• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬರಹಗಾರರನ್ನು ಚುಚ್ಚಬೇಡಿ, ಪ್ರೋತ್ಸಾಹಿಸಿ

|
ಬರಹಗಾರರು ತಮ್ಮ ಬರಹಗಳಲ್ಲಿ ಮಾತ್ರ ಮಾನವೀಯತೆ, ಪ್ರೀತಿ, ಅಂತಃಕರಣ, ಕನಿಕರಗಳನ್ನು ತೋರಿ ಶಹಭಾಸ್‌ಗಿರಿ ಪಡೆಯುತ್ತಾರೆಯೇ ಹೊರತು ನಿಜಜೀವನದಲ್ಲಿ ಇದ್ಯಾವುದಕ್ಕೂ ಸ್ಪಂದಿಸದೆ ತೆಪ್ಪಗೆ ಕುಳಿತುಬಿಡುತ್ತಾರೆ ಎಂಬ ಗಂಭೀರವಾದ ಆರೋಪವನ್ನು ಜಾಲತಾಣವೊಂದರಲ್ಲಿ ಸಹೃದಯರೋರ್ವರು ಮಾಡಿದ್ದಾರೆ.

ಉತ್ತರ ಕರ್ನಾಟಕದ ಪ್ರವಾಹಸಂತ್ರಸ್ತರಿಗೆ ಅಗತ್ಯವಾಗಿರುವ ನೆರವಿನ ವಿಷಯದಲ್ಲಿ ಈ ರೀತಿ ಆರೋಪ ಮಾಡಿರುವ ಆ ಸಹೃದಯರ ಸಾಮಾಜಿಕ ಕಳಕಳಿ ಮೆಚ್ಚುವಂಥದು. ಆದರೆ ಆರೋಪ ಮಾತ್ರ ಒಪ್ಪುವಂಥದಲ್ಲ. ಬರಹಗಾರರು ತಮ್ಮ ವೈಯಕ್ತಿಕ ನೆಲೆಗಳಲ್ಲಿ ಅಥವಾ ಉದ್ಯೋಗದಾತರ ಮೂಲಕ ನೆರೆಹಾವಳಿ ಸಂತ್ರಸ್ತರಿಗೆ ನೆರವು ನೀಡಿಲ್ಲವೆಂದು ಹೇಗೆ ಹೇಳಲು ಸಾಧ್ಯ?

ನಿರ್ದಿಷ್ಟ ಜಾಲತಾಣದ ಮಖಾಂತರ ಬರಹಗಾರರಿಂದ ದೇಣಿಗೆ ಸಂಗ್ರಹಿಸುವಂತೆ ಆ ಸಹೃದಯರು ಸಲಹೆ ಮಾಡಿದ್ದಾರೆ. ಹಾಗೆ ಮಾಡುವ ಮೂಲಕ ಆ ಜಾಲತಾಣದ ಸದಸ್ಯ ಬರಹಗಾರರಿಗೆ ಅವರು ಇರುಸುಮುರುಸುಂಟುಮಾಡಿದ್ದಾರೆಂದೇ ಹೇಳಬೇಕಾಗುತ್ತದೆ. ಏಕೆಂದರೆ, ಒಂದು ಉದ್ದೇಶಕ್ಕೆ ಒಂದಕ್ಕಿಂತ ಹೆಚ್ಚು ಕಡೆ ದೇಣಿಗೆ ನೀಡುವಷ್ಟು ಬಹುತೇಕ ಬರಹಗಾರರು ಶ್ರೀಮಂತರಾಗಿರುವುದಿಲ್ಲ. ಈಗಾಗಲೇ ಒಂದು ಕಡೆ ದೇಣಿಗೆ ನೀಡಿರುವ ಬರಹಗಾರರು ಸದರಿ ಸಹೃದಯರ ಆರೋಪದಿಂದ ಮುಕ್ತರಾಗಲು ತಮ್ಮ ದೇಣಿಗೆಯ ವಿವರವನ್ನು ಪ್ರಕಟಿಸಬೇಕೇ?

