• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕ್ ಎಂಬ ಕಾದ ಕಬ್ಬಿಣ ಬಡಿಯಲು ಇದು ಸಕಾಲ

By Staff
|
ಈಗ ನಮ್ಮ ಸರ್ಕಾರಕ್ಕೆ ಬೇಕಾಗಿರುವುದು ಪ್ರಾಮಾಣಿಕತೆ, ಸಕಾರಾತ್ಮಕ ಧೋರಣೆ ಮತ್ತು ಇಚ್ಛಾಶಕ್ತಿ. ಅತ್ತ ಸರಬ್‌ಜಿತ್‌ಗೆ ಗಲ್ಲು ಖಾಯಂ ಆದರೆ ಇತ್ತ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲು ಹಿಂದೆಮುಂದೆ ನೋಡುತ್ತಿರುವ ನಮ್ಮ ಸರ್ಕಾರದಿಂದ, ಮುಂಬಯಿಯ ಘನಘೋರ ದುರಂತದ ನಂತರವೂ ಪಾಕ್ ವಿಷಯದಲ್ಲಿ ತಣ್ಣಗೆ ಕುಳಿತಿರುವ ನಮ್ಮ ಕೇಂದ್ರ ಸರ್ಕಾರದಿಂದ ಈ ಇತ್ಯಾತ್ಮಕ ಗುಣಗಳನ್ನು ನಾವು ನಿರೀಕ್ಷಿಸಬಹುದೇ?

* ಆನಂದರಾಮ ಶಾಸ್ತ್ರೀ, ಬೆಂಗಳೂರು

ಸರಬ್‌ಜಿತ್ ಸಿಂಗ್‌ಗೆ ಪಾಕಿಸ್ತಾನವು ಗಲ್ಲು ಶಿಕ್ಷೆ ಖಾಯಂ ಮಾಡಿದೆ. ಆತ ತಪ್ಪಿತಸ್ಥನಲ್ಲವೆಂಬ ಅರಿವಿದ್ದೂ ಪಾಕಿಸ್ತಾನ ಈ ರೀತಿ ರಾಕ್ಷಸಿ ವರ್ತನೆಯ ಪುನರಾವರ್ತನೆ ಮಾಡುತ್ತಿದೆ. ಮುಂಬೈ ಬಾಂಬ್ ದಾಳಿ ವಿಷಯದಲ್ಲಿ ಪಾಕಿಸ್ತಾನಕ್ಕೆ ಎಳ್ಳಷ್ಟೂ ಪಶ್ಚಾತ್ತಾಪವಾಗಿಲ್ಲ.

ಭಾರತದ ವಿರುದ್ಧ ಪಾಕಿಸ್ತಾನವು ಮುಂಬಯಿಯಲ್ಲಿ ನಡೆಸಿದ ಆ 'ಮೂರು ದಿನದ ಅಧರ್ಮಯುದ್ಧ'ದಿಂದಾಗಿ ನೂರಾರು ಅಮಾಯಕ ಜೀವಗಳ ಹರಣವಾಯಿತಷ್ಟೇ ಹೊರತು ಪಾಕಿಸ್ತಾನವು ಅದರಿಂದ ಸಾಧಿಸಿದ್ದೇನಿಲ್ಲ. ಜಗತ್ತಿನ ವಿಶ್ವಾಸವನ್ನು ಅದೀಗ ಸಂಪೂರ್ಣವಾಗಿ ಕಳೆದುಕೊಂಡಿದೆ. ಆದರೆ, ಈ ಘಟನೆಯಿಂದ ಭಾರತವು ಕಲಿಯಬೇಕಾದ್ದು ಬಹಳಷ್ಟಿದೆ.

