• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂವಾದ : ರಾಷ್ಟ್ರ ಭಾಷೆ ಹಿಂದಿಯೇ ಆಗಬೇಕೆ?

By Staff
|

2-3 ಶತಮಾನಗಳಷ್ಟು ಹಳೆಯದಾದ ಹಿಂದಿ ಭಾಷೆಯೇ ಏಕೆ ರಾಷ್ಟ್ರಭಾಷೆಯಾಗಬೇಕು? ಸಾಕಷ್ಟು ಐತಿಹ್ಯವುಳ್ಳ, ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಇನ್ನೂ ಬೆಳೆಯುತ್ತಿರುವ ಕನ್ನಡ, ತಮಿಳು, ತೆಲಗು, ಬಂಗಾಳಿ ಭಾಷೆಗಳಿಗೆ ಯಾಕೆ ಈ ಸ್ಥಾನಮಾನ ಸಿಗಬಾರದು?

* ಚಿ.ಮ. ಗುರುಪ್ರಸಾದ್

ಭಾರತ 63ನೇ ಸ್ವಾತಂತ್ರೋತ್ಸವ ಆಚರಿಸುತ್ತಿದ್ದ ಸಂದರ್ಭದಲ್ಲಿ, ರಾಷ್ಟ್ರೀಯ ಮಹತ್ವ ಪಡೆದಿರುವ ವಿಷಯಗಳ ಬಗ್ಗೆ ಮೆಲಕು ಹಾಕುತ್ತಿರುವಾಗ ಒಂದು ವಿಚಾರ ಹೊಳೆದದ್ದು ಎಂದರೆ, ನಮ್ಮ ದೇಶಕ್ಕೆ ಒಂದು ರಾಷ್ಟ್ರೀಯ ಭಾಷೆ ಇಲ್ಲದಿರುವುದರ ಬಗ್ಗೆ. ಇದೊಂದು ಕೊರತೆಯೆಂದು ಖಂಡಿತ ಹೇಳುತ್ತಿಲ್ಲ. ಆದರೆ ದಶಕಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರನ್ನು ರಾಷ್ಟ್ರ ಭಾಷೆಯ ವಿಷಯವಾಗಿ ದಿಕ್ಕು ತಪ್ಪಿಸುತ್ತಿರುವ ಬಗ್ಗೆ. ಅನೇಕರನ್ನು ನೀವು ದೇಶದ ರಾಷ್ಟ್ರ ಭಾಷೆ ಯಾವುದು ಎಂದು ಪ್ರಶ್ನಿಸಿದರೆ ಸಿಗುವ ಉತ್ತರ ಒಂದೇ. ಅದು "ಹಿಂದಿ" ಎಂದು.

ಇದು ಅವರ ತಪ್ಪಲ್ಲ. ಸಾಮಾನ್ಯವಾಗಿ ವಿದ್ಯಾರ್ಥಿ ದೆಸೆಯಿಂದಲೂ ಅವರಿಗೆ ಈ ತಪ್ಪನ್ನೇ ಮನನ ಮಾಡಿಸಲಾಗುತ್ತಿದೆ. ಆದರೆ ಈ ತಪ್ಪಿಗೆ ಯಾರು ಹೊಣೆ? ಕೇಂದ್ರ ಸರ್ಕಾರವೇ ಅಥವ ರಾಜ್ಯ ಸರ್ಕಾರವೇ ಅಥವ ನಮ್ಮಲ್ಲಿನ ಶಿಕ್ಷಣ ಪದ್ದತಿಯಲ್ಲೇ? ಇದಕ್ಕು ಉತ್ತರ ಹುಡುಕಲು ಹೊರಟರೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪಾಲುದಾರರು. ವಿಪರ್ಯಾಸವೆಂದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಅನೇಕ ರಾಷ್ಟ್ರೀಯ ವಿಷಯಗಳ ಬಗ್ಗೆ ಒಮ್ಮತಕ್ಕೆ ಬರಲಾಯಿತಾದರೂ ಭಾಷೆಯ ಬಗ್ಗೆ ಒಮ್ಮತ ಸಾಧಿಸಲಾಗಲಿಲ್ಲ. ಹಾಗಾಗಿ ನಮ್ಮ ಸಂವಿಧಾನದಲ್ಲಿ ಎಲ್ಲಿಯೂ ರಾಷ್ಟ್ರ ಭಾಷೆಯ ಉಲ್ಲೇಖವಿರುವುದಿಲ್ಲ.