ಇಷ್ಟಕ್ಕೂ, 'ಬರಹಗಾರರು ಬರಹಗಳಲ್ಲಷ್ಟೇ ಮಾನವೀಯತೆ ಇತ್ಯಾದಿ ತೋರುತ್ತಾರೆ, ಅಷ್ಟು ಮಾಡಿದರೆ ಸಾಲದು, ಅವರು ಫೀಲ್ಡಿಗೂ ಇಳಿಯಬೇಕು', ಎಂದು ದೂರುವುದೇ ಯೋಗ್ಯವಲ್ಲ. ಬರಹಗಾರರು ಬರಹಗಳ ಮುಖಾಂತರ ಸಮಾಜಜಾಗೃತಿಯ ಕರ್ತವ್ಯವನ್ನು ಮಾಡಿದರೆ ಸಾಕು ಎಂಬುದು ನನ್ನ ಅಭಿಪ್ರಾಯ. ಅದೇನೂ ಸಣ್ಣ ಕರ್ತವ್ಯವಲ್ಲ. ಏಕೆಂದರೆ, ಬರಹಗಳು ಓದುಗರಲ್ಲಿ ಜಾಗೃತಿ ಹುಟ್ಟಿಸುತ್ತವೆ ಮತ್ತು ಕರ್ತವ್ಯೋನ್ಮುಖರಾಗಲು ಪ್ರೇರೇಪಿಸುತ್ತವೆ. ನನ್ನ ಬರಹದ ಎರಡು ಉದಾಹರಣೆಗಳನ್ನೇ ಕೊಡುತ್ತೇನೆ.

1) 'ಈ ಸಲದ ದೀಪಾವಳಿಯಲ್ಲಿ ಪಟಾಕಿ ಸುಡದಿರಲು ನಿರ್ಧರಿಸಿ ಆ ಹಣವನ್ನು ನೆರೆಸಂತ್ರಸ್ತರ ಪರಿಹಾರನಿಧಿಗೆ ನೀಡೋಣ', ಎಂದು ನಾನು ಇದೇ ದಿನಾಂಕ ಮೂರರಂದು, ಚರ್ಚಿತ ಜಾಲತಾಣವೂ ಸೇರಿದಂತೆ ಹಲವು ಜಾಲತಾಣಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಬರೆದದ್ದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ನನ್ನ ವಿನಂತಿಗೆ ಓಗೊಡುವುದಾಗಿ ನನಗೆ ಅನೇಕರು ದೂರವಾಣಿ ಕರೆಮಾಡಿ ಹೇಳಿದ್ದಾರೆ.

2) 'ಮರಣದಂಡನೆ ಅನಿವಾರ್ಯವೆ?' ಎಂದು ಕೆಲ ಸಮಯದ ಹಿಂದೆ 'ಪ್ರಜಾವಾಣಿ' ದಿನಪತ್ರಿಕೆಯು ಕೇಳಿದ್ದ ಪ್ರಶ್ನೆಗೆ ಉತ್ತರವಾಗಿ ನಾನು ಬರೆದ ನಾಲ್ಕು ಸಾಲುಗಳ ಚುಟುಕವು 'ಪ್ರಜಾವಾಣಿ'ಯಲ್ಲಿ ಪ್ರಕಟವಾಯಿತು. ಆ ಚುಟುಕ ಹೀಗಿತ್ತು:

ಸಾವಿಗೆ ಸಾವೇ ಉತ್ತರವಾದರೆ

ಬದುಕಿಗೆ ಏನರ್ಥ?

ಬದುಕುವ ಬಗೆಯನು ಕಲಿಸದ ಶಿಕ್ಷಣ

ಶಿಕ್ಷೆಗಳವು ವ್ಯರ್ಥ.

ಈ ಚುಟುಕದಿಂದ ಪ್ರಭಾವಿತರಾದ ನ್ಯಾಯಾಧೀಶರೊಬ್ಬರು, ತಾನಿನ್ನು ಮರಣದಂಡನೆ ಶಿಕ್ಷೆ ನೀಡುವ ಸಂದರ್ಭದಲ್ಲಿ ಈ ಚುಟುಕವನ್ನು ನೆನಪಿಸಿಕೊಂಡು ಶಿಕ್ಷೆಯ ಮರುಪರಿಶೀಲನೆ ಮಾಡುವುದಾಗಿಯೂ ಅಪರಾಧಿಗೆ ತಿದ್ದಿಕೊಳ್ಳುವ ಅವಕಾಶ ನೀಡುವುದು ಸಾಧ್ಯವಾದಲ್ಲಿ ಜೀವಾವಧಿ ಶಿಕ್ಷೆ ನೀಡುವ ಮೂಲಕ ಆತನ ಜೀವ ಉಳಿಸುವುದಾಗಿಯೂ ನನ್ನ ಬಳಿ ನುಡಿದರು. ಓದುಗರ ಹೃದಯ ತಟ್ಟುವ ಬರಹಗಳು ಸಮಾಜದ ಒಳ್ಳಿತಿಗಾಗಿ ಸದಾ ಅವಶ್ಯ. ಅಂಥ ಬರಹಗಳನ್ನು ನೀಡುವ ಕೆಲಸ ಬರಹಗಾರನದು.

