ಶಿವಂ ಅಸೋಸಿಯೇಟ್ಸ್ ವಂಚನೆ ಕೇಸ್‌ನಲ್ಲಿ ಸ್ಯಾಂಡಲ್‌ವುಡ್‌ನ ಸ್ಟಾರ್ ನಟ-ನಟಿಯರ ಹೆಸರು ಲಿಂಕ್, ಯಾರಿಗೆಲ್ಲ ಢವಢವ?
ಬಹುಕೋಟಿ ವಂಚನೆ ಹಗರಣದಲ್ಲಿ ಸಿಲುಕಿರುವ 'ಶಿವಂ ಅಸೋಸಿಯೇಟ್ಸ್' ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಆಘಾತಕಾರಿ ಟ್ವಿಸ್ಟ್ ಸಿಕ್ಕಿದೆ. ಸಾರ್ವಜನಿಕರಿಂದ ಕಾನೂನುಬಾಹಿರವಾಗಿ ಕೋಟ್ಯಂತರ ರೂಪಾಯಿ ಠೇವಣಿ ಸಂಗ್ರಹಿಸಿ ವಂಚಿಸಿರುವ ಆರೋಪ ಎದುರಿಸುತ್ತಿರುವ ಈ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್ ಜೊತೆ ನಂಟು ಹೊಂದಿರುವವರಿಗೆ ಇದೀಗ ಕಾನೂನಿನ ಭೀತಿ ಶುರುವಾಗಿದೆ. ಈ ವಂಚನೆಯ ಜಾಲದ ತನಿಖೆ ನಡೆಸುತ್ತಿರುವ ಸಿಐಡಿ (CID) ಅಧಿಕಾರಿಗಳಿಗೆ ಈಗ ಸ್ಯಾಂಡಲ್‌ವುಡ್ ಲಿಂಕ್ ಸಿಕ್ಕಿದ್ದು, ಸಿನಿಮಾ ರಂಗದ ಖ್ಯಾತ ನಟ-ನಟಿಯರಿಗೆ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ.
ಹಗರಣದಲ್ಲಿ ಚಿತ್ರರಂಗದ ಕನೆಕ್ಷನ್ ಏನು?
ಈ ಪ್ರಕರಣದ ಆರೋಪಿ ಶಿವಾನಂದ ನೀಲಣ್ಣನವರ್ ಸಾರ್ವಜನಿಕರಿಂದ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣವನ್ನು ಠೇವಣಿ ರೂಪದಲ್ಲಿ ಸಂಗ್ರಹಿಸಿದ್ದ ಎನ್ನಲಾಗಿದೆ. ಹೀಗೆ ಸಂಗ್ರಹಿಸಿದ ಸಾರ್ವಜನಿಕರ ಹಣದಲ್ಲೇ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಬೆಳಗಾವಿಯಲ್ಲಿ 'ಬೆಳಗಾವಿ ಕನ್ನಡ ಹಬ್ಬ' ಎಂಬ ಹೆಸರಿನಲ್ಲಿ ಅತ್ಯಂತ ಅದ್ಧೂರಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್‌ನ ಪ್ರಮುಖ ನಟ-ನಟಿಯರನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಸಿನಿಮಾ ತಾರೆಯರ ಉಪಸ್ಥಿತಿಯಿಂದಾಗಿ ಕಾರ್ಯಕ್ರಮ ಭಾರಿ ಜನಪ್ರಿಯತೆ ಪಡೆದುಕೊಂಡಿತ್ತು.

ಸಿಐಡಿ ತನಿಖೆ ಮತ್ತು ಬ್ಯಾಂಕ್ ಖಾತೆಗಳ ಪರಿಶೀಲನೆ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳು, ಸಂಸ್ಥೆಯ ಆರ್ಥಿಕ ವಹಿವಾಟು ಹಾಗೂ ಬ್ಯಾಂಕ್ ಖಾತೆಗಳನ್ನು ಜಾಲಾಡುತ್ತಿದ್ದಾರೆ. ಈ ವೇಳೆ ಬೆಳಗಾವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿನಿಮಾ ತಾರೆಯರಿಗೆ ಶಿವಂ ಅಸೋಸಿಯೇಟ್ಸ್ ಹಾಗೂ ಶಿವಾನಂದ ನೀಲಣ್ಣನವರ್ ಕಡೆಯಿಂದ ಹಣ ವರ್ಗಾವಣೆ ಆಗಿದೆಯೇ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಕಾರ್ಯಕ್ರಮದ ಸಂಭಾವನೆ ಅಥವಾ ಇನ್ಯಾವುದೇ ರೂಪದಲ್ಲಿ ನಟ-ನಟಿಯರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಿದೆಯೇ ಎಂಬುದರ ಕಂಪ್ಲೀಟ್ ಪರಿಶೀಲನೆ ಸದ್ಯ ನಡೆಯುತ್ತಿದೆ.
ಸ್ಟಾರ್‌ಗಳಿಗೆ ನೋಟಿಸ್ ನೀಡಲು ಸಿಐಡಿ ಚಿಂತನೆ
ಒಂದು ವೇಳೆ ಬ್ಯಾಂಕ್ ಖಾತೆಗಳ ಪರಿಶೀಲನೆ ವೇಳೆ ವಂಚನೆಗೊಳಗಾದ ಸಾರ್ವಜನಿಕರ ಹಣವು ನಟ-ನಟಿಯರ ಖಾತೆಗಳಿಗೆ ವರ್ಗಾವಣೆಯಾಗಿರುವುದು ದೃಢಪಟ್ಟರೆ, ಸಿಐಡಿ ಅಧಿಕಾರಿಗಳು ತಾರೆಯರಿಗೂ ವಿಚಾರಣೆಗೆ ಹಾಜರಾಗುವಂತೆ ಅಧಿಕೃತ ನೋಟಿಸ್ ನೀಡಲು ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ತಾವೂ ಅರಿಯದಂತೆ ವಂಚಕ ಕಂಪನಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಈಗ ಕಾನೂನಿನ ಸಂಕಷ್ಟಕ್ಕೆ ಸಿಲುಕುವ ಮುನ್ಸೂಚನೆ ಸಿಗುತ್ತಿದ್ದಂತೆ, ಆ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದ ಸ್ಟಾರ್ ನಟ-ನಟಿಯರಲ್ಲಿ ತೀವ್ರ ಆತಂಕ ಎದುರಾಗಿದೆ.
ಯಾರು ಆ ಸ್ಟಾರ್‌ಗಳು?
ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಈ ವಿವಾದಿತ 'ಬೆಳಗಾವಿ ಕನ್ನಡ ಹಬ್ಬ' ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರಾದ ಡಾಲಿ ಧನಂಜಯ್, ದಿಗಂತ್, ನೀನಾಸಂ ಸತೀಶ್, ವಸಿಷ್ಠ ಸಿಂಹ, ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಹಾಗೂ ಸ್ಟಾರ್ ನಟಿಯರಾದ ರಾಗಿಣಿ ದ್ವಿವೇದಿ, ಸಪ್ತಮಿ ಗೌಡ ಮತ್ತು ಐಂದ್ರಿತಾ ರೇ ಭಾಗಿಯಾಗಿದ್ದರು. ಇದೀಗ ಇವರೆಲ್ಲರಿಗೂ ಸಿಐಡಿ ನೋಟಿಸ್ ಭೀತಿ ಎದುರಾಗಿದೆ.