ಸಂವಿಧಾನದ ಪ್ರಕಾರ ನಮ್ಮಲ್ಲಿರುವುದು ಅಧಿಕೃತ ಭಾಷೆಗಳು ಮಾತ್ರ. ಕೇಂದ್ರ ಸರ್ಕಾರ ತನ್ನ ದಿನನಿತ್ಯದ ವ್ಯವಹಾರಗಳಲ್ಲಿ ಹಿಂದಿ ಮತ್ತು ಆಂಗ್ಲ ಭಾಷೆಯನ್ನು ಮತ್ತು ರಾಜ್ಯ ಸರ್ಕಾರಗಳು ತಮ್ಮ ಪ್ರಾದೇಶಿಕ ಭಾಷೆಗಳನ್ನು ಅಧಿಕೃತ ಭಾಷೆಯಾಗಿಸಿಕೊಂಡು ತಮ್ಮ ದಿನ ನಿತ್ಯದ ವ್ಯವಹಾರಗಳಲ್ಲಿ ಬಳಸಬಹುದಾಗಿದೆ ಎಂಬುದನ್ನು ಸಂವಿಧಾನದಲ್ಲಿ ಕಾಣಬಹುದಾಗಿದೆ. ಅಧಿಕೃತ ಭಾಷೆಯೆಂದರೆ ಸರ್ಕಾರದ ವ್ಯವಹಾರಗಳಲ್ಲಿ, ಕಾನೂನಾತ್ಮಕ ವಿಚಾರಗಳಲ್ಲಿ ಹಾಗು ದಿನನಿತ್ಯದ ವ್ಯವಹಾರಗಳಲ್ಲಿ ಉಪಯೋಗಿಸುವಂತಹ ಸ್ಥಾನಮಾನ ಹೊಂದಿರುವ ಆಡಳಿತ ಭಾಷೆ ಎಂದು. ಅಧಿಕೃತ ಭಾಷೆಯೆಂದಾಕ್ಷಣ ಅದಕ್ಕೆ ರಾಷ್ಟ್ರ ಭಾಷೆಯ ಸ್ಥಾನಮಾನಗಳು ದೊರಕುವುದಿಲ್ಲ. ರಾಷ್ಟ್ರ ಭಾಷೆಯ ವಿಚಾರಕ್ಕೆ ಬರುವುದಾದರೆ ರಾಷ್ಟ್ರ ಭಾಷೆಯೆಂದು ಗುರುತಿಸಲ್ಪಡುವ ಭಾಷೆ ಬಹು ಜನರ ಭಾಷೆಯಾಗಿರಬೇಕು ಎಂಬುದು ಪ್ರಪಂಚಾದ್ಯಂತ ಕಂಡುಕೊಂಡಿರುವ ಸಂಗತಿ.