ಸಮಾಜದಲ್ಲಿ ಎಲ್ಲರೂ ಎಲ್ಲ ಕೆಲಸಗಳನ್ನೂ ಮಾಡುತ್ತೇವೆಂದರೆ ಯಾವ ಕೆಲಸವೂ ಸುಸೂತ್ರ ಆಗುವುದಿಲ್ಲ. ಯಾವುದೋ ಒಂದು ಯೋಜನೆ ಅಥವಾ ಚಳವಳಿ ಆಗಬೇಕೆಂದಿಟ್ಟುಕೊಳ್ಳಿ. ಬರಹಗಾರನೊಬ್ಬ, ಆ ಯೋಜನೆ ಅಥವಾ ಚಳವಳಿಯ ಕುರಿತು ತಾನು ಬರಹಗಳನ್ನೂ ಬರೆಯುತ್ತೇನೆ, ಯೋಜನೆಯ/ಚಳವಳಿಯ ರೂಪುರೇಷೆಗಳನ್ನೂ ತಯಾರಿಸುತ್ತೇನೆ, ಸಂಘಟನೆಯನ್ನೂ ಮಾಡುತ್ತೇನೆ, ದೇಣಿಗೆಯನ್ನೂ ನೀಡುತ್ತೇನೆ, ಅನುಷ್ಠಾನದಲ್ಲೂ ಭಾಗವಹಿಸುತ್ತೇನೆ, ಬೀದಿಗಿಳಿದು ಹೋರಾಟವನ್ನೂ ಮಾಡುತ್ತೇನೆ ಎಂದರೆ ಅದಷ್ಟೂ ಆತನಿಂದ ಸಾಧ್ಯವಾದೀತೆ? ಒಂದು ವೇಳೆ ಸಾಧ್ಯವಾದರೂ ಆ ಎಲ್ಲ ಕಾರ್ಯಗಳೂ ಗುಣಯುತವೂ ಸಮರ್ಥವೂ ಆಗಿರುತ್ತವೆಯೇ? ಬರಹಗಾರ ತನ್ನ ಬರಹಗಳಿಂದ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಿದರೆ ಸಾಕು, ಉಳಿದವರು ತಂತಮ್ಮ ಕೆಲಸ ಮಾಡಲಿ.

ಬರಹಗಾರನೂ ಜೀವನ ನಿರ್ವಹಣೆಗೆ ಒಂದು ವೃತ್ತಿ ಅಥವಾ ನೌಕರಿಯನ್ನು ಮಾಡುತ್ತಿದ್ದು ಇತರರಂತೆ ಆತನೂ ಅದಕ್ಕೆ ದಿನದ ಬಹುಪಾಲು ಸಮಯವನ್ನು ಮೀಸಲಿಡಬೇಕಲ್ಲವೆ? ಹಾಗಾಗಿ, 'ಬರಿದೆ ಬರೆಯುತ್ತೀರಿ, ಫೀಲ್ಡಿಗೆ ಯಾಕೆ ಇಳಿಯುವುದಿಲ್ಲ?' ಎಂದು ಬರಹಗಾರರನ್ನು ದೂಷಿಸುವುದು ತರವಲ್ಲ. 'ಗೋಕಾಕ ಚಳವಳಿ'ಯಂಥ ಸಂದರ್ಭದಲ್ಲಿ ಬರಹಗಾರರು ಕಣಕ್ಕಿಳಿದ ಉದಾಹರಣೆ ನಮ್ಮೆದುರಿದೆ. ಹಾಗೆಂದು, ಬರೆಯುವವರೆಲ್ಲರೂ, ಬರೆದದ್ದೆಲ್ಲದರ ಬಗ್ಗೆಯೂ ಫೀಲ್ಡಿಗಿಳಿದು ಕಾರ್ಯೋನ್ಮುಖರಾಗಬೇಕು/ಹೋರಾಡಬೇಕು ಎಂದರೆ ಅವರು ತಮ್ಮ ವೃತ್ತಿ/ನೌಕರಿ ಮಾಡಿಕೊಂಡು, ಫೀಲ್ಡಿಗೂ ಇಳಿದು ಹೋರಾಡಿ, ಮತ್ತೆ ಬರೆಯುವುದು ಯಾವಾಗ? ಅಂತಹ ಅವಸರದ ಬರಹಗಳು ಅದಿನ್ನೆಷ್ಟು ಸತ್ತ್ವಯುತವಾಗಿದ್ದಾವು? ಆದ್ದರಿಂದ, ಬರಹಗಾರರ ಬರಹಕ್ಕೆ ಪ್ರೋತ್ಸಾಹವಿರಲಿ, ಬರಹಗಾರರನ್ನು ಚುಚ್ಚುವುದು ಬೇಡ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more