇಲಿನ ಎಲ್ಲಾ ಕಾರ್ಯಗಳನ್ನಲ್ಲದೇ ಇನ್ನೂ ಹಲವಾರು ಕಾರ್ಯಗಳನ್ನು ಯಾವುದೇ ಫಲಾಫಲಗಳನ್ನು ಅಪೇಕ್ಷಿಸದೇ ಬರೀ ಒಬ್ಬ ಭಾರತೀಯನಾಗಿ, ಕುಟುಂಬದ ಹಿರಿಯನಂತೆ ನಿಂತು ಸಲಹುವ, ತನ್ನೆಲ್ಲಾ ನೌಕರರನ್ನು, ಅವರ ಕುಟುಂಬದ ಹಿತ ಕಾಪಾಡುವ ಧೀಮಂತ ವ್ಯಕ್ತಿತ್ವ, ತನ್ನಂತೆಯೇ ಪರರ ಬಗೆವ ಈ ಮನೋಭಾವ ಯಾವುದೇ ತರಬೇತಿಯಲ್ಲಿ ಅಥವಾ ಕಲಿಕಾ ಕೇಂದ್ರದಲ್ಲಿ ಕಲಿತು ಬೆಳೆದು ಬಂದ ಗುಣವಲ್ಲ, ಇದು ಅವರ ವಂಶವಾಹಿನಿಯಲ್ಲಿ ಬೆರೆತಿರುವ ಭಾರತೀಯತ್ವದ ನಿದರ್ಶನ.

ಜೆಂಷೆಡ್‌ಜೀ ಟಾಟಾ ಕನಸು : ಹೊಟೇಲ್ ವ್ಯಾಪಾರವನ್ನು ರತನ್ ಟಾಟಾರವರ ತಾತ, ಜೆಂಷೆಡ್‌ಜೀ ಟಾಟಾ ಆರಂಭಿಸಿದ್ದು ಯಾವುದೇ ಲಾಭದ ಆಸೆಯಿಂದಲ್ಲ. ಅಂದಿನ ಕಾಲದ ಬ್ರಿಟೀಷರ ಸರಕಾರ ಹಲವು ಹೊಟೇಲ್‌ಗಳಲ್ಲಿ ಭಾರತೀಯರ ಆಗಮನವನ್ನು ನಿರ್ಬಂಧಗೊಳಿಸಿದ ಕಾರಣ ಅಪ್ಪಟ ಭಾರತೀಯ ಮನೋಭಾವದಿಂದ, ದೇಶಪ್ರೇಮದಿಂದ ಕಟ್ಟಿದ್ದೇ ಹೊಟೆಲ್ ತಾಜ್.

ಹಿಂದೊಮ್ಮೆ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐ.ಐ.ಎಸ್ಸಿ) ಸ್ಥಾಪಿಸಬೇಕೆಂದು ಟಾಟಾ ಸ್ಥಳ ಹುಡುಕುತ್ತಿದ್ದಾಗ, ಅಂದಿನ ಅರಸರು ಟಾಟಾರವರನ್ನು ಕರೆದು ಒಂದು ನಿರ್ದಿಷ್ಟ ಪ್ರದೇಶದಲ್ಲಿ ತಮಗಿಷ್ಟ ಬಂದಷ್ಟು ಜಾಗವನ್ನು ಆಕ್ರಮಿಸಿಕೊಳ್ಳಲು ಅನುಮತಿ ನೀಡಿದ್ದರೂ ಸಹ ಟಾಟಾ ಗುರುತಿಸಿದ್ದು ಬರೀ 400 ಎಕರೆ ವಿಸ್ತೀರ್ಣ ಮಾತ್ರ. ಇದು ಅವರ ಹೃದಯ ವೈಶಾಲ್ಯತೆಯ ಸಂಕೇತ.

ಒಮ್ಮೆ ಮಾನವ ಸಂಪನ್ಮೂಲ (ಎಚ್ಆರ್) ತಮ್ಮ ನೌಕರರ ಅನುಕೂಲಕ್ಕಾಗಿ ಕೆಲವು ಯೋಜನೆಗಳನ್ನು ಟಾಟಾರವರ ಮುಂದೆ ಸಂಕೋಚದಿಂದ ಮಂಡಿಸಿದಾಗ ಟಾಟಾ, ಸಂಸ್ಥೆಗಾಗಿ ಜೀವವನ್ನೇ ಮುಡುಪಾಗಿಡುವ ನೌಕರರಿಗಾಗಿ ಇನ್ನೂ ಹತ್ತು ಹಲವು ಯೋಜನೆಗಳನ್ನು ರೂಪಿಸುವಂತೆ ಆದೇಶಿಸಿದ್ದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ.

ಇಷ್ಟೆಲ್ಲಾ ಜನಪರ ಕಾರ್ಯಕ್ರಮಗಳನ್ನು ರತನ್ ಟಾಟಾ ಹಮ್ಮಿಕೊಂಡ ಟಾಟಾ ಭಾರತೀಯರ ಪ್ರತಿಷ್ಠೆಯ ಸಂಕೇತ ಹಾಗೂ ನಮ್ಮೆಲ್ಲರ ಕಡೆಯಿಂದ ಅವರಿಗೊಂದು ಹೃತ್ಪೂರ್ವಕ ಅಭಿನಂದನೆಗಳು ಮತ್ತು ಈ ಧನಾತ್ಮಕ ವಿಷಯವನ್ನು ನಮ್ಮ ಯಾವುದೇ ಸುದ್ದಿ ವಾಹಿನಿಗಳೂ, ನಿಯತಕಾಲಿಕಗಳೂ ಪ್ರಚುರಪಡಿಸದೇ ಸಣ್ಣ ಸಣ್ಣ ವಿಷಯಗಳಲ್ಲೇ ಮುಳುಗಿಹೋಗಿರುವುದು ವಿಪರ್ಯಾಸವೇ ಸರಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more