ಬ್ರಿಟಿಷರ ಬಳುವಳಿ

ಬ್ರಿಟಿಷರು ಭಾರತವನ್ನು ಒಡೆದು ಹೊರಟುಹೋದರು. ನಂತರ ನಾವು ಮಾನಸಿಕವಾಗಿ ಒಂದಾಗುವ ಬದಲು ಇನ್ನಷ್ಟು ದೂರವಾಗತೊಡಗಿದೆವು. ಭಾರತ, ಪಾಕ್ ಎರಡೂ ದೇಶಗಳ ರಾಜಕಾರಣಿಗಳು ದ್ವೇಷದ ಬೆಂಕಿಯನ್ನು ಶಮನಗೊಳಿಸುವ ಬದಲು ಆ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳತೊಡಗಿದರು. ಪಾಕ್‌ನ ಮಿಲಿಟರಿ ಸರ್ವಾಧಿಕಾರಿಗಳಂತೂ ಭಾರತದ ಮಟ್ಟಿಗೆ ಮಾತ್ರವಲ್ಲ, ತಮ್ಮ ದೇಶದ ಪಾಲಿಗೂ ರಾಕ್ಷಸರೇ ಆದರು. ಇವೆಲ್ಲದರ ಪರಿಣಾಮ, ಸೌಹಾರ್ದಯುತವಾಗಿ ಬಗೆಹರಿಯಬಹುದಾಗಿದ್ದ ಕಾಶ್ಮೀರ ಸಮಸ್ಯೆಯು ಉಲ್ಬಣಗೊಂಡಿತು. ಪಾಕ್ ಪೋಷಿತ ಉಗ್ರರು ಹುಟ್ಟಿಕೊಂಡರು. ಕಾಶ್ಮೀರದ ಹೊರಗೂ ತಮ್ಮ ಕಬಂಧಬಾಹುಗಳನ್ನು ಚಾಚಿದ ಇವರು ಇಂದು ಇಡೀ ಭಾರತಕ್ಕೇ ಕಂಟಕಪ್ರಾಯರಾಗಿ ಬೆಳೆದುನಿಂತಿದ್ದಾರೆ.

ಭಾರತದಲ್ಲಿ ಮುಸ್ಲಿಮರನ್ನು ಹಿಂಸಿಸಲಾಗುತ್ತಿದೆಯೆಂದು ಕೆಲವು ಅನ್ಯೋದ್ದೇಶಭರಿತ ಮಾಧ್ಯಮಗಳು ಸುಳ್ಳು ಚಿತ್ರಣ ನೀಡುತ್ತಿರುವುದರಿಂದಾಗಿ ಮತ್ತು ಬಾಬ್ರಿ ಮಸೀದಿಯ ಧ್ವಂಸದ ವಿಷಯವನ್ನೆತ್ತಿಕೊಂಡು ಈ ಮುಸ್ಲಿಂ ಉಗ್ರರನ್ನು ಭಾರತದ ವಿರುದ್ಧ ಇನ್ನಷ್ಟು ವ್ಯಗ್ರಗೊಳಿಸಲಾಯಿತು. ಇದೇ ವೇಳೆ, ಅಧಿಕಾರ, ತುಷ್ಟೀಕರಣ ಹಾಗೂ ರಾಜಕೀಯ ದ್ವೇಷಗಳೇ ಗುರಿಯಾಗಿರುವ ನಮ್ಮ ಆಡಳಿತ ಪಕ್ಷಗಳು ಕಾಲದಿಂದ ಕಾಲಕ್ಕೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸೂಕ್ತವಾಗಿ ಆತ್ಮಸಮರ್ಥನೆಯ ಕಾರ್ಯ ನಿರ್ವಹಿಸುವಲ್ಲಿ ವಿಫಲವಾದವು. ಈ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಪಾಕಿಸ್ತಾನ ಹಾಗೂ ಪಾಕ್ ಪ್ರೇರಿತ ಉಗ್ರಗಾಮಿ ಸಂಘಟನೆಗಳು ನಮ್ಮ ಮೇಲೆ ಎಲ್ಲ ರೀತಿಯ ದುರಾಕ್ರಮಣವನ್ನೂ ತೀವ್ರಗೊಳಿಸಿದವು. ಅದೀಗ ಮುಂಬಯಿಯಲ್ಲಾದಂತೆ ಅಘೋಷಿತ ಯುದ್ಧದ ಹಂತಕ್ಕೆ ಬಂದು ನಿಂತಿದೆ!

