ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ-ಅಘನಾಶಿನಿ ನದಿ ಜೋಡಣೆ ಯೋಜನೆ ಕೈಬಿಡಲು ಒತ್ತಾಯಿಸಿ ಡಿಕೆ ಶಿವಕುಮಾರ್‌ಗೆ ಮನವಿ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಬೇಡ್ತಿ-ಹಿರೇವಡ್ಡಟ್ಟಿ (ಬೇಡ್ತಿ-ವರದಾ) ನದಿ ಜೋಡಣೆ ಹಾಗೂ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಪರಿಸರ ಹಾಗೂ ಜನಸಾಮಾನ್ಯರ ಹಿತದೃಷ್ಟಿಯಿಂದ ತಕ್ಷಣವೇ ಕೈಬಿಡುವಂತೆ ಒತ್ತಾಯಿಸಿ ಉನ್ನತ ಮಟ್ಟದ ನಿಯೋಗವೊಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಸೋಮವಾರ ವಿಧಾನಸೌಧದಲ್ಲಿ ಉತ್ತರ ಕನ್ನಡದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ನೇತೃತ್ವದಲ್ಲಿ, ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ಅನಂತ ಹೆಗಡೆ ಆಶೀಸರ ಹಾಗೂ ಶಾಸಕರಾದ ಶಿವರಾಮ್ ಹೆಬ್ಬಾರ್, ಭೀಮಣ್ಣ ನಾಯ್ಕ ಮತ್ತಿತರ ಗಣ್ಯರನ್ನೊಳಗೊಂಡ ನಿಯೋಗವು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಈ ಕುರಿತ ಸಮಗ್ರ ಮನವಿ ಪತ್ರವನ್ನು ಹಸ್ತಾಂತರಿಸಿತು.

Bedti-Aghanashini River

ಯೋಜನೆಗೆ ತೀವ್ರ ವಿರೋಧವೇಕೆ?

ಜಗತ್ತಿನ ಅತ್ಯಂತ ಸೂಕ್ಷ್ಮ ಜೀವವೈವಿಧ್ಯತೆಯ ತಾಣಗಳಲ್ಲಿ ಒಂದಾದ ಪಶ್ಚಿಮಘಟ್ಟ ಪ್ರದೇಶದಲ್ಲಿ ಈ ಬೃಹತ್ ಯೋಜನೆಗಳನ್ನು ಅನುಷ್ಠಾನಗೊಳಿಸಿದರೆ ದೊಡ್ಡ ಅನಾಹುತ ಕಾದಿದೆ. ಈ ಯೋಜನೆಗಳ ಅಡಿ ಅಣೆಕಟ್ಟುಗಳು, ಕಾಲುವೆ ಜಾಲಗಳು, ಸುರಂಗ ಮಾರ್ಗಗಳು, ಪೈಪ್‌ಲೈನ್‌ಗಳು, ಪಂಪ್-ಹೌಸ್‌ಗಳು ಮತ್ತು ವಿದ್ಯುತ್ ಪ್ರಸರಣ ಮಾರ್ಗಗಳ ನಿರ್ಮಾಣಕ್ಕಾಗಿ ವ್ಯಾಪಕವಾಗಿ ಮರ, ಗಿಡಗಳನ್ನು ಕತ್ತರಿಸಬೇಕಾಗುತ್ತದೆ ಇದರಿಂದ ಅಪಾರ ಪ್ರಮಾಣದ ಅರಣ್ಯ ನಾಶವಾಗುತ್ತದೆ. ಇದರಿಂದಾಗಿ ಇಲ್ಲಿನ ಸೂಕ್ಷ್ಮ ಪರಿಸರವು ಗಂಭೀರವಾಗಿ ಹಾನಿಗೊಳ್ಳಲಿದ್ದು, ದೀರ್ಘಕಾಲಿಕ ಅಪಾಯಗಳು ಸಂಭವಿಸಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಮಾರಕ ಯೋಜನೆಗಳ ವಿರುದ್ಧ ಕಳೆದ ಎಂಟು ತಿಂಗಳುಗಳಿಂದ ಜಿಲ್ಲೆಯಾದ್ಯಂತ ನಿರಂತರ ವಿರೋಧ ವ್ಯಕ್ತವಾಗುತ್ತಿದ್ದು, ಈಗಾಗಲೇ ಜನಪ್ರತಿನಿಧಿಗಳು, ಮಠಾಧೀಶರು, ಮಹಿಳೆಯರು ಸೇರಿದಂತೆ 25,000ಕ್ಕೂ ಹೆಚ್ಚು ಜನರು ಸಮಾವೇಶ ಸೇರಿ ಯೋಜನೆ ಕೈಬಿಡುವಂತೆ ಆಗ್ರಹಿಸಿದ್ದಾರೆ.