40,000ಕ್ಕೂ ಹೆಚ್ಚು ಜನರಿಗೆ ನಾಮ
ಬಹುಕೋಟಿ ವಂಚನೆ ಎಸಗಿರುವ 'ಶಿವಂ ಅಸೋಸಿಯೇಟ್ಸ್' ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ (CID) ತನಿಖೆ ನಡೆಸುತ್ತಿದೆ. ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ ಸಾರ್ವಜನಿಕರಿಂದ ಭಾರಿ ಪ್ರಮಾಣದ ಹಣ ಲೂಟಿ ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಒಟ್ಟು 40,700 ಜನರಿಂದ ನಿಯಮಬಾಹಿರವಾಗಿ ಬರೋಬ್ಬರಿ 2,400 ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿ ವಂಚಿಸಲಾಗಿದೆ. ಇಷ್ಟೆಲ್ಲಾ ಆದರೂ ಕೂಡ ಜನರು ಇಂದಿಗೂ ಅದೇ ಕಂಪನಿಗೆ ಹಣ ಹೂಡಿಕೆ ಮಾಡುತ್ತಿದ್ದಾರೆ ಎಂದು ಸಿಐಡಿ ಡಿಐಜಿ ಡಾ. ಭೀಮಾಶಂಕರ ಗುಳೇದ ಕಳವಳ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಯಾವುದೇ ಪ್ರಕರಣದ ತನಿಖೆ ಪ್ರಗತಿಯಲ್ಲಿರುವಾಗ ಸಿಐಡಿ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಲ್ಲ. ಆದರೆ, ಈ ಪ್ರಕರಣದಲ್ಲಿ ಸಾರ್ವಜನಿಕರು ಇನ್ನೂ ಜಾಗೃತರಾಗದೆ ವಂಚಕ ಕಂಪನಿಯ ಬೆನ್ನತ್ತಿ ಹೋಗುತ್ತಿರುವುದರಿಂದ ಅನಿವಾರ್ಯವಾಗಿ ಪ್ರೆಸ್‌ಮೀಟ್ ಮಾಡಬೇಕಾಯಿತು ಎಂದು ಡಿಐಜಿ ಸ್ಪಷ್ಟಪಡಿಸಿದ್ದಾರೆ. "ಕಂಪನಿಯ ಅಕ್ರಮದ ಮಾಹಿತಿ ಸಿಗುತ್ತಿದ್ದಂತೆ 20 ದಿನಗಳ ಹಿಂದೆಯೇ ಜಿಲ್ಲಾಡಳಿತ ಹಾಗೂ ಪೊಲೀಸರು ಜಂಟಿಯಾಗಿ ಶಿವಂ ಅಸೋಸಿಯೇಟ್ಸ್ ಮೇಲೆ ದಾಳಿ ನಡೆಸಿದ್ದರು. ಸದ್ಯ ಪ್ರಕರಣ ಸಿಐಡಿ ವಶದಲ್ಲಿದೆ. ಆದರೂ ಗ್ರಾಹಕರು ತಾವೂ ಹಣ ಹಾಕುತ್ತಾ, ಬೇರೆಯವರಿಗೂ ಹಣ ಹೂಡಿಕೆ ಮಾಡಲು ಪ್ರೇರೇಪಿಸುತ್ತಿದ್ದಾರೆ. ದಯವಿಟ್ಟು ಯಾರೂ ಇನ್ಮುಂದೆ ಈ ಕಂಪನಿಗೆ ಒಂದು ರೂಪಾಯಿಯನ್ನೂ ಹಾಕಬೇಡಿ" ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.













Click it and Unblock the Notifications