ನಮ್ಮ ಸಂವಿಧಾನ ರಚನೆಯಾಗುವ ಸಂದರ್ಭದಲ್ಲಿ ಸಂವಿಧಾನದ ರಚನೆಯ ನಂತರ ಮೊದಲ 15 ವರ್ಷಗಳ ಕಾಲ ದೇವನಾಗರಿ ಲಿಪಿ ಹೊಂದಿರುವ ಹಿಂದಿ ಭಾಷೆಯನ್ನು ಕೇಂದ್ರದ ಅಧಿಕೃತ ಭಾಷೆಯನ್ನಾಗಿ ಘೋಷಿಸಲಾಯಿತು. ಆದರೆ ಹಿಂದಿಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದ ಜೊತೆಯಲ್ಲಿಯೇ ಹದಿನೈದು ವರ್ಷಗಳ ಕಾಲ ಆಂಗ್ಲ ಭಾಷೆಯನ್ನೂ ಸಹ ಕೇಂದ್ರಾಡಳಿತ ಹಾಗು ಸಂಸತ್ತಿನಲ್ಲಿ ಅಧಿಕೃತ ಭಾಷೆಯನ್ನಾಗಿ ಮುಂದುವರಿಸಿಕೊಂಡು ಹೋಗುವಂತಹ ಅವಕಾಶವನ್ನು ಸಂವಿಧಾನ ಕಲ್ಪಿಸಿತು. ಇದರ ಉದ್ದೇಶವೇನೆಂದರೆ ಕಾಲಕ್ರಮೇಣ ಆಂಗ್ಲ ಭಾಷೆಯ ಉಪಯೋಗವನ್ನು ಕಡಿಮೆ ಮಾಡಿ ಸಂಪೂರ್ಣವಾಗಿ ಹಿಂದಿಯೊಂದನ್ನೇ ಅಧಿಕೃತ ಭಾಷೆ ಮಾಡುವುದಾಗಿತ್ತು. ಇದಕ್ಕೆ ದಕ್ಷಿಣದ ಬಹುತೇಖ ರಾಜ್ಯಗಳು ಪ್ರತಿರೋಧ ಒಡ್ಡಿದರೂ ಆಗಿನ ಕೇಂದ್ರ ಸರ್ಕಾರದಲ್ಲಿ ಉತ್ತರದ ಮಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ಇವರ ವಿರೋಧಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಿಗಲಿಲ್ಲ.

ಆದರೆ ವಿಪರ್ಯಾಸವೆಂದರೆ ಹದಿನೈದು ವರ್ಷಗಳ ನಂತರವೂ ಹಿಂದಿ ಭಾಷೆಗೆ ಆಂಗ್ಲ ಭಾಷೆ ತಲುಪಿರುವ ಆಯಾಮಗಳ ಸಮೀಪಕ್ಕೂ ಹೋಗಲಾಗಲಿಲ್ಲ. ಹಾಗಾಗಿ ಈಗಲೂ ಇಂಗ್ಲಿಷ್ ಭಾಷೆ ಅಧಿಕೃತ ಭಾಷೆಯಾಗಿಯೇ ಮುಂದುವರೆದಿದೆ. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಸಂವಿಧಾನದ ಪ್ರಕಾರ ಬಳಸಬಹುದಾದ ಆಡಳಿತ ಭಾಷೆ ಎಂದರೆ ಇಂಗ್ಲಿಷ್ ಮಾತ್ರ!

ಇತ್ತೀಚೆಗಷ್ಟೆ ಹಿಂದಿ ಹಾಗು ಇತರ ಪ್ರಾದೇಶಿಕ ಭಾಷೆಗಳನ್ನು ಕೆಳಮಟ್ಟದ ನ್ಯಾಯಾಲಯಗಳಲ್ಲಿ ಬಳಸುವುದನ್ನು ಪ್ರೋತ್ಸಾಹಿಸಲಾಗುತ್ತಿದೆ. ರಾಜ್ಯಗಳು ಪರಸ್ಪರ ವ್ಯವಹರಿಸಬೇಕಾದಾಗ ಅಥವ ಕೇಂದ್ರದೊಡನೆ ವ್ಯವಹಿರಿಸಬೇಕಾದ ಸಂದರ್ಭದಲ್ಲಿ ಸಂವಿಧಾನದಲ್ಲಿ ಉಲ್ಲೇಖಿಸಿರುವ ಅಧಿಕೃತ ಭಾಷೆಗಳನ್ನು (ಇಂಗ್ಲಿಷ್ ಭಾಷೆಯೂ ಸೇರಿ ಒಟ್ಟು 23 ಅಧಿಕೃತ ಭಾಷೆಗಳನ್ನು ಸಂವಿಧಾನ ಗುರುತಿಸಿದೆ)ಬಳಸಬೇಕು ಎಂಬುದನ್ನು ಸಂವಿಧಾನದಲ್ಲಿ ತಿಳಿಸಿದೆ. ರಾಜ್ಯಗಳು ಪರಸ್ಪರ ಒಪ್ಪಿಕೊಂಡರೆ ಈ ವ್ಯವಹಾರಗಳನ್ನು ಹಿಂದಿಯಲ್ಲೂ ಮಾಡಬಹುದು ಎಂದು ಸಂವಿಧಾನ ತಿಳಿಸುತ್ತದೆ. ಈ ಎಲ್ಲಾ ವಿವರಗಳನ್ನು ಕೇಂದ್ರ ಕಾನೂನು ಸಚಿವಾಲಯದ ಅಧಿಕೃತ ಅಂತರ್ಜಾಲ ತಾಣವಾದ 'http://lawmin.nic.in/coi/coiason29july08.pdf' ದಲ್ಲಿ ತಿಳಿಯಬಹುದಾಗಿದೆ.