ಯುದ್ಧವೋ ಮತ್ತೇನೋ ಮಾಡಿ ಪಾಕಿಸ್ತಾನವನ್ನು ಬಗ್ಗುಬಡಿದುಬಿಡಬೇಕೆನ್ನುವ ಕೆಲವರ ಆಶಯದ ಅನುಷ್ಠಾನ ಇಂದು ಅಷ್ಟು ಸುಲಭವಲ್ಲ. ಇಂದಿರಾಗಾಂಧಿ ಮತ್ತು ಲಾಲ್‌ಬಹಾದುರ್ ಶಾಸ್ತ್ರಿ ಇವರಿಬ್ಬರಿಗೆ ಆ ಅವಕಾಶ ಇತ್ತು. ಈಗ ಪಾಕಿಸ್ತಾನವೂ ನಮ್ಮಂತೆ ಅಣುಶಕ್ತಿ ಸನ್ನದ್ಧ ರಾಷ್ಟ್ರವಾಗಿರುವುದರಿಂದ ಅದನ್ನು ಬಗ್ಗುಬಡಿಯಲು ಹೊರಡುವ ಮೊದಲು ನಾವು ಎಲ್ಲ ಸಾಧಕ ಬಾಧಕಗಳನ್ನೂ ಯೋಚಿಸಬೇಕಾಗುತ್ತದೆ.

ಮಾಡಬೇಕಾದ್ದೇನು?

ಮೊಟ್ಟಮೊದಲು, ನಮ್ಮ ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವವರೀಗ ಆಲಸ್ಯ ಮತ್ತು ಕಾಪಟ್ಯ ತೊರೆದು ಎಚ್ಚತ್ತುಕೊಳ್ಳಬೇಕಾಗಿದೆ. ಮೈಕೊಡವಿ ಎದ್ದೇಳಬೇಕಾಗಿದೆ. ಹಿಂದು-ಮುಸ್ಲಿಂ ವೋಟುಗಳಿಗಾಗಿ ದೇಶವನ್ನೇ ಬಲಿಕೊಡಲು ಹೇಸದಿರುವ ನಮ್ಮ ರಾಜಕಾರಣಿಗಳು ಇನ್ನಾದರೂ ಪ್ರಾಮಾಣಿಕತೆಯನ್ನು ತೋರಬೇಕು ಮತ್ತು ಸಮಸ್ಯೆಯನ್ನು ಬಗೆಹರಿಸುವ ಇಚ್ಛಾಶಕ್ತಿಯನ್ನು ಮೆರೆಯಬೇಕು. ಅಂಥ ಯೋಗ್ಯ ನೇತಾರರನ್ನೇ ಚುನಾಯಿಸುವ ತನ್ನ ಜವಾಬ್ದಾರಿಯನ್ನು ಮತದಾರ ತಪ್ಪದೇ ನಿರ್ವಹಿಸಬೇಕು.

'ಭಾರತದಲ್ಲಿ ಮುಸ್ಲಿಮರು ಹಿಂಸಿಸಲ್ಪಡುತ್ತಿದ್ದಾರೆ' ಎಂಬ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿರುವುದೂ ಮುಸ್ಲಿಂ ಉಗ್ರರ ಭೀಕರ ಸ್ವರೂಪಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿರುವುದರಿಂದ ಅಂಥ ಅಪಕಲ್ಪನೆಯನ್ನು ನಿವಾರಿಸುವ ಕೆಲಸವನ್ನು ನಮ್ಮ ಮಾಧ್ಯಮಗಳು ಮತ್ತು ವಿಚಾರಪರ ಗಣ್ಯರು ಹಾಗೂ ಸಂಘಟನೆಗಳು ಕೈಗೆತ್ತಿಕೊಳ್ಳಬೇಕು. ಕೇಂದ್ರ ಸರ್ಕಾರವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ನಿಟ್ಟಿನಲ್ಲಿ ಸ್ಪಷ್ಟನೆಯ ಕೆಲಸವನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಬೇಕು. ಜೊತೆಗೆ, ಕಾಶ್ಮೀರದಲ್ಲಿ ನಮ್ಮ ಸೈನಿಕರು ಇನ್ನೂ ಹೆಚ್ಚಿನ ಸಂಯಮ ಪ್ರದರ್ಶಿಸಬೇಕು. ರಾಜಕಾರಣಿಗಳು ಕಾಶ್ಮೀರದ ಜನತೆಗೆ ಉತ್ತಮ ಆಡಳಿತ ನೀಡಿ ಎಲ್ಲರ ವಿಶ್ವಾಸ ಗಳಿಸಬೇಕು.

