ಮನೆಯಲ್ಲೇ ಇರಲಿ ಈ 5 ಮ್ಯಾಜಿಕಲ್ ಗಿಡಗಳು! ಸಣ್ಣ-ಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಓಡೋ ಮುನ್ನ ಇವುಗಳನ್ನೊಮ್ಮೆ ಬಳಸಿ ನೋಡಿ
ಇತ್ತಿಚಿನ ದಿನಗಳಲ್ಲಿ ಅನೇಕರು ತಮ್ಮ ಆರೋಗ್ಯದ ವಿಷಯದಲ್ಲಿ ತುಂಬಾ ಕಾಳಜಿವಹಿಸುತ್ತಿದ್ದಾರೆ ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ಜನರು ಆಧುನಿಕ ಜೀವನಶೈಲಿ ಮತ್ತು ಕೃತಕ ವಸ್ತುಗಳಿಂದ ದೂರವಾಗಿ ನೈಸರ್ಗಿಕ ಜೀವನ ಪದ್ದತಿ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಅದರ ಭಾಗವಾಗಿ ಮನೆಯಲ್ಲೇ ಔಷಧೀಯ ಸಸ್ಯಗಳನ್ನು ಬೆಳೆಸುವ ಪ್ರವೃತ್ತಿ ಹೆಚ್ಚಾಗಿದೆ. ಇದು ಕೇವಲ ಹಣ ಉಳಿಸುವುದಕ್ಕಾಗಿ ಅಲ್ಲ, ನಮ್ಮ ಸಾಂಪ್ರದಾಯಿಕ ಜ್ಞಾನವನ್ನು ಉಳಿಸಿಕೊಳ್ಳುವ ಪ್ರಯತ್ನವೂ ಹೌದು. ಬಾಲ್ಕನಿ, ಟೆರೇಸ್ ಅಥವಾ ಮನೆಯ ಹಿತ್ತಲಿನಂತಹ ಸಣ್ಣ ಜಾಗದಲ್ಲಿಯೂ ಕೆಲವು ಔಷಧೀಯ ಸಸ್ಯಗಳನ್ನು ಸುಲಭವಾಗಿ ಬೆಳೆಸಬಹುದು.
ಈ ಸಸ್ಯಗಳು ನಮ್ಮ ಆರೋಗ್ಯದಲ್ಲಿ ಅನೇಕ ರೀತಿಯ ಸಹಾಯಗಳನ್ನು ಮಾಡುತ್ತವೆ, ಅಂದರೆ ಜೀರ್ಣಕ್ರಿಯೆಗೆ ಸಂಬಂದಿಸಿದ, ರೋಗನಿರೋಧಕ ಶಕ್ತಿ ಹೆಚ್ಚಿಸಲು, ಚರ್ಮದ ಆರೋಗ್ಯ ಕಾಪಾಡಲು ಮತ್ತು ಮಾನಸಿಕ ಮತ್ತು ದೇಹದ ಒತ್ತಡ ಕಡಿಮೆ ಸಹಾಯ ಮಾಡುತ್ತವೆ. ಈ ಸಸ್ಯಗಳ ನಿರ್ವಹಣೆ ಕೂಡ ಕಡಿಮೆ ಮತ್ತು ಇವು ಪರಿಸರ ಸ್ನೇಹಿ ಸಸ್ಯಗಳಾಗಿವೆ.

ತುಳಸಿ ಗಿಡ
ತುಳಸಿಗಿಡವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಮತ್ತು ಆಯರ್ವೇದದಲ್ಲಿ ಔಷಧೀಯ ಗುಣಗಳನ್ನು ಹೊಂದಿರುವ ಒಂದು ಸಸ್ಯವಾಗಿದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು, ಕೆಮ್ಮು, ನೆಗಡಿ, ಜ್ವರಕ್ಕೆ, ಉಸಿರಾಟದ ಸಮಸ್ಯೆ ಮತ್ತು ಮಾನಸಿಕ ಒತ್ತಡ ನಿಯಂತ್ರಿಸಲು ಇದು ಸಹಕಾರಿ ಆಗಿದೆ. ತುಳಸಿ ಎಲೆಗಳನ್ನು ಚಹಾದ ರೂಪದಲ್ಲಿ ಸೇವಿಸಬಹುದು ಅಥವಾ ನೇರವಾಗಿ ತಿನ್ನಬಹುದಾಗಿದೆ. ಪ್ರತಿದಿನ 4-6 ಗಂಟೆಗಳ ಕಾಲ ಸೂರ್ಯನ ಬೆಳಕು ಮತ್ತು ನಿಯಮಿತ ನೀರು ಇದ್ದರೆ ತುಳಸಿ ಚೆನ್ನಾಗಿ ಬೆಳೆಯುತ್ತದೆ.

ಅಲೋವೆರಾ
ಅಲೋವೆರಾ ಸಸ್ಯವು ಔಷಧೀಯ ಮತ್ತು ಸೌಂದರ್ಯವರ್ಧಕ ಗುಣಗಳಿಂದ ಸಮೃದ್ಧವಾಗಿರುವ ಪ್ರಮುಖ ಸಸ್ಯವಾಗಿದೆ. ಕಡಿಮೆ ಆರೈಕೆ ಮತ್ತು ಜನಪ್ರಿಯ ಔಷಧೀಯ ಸಸ್ಯವಾಗಿದೆ. ಇದರ ಎಲೆಗಳಲ್ಲಿರುವ ಜೆಲ್ ಸುಟ್ಟ ಗಾಯಗಳು, ಕೂದಲಿನ ಆರೋಗ್ಯಕ್ಕೆ, ಜೀರ್ಣಕ್ರಿಯೆಗೆ ಸಂಬಂದಿಸಿದ ಹಾಗೂ ಚರ್ಮದ ಸಮಸ್ಯೆಗಳಿಗೆ ಉಪಯುಕ್ತವಾಗಿದೆ. ಅಲೋವೆರಾ ಗಿಡಕ್ಕೆ ಹೆಚ್ಚು ನೀರಿನ ಅಗತ್ಯವಿಲ್ಲ. ಮಣ್ಣು ಸಂಪೂರ್ಣ ಒಣಗಿದ ಬಳಿಕ ಮಾತ್ರ ನೀರು ಹಾಕುವುದು ಉತ್ತಮ.