ಹಾಗೆಯೇ ಹಿಂದಿಯನ್ನು ಹೆಚ್ಚು ಪ್ರಚುರ ಪಡಿಸಲು ಕೇಂದ್ರ ಸರ್ಕಾರ ಅದಕ್ಕೆ ರಾಜಭಾಷೆಯ ಸ್ಥಾನ ನೀಡಿ ಹಿಂದಿ ದಿವಸ, ಹಿಂದಿ ಸಪ್ತಾಹ ಮುಂತಾದ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಹಮ್ಮಿಕೊಳ್ಳುತ್ತಿದೆ. ಇದಲ್ಲದೆ ಹಿಂದಿ ಪ್ರಚಾರ ಪರಿಷತ್ ಮುಂತಾದ ಆಯೋಗಗಳನ್ನು ರಚಿಸಿ ಹಿಂದಿಯೇತರ ಪ್ರದೇಶಗಳಲ್ಲಿ ಹಿಂದಿ ಭಾಷೆಯ ಪ್ರಚಾರಕ್ಕೆ ಇವುಗಳನ್ನು ಬಳಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಮಾಹಿತಿ ಹಕ್ಕು ಕಾಯಿದೆ ಅನ್ವಯ ಕೇಂದ್ರ ಸರ್ಕಾರದ ಆಧೀನದಲ್ಲಿರುವ ಭಾರತೀಯ ಭಾಷಾ ಇಲಾಖೆಗೆ ಪತ್ರ ಬರೆದಾಗ ಅವರಿಂದ ಬಂದ ಉತ್ತರ "ನಮ್ಮ ದೇಶಕ್ಕೆ ರಾಷ್ಟ್ರ ಭಾಷೆ ಎಂಬುದಿಲ್ಲ, ಇರುವುದೇನಿದ್ದರೂ ಅಧಿಕೃತ ಭಾಷೆ" - ಹೀಗೆ ಮೇಲಿನ ವಿವರಣೆಯನ್ನು ಪುಷ್ಠೀಕರಿಸಿದರು. ಯಾರಿಗಾದರು ಇನ್ನೂ ಇದರ ಬಗ್ಗೆ ಸಂದೇಹವಿದ್ದರೆ RTI ಕೆಳಗೆ ಕೇಂದ್ರಕ್ಕೆ ಒಂದು ಪತ್ರ ಬರೆದು ತಿಳಿದುಕೊಳ್ಳಬಹುದಾಗಿದೆ.