ಇಷ್ಟಾಗುವಾಗ ನಾವು ಪಾಕಿಸ್ತಾನದೊಡನೆ ಮಾತುಕತೆಯನ್ನು ತೀವ್ರಗತಿಯಲ್ಲಿ ಮುನ್ನಡೆಸಬೇಕು. ಅದೇವೇಳೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಾಬಿ ನಡೆಸಿ, ಪಾಕ್ ಮೇಲೆ ವಿವಿಧ ಒತ್ತಡಗಳನ್ನು ಹೇರಿಸಬೇಕು. ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನವೀಗ ಜರ್ಜರಿತವಾಗಿದೆ. ಅಲ್ ಖೈದಾ ಹಾಗೂ ತಾಲಿಬಾನ್ ಉಗ್ರರು ಪಾಕ್‌ಗೂ ಕಂಟಕಪ್ರಾಯರಾಗಿದ್ದಾರೆ. ಪಾಕ್‌ಗೆ ನೆರವು ನೀಡುತ್ತಿರುವ ಅಮೆರಿಕದ ಆರ್ಥಿಕ ಪರಿಸ್ಥಿತಿಯೂ ಭದ್ರವಾಗಿಲ್ಲ. ಜೊತೆಗೆ, ಪಾಕಿಸ್ತಾನದ ಭಯೋತ್ಪಾದನಾ ಚಟುವಟಿಕೆಯು ಅಮೆರಿಕವೂ ಸೇರಿದಂತೆ ಜಗತ್ತಿನ ಎಲ್ಲ ರಾಷ್ಟ್ರಗಳಿಗೂ ಗೊತ್ತಿರುವುದೇ ಆಗಿದೆ. ಈ ಸಂದರ್ಭದ ಉಪಯೋಗ ಪಡೆದುಕೊಂಡು ಭಾರತವು ಪಾಕಿಸ್ತಾನವನ್ನು ಹಾದಿಗೆ ತರಲು ಸಾಧ್ಯ. ಕೊನೆಗೆ ಅನಿವಾರ್ಯವಾದರೆ ಶಕ್ತಿಪ್ರಯೋಗ ಇದ್ದೇ ಇದೆ. ನಮ್ಮ ಶಕ್ತಿಯ ಮುಂದೆ ಪಾಕಿಸ್ತಾನದ ಶಕ್ತಿ ಏನೇನೂ ಅಲ್ಲ.

ಕಬ್ಬಿಣ ಕಾದಿದೆ. ಬಡಿದು ಹದಕ್ಕೆ ತರಲು ಇದು ಸುಸಮಯ. ಇದಕ್ಕಾಗಿ ನಮ್ಮ ಸರ್ಕಾರಕ್ಕೆ ಬೇಕಾಗಿರುವುದು ಪ್ರಾಮಾಣಿಕತೆ, ಸಕಾರಾತ್ಮಕ ಧೋರಣೆ ಮತ್ತು ಇಚ್ಛಾಶಕ್ತಿ. ಅತ್ತ ಸರಬ್‌ಜಿತ್‌ಗೆ ಗಲ್ಲು ಖಾಯಂ ಆದರೆ ಇತ್ತ ಅಫ್ಜಲ್ ಗುರುವನ್ನು ಗಲ್ಲಿಗೇರಿಸಲು ಹಿಂದೆಮುಂದೆ ನೋಡುತ್ತಿರುವ ನಮ್ಮ ಸರ್ಕಾರದಿಂದ, ಮುಂಬಯಿಯ ಘನಘೋರ ದುರಂತದ ನಂತರವೂ ಪಾಕ್ ವಿಷಯದಲ್ಲಿ ತಣ್ಣಗೆ ಕುಳಿತಿರುವ ನಮ್ಮ ಕೇಂದ್ರ ಸರ್ಕಾರದಿಂದ ಈ ಇತ್ಯಾತ್ಮಕ ಗುಣಗಳನ್ನು ನಾವು ನಿರೀಕ್ಷಿಸಬಹುದೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more