Nepotism Controversy: ನೆಪೋಟಿಸಂ, ದೊಡ್ಮನೆ ಬಗ್ಗೆ ಮಾತನಾಡಿದ್ದ ಕಿಚ್ಚ ಸುದೀಪ್‌ಗೆ ಶಿವಣ್ಣ ಹೀಗನ್ನೋದಾ?
ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಾಯಕರಾಗಿ ನಟಿಸಿರುವ ಚೊಚ್ಚಲ ಸಿನಿಮಾ 'ಮ್ಯಾಂಗೋ ಪಚ್ಚ' ಕಾರ್ಯಕ್ರಮದಲ್ಲಿ ಮಾಧ್ಯಮಗಳು ಸಂಚಿತ್ ಅವರಿಗೆ ನೆಪೋಟಿಸಂ ಬಗ್ಗೆ ಪ್ರಶ್ನೆ ಕೇಳಿದ್ದವು. ಇದರಿಂದ ತುಸು ಅಸಮಾಧಾನಗೊಂಡ ಸುದೀಪ್, ಸೋದರಳಿಯನ ಪರವಾಗಿ ಬ್ಯಾಟಿಂಗ್ ಮಾಡಿದ್ದರು. "ಇದೇ ಪ್ರಶ್ನೆಯನ್ನು ನೀವು ಶಿವಣ್ಣನಿಗೂ ಕೇಳ್ತೀರಾ? ದೊಡ್ಮನೆಯಿಂದಲೇ ಇದು ಶುರುವಾಗಿತ್ತು, ಹಾಗಿರುವಾಗ ಯಾಕೆ ನಮ್ಮನ್ನೇ ಕೇಳ್ತೀರಿ?" ಎಂದು ನೇರವಾಗಿಯೇ ಪ್ರಶ್ನಿಸಿದ್ದರು. ಸುದೀಪ್ ಅವರ ಈ ಹೇಳಿಕೆ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಇದೀಗ ಖುದ್ದಾಗಿ ಶಿವಣ್ಣ ಪ್ರತಿಕ್ರಿಯಿಸಿದ್ದಾರೆ.
'ಮ್ಯಾಂಗೋ ಪಚ್ಚ' ವೀಕ್ಷಿಸಿದ ಶಿವಣ್ಣ
ಈ ವಿವಾದದ ನಡುವೆಯೂ ದೊಡ್ಮನೆಯ ಗುಣವನ್ನು ಎತ್ತಿಹಿಡಿದಿರುವ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಇತ್ತೀಚೆಗೆ 'ಮ್ಯಾಂಗೋ ಪಚ್ಚ' ಸಿನಿಮಾವನ್ನು ವೀಕ್ಷಿಸಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲದೆ, "ಸಂಚಿತ್ ಕೂಡ ನಮ್ಮ ಹುಡುಗನೇ, ಅವರೂ ನಮ್ಮ ಫ್ಯಾಮಿಲಿಯೇ" ಎಂದು ಹೇಳುವ ಮೂಲಕ ಸುದೀಪ್ ಕುಟುಂಬದ ಜೊತೆ ತಮಗಿರುವ ಬಾಂಧವ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

"ಆ ಪ್ರಶ್ನೆ ಕೇಳುವ ಅಗತ್ಯವೇ ಇರಲಿಲ್ಲ"
ಸಿನಿಮಾ ವೀಕ್ಷಿಸಿದ ಬಳಿಕ ಮಾಧ್ಯಮಗಳು ನೆಪೋಟಿಸಂ ಬಗ್ಗೆ ಸುದೀಪ್ ಆಡಿದ್ದ ಮಾತುಗಳನ್ನು ಶಿವಣ್ಣನ ಗಮನಕ್ಕೆ ತಂದಾಗ, ಅವರು ನೇರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. "ಸುದೀಪ್ ಆ ರೀತಿ ಮಾತನಾಡಿದ್ದನ್ನು ನಾನೂ ನೋಡಿದೆ. ಆದರೆ, ಆ ಪ್ರಶ್ನೆಯನ್ನು ಕೇಳುವ ಅಗತ್ಯವೇ ಇರಲಿಲ್ಲ. ಸಿನಿಮಾ ರಂಗದಲ್ಲಿ ಪ್ರತಿಯೊಬ್ಬರಿಗೂ ಕನಸು ಕಾಣುವ ಹಕ್ಕಿದೆ. ಇಲ್ಲಿ ಇಂಥವರ ಮಕ್ಕಳು ಅಥವಾ ಅವರ ಮಕ್ಕಳೇ ಕನಸು ಕಾಣಬೇಕು ಅಂತೇನೂ ಇಲ್ಲ. ಇಲ್ಲಿ ಎಲ್ಲರಿಗೂ ಅಧಿಕಾರ ಇದೆ, ಆಸೆ ಇದೆ. ಚಿತ್ರರಂಗಕ್ಕೆ ಹೊಸಬರು ಬರಬೇಕು, ನಾವು ಇನ್ನೆಷ್ಟು ವರ್ಷ ಅಂತ ಸಿನಿಮಾ ಮಾಡಲು ಸಾಧ್ಯ? ಮುಂದೆ ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಮುನ್ನಡೆಸಿಕೊಂಡು ಹೋಗಬೇಕಾದವರೇ ಈ ಯುವಜನರು" ಎಂದು ಶಿವಣ್ಣ ಹೇಳಿದ್ದಾರೆ.