ಒಂದು ಭಾಷೆಯನ್ನಾಗಿ ಹಿಂದಿಯನ್ನು ಕಲಿಯುವುದು ತಪ್ಪಲ್ಲ. ಆದರೆ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡಿ ಅದನ್ನು ಬಲವಂತವಾಗಿ ಹೇರುವುದು ಎಷ್ಟು ಸರಿ? ಈಗಾಗಲೇ ಉದ್ಯೋಗ ನಿಮಿತ್ತ ಇಂಗ್ಲಿಷ್ ಭಾಷೆಯನ್ನು ಕಲಿಯುವ ಆವಶ್ಯಕತೆಯ ಬಗ್ಗೆ ಎರಡು ಮಾತಿಲ್ಲ. ಅಲ್ಲದೆ ಇದು ಜಾಗತಿಕವಾಗಿ ಮನ್ನಣೆಯನ್ನು ಸಹ ಪಡೆದಿದೆ. ಅಷ್ಟೇ ಅಲ್ಲದೆ ನಮ್ಮ ದೇಶದ ಅಧಿಕೃತ ಭಾಷೆಗಳಲ್ಲಿ ಇದೂ ಒಂದು. ಹೀಗಿರುವಾಗ ಹಿಂದಿ ಭಾಷೆಯನ್ನು ಯಾವ ಪುರುಷಾರ್ಥಕ್ಕಾಗಿ ಕಲಿಯಬೇಕೋ ಕಾಣೆ? ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಿರುವ, ಬಿಟ್ಟರೂ ಬಿಡದ ಇಂಗ್ಲಿಷ್ ಭಾಷೆಯನ್ನೇಕೆ ನಾವು ರಾಷ್ಟ್ರ ಭಾಷೆಯ ಸ್ಥಾನದಲ್ಲಿ ಕಲ್ಪಿಸಕೊಳ್ಳಲಾಗುತ್ತಿಲ್ಲ? ಇದು ವಿದೇಶಿ ಭಾಷೆಯೆಂದೆ? ಹಾಗಾದರೆ ಹೊಟ್ಟೆ ಹೊರೆಯಲು ಇದೇ ಭಾಷೆಯೆಂದು ಉಪಯೋಗಿಸುವಾಗ ಇದು ವಿದೇಶಿ ಎಂದು ನೆನಪಾಗದೆ?

ಹೋಗಲಿ, ನಮ್ಮ ದೇಶದ ಭಾಷೆಗಳ ವಿಷಯಕ್ಕೇ ಬರೋಣ. ಅತಿ ಕಿರಿಯ, ಅಂದರೆ ಈಗ 2-3 ಶತಮಾನಗಳಷ್ಟು ಹಳೆಯದಾದ ಹಿಂದಿ ಭಾಷೆಯೇ ಏಕೆ ರಾಷ್ಟ್ರಭಾಷೆಯಾಗಬೇಕು? ಸಾಕಷ್ಟು ಐತಿಹ್ಯವುಳ್ಳ, ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಇನ್ನೂ ಬೆಳೆಯುತ್ತಿರುವ ಕನ್ನಡ, ತಮಿಳು, ತೆಲಗು, ಬಂಗಾಳಿ ಭಾಷೆಗಳಿಗೆ ಯಾಕೆ ಈ ಸ್ಥಾನಮಾನ ಸಿಗಬಾರದು? ನಮ್ಮ ದೇಶದ ರಾಷ್ಟ್ರಗೀತೆಗಳಾದ 'ಜನಗಣಮನ', 'ವಂದೇಮಾತರಂ' ಸಹ ಹಿಂದಿ ಭಾಷೆಯಲಿಲ್ಲವೆಂಬುದು ಗಮನಿಸಬೇಕಾದಂತಹ ಅಂಶ. ಹೀಗಿರುವಾಗ ದೇಶದ ಇಂದಿನ ಆರ್ಥಿಕ ಪ್ರಗತಿಗೆ ಪೂರಕವಾಗಿ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನಕ್ಕೆ ಹೆಬ್ಬಾಗಿಲಾಗಿರುವ ಎಲ್ಲಾ ಭಾಷಿಕರನ್ನು ತನ್ನೊಡಲಿನಲ್ಲಿ ಸೇರಿಸಿಕೊಂಡು ಇನ್ನೂ ಶಕ್ತವಾಗಿ ಬೆಳೆಯುತ್ತಿರುವ ಕನ್ನಡ ಭಾಷೆಯನ್ನೇ ರಾಷ್ಟ್ರಭಾಷೆಯನ್ನಾಗಿ ಮಾಡಿದರೆ ತಪ್ಪೇನು?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more