ವಿಷ್ಣು ಅಭಿನಯವೇ ನಮಗೆ ಜೀವನ ಪಾಠ

"ನಾನು ಸಾಧ್ಯವಾದ ಮಟ್ಟಿಗೆ ಕಡಿಮೆ ಸುಳ್ಳು ಹೇಳೋದನ್ನ, ಹೆಣ್ಣಿಗೆ-ಮಣ್ಣಿಗೆ ಗೌರವ ಕೊಡೋದನ್ನ, ಸಾಧ್ಯವಾದ ಮಟ್ಟಿಗೆ ಬೇರೆಯವರ ನೋವುಗಳಿಗೆ ಸ್ಪಂದಿಸೋದನ್ನ ಕಲಿತದ್ದು ಅವರು ಅಭಿನಯಿಸಿದ ಚಿತ್ರಗಳಿಂದಲೇ. ನನ್ನ ಬಹುಪಾಲು ಒಳ್ಳೆಯತನಗಳಿಗೆ ಅವರ ಚಿತ್ರಗಳು, ಅವರ ಅಭಿನಯವೇ ಪ್ರೇರಣೆ, ಸ್ಫೂರ್ತಿ."

ಹೀಗಂತ ಹೇಳುವವರು ಸಾಕಷ್ಟು ಜನ ಇದ್ದಾರೆ. ಪ್ರತ್ಯಕ್ಷ ಆಚರಣೆಯಲ್ಲಿ ಇಟ್ಟುಕೊಂಡಿರುವವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇದು ಖಂಡಿತ ಅತಿಶಯೋಕ್ತಿಯಲ್ಲ, ಇದು ವಾಸ್ತವ. ಆದರೆ ಅವರಿಗೆ ಯಾವುದೇ ಪ್ರಚಾರ, ಶಹಬ್ಬಾಸ್ ಗಿರಿ ಇವ್ಯಾವುದೂ ಬೇಕಿಲ್ಲ ಅಷ್ಟೇ!

ಅವರು ಮಾಡುವ, ಕ್ಷಮಿಸಿ, ಮಾಡುತ್ತಿದ್ದ ಪಾತ್ರಗಳು ಹಾಗು ಆ ಪಾತ್ರಗಳಲ್ಲಿನ ಅವರ ಅಭಿನಯ ಎಂಥವರ ಹೃದಯವನ್ನೂ ಮುಟ್ಟದೇ ಇರಲು ಸಾಧ್ಯವೇ ಇರಲಿಲ್ಲ. ಚಿತ್ರದಲ್ಲಿ ಅವರ ಕಣ್ಣಿನಲ್ಲಿ ನೀರು ಬರುತ್ತಿದ್ದರೆ ನೋಡುವವರ ಕಣ್ಣಿನಲ್ಲೂ ಅತ್ಯಂತ ಸಹಜವಾಗಿಯೇ ನೀರು ಬರುತ್ತಿತ್ತು, ಬರುವಂತೆ ಮಾಡುತ್ತಿತ್ತು ಅವರ ಮನೋಜ್ಞ ಅಭಿನಯ.

ಕನ್ನಡ ಚಿತ್ರರಂಗ ಕಂಡ ಅತ್ಯಂತ ಸಜ್ಜನ ಸ್ವಭಾವದ, ಉತ್ತಮ ಚಾರಿತ್ರ್ಯವಿದ್ದಂತಹ, ಸಮಾಜದ ಬಗೆಗೆ ಕಾಳಜಿ ಇದ್ದಂತಹ, ಅತ್ಯುತ್ತಮ ನಟನಾ ಕೌಶಲವಿದ್ದಂತಹ, ವೈಯಕ್ತಿಕ ಜೀವನದಲ್ಲೂ ಉತ್ತಮ ನಡವಳಿಕೆ ಹೊಂದಿದ್ದಂತಹ, ವಿವಾದಾತೀತ ನಾಯಕ ನಟ, ಕರ್ನಾಟಕದ ಸುಪುತ್ರ ಕನ್ನಡ ಚಿತ್ರರಂಗದ ಸಾಹಸಸಿಂಹ, ಕೋಟಿಗೊಬ್ಬ, ಡಾ||ವಿಷ್ಣುವರ್ಧನ್ ಆಲಿಯಾಸ್ ಸಂಪತ್ ಕುಮಾರ್!