"ನಾನು ಅದನ್ನೆಲ್ಲ ಕೇರ್ ಮಾಡಲ್ಲ"
ಮಾತು ಮುಂದುವರಿಸಿದ ಶಿವಣ್ಣ, "ಬೇರೆ ಭಾಷೆಗಳಲ್ಲಿ ಹೊಸಬರನ್ನು ಎಷ್ಟು ಅದ್ಧೂರಿಯಾಗಿ ಸ್ವಾಗತಿಸುತ್ತಾರೋ, ಅದೇ ರೀತಿ ನಮ್ಮ ಕನ್ನಡದಲ್ಲೂ ಆಗಬೇಕು. ಪ್ರೇಕ್ಷಕರು ಕೇವಲ ನಮ್ಮ ಸಿನಿಮಾಗಳನ್ನಷ್ಟೇ ಅಲ್ಲ, ಹೊಸಬರ ಚಿತ್ರಗಳನ್ನೂ ಥಿಯೇಟರ್‌ಗೆ ಬಂದು ನೋಡಬೇಕು. ಸುದೀಪ್ ಹೇಳಿದ ಮಾತುಗಳನ್ನೆಲ್ಲ ನಾನು ತಲೆಗೆ ಹಾಕಿಕೊಳ್ಳಲ್ಲ, ಅದನ್ನೆಲ್ಲ ಕೇರ್ ಮಾಡೋಕೆ ಹೋಗಲ್ಲ. ಅದೊಂದು ಬೇಡದ ವಿಷಯ. ನಮ್ಮಲ್ಲಿ ಇನ್ನೂ ಹೆಚ್ಚು ಹೀರೋಗಳು ಬರಬೇಕು, ನಮ್ಮ ಭಾಷೆ ಬೆಳೆಯಬೇಕು ಎಂದರೆ ಎಲ್ಲರಿಗೂ ನಮ್ಮ ಬೆಂಬಲ ಇರಲೇಬೇಕು" ಎಂದು ಹೇಳುವ ಮೂಲಕ ನೆಪೋಟಿಸಂ ವಿವಾದಕ್ಕೆ ಆರಂಭದಲ್ಲೇ ಬ್ರೇಕ್ ಹಾಕಿದ್ದಾರೆ.
ಸದ್ಯ ಸ್ಯಾಂಡಲ್‌ವುಡ್‌ನ ಸ್ಟಾರ್‌ಗಳಾದ ಕಿಚ್ಚ ಸುದೀಪ್ ಹಾಗೂ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ನಡುವೆ 'ನೆಪೋಟಿಸಂ' ವಿಚಾರವಾಗಿ ಸೃಷ್ಟಿಯಾಗಿದ್ದ ದೊಡ್ಡ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಸುದೀಪ್ ಮಾಧ್ಯಮಗಳ ಮುಂದೆ ತುಸು ಖಾರವಾಗಿಯೇ ಎತ್ತಿದ್ದ ಪ್ರಶ್ನೆಗೆ ಈಗ ಶಿವಣ್ಣ ಅಷ್ಟೇ ಖಡಕ್ ಆಗಿ ಉತ್ತರ ನೀಡುವ ಮೂಲಕ ಇಡೀ ಚರ್ಚೆಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ.













Click it and Unblock the Notifications