ಅವೈಜ್ಞಾನಿಕ ಯೋಜನೆ: ವಿಜ್ಞಾನಿಗಳ ವರದಿ

ಈ ಯೋಜನೆಗಳು ಜಲಶಾಸ್ತ್ರೀಯ ಹಾಗೂ ಪರಿಸರದ ದೃಷ್ಟಿಯಿಂದ ಸಂಪೂರ್ಣ ಅವೈಜ್ಞಾನಿಕವಾಗಿವೆ ಎಂಬುದು ಪರಿಣಿತರ ವಾದವಾಗಿದೆ. ಬೇಡ್ತಿ ನದಿ ಕೊಳ್ಳದಲ್ಲಿ ಬೀಳುವ ವಾರ್ಷಿಕ ಮಳೆಯ ಶೇ. 70-80 ರಷ್ಟು ಮಳೆಯು ಕೇವಲ ಜುಲೈನಿಂದ ಸೆಪ್ಟೆಂಬರ್ ವರೆಗಿನ ಮೂರು ತಿಂಗಳಲ್ಲಿ ಸುರಿಯುತ್ತದೆ; ಉಳಿದ ಒಂಬತ್ತು ತಿಂಗಳು ನದಿಯಲ್ಲಿ ತೀವ್ರ ನೀರಿನ ಕೊರತೆ ಇರುತ್ತದೆ. ಹೀಗಿರುವಾಗ ನದಿಯಲ್ಲಿ 'ಹೆಚ್ಚುವರಿ ನೀರು ಲಭ್ಯವಿದೆ' ಎಂದು ಊಹಿಸುವುದು ವಾಸ್ತವಕ್ಕೆ ದೂರವಾದದ್ದು.

ಈ ನದಿ ಜೋಡಣೆ ಯೋಜನೆಗಳಿಂದ ಎದುರಾಗುವ ಗಂಭೀರ ಪರಿಣಾಮಗಳು ಹೀಗಿವೆ:

1. ವ್ಯಾಪಕ ಅರಣ್ಯನಾಶ ಮತ್ತು ಕಾಡುಪ್ರಾಣಿಗಳ ವಾಸಸ್ಥಾನಗಳು ಹಾಳಾಗುವುದರಿಂದ(Habitat Fragmentation) ಮಾನವ-ವನ್ಯಜೀವಿ ಸಂಘರ್ಷ ಮತ್ತಷ್ಟು ಹೆಚ್ಚಾಗುತ್ತದೆ.

2. ಈಗಾಗಲೇ ಉತ್ತರ ಕನ್ನಡದಲ್ಲಿ ಮಳೆಗಾಲದಲ್ಲಿ ಸಂಭವಿಸುವ ಭೂಕುಸಿತಗಳ ತೀವ್ರತೆ ಮತ್ತು ಪ್ರಮಾಣ ವಿಪರೀತವಾಗಿ ಹೆಚ್ಚಾಗಲಿದೆ.