ಪುದೀನಾ
ಪುದೀನಾ ಜೀರ್ಣಕ್ರಿಯೆ ಸುಧಾರಿಸಲು, ತಲೆನೋವು ಕಡಿಮೆ ಮಾಡಲು, ಗ್ಯಾಸ್ಟ್ರಿಕ್ ಸಮಸ್ಯೆ, ಹಾಗೂ ವಾಕರಿಕೆ ನಿವಾರಣೆಗೆ ಸಹಾಯ ಮಾಡುತ್ತದೆ. ಇದರ ಸುಗಂಧವು ಸಹ ಮನಸ್ಸಿಗೆ ತಾಜಾತನ ನೀಡುತ್ತದೆ. ಇದು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪುದೀನಾವನ್ನು ಪ್ರತ್ಯೇಕ ಕುಂಡಗಳಲ್ಲಿ ಬೆಳೆಸುವುದು ಒಳ್ಳೆಯದು, ಏಕೆಂದರೆ ಇದು ವೇಗವಾಗಿ ಬೆಳೆಯುತ್ತದೆ. ನಿಯಮಿತವಾಗಿ ಕೊಂಬೆಗಳನ್ನು ಕತ್ತರಿಸಿದರೆ ಹೊಸ ಎಲೆಗಳು ಚೆನ್ನಾಗಿ ಬೆಳೆಯುತ್ತವೆ.
ಶುಂಠಿ
ಆರೋಗ್ಯಕ್ಕೆ ಶುಂಠಿ ಅತ್ಯುತ್ತಮವಾದ ಮೂಲಿಕೆಯಾಗಿದೆ. ಶುಂಠಿ ಜೀರ್ಣಕ್ರಿಯೆ ಸುಧಾರಿಸಲು, ಉರಿಯೂತ ಕಡಿಮೆ ಮಾಡಲು ಮತ್ತು ಶೀತ-ಜ್ವರದ ವಿರುದ್ಧ ಹೋರಾಡಲು ಇದು ಸಹಕಾರಿಯಾಗಿದೆ. ಶುಂಠಿಯ ತುಂಡನ್ನು ಮಣ್ಣಿನಲ್ಲಿ ನೆಟ್ಟರೆ ಸುಲಭವಾಗಿ ಬೆಳೆಯುತ್ತದೆ. ಇದು ಬೆಚ್ಚಗಿನ ವಾತಾವರಣ ಮತ್ತು ತೇವಾಂಶ ಇರುವ ಮಣ್ಣನ್ನು ಇಷ್ಟಪಡುತ್ತದೆ. ಬೆಳೆದ ಬಳಿಕ ಬೇರುಗಳನ್ನು ಕೊಯ್ದು ಬಳಸಬಹುದು.

ಅರಿಶಿನ
ಅರಿಶಿನವು ಒಂದು ಅದ್ಬುತವಾದ ಔಷಧೀಯ ಗುಣಗಳನ್ನು ಹೊಂದಿರುವ ಸಾಂಬಾರ ಪದಾರ್ಥವಾಗಿದೆ. ಅರಿಶಿನದಲ್ಲಿ ಉರಿಯೂತ ನಿವಾರಕ, ಜೀರ್ಣಕ್ರಿಯೆ, ಜೀರ್ಣಕ್ರಿಯೆ, ತ್ವಚೆಯ ಆರೈಕೆ, ಗಾಯಗಳು ವಾಸಿ ಮಾಡಲು ಹಾಗೂ ಆ್ಯಂಟಿಆಕ್ಸಿಡೆಂಟ್ ಗುಣಗಳು ಸಮೃದ್ಧವಾಗಿವೆ. ಶುಂಠಿಯಂತೆ ಇದನ್ನೂ ಬೇರುಗಳ ಮೂಲಕ ಬೆಳೆಸಬಹುದು. ಮಧ್ಯಮ ಪ್ರಮಾಣದ ಸೂರ್ಯನ ಬೆಳಕು ಇದ್ದರೆ ಸಾಕು. ಕೆಲವು ತಿಂಗಳುಗಳ ಬಳಿಕ ಕೊಯ್ಲಿಗೆ ಸಿದ್ಧವಾಗುವ ಅರಿಶಿನವನ್ನು ತಾಜಾ ಅಥವಾ ಒಣಗಿಸಿದ ರೂಪದಲ್ಲಿ ಬಳಸಬಹುದು.
ಮನೆಯಲ್ಲೇ ಈ ಔಷಧೀಯ ಸಸ್ಯಗಳನ್ನು ಬೆಳೆಸುವುದರಿಂದ ಆರೋಗ್ಯದ ಜೊತೆಗೆ ಮನೆಯಲ್ಲಿ ಹಸಿರು ವಾತಾವರಣವೂ ದೊರೆಯುತ್ತದೆ. ಕಡಿಮೆ ಜಾಗ ಮತ್ತು ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಜೀವನಶೈಲಿಯನ್ನು ರೊಪಿಸಿಕೊಳ್ಳವಲ್ಲಿ ಇದು ಉತ್ತಮವಾದ ಮಾರ್ಗವಾಗಿದೆ.














Click it and Unblock the Notifications