ಅವರ ಯಾವ ಚಿತ್ರವೂ ಯಾರ ಮನಸ್ಸಿನ ಮೇಲು ನಕಾರಾತ್ಮಕವಾಗಿ ಪರಿಣಾಮ ಬೀರಲು ಸಾಧ್ಯವಿರಲಿಲ್ಲ. ಆ ರೀತಿಯಲ್ಲಿ ಅವರ ಪಾತ್ರದ ಆಯ್ಕೆ, ಅವರ ಅಭಿನಯವಿರುತ್ತಿತ್ತು. ಅವರ 'ವೀರಪ್ಪನಾಯ್ಕ' ಚಿತ್ರದ ಅಭಿನಯ ನೋಡುವವರಲ್ಲಿ ದೇಶಭಕ್ತಿಯ ಜಾಗೃತಿ ಉಂಟುಮಾಡುತ್ತದೆ. ಅವರ 'ಸೂರ್ಯವಂಶ' ಚಿತ್ರ 'ನಮಗೆ ದ್ರೋಹ ಮಾಡಿದವರಿಗೂ ನಾವು ಒಳ್ಳೆಯದೇ ಬಯಸಬೇಕು' ಎಂದು ಆಶಿಸುವಂತೆ ಮಾಡುತ್ತದೆ. ಅವರ 'ಕರ್ಣ' ಚಿತ್ರವಂತೂ ಅದ್ಭುತ ಪ್ರೇರಣೆ ನೀಡುತ್ತದೆ. ಉತ್ತಮ ಸಾಮಾಜಿಕ ಕಳಕಳಿಯೊಂದಿಗೆ ನಿರ್ಮಾಣವಾದ ಅವರ 'ಸಿರಿವಂತ' ಚಿತ್ರ ನೋಡುವವರನ್ನು ಸಮಾಜಕ್ಕೆ ಆಸ್ತಿಯನ್ನಾಗಿ ಮಾಡುತ್ತದೆ. ಅತ್ಯಂತ ಹೆಚ್ಚು ಉತ್ತಮ ಚಿತ್ರಗಳಲ್ಲಿ ನಟಿಸಿದವರಲ್ಲಿ ರಾಜಕುಮಾರ್ ಅವರನ್ನು ಹೊರತು ಪಡಿಸಿದರೆ, ನಂತರದ ಸ್ಥಾನ ನಮ್ಮ ವಿಷ್ಣುವರ್ಧನ್ ಅವರದು.

ಅಂತಹ ಅದ್ಭುತ ನಾಯಕ ನಟ ಇಂದು ನಮ್ಮನ್ನು ಅಗಲಿದಾರೆ. ಒಳ್ಳೆಯವರನ್ನ ಕಂಡರೆ ಆ ಭಗವಂತನಿಗೂ ಪ್ರಿಯ. ಆ ಕಾರಣಕ್ಕಾಗಿಯೇ ನಮ್ಮ ವಿಷ್ಣುವನ್ನು ಸಾಕಷ್ಟು ಬೇಗ ಭಗವಂತ ತನ್ನ ಬಳಿಗೆ ಕರೆದೊಯ್ದಿದ್ದಾನೆ. ದೇಶದ ಉತ್ತಮ ಪ್ರಜೆಯನ್ನ, ಸಮಾಜದ ಒಳ್ಳೆಯ ವ್ಯಕ್ತಿಯನ್ನ, ಚಿತ್ರರಂಗದ ಅದ್ಭುತ ನಟನನ್ನ, ನಮ್ಮೆಲ್ಲರ ಆಸ್ತಿಯನ್ನ ನಾವು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

ಇಂತಹ ಸಮಯವನ್ನೂ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ, ಸಮಾಜದಲ್ಲಿ ಶಾಂತಿಯನ್ನು ಕದಡುವ ರಾಜಕೀಯ 'ನಾಯಿ'ಗಳಿಗೂ ಆ ಭಗವಂತ ಒಳ್ಳೆ ಬುದ್ಧಿ ಕೊಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+