3. ನದಿಯ ಸಿಹಿನೀರಿನ ಹರಿವು ಕಡಿಮೆಯಾಗಿ ಕರಾವಳಿಯಲ್ಲಿ ಸಮುದ್ರದ ಉಪ್ಪುನೀರು ನದಿಗಳಿಗೆ ಒಳನುಗ್ಗಲಿದೆ. ಇದರಿಂದ ಕುಡಿಯುವ ನೀರು ಮತ್ತು ಕೃಷಿಗೆ ಭಾರಿ ಹೊಡೆತ ಬೀಳಲಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

4. ಮೀನುಗಳ ವಂಶಾಭಿವೃದ್ಧಿಯಾಗುವ ಅಳಿವೆಗಳು ನಾಶವಾಗಿ ಮೀನು ಉತ್ಪಾದನೆ ಕುಂಠಿತಗೊಳ್ಳಲಿದ್ದು, ಮೀನುಗಾರ ಸಮುದಾಯ ಗಂಭೀರ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ.

5. ನದಿ ಕಣಿವೆ ಪ್ರದೇಶದಲ್ಲಿ ವಾಸಿಸುವ ಗೌಳಿ, ಸಿದ್ದಿ, ಒಕ್ಕಲಿಗ, ಕುಣಬಿ ಮತ್ತು ಹಾಲಕ್ಕಿ ಸಮುದಾಯಗಳು ಸೇರಿದಂತೆ ಲಕ್ಷಾಂತರ ರೈತರು ಮತ್ತು ಪಶುಪಾಲಕರ ಬದುಕು ಗಂಭೀರವಾಗಿ ಹಾನಿಗೊಳಗಾಗಲಿದೆ.

ಡಿಪಿಆರ್ ಪ್ರಕ್ರಿಯೆ ಸ್ಥಗಿತಗೊಳಿಸಲು ಆಗ್ರಹ

ಈಗಾಗಲೇ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ಸಾಧ್ಯತಾ ವರದಿಗಳು (PFRs) ಸಲ್ಲಿಕೆಯಾಗಿವೆ. ಜಿಲ್ಲೆಯ ಮೂರು ಲಕ್ಷಕ್ಕೂ ಹೆಚ್ಚು ಗ್ರಾಮೀಣ ಕುಟುಂಬಗಳ ಜೀವನ ಭದ್ರತೆಗೆ ಮಾರಕವಾಗಿರುವ ಈ ಯೋಜನೆಗಳ ಕುರಿತು 'ವಿವರವಾದ ಯೋಜನಾ ವರದಿ' (DPR) ತಯಾರಿಸುವ ನಿರ್ಣಯವನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು. ಜೊತೆಗೆ, ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಎಲ್ಲ ಸಮೀಕ್ಷೆ ಹಾಗೂ ಅಧ್ಯಯನ ಕಾರ್ಯಗಳನ್ನು ಸ್ಥಗಿತಗೊಳಿಸಬೇಕು ಎಂದು ನಿಯೋಗವು ಉಪಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ. ಈ ವಿಷಯಗಳ ಕುರಿತಂತೆ ವಿಷಯತಜ್ಞರು ತಯಾರಿಸಿದ ವೈಜ್ಞಾನಿಕ ಅಧ್ಯಯನಗಳು ಮತ್ತು ಪರಿಣಿತರ ಅಭಿಪ್ರಾಯಗಳನ್ನು ಒಳಗೊಂಡ ಸಮಗ್ರ ವರದಿಯನ್ನೂ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದ್ದು , ಮುಖ್ಯಮಂತ್ರಿಗಳಿಗೆ ಹಾಗೂ ಕೇಂದ್ರ ಜಲಶಕ್ತಿ ಸಚಿವರಿಗೂ ಈ ಮೊದಲೇ ಅಧಿಕೃತ ಮನವಿ ಸಲ್ಲಿಸಲಾಗಿದೆ ಎಂದು ನಿಯೋಗ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+